ಒಂದೊಮ್ಮೆ ಮಗ ತನ್ನ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೂ ಸೇರಿಸದೇ ಹೋಗಿದ್ದರೆ...?!
ಬೆಂಗಳೂರಿನ ಜೆ.ಪಿ. ನಗರದ ವೃದ್ಧಾಶ್ರಮದಲ್ಲಿದ್ದ ದಂಪತಿಗಳಿಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಸಧ್ಯಕ್ಕೆ ದೊಡ್ಡ ಸುದ್ದಿಯಾಗಿದೆ. ತಂದೆ ತಾಯಿಯನ್ನು ನೋಡಿಕೊಳ್ಳಬೇಕಾದ ಮಗ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದೇ ತಪ್ಪು ಎನ್ನುತ್ತಾ, ಮಗನನ್ನು ದೊಡ್ಡ ವಿಲನ್ ರೀತಿ ನೋಡಲಾಗುತ್ತಿದೆ. ಅದ್ಯಾವನೋ ಒಬ್ಬ ಆಸಾಮಿ ಹೀಗೆ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳನ್ನು ಗುಂಡಿಟ್ಟು ಕೊಲ್ಲಬೇಕು ಎಂದೇನೋ ಅಬ್ಬರಿಸಿದ್ದಾನಂತೆ... ಒಟ್ಟಿನಲ್ಲಿ ತನ್ನ ತಂದೆ ತಾಯಿಯನ್ನು ತನ್ನ ಮನೆಯಲ್ಲೇ ಇರಿಸಿಕೊಂಡು ನೋಡಿಕೊಳ್ಳದ ಮಗ ಎಲ್ಲರ ಕಣ್ಣಿನಲ್ಲೂ ’ವಿಲನ್’ ಆಗಿಬಿಟ್ಟಿದ್ದಾನೆ. ಹಾಗಿದ್ದರೆ ವೃದ್ಧಾಶ್ರಮಕ್ಕೆ ಸೇರಿಸಲ್ಪಟ್ಟ ಆ ವೃದ್ಧ ದಂಪತಿಗಳ ತಪ್ಪೇನೂ ಇರಲಿಲ್ಲವಾ? ಖಂಡಿತ ಇರುತ್ತದೆ. ದುರಂತವೇನು ಗೊತ್ತಾ, ನಾವು ಇಂತಹ ಸಂಗತಿಗಳನ್ನು ಒಂದು ಆಯಾಮದಿಂದ ಮಾತ್ರವೇ ನೋಡಲಾರಂಭಿಸುತ್ತೇವೆ. ಅದರಲ್ಲೂ ನ್ಯೂಸ್ ಚಾನೆಲ್ಲುಗಳು, ಅಲ್ಲಿ ನಡೆಯುವ ಪ್ಯಾನಲ್ ಡಿಸ್ಕಶನ್ನುಗಳಲ್ಲಿ ಹೊರಹೊಮ್ಮುವ ಅಭಿಪ್ರಾಯಗಳನ್ನು ಅವರು ಹೇರದಿದ್ದರೂ ನಾವೇ ಹೇರಿಕೊಂಡು ’ಹೌದೌದು’ ಎಂದು ಬೊಬ್ಬೆ ಹೊಡೆಯಲಾರಂಭಿಸುತ್ತೇವೆ. ಹೀಗಲ್ಲದೆ ಹಾಗೂ ಆಗಿರಬಹುದಲ್ಲ ಎಂದು ಒಂದು ಕ್ಷಣವೂ ಯೋಚಿಸದ ನಾವು ತಪ್ಪು ಮಾಡದೇ ಇರುವವರಿಗೆ ’ತಪ್ಪಿತಸ್ಥರು’ ಎಂದು ಹಣೆಪಟ್ಟಿ ಹೊಡೆದು ಬಿಡುತ್ತೇವೆ.
ಈಗ ವೃದ್ಧ ದಂಪತಿಗಳ ಆತ್ಮಹತ್ಯೆಯ ಸುದ್ದಿಯಲ್ಲೂ ಇದೇ ಆಗುತ್ತಿದೆ.
ಈ ದಂಪತಿಗಳ ಮಗನಿಗೆ, ’ಎಲ್ಲಾದರೂ ಸರಿ, ನನ್ನ ತಂದೆ ತಾಯಿ ಆರಾಮಾಗಿದ್ದರೆ ಸಾಕು’ ಅನ್ನಿಸಿದ್ದರಿಂದಲೇ ’ಕೊನೆಯ ಆಯ್ಕೆ’ ಎನ್ನುವಂತೆ ವೃದ್ಧಾಶ್ರಮಕ್ಕೆ ಸೇರಿಸಿದ್ದಾನೆ. ಬೆಂಗಳೂರಿನಂತಹ ನಗರಗಳಲ್ಲಿ ಮಾತ್ರವಲ್ಲ, ಬಹುತೇಕ ಊರುಗಳಲ್ಲಿ ಈಗ ಹೆಚ್ಚಿನ ಮಕ್ಕಳಿಗೆ ವಯಸ್ಸಾದ ತಂದೆ ತಾಯಿಯ ವಿಷಯದಲ್ಲಿ ಇದೇ ಕೊನೆಯ ಹಾಗೂ ಬೇರೆ ದಾರಿಯಿಲ್ಲದ ಆಯ್ಕೆ ಕೂಡಾ ಆಗಿರುತ್ತದೆ. ಈಗ ಆತ್ಮಹತ್ಯೆ ಮಾಡಿಕೊಂಡಿರುವ ವೃದ್ಧ ದಂಪತಿಗಳು ಇದ್ದ ವೃದ್ಧಾಶ್ರಮದಲ್ಲಿ ಅವರಿದ್ದ ಕೋಣೆಯ ಫೋಟೋ ನೋಡಿದರೆ, ಅವರಿಬ್ಬರಿಗೇ ಪ್ರತ್ಯೇಕವಾಗಿ ಇರಲು ಒಂದು ಕೋಣೆಯಿದೆ. ಆ ಕೋಣೆಯಲ್ಲಿ ಪ್ರತ್ಯೇಕ ಮಂಚ, ಹಾಸಿಗೆ ಇತ್ಯಾದಿಗಳಿವೆ. ವೃದ್ಧಾಶ್ರಮಕ್ಕೆ ಸಂಬಂಧಿಸಿದ ಮಹಿಳೆಯೊಬ್ಬರು ಮಾಧ್ಯಮಗಳಿಗೆ ನೀಡಿದ ಹೇಳಿಕೆ ಪ್ರಕಾರ, ಅವರ ಊಟ-ತಿಂಡಿ, ಮಲಗಿದ್ದರೆ ಎಬ್ಬಿಸಿ ಮಾತ್ರೆ ಕೊಡುವುದು, ರಾತ್ರಿ ಹನ್ನೊಂದರ ಹೊತ್ತಿಗೆ ಎಲ್ಲರೂ ಕ್ಷೇಮವಾಗಿದ್ದಾರಾ ಎಂದು ಸಿಬ್ಬಂದಿ ಒಂದು ಸುತ್ತು ಹೋಗಿ ಬರುವುದು... ಹೀಗೆ ಹೆಜ್ಜೆ ಹೆಜ್ಜೆಗೂ ಅವರನ್ನು ಗಮನಿಸಲಾಗುತ್ತಿತ್ತು. ಮತ್ತು ಅವರ ಸುರಕ್ಷತೆ ಬಗ್ಗೆ ಎಚ್ಚರ ವಹಿಸಲಾಗುತ್ತಿತ್ತು. ತಮ್ಮಲ್ಲಿರುವ ವೃದ್ಧರ ಬಗ್ಗೆ ಇಷ್ಟೆಲ್ಲ ಕೇರ್ ತೆಗೆದುಕೊಳ್ಳಬೇಕು ಎಂದರೆ ಒಂದು ವೃದ್ಧಾಶ್ರಮ ಒಬ್ಬರಿಗೆ ತಿಂಗಳಿಗೆ ಎಷ್ಟು ಚಾರ್ಜ್ ಮಾಡಬಹುದು? ಆ ಚಾರ್ಜ್‌ನ್ನು ಯಾರು ಭರಿಸುತ್ತಿದ್ದರು? ಒಬ್ಬರಿಗೆ ಕನಿಷ್ಠ ಹತ್ತು ಸಾವಿರ ಎಂದರೂ ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿಯನ್ನು ನೀಡಿ ಮಗ ತನ್ನ ವೃದ್ಧ ತಂದೆ ತಾಯಿಗಳನ್ನು ಆಶ್ರಮದಲ್ಲಿ ಬಿಟ್ಟಿದ್ದ ಎಂದರೆ ಆ ಮಗನಿಗೆ ತನ್ನ ತಂದೆ ತಾಯಿ ಇರುವ ತನಕ ಆರಾಮಾಗಿರಬೇಕು ಎನ್ನುವ ಮನಸ್ಸಿದ್ದಿದ್ದಂತೂ ಸ್ಪಷ್ಟ.
ಒಂದೊಮ್ಮೆ ಈ ಮನಸ್ಸೂ ಇಲ್ಲದೇ, ನೀವು ಏನಾದ್ರೂ ಮಾಡಿಕೊಳ್ಳಿ. ನಾನು ನನ್ನ ಹೆಂಡತಿ ಮಕ್ಕಳ ಜೊತೆ ನೆಮ್ಮದಿಯಾಗಿರಬೇಕು ಎಂದೇನಾದರೂ ಹೇಳಿ, ತಂದೆ ತಾಯಿಗೆ ಇಷ್ಟೂ ವ್ಯವಸ್ಥೆ ಮಾಡಿಕೊಡದೇ ಸಂಪೂರ್ಣವಾಗಿ ತನ್ನ ಕರ್ತವ್ಯದಿಂದ ನುಣುಚಿಕೊಂಡಿದ್ದರೆ ಏನಾಗುತ್ತಿತ್ತು? ಬಹುಶಃ ಮಗ ಇವತ್ತು ನಿಂತಂತೆ ವಿಲನ್ ಜಾಗದಲ್ಲಿ ನಿಲ್ಲಬೇಕಾಗಿರುತ್ತಿರಲಿಲ್ಲ. ಹೌದು, ಮಗ ತನ್ನ ಮಿತಿಯಲ್ಲಿ ತಂದೆ ತಾಯಿ ಬಗ್ಗೆ ಎಷ್ಟು ಕೇರ್ ಮಾಡಬಹುದೋ ಅಷ್ಟನ್ನು ಮಾಡಿದ್ದಾನೆ. ಮಾಧ್ಯಮವೊಂದರಲ್ಲಿ ಬಂದ ಸುದ್ದಿಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಇನ್ನೂ ಒಂದು ಸಂಗತಿ ಬಗ್ಗೆ ತಿಳಿಸಲಾಗಿತ್ತು. ಈಗ ಆತ್ಮಹತ್ಯೆ ಮಾಡಿಕೊಂಡಿರುವ ವೃದ್ಧ ದಂಪತಿಗಳು 2021ರಲ್ಲಿ ಬ್ಯಾಟರಾಯನಪುರದ ವೃದ್ಧಾಶ್ರಮದಲ್ಲಿದ್ದರು. ಅವರು ಮತ್ತೆ ಮನೆಗೆ ಬರಬೇಕೆಂದಿದ್ದರಿಂದ 2023ರಲ್ಲಿ ಮಗ ಮತ್ತೆ ಅವರನ್ನು ಮನೆಗೆ ಕರೆದುಕೊಂಡು ಬಂದಿದ್ದ. ಆದರೆ ಮತ್ತೆ ಅವರಿಗೆ ಸೊಸೆಯ ಜೊತೆ ಹೊಂದಾಣಿಕೆ ಸಾಧ್ಯವಾಗದೇ ಇದ್ದಿದ್ದರಿಂದ ಒಂದು ತಿಂಗಳ ಹಿಂದಷ್ಟೇ ಮತ್ತೆ ವೃದ್ಧಾಶ್ರಮಕ್ಕೆ ಸೇರಿಸಿದ್ದನಂತೆ. ಒಂದೊಮ್ಮೆ ಮಗನಿಗೆ ತಂದೆ ತಾಯಿಯ ಸಹವಾಸವೇ ಬೇಡ ಎಂದಿದ್ದರೆ 2023ರಲ್ಲಿ ವೃದ್ಧಾಶ್ರಮದಿಂದ ಯಾಕೆ ಮನೆಗೆ ಕರೆದುಕೊಂಡು ಬಂದ? ಈಗಾಗಲೇ ವೃದ್ಧಾಶ್ರಮದಲ್ಲಿದ್ದ ತಂದೆ ತಾಯಿಗೆ ಸೊಸೆಯೊಂದಿಗೆ ’ಹೊಂದಾಣಿಕೆ’ ಮಾಡಿಕೊಂಡು ಹೋಗುವ ಮನಸ್ಸು ಬಂದಿರಬಹುದು, ಮತ್ತೆ ತಾನು ತನ್ನ ಹೆಂಡತಿ ಮಕ್ಕಳು ಸೇರಿದಂತೆ ಅಪ್ಪ ಅಮ್ಮನ ಜೊತೆ ಆರಾಮಾಗಿರಬಹುದು ಎಂದುಕೊಂಡೇ ಮಗ ಅವರನ್ನು ವೃದ್ಧಾಶ್ರಮದಿಂದ ಕರೆದುಕೊಂಡು ಬಂದಿರುತ್ತಾನೆ.
ಆದರೆ ಕೊನೆಗೆ ಆಗಿದ್ದೇನು? ಇವರು ಹೊಂದಿಕೊಳ್ಳಲು ತಯಾರಿರಲಿಲ್ಲ. ’ತಾವು ಹೇಳಿದ್ದೇ ನಡೆಯಬೇಕು’ ಎಂದು ಹಠಕ್ಕೆ ಬಿದ್ದು ಮನೆಯ ನೆಮ್ಮದಿ ಕೆಡಿಸಿದ್ದರಿಂದಲೇ ಬೇರೆ ದಾರಿಯೇ ಇಲ್ಲದೇ ಮಗ ಮತ್ತೆ ವೃದ್ಧಾಶ್ರಮಕ್ಕೆ ಸೇರಿಸಿದ್ದಾನೆ. ಇದರಲ್ಲಿ ಮಗನ ತಪ್ಪೇನಿದೆ? ನಿಜ, ಮಕ್ಕಳು, ಅದರಲ್ಲೂ ಗಂಡು ಮಕ್ಕಳು ಅಪ್ಪ ಅಮ್ಮನನ್ನು ಕೊನೆಗಾಲದಲ್ಲಿ ನೋಡಿಕೊಳ್ಳಬೇಕು. ಈ ಮಕ್ಕಳಿಗಾಗಿ ಅವರು ಅದೆಷ್ಟು ಕಷ್ಟ ಪಟ್ಟಿರುತ್ತಾರೆ, ಏನೆಲ್ಲ ತ್ಯಾಗ ಮಾಡಿರುತ್ತಾರೆ. ಇದಕ್ಕೆ ಪ್ರತಿಯಾಗಿ ಮಕ್ಕಳು ಅವರನ್ನು ನೋಡಿಕೊಳ್ಳದಿದ್ದರೆ ಹೇಗೆ? ಹೀಗೆ ಏನೆಲ್ಲ ’ವೇದಾಂತ’ವನ್ನು ಎಲ್ಲರೂ ಇಂತಹ ಸಂದರ್ಭದಲ್ಲಿ ಸುಲಭವಾಗಿ ಉದುರಿಸುತ್ತಾ ಹೋಗುತ್ತಾರೆ. ಹೀಗೆ ದೊಡ್ಡ ದೊಡ್ಡ ಮಾತುಗಳನ್ನೆಲ್ಲ ಉದುರಿಸುವ ಎಷ್ಟು ಜನರು ತಮ್ಮ ತಮ್ಮ ಮನೆಗಳಲ್ಲಿ ವೃದ್ಧರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ? ಈ ಘಟನೆ ಅಂತಲೇ ಅಲ್ಲ. ಇಂತಹ ಹಲವು ಸಂದರ್ಭಗಳನ್ನು ನಾನು ನನ್ನ ಹತ್ತಿರದವರ ಬದುಕಿನಲ್ಲೇ ನಡೆದಿರುವುದನ್ನು ನೋಡಿದ್ದೇನೆ. ನನ್ನ ಪರಿಚಯದ ಹುಡುಗನೊಬ್ಬನಿದ್ದ. ತಂದೆ ತಾಯಿಗಿದ್ದ ಇಬ್ಬರು ಗಂಡು ಮಕ್ಕಳಲ್ಲಿ ಇವನು ಚಿಕ್ಕವನು. ತಂದೆ ತಾಯಿಗೆ ದೊಡ್ಡ ಮಗನೆಂದರೆ ವಿಪರೀತ ಪ್ರೀತಿ. ಈ ಪ್ರೀತಿಯೇ ಚಿಕ್ಕ ಮಗನನ್ನು ಕೆಟ್ಟ ನಿರ್ಲಕ್ಷ್ಯದಿಂದ ನೋಡುವಂತೆ ಮಾಡಿತ್ತು. ಎಲ್ಲಿಯವರೆಗೆ ಎಂದರೆ ಚಿಕ್ಕ ಮಗ ಮದುವೆಯಾದ ನಂತರ ಆತನ ಹೆಂಡತಿ ಎದುರೇ ಅಪ್ಪ ಅಮ್ಮ ಇಬ್ಬರೂ ಸಣ್ಣ ಸಣ್ಣ ವಿಷಯಕ್ಕೂ ಇವನನ್ನು ಅವಮಾನಿಸುತ್ತಿದ್ದರು. ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ತಪ್ಪಿಲ್ಲದೇ ಇದ್ದರೂ ತನ್ನ ಗಂಡನಿಗೆ ಅವರ ತಂದೆ ತಾಯಿಯಿಂದ ಆಗುವ ಅವಮಾನವನ್ನು ನೋಡಿ ನೋಡಿ ಕೊನೆಗೊಮ್ಮೆ ಇವರೊಂದಿಗೆ ನಾವು ಇರುವುದು ಒಳ್ಳೆಯದಲ್ಲ, ಅದರಲ್ಲೂ ನಮ್ಮ ಮಗುವಿನೆದುರು ನಿಮ್ಮನ್ನು ಅವರು ನಿರ್ಲಕ್ಷ್ಯ ಮಾಡುವುದು, ಅವಮಾನಿಸುವುದು ನನಗೆ ಸಹಿಸಲಿಕ್ಕಾಗುವುದಿಲ್ಲ ಎಂದು ಹೆಂಡತಿ ಹೇಳಿದ್ದಕ್ಕೆ ಕೊನೆಗೆ ಚಿಕ್ಕ ಮಗ, ಅಪ್ಪ ಅಮ್ಮ ಮತ್ತು ಅಣ್ಣನ ಕುಟುಂಬದಿಂದ ಪ್ರತ್ಯೇಕವಾಗಿ ಬದುಕಲಾರಂಭಿಸಿದ. ಇತ್ತ ವಯಸ್ಸಾದ ತಂದೆ ತಾಯಿ ಹಿರಿಯ ಮಗನ ಜೊತೆಗೇ ಬದುಕುತ್ತಿದ್ದರು. ಎಲ್ಲಿಯವರೆಗೆ? ಅವರಿಂದ ಎಷ್ಟೆಲ್ಲ ಲಾಭ ಮಾಡಿಕೊಳ್ಳಲು ಸಾಧ್ಯವೋ ಅಷ್ಟೆಲ್ಲ ಮಾಡಿಕೊಳ್ಳುವ ತನಕ ದೊಡ್ಡ ಮಗ ಅವರನ್ನು ಚೆನ್ನಾಗಿ ನೋಡಿಕೊಂಡ. ಎಲ್ಲವೂ ಮುಗಿಯುತ್ತಿದ್ದಂತೆ ನಿಧಾನವಾಗಿ ಅವನೂ, ಅವನ ಹೆಂಡತಿ ಕಿರಿಕಿರಿ ಮಾಡಲಾರಂಭಿಸಿದರು. ಅಷ್ಟುಹೊತ್ತಿಗೆ ಆ ದಂಪತಿಗಳ ವಯಸ್ಸು ಎಪ್ಪತ್ತು ದಾಟಿತ್ತು. ಇನ್ನೇನು ದೊಡ್ಡ ಮಗ ಮನೆಯಿಂದ ಅವರನ್ನು ಹೊರ ಹಾಕಿ ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂದು ಹೇಳುವಂತಹ ಸಂದರ್ಭದಲ್ಲಿ, ಏನೇ ಆದರೂ ಅವರು ನನ್ನ ತಂದೆ ತಾಯಿ ಎಂದು ತನ್ನ ಮನೆಗೆ ಕರೆದುಕೊಂಡು ಬಂದಿದ್ದು ಇವರಿಂದಲೇ ಅವಮಾನಕ್ಕೊಳಗಾಗಿದ್ದ ಚಿಕ್ಕ ಮಗ!
CLICK ಮಾಡಿ - ಹೊಸನಗರದ ಬಿದನೂರು ನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ 225 ಮಿಲಿಮೀಟರ್ ದಾಖಲೆ ಮಳೆ
ಅಂತಹ ಸಂದರ್ಭದಲ್ಲಿ ನನಗೆ ತುಂಬಾ ಗ್ರೇಟ್ ಅನ್ನಿಸಿದ್ದು ಈ ಚಿಕ್ಕ ಮಗನ ಹೆಂಡತಿ. ಗಂಡ ತನ್ನ ವಯಸ್ಸಾದ ತಂದೆ ತಾಯಿಯನ್ನು ಮನೆಗೆ ಕರೆದುಕೊಂಡು ಬರುತ್ತೇನೆ ಎಂದಾಗ ಆಕೆ ಬೇಡ ಅನ್ನಲಿಲ್ಲ. ತನ್ನ ಗಂಡನಿಗಾದ ಅವಮಾನಗಳನ್ನೆಲ್ಲ ಎದುರಿಟ್ಟುಕೊಳ್ಳಲಿಲ್ಲ. ಆದರೆ ಆಕೆ ಒಂದು ಕಂಡೀಶನ್ ಹಾಕಿದರು. ಅವರು ನಮ್ಮ ಮನೆಯಲ್ಲೇ ಇರಲಿ, ಆದರೆ ನಮ್ಮೊಂದಿಗೆ ಇರುವುದು ಬೇಡ. ನಮ್ಮ ಖಾಸಗಿತನಕ್ಕೂ ತೊಂದರೆಯಾಗಬಾರದು, ಅವರಿಗೂ ಇರಿಟೇಶನ್ ಆಗಬಾರದು. ಆದ್ದರಿಂದ ಅವರನ್ನು ಪ್ರತ್ಯೇಕವಾಗಿ ಇರಿಸೋಣ ಎಂದು ಹೇಳಿದರು. ಅದರಂತೆ ನನ್ನ ಪರಿಚಯದ ಈ ಚಿಕ್ಕ ಮಗ ತಮ್ಮ ಮನೆಯ ಹತ್ತಿರದಲ್ಲೇ ಕೆಲದಿನಗಳ ಕಾಲ ಒಂದು ಪ್ರತ್ಯೇಕ ಬಾಡಿಗೆ ಮನೆಯಲ್ಲಿ ತಂದೆ ತಾಯಿಯನ್ನು ಇರಿಸಿ, ಅವರ ಊಟ ತಿಂಡಿಯಿಂದ ಹಿಡಿದು ದೇಖಾರೇಖಿಯನ್ನು ಪೂರ್ತಿಯಾಗಿ ನೋಡಿಕೊಂಡ. ಈ ನಡುವೆ ಸಾಲ ಮಾಡಿ, ತನ್ನ ಮನೆಯ ಮೇಲೆ ಇನ್ನೊಂದು ಮಹಡಿಯನ್ನು ಕಟ್ಟಿಸಿ, ಅದು ಪೂರ್ಣಗೊಳ್ಳುತ್ತಿದ್ದಂತೆ ಅಲ್ಲಿಗೆ ತನ್ನ ತಂದೆ ತಾಯಿಯನ್ನು ತಂದಿರಿಸಿಕೊಂಡ.
ಇಷ್ಟಾದಮೇಲಾದರೂ ಆ ತಂದೆ ತಾಯಿಗೆ ಚಿಕ್ಕ ಮಗನ ಬಗ್ಗೆ ಪ್ರೀತಿ ಉಕ್ಕಬೇಕಿತ್ತು ಅಲ್ಲವಾ? ಉಹ್ಞೂಂ, ಅವರಲ್ಲಿ ಅಂತಹ ಪ್ರೀತಿ ಕಾಣಿಸಲೇ ಇಲ್ಲವಂತೆ. ಆ ಹುಡುಗ ನನ್ನ ಬಳಿ ಹೇಳಿಕೊಂಡಂತೆ, ಅವರು ಸ್ವಲ್ಪವೂ ಬದಲಾಗಿರಲಿಲ್ಲವಂತೆ. ಅವರಿಗೆ ದೊಡ್ಡ ಮಗನೆಂದರೇ ಭಯಂಕರ ಪ್ರೀತಿ. ಚಿಕ್ಕ ಸೊಸೆ ಎಷ್ಟೇ ಪ್ರೀತಿಯಿಂದ ಏನೇ ಹೇಳಿದರೂ, ಮಾಡಿದರೂ ಅದರಲ್ಲಿ ಇಬ್ಬರೂ ಕೊಂಕು ತೆಗೆಯುತ್ತಿದ್ದರಂತೆ. ಆದರೂ ಚಿಕ್ಕ ಮಗ ತಾಳ್ಮೆ ಕಳೆದುಕೊಳ್ಳಲಿಲ್ಲ. ಕೊನೆಯ ತನಕ ಅವರನ್ನು ಚೆನ್ನಾಗಿಯೇ ನೋಡಿಕೊಂಡ. ದುರಂತ ನೋಡಿ, ದೊಡ್ಡ ಮಗನಿಂದ ಅಷ್ಟೊಂದು ಕೆಟ್ಟ ಅನುಭವ ಆಗಿದ್ದರೂ, ಅವನು ಪರಮ ಸ್ವಾರ್ಥಿ ಎಂದು ಗೊತ್ತಾಗಿದ್ದರೂ, ಚಿಕ್ಕ ಮಗ ತಮಗಾಗಿ ಎಷ್ಟೆಲ್ಲ ಕಷ್ಟ ಪಡುತ್ತಿದ್ದಾನೆ ಎನ್ನುವುದು ಗೊತ್ತಿದ್ದರೂ ಅವರು ಬದಲಾಗಿರಲಿಲ್ಲ. ಅವರು ಅವರದ್ದೇ ಮಾಡಿಕೊಂಡಿದ್ದರು. ಒಂದೊಮ್ಮೆ ದೊಡ್ಡ ಮಗ ನಿರ್ಲಕ್ಷ್ಯ ಮಾಡುತ್ತಿದ್ದಾಗಲೇ, ಚಿಕ್ಕ ಮಗನೂ, ಇಷ್ಟು ದಿನ ಅವನನ್ನು ಹೊತ್ತುಕೊಂಡು ಮೆರೆಸಿದಿರಲ್ಲ, ಈಗ ಅನುಭವಿಸಿ ಎಂದು ದೂರವೇ ಇಟ್ಟುಬಿಟ್ಟಿದ್ದರೆ ವೃದ್ಧ ದಂಪತಿಗಳು ಏನು ಮಾಡಬೇಕಿತ್ತು?
ಈಗ ಹೇಳಿ, ತನಗಿರುವ ಮಿತಿಯಲ್ಲಿ ಮಗನೊಬ್ಬ ಉತ್ತಮ ರೀತಿಯಲ್ಲಿ ನೋಡಿಕೊಳ್ಳಬಲ್ಲ ವೃದ್ಧಾಶ್ರಮಕ್ಕೆ ತನ್ನ ತಂದೆ ತಾಯಿಯನ್ನು ಸೇರಿಸಿದರೆ ತಪ್ಪೇನು? ಮೊದಲೇ ಹೇಳಿದಂತೆ, ವೃದ್ಧಾಶ್ರಮಗಳ್ಯಾವುದೂ ಈಗ ಫ್ರೀ ಸರ್ವೀಸ್ ಮಾಡುತ್ತಿಲ್ಲ. ’ನಿಮ್ಮ ತಂದೆ ತಾಯಿಯನ್ನು ನಾವು ನೋಡಿಕೊಳ್ಳುತ್ತೇವೆ, ನಮ್ಮನ್ನು ನೀವು ನೋಡಿಕೊಳ್ಳಿ’ ಎನ್ನುವ ಪಾಲಿಸಿಯಲ್ಲೇ ನಡೆಯುವ ಈ ವೃದ್ಧಾಶ್ರಮಗಳಲ್ಲಿ ಕೆಲವು ಫೈವ್ ಸ್ಟಾರ್ ಹೋಟೆಲ್ಲಿನ ರೇಂಜಿಗೆ ಬಿಲ್ ಮಾಡುತ್ತವೆ. ಅದನ್ನು ಕೊಟ್ಟು, ಆಗಾಗ ಬಂದು ಮಕ್ಕಳು ನೋಡಿಕೊಂಡು ಹೋಗುವುದು, ಅವರ ಅಗತ್ಯಗಳ ಬಗ್ಗೆ ವಿಚಾರಿಸಿ ಅದನ್ನು ಪೂರೈಸುವುದು, ಕಾಲ್ ಮಾಡಿ ಕ್ಷೇಮ ಸಮಾಚಾರ ಕೇಳುತ್ತಿದ್ದಾರೆಂದರೆ, ಅಷ್ಟರಮಟ್ಟಿಗೆ ಮಕ್ಕಳಿಗೆ ತಮ್ಮ ವೃದ್ಧ ತಂದೆ ತಾಯಿಯ ಮೇಲೆ ’ಅಗ್ದೀ ಸ್ಪೀಡಿನಲ್ಲಿ ಓಡುತ್ತಿರುವ ಈ ಜಗತ್ತಿನ ಜಂಜಾಟ’ದ ನಡುವೆಯೂ ಒಂದಿಷ್ಟು ಪ್ರೀತಿ ಇದೆ ಎಂದೇ ಅರ್ಥ.
ಆದರೆ ಈ ಪ್ರೀತಿಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಬದಲಿಗೆ ಅದೆಷ್ಟರಮಟ್ಟಿಗೆ ಮಗನನ್ನು ವಿಲನ್ ಮಾಡಲು ಹೊರಟಿದ್ದಾರೆಂದರೆ, ಇಡೀ ಘಟನೆಯಲ್ಲಿ ಆ ವೃದ್ಧ ದಂಪತಿಗಳದ್ದೇನೂ ತಪ್ಪೇ ಇರಲಿಲ್ಲ ಎನ್ನುವಂತೆ ಮಾತನಾಡಲಾಗುತ್ತಿದೆ. ಮಾಧ್ಯಮಗಳಿಗೆ ವೃದ್ಧಾಶ್ರಮದ ಸಿಬ್ಬಂದಿ ಹೇಳಿದಂತೆ, ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ರಾತ್ರಿ ಆ ವೃದ್ಧ ದಂಪತಿಗಳು ಟಿವಿಯಲ್ಲಿ ಸೀರಿಯಲ್ ನೋಡುವ ವಿಚಾರದಲ್ಲಿ ಆಕೆಯ ಎದುರೇ ಜೋರಾಗಿ ಗಲಾಟೆ ಮಾಡಿಕೊಂಡಿದ್ದರಂತೆ. ಆಗ ಈಕೆಯೇ ಸಮಾಧಾನಿಸಿ, ನಾಳೆ ನಿಮಗೆ ಬೇರೆ ಕಡೆ ಸೀರಿಯಲ್ ನೋಡುವ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದ್ದಳಂತೆ. ಅಂದರೆ ತಮ್ಮ ಮಗ ವೃದ್ಧಾಶ್ರಮದಲ್ಲಿ ಇರಿಸಿದ ಎನ್ನುವ ಬೇಸರಕ್ಕಿಂತ, ಅವರಿಬ್ಬರ ನಡುವಿನ ಬೇರೆ ಯಾವುದೋ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದಂತೆ ಅವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದಾ?! ಯಾಕೆಂದರೆ, ಈಕೆಯೇ ಹೇಳಿದಂತೆ, ವೃದ್ಧಾಶ್ರಮಕ್ಕೆ ಸೇರಲು ಬಂದಾಗ ಸಾಕಷ್ಟು ಸಮಯ ನೀಡಿ, ಅವರು ಒಪ್ಪಿಕೊಂಡ ನಂತರವೇ ಅಡ್ಮಿಶನ್ ಮಾಡಿಕೊಳ್ಳಲಾಗಿತ್ತಂತೆ. ಅಂದಮೇಲೆ ಮಗನಿಗೂ ಬೇರೆ ದಾರಿಯಿರಲಿಲ್ಲ ಮತ್ತು ಈ ದಂಪತಿಗಳಿಗೂ ಬೇರೆ ದಾರಿಯಿರಲಿಲ್ಲ. ಆದ್ದರಿಂದ ಅವರು ಅನಿವಾರ್ಯವಾಗಿ ಇಲ್ಲಿ ಉಳಿದುಕೊಂಡಿದ್ದರು. ಹೀಗೆ ವೃದ್ಧಾಶ್ರಮ ಸೇರಿದ್ದೇ ಈ ದಂಪತಿಗಳ ಬೇಸರದ ಮೂಲವಾಗಿದ್ದರೆ ಅವರು ಇಲ್ಲಿ ಇರಲಾರಂಭಿಸಿದ ಇಷ್ಟು ದಿನಗಳ ನಂತರ ಆತ್ಮಹತ್ಯೆಯನ್ನೇಕೆ ಮಾಡಿಕೊಂಡರು? ಇಲ್ಲಿ ಸೇರಿದ ಮೊದಲಲ್ಲೇ ಈ ಪ್ರಯತ್ನ ಮಾಡಬಹುದಿತ್ತು. ಹಾಗೆ ಮಾಡದೆ ತಿಂಗಳಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದರೆ ಇದರ ಹಿಂದೆ ಬೇರೆಯದೇ ಏನೋ ಒಂದು ಕಾರಣವಿದೆ.
ಆದರೆ ಅದನ್ನು ಹುಡುಕುವ ಪ್ರಯತ್ನ ಮಾಡದ ನಾವು ಮಗನನ್ನೇ ವಿಲನ್ ಎಂಬಂತೆ ಬಿಂಬಿಸುತ್ತಿದ್ದೇವೆ. ನೀವು ಗಮನಿಸಿರಬಹುದು. ಕೆಲವು ತಂದೆ ತಾಯಿ ವಯಸ್ಸಾದ ನಂತರ ಮಕ್ಕಳ ವಿಷಯದಲ್ಲಿ ತಮ್ಮ ’ಸ್ಪೇಸ್’ ಎಷ್ಟು ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಮಕ್ಕಳು ಹೇಳಿದ್ದು ಸರಿಯೋ, ತಪ್ಪೋ ಅದನ್ನು ಕೇಳಿಕೊಂಡು ಅವರೊಂದಿಗೆ ಅವರಂತೆಯೇ ಇದ್ದು ಬಿಡುತ್ತಾರೆ. ಆಗ ವೃದ್ಧ ತಂದೆ ತಾಯಿ ಮತ್ತು ಮಕ್ಕಳ ಕುಟುಂಬದ ನಡುವೆ ಗೊಂದಲ, ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುವುದಿಲ್ಲ. ಆದರೆ ಈ ಸೂಕ್ಷ್ಮ ಹೆಚ್ಚಿನ ಹಿರಿಯ ಜೀವಗಳಿಗೆ ಅರ್ಥವಾಗುವುದಿಲ್ಲ. ಮಗನಂತಲೇ ಅಲ್ಲ, ಮದುವೆ ಮಾಡಿಕೊಟ್ಟ ಮಗಳನ್ನು ಕೂಡಾ ಪೂರ್ತಿಯಾಗಿ ತಮ್ಮ ಕಡೆಯೇ ಗಮನ ಕೊಡಬೇಕು, ತಾವು ಹೇಳಿದಂತೆಯೇ ಕೇಳಿಕೊಂಡಿರಬೇಕು ಎನ್ನುವ ಹಠಕ್ಕೆ ಬಿದ್ದುಬಿಡುತ್ತಾರೆ. ಆಯಿತು, ಮಗ-ಮಗಳು ತಮ್ಮ ಬದುಕನ್ನು ಪೂರ್ತಿಯಾಗಿ ವೃದ್ಧ ತಂದೆ ತಾಯಿಯನ್ನು ನೋಡಿಕೊಳ್ಳಲಿಕ್ಕೆಂದೇ ಮೀಸಲಿಟ್ಟುಬಿಟ್ಟರೆ, ಅವರು ಅವರದ್ದೆನ್ನುವ ವೈಯಕ್ತಿಕ ಬದುಕನ್ನು ಅವರಿಷ್ಟದಂತೆ ಬದುಕುವುದು ಯಾವಾಗ? ಅವರು ಅವರ ಕುಟುಂಬವನ್ನು ಬೆಳೆಸುವುದು ಹೇಗೆ? ಇದನ್ನು ವೃದ್ಧ ತಂದೆ ತಾಯಿಗಳು ಅರ್ಥ ಮಾಡಿಕೊಂಡು ಬಿಟ್ಟರೆ, ಹೊರಗಿನವರ ಕಣ್ಣಿನಲ್ಲಿ ಮಕ್ಕಳು ವಿಲನ್‌ಗಳಾಗುವುದು ತಪ್ಪುತ್ತದೆ. ಆದರೆ ಅದೇನು ಮನಸ್ಥಿತಿಯೋ ಏನೋ, ತಾವು ಚೆನ್ನಾಗಿರಬೇಕು ಎಂದರೆ ಮಕ್ಕಳು ವಿಲನ್‌ಗಳಾದರೂ ತೊಂದರೆಯಿಲ್ಲ ಎನ್ನುವ ಹಠಕ್ಕೆ ಬಿದ್ದುಬಿಡುತ್ತಾರೆ. ಆ ವಯಸ್ಸಿಗೆ ಆ ಹಠ ಒಳ್ಳೆಯದಲ್ಲ ಎನ್ನುವುದು ನಮಗೆಲ್ಲರಿಗೂ ಗೊತ್ತಿರುತ್ತದೆ. ಆದರೂ ಎಲ್ಲರೂ ಹೋದ ದಾರಿಯಲ್ಲೇ ಹೋಗುವುದೇ ಸುಲಭ ಎಂದುಕೊಳ್ಳುವ ನಾವು ವಯಸ್ಸಾದವರ ಈ ಹಠ, ಮೊಂಡುತನದ ಬಗ್ಗೆ ಮಾತನಾಡದೇ, ಸುಲಭವಾಗಿ ಮಕ್ಕಳಿಗೆ ವಿಲನ್ ಪಟ್ಟ ಕಟ್ಟಿಬಿಡುತ್ತೇವೆ. ಈಗ ಜೆ.ಪಿ. ನಗರದ ವೃದ್ಧಾಶ್ರಮದಲ್ಲಿದ್ದ ವೃದ್ಧ ದಂಪತಿಗಳ ಆತ್ಮಹತ್ಯೆಯ ವಿಷಯದಲ್ಲಾಗುತ್ತಿರುವುದೂ ಕೂಡಾ ಇದೇ...
-ಗಣೇಶ ಕೆ., ಸಂಪಾದಕರು, ನ್ಯೂಸ್ ಪೋಸ್ಟ್‌ಮಾರ್ಟಮ್
ಕಾಮೆಂಟ್‌ಗಳಿಲ್ಲ