ಬಿಎಲ್‌ಓ ಕಾರ್ಯದಿಂದ ಮುಕ್ತಗೊಳಿಸುವಂತೆ ಹೊಸನಗರ ತಹಶೀಲ್ದಾರ‍್ರಿಗೆ ಶಿಕ್ಷಕರ ಮನವಿ
ಹೊಸನಗರ : ಜಾತಿ ಗಣತಿಯ ಬೆನ್ನಲ್ಲೇ ಈಗ ಬಿಎಲ್‌ಓ ಕರ್ತವ್ಯ ನಿರ್ವಹಿಸುವಂತೆ ಸರ್ಕಾರ ಆದೇಶ ಹೊರಡಿಸಿದ್ದು, ಇದರಿಂದ ತಮ್ಮ ಕೆಲಸಕ್ಕೆ ತೊಂದರೆಯಾಗುತ್ತಿರುವುದರಿಂದ ಬಿಎಲ್‌ಓ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಶಿಕ್ಷಕರುಗಳು ಇಂದು ತಹಶೀಲ್ದಾರ‍್ರಿಗೆ ಮನವಿ ಪತ್ರ ನೀಡಿ ವಿನಂತಿಸಿದರು.
ತಾಲ್ಲೂಕು ಆಡಳಿತದ ಆದೇಶ ಹಿನ್ನೆಲೆಯಲ್ಲಿ ಮೇ 5 ರಿಂದ ಜೂನ್ 15ರವರೆಗೂ ಶಿಕ್ಷಕರುಗಳು ಜಾತಿ ಗಣತಿಯನ್ನು ಮಾಡಿದ್ದು, ಇದೀಗ ಅದೇ ಶಿಕ್ಷಕರುಗಳಿಗೆ ಪುನಃ ಬಿಎಲ್ಓಗಳಾಗಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸುತ್ತಿರುವುದು ಶಿಕ್ಷಕ ವರ್ಗಕ್ಕೆ ನಂಗಲಾರದ ತುತ್ತಾಗಿ ಪರಿಣಮಿಸಿದೆ. ಇದೀಗ ಶಾಲೆಗಳು ಪ್ರಾರಂಭವಾಗಿದ್ದು ಮಕ್ಕಳ ದಾಖಲಾತಿ, ಪೂರ್ವ ಪರೀಕ್ಷೆ, ಸಾಫಲ್ಯ ಪರೀಕ್ಷೆ, ಶೈಕ್ಷಣಿಕ ಯೋಜನೆ, ಬಿಸಿಯೂಟ ಇವುಗಳ ಜವಾಬ್ದಾರಿ ನಿಭಾಯಿಸುವುದರಲ್ಲೇ ಸಮಯವಾಗುತ್ತಿರುವುದರಿಂದ ದಯವಿಟ್ಟು ತಮ್ಮನ್ನು ಬಿಎಲ್‌ಓ ಕರ್ತವ್ಯದಿಂದ ಮುಕ್ತಗೊಳಿಸಬೇಕೆಂದು ಶಿಕ್ಷಕರುಗಳು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
CLICK ಮಾಡಿ - ಹೊಸನಗರದ ಬಿದನೂರು ನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ 225 ಮಿಲಿಮೀಟರ್ ದಾಖಲೆ ಮಳೆ
ಶಿಕ್ಷಕರ ಮನವಿ ಗಮನಿಸಿದ ತಹಶೀಲ್ದಾರ್ ರಶ್ಮಿ ಹೆಚ್.ಜೆ, ಚುನಾವಣಾ ಕರ್ತವ್ಯದಿಂದ ಯಾರೇ ಆಗಲಿ ತಪ್ಪಿಸಿಕೊಳ್ಳುವಂತಿಲ್ಲ. ಇದು ಸರ್ಕಾರದ ಆದೇಶ. ನೀವೇ ನಿಮ್ಮ ಇಲಾಖೆಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಏಕೋಪಾಧ್ಯಾಯ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಹೊರತುಪಡಿಸಿ ಉಳಿದ ಶಾಲೆಗಳ ಶಿಕ್ಷಕರ ಪಟ್ಟಿಯನ್ನು ತಕ್ಷಣ ನೀಡಿದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಪಟ್ಟಿ ಬದಲಾಯಿಸುವ ಸಾಧ್ಯತೆಗಳ ಬಗ್ಗೆ ಗಮನ ಹರಿಸುತ್ತೇನೆ ಎಂದು ಶಿಕ್ಷಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಅಮೃತ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಭಾರ ಮುಖ್ಯ ಶಿಕ್ಷಕ ಎನ್. ಎಸ್. ಸತ್ಯನಾರಾಯಣ ಮತ್ತು ಇತರ ಶಿಕ್ಷಕ, ಶಿಕ್ಷಕಿಯರು ಹಾಜರಿದ್ದರು.
ಕಾಮೆಂಟ್‌ಗಳಿಲ್ಲ