ನೆಲ್ಲುಂಡೆ-ಬಾಳೇದೋಣಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಕ್ರಮ : ರಾಮಚಂದ್ರಪುರ ಗ್ರಾ.ಪಂ. ಅಧ್ಯಕ್ಷ ಕಣಿವೆಬಾಗಿಲು ಸುಬ್ರಹ್ಮಣ್ಯ ಸ್ಪಷ್ಟನೆ
ಹೊಸನಗರ: ತಾಲ್ಲೂಕಿನ ರಾಮಚಂದ್ರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಚಂದ್ರಪುರ ಗ್ರಾಮದ ನೆಲ್ಲುಂಡೆ ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪದ ಕೆಳಗಿನ ಮನೆ ಹಳ್ಳಕ್ಕೆ ಶಾಲಾಮಕ್ಕಳು ಮತ್ತು ರೈತರ ಓಡಾಟಕ್ಕೆ ತೊಂದರೆ ಆಗದಂತೆ ನೂತನ ಸೇತುವೆ ನಿರ್ಮಾಣಕ್ಕೆ ಉದ್ದೇಶಿಸಿದ್ದು, ಈಗಾಗಲೇ ಶಾಸಕ ಆರಗ ಜ್ಞಾನೇಂದ್ರ ಅವರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಶೀಘ್ರದಲ್ಲೆ ಅನುದಾನ ಬಿಡುಗಡೆಗೊಳ್ಳಲಿದ್ದು, ಬಳಿಕ ಕಾಮಗಾರಿಗೆ ಚಾಲನೆ ದೊರೆಯಲಿದೆ.
ಈ ಹಿಂದೆ ಇದೇ ಕಾಮಗಾರಿಗಾಗಿ ರೂ 5 ಲಕ್ಷ ಅನುದಾನವನ್ನು ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮೀಸಲಿಡಲಾಗಿತ್ತು. ಆದರೆ, ಯಾವೊಬ್ಬ ಗುತ್ತಿಗೆದಾರರೂ ಕಾಮಗಾರಿ ಪೂರೈಸಲು ಮುಂದೆ ಬಾರದೇ ಇರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವಿಷಯವನ್ನು ಶಾಸಕರ ಗಮನಕ್ಕೆ ತಂದು 15 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳಲಾಗಿದೆ. ಅನುದಾನ ಬಿಡುಗಡೆಗೊಂಡ ಬಳಿಕ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ರಾಮಚಂದ್ರಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ವಿ.ಎನ್.ಸುಬ್ರಹ್ಮಣ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
ರಾಮಚಂದ್ರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲುಂಡೆ ಸೇತುವೆ ಕುಸಿಯುವ ಹಂತದಲ್ಲಿದ್ದು ನೂತನ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಆಗ್ರಹಿಸಿರುವ ಕುರಿತು ’ನ್ಯೂಸ್ ಪೋಸ್ಟ್‌ಮಾರ್ಟಮ್’ ಡೈಲಿ ನ್ಯೂಸ್ ವೆಬ್ ಪೋರ್ಟಲ್‌ನಲ್ಲಿ ಇಂದು ಚಿತ್ರ ಸಹಿತ ವರದಿ ಪ್ರಕಟಿಸಲಾಗಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ರಾಮಚಂದ್ರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ