ಮಾರುತೀಪುರ ನೀರೇರಿಯ ಸಾವೆಕೆರೆ ಕೋಡಿ ದುರಸ್ತಿಗೆ ತತ್‌ಕ್ಷಣ ಮುಂದಾದ ಅಧಿಕಾರಿಗಳ ತಂಡಕ್ಕೆ ಗ್ರಾಮಸ್ಥರ ಶ್ಲಾಘನೆ
ಹೊಸನಗರ : ಕಳೆದ ಹತ್ತಾರು ದಿನಗಳಿಂದ ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ತನ್ನ ರೌದ್ರಾವತಾರವನ್ನು ಮುಂದುವರೆಸಿದ್ದು, ಹಲವಾರು ಅವಘಡಗಳಿಗೆ ಮೂಲವಾಗುತ್ತಲೇ ಇದೆ. ಮಳೆಯಿಂದ ಕೆಲವು ಭಾಗಗಳಲ್ಲಿ ಕೆರೆದಂಡೆ, ಚಾನಲ್ ಒಡೆದು ನುಗ್ಗಿದ ನೀರು ನೂರಾರು ಎಕರೆ ಕೃಷಿಭೂಮಿಯನ್ನು ಆಪೋಶನ ಪಡೆದಿದೆ. ಹಲವು ಮನೆಗಳ ಕೊಟ್ಟಿಗೆಗಳು ಕುಸಿದಿವೆ. ಹತ್ತಾರು ಕಿ. ಮೀ. ಗ್ರಾಮೀಣ ರಸ್ತೆಗೆ ಹಾನಿಯಾಗಿ ಸಂಚಾರಕ್ಕೆ ಅಡ್ಡಿಯಾಗಿದೆ. ಮಳೆಹಾನಿ ದೂರುಗಳು ಬಂದ ಬೆನ್ನಲ್ಲೇ ತಾಲ್ಲೂಕು ಆಡಳಿತದ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಸಂತ್ರಸ್ತರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮಕೈಗೊಂಡು, ಮುನ್ನೆಚ್ಚರಿಕೆ ವಹಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಈ ನಡುವೆ ಸೋಮವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಮಾರುತೀಪುರ ಗ್ರಾಮ ಪಂಚಾಯತಿ ವ್ಯಾಪ್ತಿ ನೀರೇರಿಯ ಸಾವೆಕೆರೆ ಕೋಡಿಗೆ ಹಾನಿಯಾದ ಪರಿಣಾಮ ನೀರು ಹತ್ತಾರು ಎಕರೆ ಕೃಷಿ ಜಮೀನಿನ ಮೇಲೆ ಹರಿದಿದೆ. ಕೋಡಿ ಕೆಳ ಭಾಗದಲ್ಲಿನ ಕೃಷಿಕರಾದ ದೇವೇಂದ್ರ ಕುಣಬಿ ಹಾಗೂ ನಾಗೇಶ್ ಕುಣಬಿ ಅವರ ಜಮೀನಿಗೆ ನೀರು ನುಗ್ಗಿ ಭಾರೀ ನಷ್ಟವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲ್ಲೂಕು ದಂಡಾಧಿಕಾರಿ ರಶ್ಮಿ ಹೆಚ್.ಜೆ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನರೇಂದ್ರ ಕುಮಾರ್, ಮಾರುತೀಪುರ ಗ್ರಾಮ ಪಂಚಾಯಿತಿ ಪಿಡಿಓ ಜಾನ್ ಡಿಸೋಜ, ಗ್ರಾಮ ಲೆಕ್ಕಾಧಿಕಾರಿ ಭೂಮಿಕಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಆರ್.ಕೆ, ಸದಸ್ಯೆ ಜಯಮ್ಮ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸೇರಿದಂತೆ ಮಳೆ ಹಾನಿ ಪರಿಶೀಲನಾ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಗಂಭೀರತೆಯನ್ನು ಅರಿತು ತತ್‌ಕ್ಷಣವೇ ಜೆಸಿಬಿ ಯಂತ್ರದ ಮೂಲಕ ನೀರು ಪೋಲಾಗದಂತೆ ತಡೆಯಲು ದಂಡೆ ನಿರ್ಮಾಣಕ್ಕೆ ಮುಂದಾದ ಅಧಿಕಾರಿಗಳ ಕಾರ್ಯವೈಖರಿ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
ಕಾಮೆಂಟ್‌ಗಳಿಲ್ಲ