Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಅಧಿಕಾರಿಗಳ ರಕ್ಷಣೆ ರಾಜ್ಯ ಸರ್ಕಾರದ ಜವಾಬ್ದಾರಿ - ಹೊಸನಗರದಲ್ಲಿ ಸಚಿವ ಮಧು ಬಂಗಾರಪ್ಪ

ಹೊಸನಗರ : ದೇಶ ಓರ್ವ ನಿಷ್ಠಾವಂತ ಯೋಧನನ್ನು ಕಳೆದುಕೊಂಡಿದೆ. ಆತನ ಕುಟುಂಬಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಬದ್ಧವಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಇತ್ತೀಚೆಗೆ ಆಗ್ರಾದ ವಾಯುನೆಲೆ ಪಿಟಿಎಸ್ ತರಬೇತಿ ಕೇಂದ್ರದಲ್ಲಿ ಸ್ಕೈ ಡೈವಿಂಗ್ ತರಬೇತಿ ನೀಡುವ ವೇಳೆ ಪ್ಯಾರಾಚೂಟ್ ಕೈಕೊಟ್ಟ ಪರಿಣಾಮ ದುರಂತ ಸಾವು ಕಂಡ ತಾಲ್ಲೂಕಿನ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋರನಗದ್ದೆ ನಿವಾಸಿ ವೀರ ಸೇನಾನಿ ಜಿ.ಎಸ್. ಮಂಜುನಾಥ್ ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿ, ಮೃತನ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ಬಳಿಕ ಪಟ್ಟಣದ ಪ್ರವಾಸಿ ಮಂದಿರಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

CLICK ಮಾಡಿ - ಜಯನಗರದ ಶ್ರೀಮತಿ ಸೀತಮ್ಮ ರಾಮಚಂದ್ರ ರಾವ್ ಇನ್ನಿಲ್ಲ

ದೇಶ ಕಾಯುವ ಯೋಧ ದೇಶದ ಮಗನಿದ್ದಂತೆ. ಯೋಧನ ಸಾವು ಪ್ರತಿಯೊಂದು ಮನೆ ಮಗನ ಸಾವಿನಂತೆ. ಈ ಕಾರಣಕ್ಕೆ ಗ್ರಾಮದ ಪ್ರತಿಯೊಂದು ಕುಟುಂಬವು ಮನೆಯ ಓರ್ವ ಸದಸ್ಯನನ್ನು ಕಳೆದುಕೊಂಡ ಹಾಗೆ ನೋವು ಅನುಭವಿಸುತ್ತದೆ. ಇಂತಹ ಚಿಂತನೆಯಲ್ಲಿ ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರೂ ಒಗ್ಗೂಡಿ ಹೋದಾಗ ಮಾತ್ರವೇ ದೇಶದಲ್ಲಿ ಒಳ್ಳೆಯ ಭಾವನೆ, ಬಾಂಧವ್ಯ, ಪ್ರೀತಿ, ವಿಶ್ವಾಸ ಮತ್ತು ಯೋಧರ ಮೇಲೆ ಅತಿ ಹೆಚ್ಚು ಪ್ರೀತಿ ಹೊಂದಲು ಸಾಧ್ಯ. ಹಸಿವಿಗೆ ಅನ್ನ ನೀಡುವ ರೈತನಂತೆ ದೇಶ ಕಾಯುವ ಯೋಧನಿಗೂ ಸೂಕ್ತ ಮನ್ನಣೆ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಮೃತನ ಹೆಸರಿನಲ್ಲಿ ಶಾಲೆ ಆರಂಭ ಹಾಗೂ ಆತನ ಪುತ್ಥಳಿ ಸ್ಥಾಪನೆಗೆ ತಾವು ಬದ್ಧ ಇರುವುದಾಗಿ ತಿಳಿಸಿದ ಸಚಿವರು, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದು ಭಾರತ ಸರ್ಕಾರದ ಕರ್ತವ್ಯ ಎಂದರು.

ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆ, ಜಿಲ್ಲೆಯಾದ್ಯಂತ ವಿದ್ಯುತ್ ಕಣ್ಣು ಮುಚ್ಚಾಲೆ ಆರಂಭವಾಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ, ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ಕರೆಯಲಾಗಿದ್ದು, ಮೆಸ್ಕಾಂ ಎಂಡಿ ಜೊತೆ ಈ ಕುರಿತು ಚರ್ಚಿಸಿ, ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದೇನೆ. ಸರ್ಕಾರದ ಹಲವು ಗ್ಯಾರಂಟಿಗಳ ಅನುಷ್ಠಾನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿ ಸಾಗಿದ್ದವು. ಆದರೆ, ಪ್ರಸಕ್ತ ಸಾಲಿನ ಬಜೆಟ್ ನಂತರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಆಗಲಿದೆ. ಹಿಂದಿನ ಬಿಜೆಪಿ ಸರ್ಕಾರ ಸುಮಾರು ರೂ. 40 ಸಾವಿರ ಕೋಟಿ ಹೊಣೆಗಾರಿಕೆ ಅನುದಾನವನ್ನು ಇಂದಿನ ಕಾಂಗ್ರೆಸ್ ರಾಜ್ಯ ಸರ್ಕಾರದ ಮೇಲೆ ಬಿಟ್ಟಿತ್ತು. ನನ್ನ ಶಿಕ್ಷಣ ಇಲಾಖೆಯ ವಿವೇಕ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ರೂ. ಎಂಟೂವರೆ ಸಾವಿರ ಅನುದಾನ ಘೋಷಿಸಿ, ಇಟ್ಟಿದ್ದು ಕೇವಲ ರೂ ಮುನ್ನೂರು ಕೋಟಿ ಮಾತ್ರ. ಇದು ಮುಂಬರುವ ಸರ್ಕಾರಗಳಿಗೆ ಹೊರೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು. ವಿವೇಕ್ ಯೋಜನೆ ಬಿಜೆಪಿಯ ಚುನಾವಣೆ ಗಿಮಿಕ್ ಆಗಿತ್ತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತಂತೆ ವಿರೋಧ ಪಕ್ಷಗಳು ಇಂದು ಚಕಾರ ಎತ್ತುತ್ತಿಲ್ಲ. ಬಾಯಿ ಮುಚ್ಚಿಕೊಂಡು ಕುಳಿತಿವೆ. ಕಳೆದ ಲೋಕಸಭಾ ಚುನಾವಣಾ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಗ್ಯಾರಂಟಿ ಯೋಜನೆ ಅನುಷ್ಠಾನವನ್ನೇ ತಮ್ಮ ಅಸ್ತ್ರ ಮಾಡಿಕೊಂಡಿದ್ದವು. ಆದರೆ, ರಾಜ್ಯದಲ್ಲಿ ಶೇ. 99ರಷ್ಟು ಗ್ಯಾರಂಟಿ ಯೋಜನೆಗಳು ಅನುಷ್ಠಾನಕ್ಕೆ ಬಂದ ಹಿನ್ನೆಲೆಯಲ್ಲಿ ಈಗ ವಿರೋಧಿಗಳಿಗೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯಲು ಪ್ರಯೋಗಾಸ್ತ್ರವೇ ಇಲ್ಲವಾಗಿದೆ. ಒಂದೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಾಗಿ ಮೊದಲು ಜನತೆಗೆ ತಿಳಿಸಲಿ ಎಂದು ಅವರು ಸವಾಲು ಹಾಕಿದರು.

ಲೋಕಸಭೆಗೆ ಇಂದು ಚುನಾವಣೆ ನಡೆದಲ್ಲಿ ಕಳೆದ ಸಾಲಿಗಿಂತ ಕಾಂಗ್ರೆಸ್ ಪಕ್ಷ ಆರೇಳು ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ ಸಚಿವರು, ಗ್ಯಾರಂಟಿ ಯೋಜನೆ ಕುರಿತಂತೆ ರಾಜ್ಯದ ಪ್ರತಿಯೊಂದು ಅರ್ಹ ಕುಟುಂಬದಲ್ಲಿ ದುಡಿಯುವ ಓರ್ವ ಸದಸ್ಯನಂತೆ ರಾಜ್ಯ ಸರ್ಕಾರ ಕರ್ತವ್ಯ ನಿರ್ವಹಿಸುತ್ತಿದೆ. ಸರ್ಕಾರ ಪ್ರತಿ ಕುಟುಂಬಕ್ಕೆ ಆರ್ಥಿಕವಾಗಿ ದುಡಿಯುವ ಆಳಿನಂತೆ ಯೋಜನೆ ರೂಪಿಸಿದೆ ಎಂಬ ಅಭಿಪ್ರಾಯ ಪಟ್ಟರು.

CLICK ಮಾಡಿ - ಪ್ಯಾರಾಚೂಟ್ ದುರಂತ: ಸಂಕೂರಿನ ಮೃತ ಯೋಧ ಮಂಜುನಾಥ್ ನಿವಾಸಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ - ಕುಟುಂಬಕ್ಕೆ ಸಾಂತ್ವನ

ಶಕ್ತಿ, ಗೃಹಲಕ್ಷ್ಮಿ, ವಿದ್ಯಾನಿಧಿ, ಭಾಗ್ಯಜ್ಯೋತಿ ಮೂಲಕ ಕುಟುಂಬ ಒಂದಕ್ಕೆ ಕನಿಷ್ಟ ರೂ. 50 ಸಾವಿರ ಆದಾಯ ನೀಡುವ ಕಾರ್ಯಕ್ಕೆ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಶ್ರಮಿಸಿದೆ. ಯಾರು ಗ್ಯಾರಂಟಿ ವಿರುದ್ಧ ಹೆಚ್ಚು ಮಾತನಾಡಿದ್ದರೋ, ಅವರೇ ಇಂದು ಯೋಜನೆಯ ಫಲಾನುಭವಿಗಳಾಗಿರುವುದು ವಿಶೇಷ ಎಂದರು.

ಇತ್ತೀಚೆಗೆ ಭದ್ರಾವತಿ ತಾಲ್ಲೂಕಿನಲ್ಲಿ ರಾತ್ರೋರಾತ್ರಿ ಅಕ್ರಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೋರ್ವರು ಏಕಾಂಗಿ ದಾಳಿ ನಡೆಸಿದಾಗ, ಶಾಸಕರ ಪುತ್ರರೋರ್ವರು ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೃತ್ಯ ಕುರಿತಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಸರ್ಕಾರದ ಅಧಿಕಾರಿ ವರ್ಗವನ್ನು ರಕ್ಷಣೆ ಮಾಡುವುದು ನಮ್ಮ ರಾಜ್ಯ ಸರ್ಕಾರದ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯೂ ಆಗಿದೆ. ಅದರಲ್ಲೂ ಓರ್ವ ಮಹಿಳಾ ಅಧಿಕಾರಿಯ ವಿಷಯ ಕುರಿತಂತೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಆರೋಪಿಗಳನ್ನು ಬಂಧಿಸಲಾಗಿದೆ. ತಾವು ಜಿಲ್ಲಾ ರಕ್ಷಣಾಧಿಕಾರಿ ಜೊತೆ ನಿರಂತ ಸಂಪರ್ಕದಲ್ಲಿದ್ದು, ತನಿಖೆ ಮುಂದುವರೆದಿದೆ. ಈ ಕುರಿತು ಯಾವುದೇ ರಾಜಿ ಇಲ್ಲವೇ ಇಲ್ಲ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಮಧು, ಬಿಜೆಪಿ ಆರೋಪಗಳಿಗೆ ಉತ್ತರಿಸಲು ನಾನು ಇಲ್ಲಿ ಬಂದಿಲ್ಲ. ಈಗ ಬಿಜೆಪಿ ಅಧಿಕಾರದಲ್ಲಿಲ್ಲ. ಪ್ರಕರಣ ಕುರಿತಂತೆ ಸೂಕ್ತ ತನಿಖೆ ಬಳಿಕವಷ್ಟೇ ಆರೋಪಿಗಳ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್, ಪ್ರಸನ್ನಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಮಾಜಿ ಸದಸ್ಯ ಬಂಡಿ ರಾಮಚಂದ್ರ, ಬ್ಲಾಕ್ ಕಾಂಗೆಸ್ ಅಧ್ಯಕ್ಷ ಚಂದ್ರಮೌಳಿ, ಮಾಜಿ ಅಧ್ಯಕ್ಷ ಬಿ.ಜಿ.ನಾಗರಾಜ್, ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಸಂಚಾಲಕ ಅಮೀರ್ ಹಂಜಾ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಪಟ್ಟಣ ಪಂಚಾಯಿತಿ ಸದಸ್ಯ ಅಶ್ವಿನಿಕುಮಾರ್, ಪ್ರಮುಖರಾದ ಏರಗಿ ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ