ಪ್ಯಾರಾಚೂಟ್ ದುರಂತ: ಸಂಕೂರಿನ ಮೃತ ಯೋಧ ಮಂಜುನಾಥ್ ನಿವಾಸಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ - ಕುಟುಂಬಕ್ಕೆ ಸಾಂತ್ವನ
ಹೊಸನಗರ : ಇದೇ ಫೆಬ್ರವರಿ 7ರ ಶುಕ್ರವಾರ ಆಗ್ರಾದ ವಾಯುಪಡೆ ತರಬೇತಿ ಕೇಂದ್ರದಲ್ಲಿ ನಡೆದ ದುರ್ಘಟನೆಯಲ್ಲಿ ದುರಂತ ಸಾವು ಕಂಡಿದ್ದ ಎಟಿಎಸ್ ತರಬೇತುದಾರ ವಾರೆಂಟ್ ಅಧಿಕಾರಿ ಜಿ.ಎಸ್. ಮಂಜುನಾಥ್ ಅವರ ಸ್ವಗ್ರಾಮ ತಾಲ್ಲೂಕಿನ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋರನಗದ್ದೆ ನಿವಾಸಕ್ಕೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ, ಮೃತ ಯೋಧನ ಕುಟುಂಬಕ್ಕೆ ನೈತಿಕ ಬಲ ತುಂಬಿದರು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಭಾರತೀಯ ವಾಯುಪಡೆಯ ಸ್ಕೈ ಡೈವಿಂಗ್ ತರಬೇತಿ ವೇಳೆ ಮಂಜುನಾಥ್ ಅವರ ಅಕಾಲಿಕ ಸಾವು ದೇಶಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬ ವರ್ಗ ಶೋಕಸಾಗರದಲ್ಲಿದೆ. ದೇಶದ ರಕ್ಷಣಾ ಕಾರ್ಯದಲ್ಲಿ ಮೃತ ಸೇನಾನಿಯ ಸೇವೆಯನ್ನು ದೇಶದ ನಾಗರೀಕರು ಎಂದಿಗೂ ಮರೆಯಬಾರದು. ದೇವರು ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಿ ಕಾಪಾಡಲಿ ಎಂದು ಮೃತ ಯೋಧ ಮಂಜುನಾಥ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪ್ರಾರ್ಥಿಸಿದರು.
ಪ್ರೀತಿಸಿ ಮದುವೆಯಾಗಿದ್ದ ಮೃತ ಮಂಜುನಾಥ ಅವರ ಅಗಲಿಕೆಯಿಂದ ಮೊದಲೇ ನೊಂದಿದ್ದ ಪತ್ನಿ ಕಲ್ಪಿತಾ ಅವರನ್ನು ಸಚಿವರು ಸಂತೈಸಲು ಮುಂದಾದಾಗ, ಇಡೀ ಕುಟುಂಬವೇ ಒಟ್ಟಾಗಿ ಕಣ್ಣೀರಿಡುವ ದೃಶ್ಯ ಎಂತಹವರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿತ್ತು.
ಈ ವೇಳೆ ಮಂಜುನಾಥ್ ಓದಿದ ಸಂಕೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಸಚಿವರನ್ನು ಭೇಟಿ ಮಾಡಿ, ಯೋಧನ ಸವಿನೆನಪಿಗಾಗಿ ಆತನ ಹೆಸರಿನಲ್ಲಿ ಸರ್ಕಾರದ ವತಿಯಿಂದ ಹೊಸ ಶಾಲಾ ಕಟ್ಟಡದ ನಿರ್ಮಾಣ ಹಾಗೂ ಗ್ರಾಮದ ವೃತ್ತದಲ್ಲಿ ಮೃತ ಸೈನಿಕ ಮಂಜುನಾಥ ಅವರ ಪುತ್ಥಳಿ ಸ್ಥಾಪನೆಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದರು.
ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಸಚಿವ ಮಧು ಬಂಗಾರಪ್ಪ, ತಿಂಗಳೊಳಗಾಗಿ ಈ ಕುರಿತು ಅಗತ್ಯ ಕ್ರಮಕ್ಕೆ ಮುಂದಾಗಿ, ಇಲಾಖೆಗೆ ವರದಿ ಸಲ್ಲಿಸುವಂತೆ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ ಅವರಿಗೆ ಸೂಚಿಸಿದರು. ಈ ಬಗ್ಗೆ ಖುದ್ದು ವಿಶೇಷ ಕಾಳಜಿ ವಹಿಸುವ ಇಂಗಿತವನ್ನು ಸಚಿವ ಮಧು ಬಂಗಾರಪ್ಪ ವ್ಯಕ್ತ ಪಡಿಸಿದರು.
ಇದೇ ಸಂದರ್ಭದಲ್ಲಿ ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ಡಾ.ರಾಮಪ್ಪ ಅವರ ಪುತ್ರ ರವಿ, ಮೃತರ ಕುಟುಂಬಕ್ಕೆ ಧನ ಸಹಾಯದ ಚೆಕ್ ವಿತರಿಸಿದರು.
ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಸಂಚಾಲಕ ಅಮೀರ್ ಹಂಜಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.
ಕಾಮೆಂಟ್‌ಗಳಿಲ್ಲ