ಸಚಿವ ಕೃಷ್ಣ ಬೈರೇಗೌಡರ ದಿಢೀರ್ ಸರ್ಕಾರಿ ಕಚೇರಿ ಭೇಟಿ - ಕೊನೆಗೆ ಜನರಿಗಾದ ಉಪಯೋಗವೇನು?!
’ನಿಮ್ಮ ಈ ಸರಳತೆ ಎಲ್ಲಾ ರಾಜಕಾರಣಿಗಳಿಗೂ ಮಾದರಿಯಾಗಬೇಕು. ನಿಮ್ಮಂತಹವರು ನಮ್ಮ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಬೇಕಿದೆ.’
ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೆಲ ತಿಂಗಳ ಹಿಂದೆ ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಗೆ ಬೆಳಿಗ್ಗೆ ಹತ್ತೂವರೆ ಸುಮಾರಿಗೆ ದಿಢೀರ್ ಭೇಟಿ ನೀಡಿ, ಗೈರುಹಾಜರಾದ ಅಧಿಕಾರಿಗಳು - ನೌಕರರನ್ನು ತರಾಟೆಗೆ ತೆಗೆದುಕೊಂಡಿದ್ದು ಸಾಕಷ್ಟು ವೈರಲ್ ಸುದ್ದಿಯಾದ ಬೆನ್ನಲ್ಲೇ, ಯುಟ್ಯೂಬಿನಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡ ಸಚಿವರ ಈ ವಿಡಿಯೋಗೆ ಬಂದ ಹತ್ತಾರು ಕಮೆಂಟುಗಳಲ್ಲಿ ಈ ಕಮೆಂಟು ಕೂಡಾ ಒಂದು. ಇದೊಂದು ಉದಾಹರಣೆಯಷ್ಟೇ. ಬಹುತೇಕ ಕಮೆಂಟುಗಳಲ್ಲಿ ಇದೇ ಭಾವವಿತ್ತು. ಇನ್ನು ಕೆಲವರು ನಿಮ್ಮ ಈ ದಿಢೀರ್ ಭೇಟಿ ನಮ್ಮೂರಿನ ತಹಶೀಲ್ದಾರ್ ಕಚೇರಿಗೂ ಆಗಬೇಕು ಎನ್ನುವ ಬೇಡಿಕೆಯನ್ನೂ ಇಟ್ಟಿದ್ದರು. ಅಂದರೆ ಕೃಷ್ಣ ಬೈರೇಗೌಡರು ಹೇಳದೇ ಕೇಳದೇ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವುದು ಜನರಿಗೆ ಇಷ್ಟವಾಗಿದೆ. ಮತ್ತು ಇಂತಹ ಭೇಟಿಯಿಂದ ಸರ್ಕಾರಿ ನೌಕರರು ಹೆದರಿಕೊಂಡು ಭ್ರಷ್ಟರಾಗದೇ ಕೆಲಸ ಮಾಡುತ್ತಾರೆ ಎನ್ನುವ ನಿರೀಕ್ಷೆ ಜನರದ್ದು.
ಆ ಕಡೆಯೂ ಕೆಲಸವಾಗುತ್ತಿಲ್ಲ, ಈ ಕಡೆಯೂ ಕೆಲಸ ಸಾಗುತ್ತಿಲ್ಲ ಎನ್ನುವುದೇ ಆದರೆ ಕೃಷ್ಣ ಬೈರೇಗೌಡರು ಸಚಿವರಾಗಿ ಮಾಡಿದ್ದೇನು? ಇದಕ್ಕೆ ಸಚಿವರೇ ಉತ್ತರ ಕೊಡಬೇಕು. ಇಂತಹ ತೂತುಗಳನ್ನು ಮುಚ್ಚಿಕೊಳ್ಳಬೇಕೆಂದೇ ಇವರು ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಸುದ್ದಿಯಾಗುತ್ತಿದ್ದಾರಾ? ಹೌದು ಅಂತಲೇ ಅನ್ನಿಸುತ್ತದೆ. ಯಾಕೆಂದರೆ, ಇದೇ ಸಚಿವರ ವ್ಯಾಪ್ತಿಯಲ್ಲಿರುವ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲೂ ಭ್ರಷ್ಟ ನೌಕರರದ್ದೇ ಕಾರುಬಾರು. ಬೇರೆ ತಾಲ್ಲೂಕುಗಳ ಕಥೆ ಗೊತ್ತಿಲ್ಲ. ಹೊಸನಗರ ತಹಶೀಲ್ದಾರ್ ಕಚೇರಿಯಲ್ಲಂತೂ ಲಂಚವೆನ್ನುವುದು ಅಟ್ಟಾಡುತ್ತಿದೆ. ಫೈಲುಗಳ ನಡುವೆ ದುಡ್ಡು ಇಟ್ಟು ಕೊಡುವ ವ್ಯವಸ್ಥೆ ಹೊಸನಗರ ತಾಲ್ಲೂಕು ಕಚೇರಿಯಲ್ಲಿದೆ. ಮರಳು ದಂಧೆ ಎಗ್ಗುಸಿಗ್ಗಿಲ್ಲದೆ ನಡೆಯುತ್ತಿದೆ. ದಾಖಲೆ ಸಹಿತ ದೂರು ಕೊಟ್ಟರೂ ತಹಶೀಲ್ದಾರ್ ಅಲ್ಲಾಡುವುದಿಲ್ಲ, ಇನ್ನು ಜಿಲ್ಲಾಧಿಕಾರಿಗಳಂತೂ ಯಾವ ಪ್ರತಿಕ್ರಿಯೆಯನ್ನೂ ಕೊಡುವುದಿಲ್ಲ. ಇದೆಲ್ಲ ಕೃಷ್ಣ ಬೈರೇಗೌಡರ ಗಮನದಲ್ಲಿಲ್ಲವಾ? ಸಚಿವರು ಪ್ರಾಮಾಣಿಕರು, ಜನರಿಗಾಗಿ ಕೆಲಸ ಮಾಡುತ್ತಾರೆ ಮತ್ತು ತಮ್ಮ ಇಲಾಖೆಯ ಅಧಿಕಾರಿಗಳ ಮೇಲೆ ಅಂದರೆ ಕೆಳಹಂತದ ಅಧಿಕಾರಿಗಳು ಅಂತಲ್ಲ, ಕೊನೇಪಕ್ಷ ಜಿಲ್ಲಾಧಿಕಾರಿಗಳ ಮಟ್ಟದಲ್ಲಿಯೂ ಹಿಡಿತವನ್ನಿಟ್ಟುಕೊಂಡಿಲ್ಲ ಎನ್ನುವುದಾದರೆ ಇನ್ನು ಇವರು ಜನರಿಗಾಗಿ ಏನು ಕೆಲಸ ಮಾಡಿಕೊಡುತ್ತಾರೆ? ಅದ್ಯಾವ ರೀತಿ ಸಹಾಯ ಮಾಡುತ್ತಾರೆ?!
ಜನರ ನಿರೀಕ್ಷೆ ಸಹಜವಾದದ್ದೇ. ಆದರೆ ಈ ನಿರೀಕ್ಷೆಯ ಒಂದು ಪಾಲನ್ನಾದರೂ ಕೃಷ್ಣ ಬೈರೇಗೌಡರು ತಲುಪಿಕೊಂಡಿದ್ದಾರಾ? ಎಂದರೆ ಇಲ್ಲ ಎಂದೇ ಹೇಳಬೇಕು. ಸಚಿವರು ದಿಢೀರ್ ಭೇಟಿ ನೀಡಿದರು, ಫೇಸ್‌ಬುಕ್ ಲೈವ್ ಮಾಡಿದರು, ವಾಪಾಸ್ಸು ಹೋದರು, ಪತ್ರಿಕೆ - ಟಿವಿ ಚಾನೆಲ್ - ಯುಟ್ಯೂಬುಗಳಲ್ಲಿ ದೊಡ್ಡ ಸುದ್ದಿಯಾಯಿತು ಎನ್ನುವಷ್ಟಕ್ಕೇ ಈ ಭೇಟಿಗಳು ಸೀಮಿತವಾಗುವಂತೆ ಕಾಣುತ್ತಿದೆ. ದೊಡ್ಡಬಳ್ಳಾಪುರ ತಹಶೀಲ್ದಾರ್ ಕಚೇರಿ ಮತ್ತು ಉಪ ವಿಭಾಗಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಹತ್ತತ್ತಿರ ಒಂದೂವರೆ ತಿಂಗಳಾಗುತ್ತಾ ಬಂತು. ಸಚಿವರು ಇಲ್ಲಿಗೆ ಭೇಟಿ ನೀಡಿದಾಗ ಬೆಳಗಿನ ಹತ್ತೂವರೆ - ಹನ್ನೊಂದು ಗಂಟೆ ದಾಟಿತ್ತಾದರೂ ಕಚೇರಿಯಲ್ಲಿರಬೇಕಾದ ಶೇಕಡಾ ಎಂಭತ್ತರಷ್ಟು ನೌಕರರು ಕಚೇರಿಗಿನ್ನೂ ಬಂದಿರಲಿಲ್ಲ! ಇನ್ನು ಕೆಲವರು ಸಚಿವರೆದುರೇ ಕಚೇರಿಗೆ ಎಂಟ್ರಿ ಕೊಡುತ್ತಿದ್ದರು. ಸಚಿವರು ಅಲ್ಲಿಂದ ನಿರ್ಗಮಿಸುವಷ್ಟರಲ್ಲಿ ಬಂದ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಜಿಲ್ಲಾಧಿಕಾರಿಗಳಿಗೂ ಕರೆ ಮಾಡಿದ ಸಚಿವರು, ’ಆಫೀಸ್ ಓಪನ್ ಇಟ್ಟಿದ್ದಾರೆ. ಇಲ್ಲಿಂದ ಯಾರಾದರೂ ಏನಾದರೂ ತೆಗೆದುಕೊಂಡು ಹೋದರೆ ಕೇಳುವವರೂ ಇಲ್ಲವಲ್ರೀ. ಕೊನೆಗೆ ಕಸ ಹೊಡೆಯುವವರೂ ಕಾಣಿಸ್ತಾ ಇಲ್ಲವಲ್ಲ...’ ಎಂದು ಹೇಳಿದರು. ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಕಚೇರಿ ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ಇರಬೇಕಾದವರೇ ಇರಲಿಲ್ಲ. ಆ ದಿನದ ರಜೆಯನ್ನೂ ಹಾಕಿರಲಿಲ್ಲ. ಫೀಲ್ಡಿಗೆ ಹೋಗಿದ್ದರ ಬಗ್ಗೆಯೂ ಕಚೇರಿಯ ದಾಖಲೆ ಪುಸ್ತಕದಲ್ಲಿ ನಮೂದಾಗಿರಲಿಲ್ಲ. ಅಂದರೆ ಕಚೇರಿಗೆ ಸರಿಯಾದ ಸಮಯಕ್ಕೆ ಬಂದು ಜನರ ಕೆಲಸಗಳನ್ನು ಮಾಡಿಕೊಡಬೇಕಾದ ಸರ್ಕಾರಿ ನೌಕರರು ಸರ್ಕಾರದ ನಿಯಮಗಳನ್ನೆಲ್ಲ ಮೀರಿ ಕಚೇರಿಯಿಂದ ದೂರವೇ ಉಳಿದಿದ್ದರು ಮತ್ತು ಜನರಿಗೂ ಈ ಮೂಲಕ ತೊಂದರೆ ಕೊಡುತ್ತಿದ್ದರು. ಸಚಿವರು ಭೇಟಿ ಕೊಟ್ಟಿದ್ದಕ್ಕೆ ಆ ದಿನ ಇಲ್ಲಿನ ನೌಕರರು ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ, ಜನರ ಕೆಲಸಗಳನ್ನು ಮಾಡಿಕೊಡುತ್ತಿಲ್ಲ ಎನ್ನುವುದೇನೋ ಗೊತ್ತಾಯಿತು. ಪ್ರತೀದಿನವೂ ಇಲ್ಲಿನ ನೌಕರರು, ಅಧಿಕಾರಿಗಳು ಇದೇ ರೀತಿ ಮಾಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿಯೇನು? ಹಾಗಿದ್ದರೆ ಇಂತಹ ಸರ್ಕಾರಿ ನೌಕರರನ್ನು ಆ ಕೂಡಲೇ ಅಮಾನತು ಮಾಡುವ ಅಧಿಕಾರ ಸಚಿವರಿಗಿಲ್ಲವಾ? ಖಂಡಿತ ಇದೆ. ಆದರೆ ಅಂತಹದ್ದೇನನ್ನೂ ಸಚಿವರು ಮಾಡಲಿಲ್ಲ. ಆಯಿತು, ಆ ದಿನ ಕಾರಣ ಹೇಳದೇ ಗೈರಾದ ಅಥವಾ ಕಚೇರಿಗೆ ತಡವಾಗಿ ಬಂದ ನೌಕರರ ವಿರುದ್ಧ ಆನಂತರವಾದರೂ ಸಚಿವರು ಏನಾದರೂ ಕ್ರಮ ತೆಗೆದುಕೊಂಡರಾ ಎಂದರೆ, ಉಹ್ಞೂಂ, ಈವರೆಗೂ ಅಂತಹದ್ದೇನೂ ವರದಿಯಾಗಿಲ್ಲ. ಅಥವಾ ಸಚಿವ ಕೃಷ್ಣ ಬೈರೇಗೌಡರು ಈ ಕುರಿತು ಮಾಧ್ಯಮಗಳೆದುರು ಬಂದು ಇಂತಿಂತಹವರನ್ನು ಅಮಾನತು ಮಾಡಿದ್ದೇನೆ ಎಂದೂ ಹೇಳಿಲ್ಲ.
ಅಂದಮೇಲೆ ಸಚಿವರ ಈ ದಿಢೀರ್ ಸರ್ಕಾರಿ ಕಚೇರಿಗಳ ಭೇಟಿಯಿಂದ ಜನರಿಗಾಗುವ ಉಪಯೋಗವೇನು?!
ಸಧ್ಯಕ್ಕಂತೂ ಜನರಿಗೇನೂ ಉಪಯೋಗವಾಗುವಂತೆ ಕಾಣುತ್ತಿಲ್ಲ. ಆದರೆ ಇಂತಹ ದಿಢೀರ್ ಭೇಟಿಗಳು ಸಚಿವ ಕೃಷ್ಣ ಬೈರೇಗೌಡರಿಗೆ ಜನರ ಮನಸ್ಸಿನಲ್ಲಿ ಒಂದೊಳ್ಳೆಯ ಇಮೇಜ್ ಕಟ್ಟಿ ಕೊಡುತ್ತಿದೆ. ಅದಕ್ಕೇ ನಾನು ಯುಟ್ಯೂಬಿನಲ್ಲಿ ಬಂದ ಕಮೆಂಟ್‌ವೊಂದನ್ನು ಉದಾಹರಣೆಯಾಗಿ ನೀಡಿದ್ದು. ಹೌದು, ಕೃಷ್ಣ ಬೈರೇಗೌಡರು ಹೀಗೆ ಭೇಟಿ ನೀಡಿದ ಸರ್ಕಾರಿ ಕಚೇರಿಗಳ ನೌಕರರು ಮತ್ತು ಅಧಿಕಾರಿಗಳ ವಿರುದ್ಧ ಒಬ್ಬ ಸಚಿವರಾಗಿ ಏನು ಕ್ರಮ ತೆಗೆದುಕೊಂಡರು? ಎಷ್ಟು ಜನರನ್ನು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಿದರು? ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮನಸ್ಥಿತಿ ನಮ್ಮ ಜನರಲ್ಲಿ ಇಲ್ಲ. ಬೇರೆ ಯಾವ ಸಚಿವರೂ ಮಾಡದ ಕೆಲಸವನ್ನು ಇವರು ಮಾಡುತ್ತಿದ್ದಾರಲ್ಲ, ಅಂದಮೇಲೆ ’ಕೃಷ್ಣ ಬೈರೇಗೌಡರು ಬೆಸ್ಟ್’ ಎನ್ನುವ ತೀರ್ಮಾನಕ್ಕೆ ಜನರು ಬರುತ್ತಿದ್ದಾರೆ. ಬಹುಶಃ ಸಚಿವರೂ ಜನರಿಗೆ ’ಆ ಕ್ಷಣದ ಆಟವಷ್ಟೇ ಬೇಕು’ ಎನ್ನುವುದನ್ನು ಸರಿಯಾಗಿ ಕಂಡುಕೊಂಡಿದ್ದಾರೋ ಏನೋ, ಅವರು ಹೀಗೆ ವಿಸಿಟ್ ಮಾಡಿ ಅಷ್ಟಕ್ಕೇ ಸುಮ್ಮನಾಗುತ್ತಿದ್ದಾರೆ. ಹಾಗೆ ನೋಡಿದರೆ ಇಂತಹ ’ಕೆಲಸಕ್ಕೆ ಕಳ್ಳ ಬೀಳುವ’ ನೌಕರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸಚಿವರಿಗೆ ಎಲ್ಲಾ ರೀತಿಯ ಅಧಿಕಾರವೂ ಇದೆ. ಆದರೂ ಅಂತಹ ಯಾವ ಕ್ರಮವಾದ ಬಗ್ಗೆಯೂ ಈವರೆಗೆ ಸಚಿವರ ಕಚೇರಿಯಿಂದ ಸುದ್ದಿ ಹೊರ ಬಾರದೇ ಇರುವುದರಿಂದ ಕೃಷ್ಣ ಬೈರೇಗೌಡರ ಇಂತಹ ಭೇಟಿಗಳು ಗಿಮಿಕ್ಕು ಮತ್ತು ಅವರ ಇಮೇಜ್ ಬಿಲ್ಡ್ ಮಾಡುವ ಒಂದು ಯೋಜಿತ ಕೆಲಸದಂತೆಯೇ ಕಾಣುತ್ತಿದೆ.
ಕೃಷ್ಣ ಬೈರೇಗೌಡರು ತುಂಬಾ ಸಿಂಪಲ್ಲು, ವಿಧಾನಸೌಧದ ತಮ್ಮ ಕಚೇರಿಗೆ ಹೋಗುವಾಗ ಮೆಟ್ರೋ ಟ್ರೇನ್ ಬಳಸುತ್ತಾರೆ, ಬೆಳಗಾವಿ ಅಧಿವೇಶನವೋ ಇನ್ನೆಲ್ಲಿಗೋ ರೈಲಿನಲ್ಲಿ ಒಬ್ಬರೇ ಹೋದರು... ಎಂದೆಲ್ಲ ಸುದ್ದಿಯಾಗಿ ಕೃಷ್ಣ ಬೈರೇಗೌಡರೆಂದರೆ ತುಂಬಾ ’ಸಿಂಪಲ್’ ಎನ್ನುವ ಇಮೇಜ್ ಈಗಾಗಲೇ ಕ್ರಿಯೇಟ್ ಆಗಿದೆ. ಇದಕ್ಕೆ ಇನ್ನಷ್ಟು ಪುಶ್ ಸಿಗುವಂತೆ ಅವರು ಅಲ್ಲಲ್ಲಿ ಸೆಕ್ಯೂರಿಟಿ, ಹಿಂಬಾಲಕರ ಪಡೆ ಎಂದೆಲ್ಲ ಇಟ್ಟುಕೊಳ್ಳದೇ ಓಡಾಡುತ್ತಿರುತ್ತಾರೆ. ಇದರ ಮುಂದುವರಿದ ಭಾಗವಾಗಿ ಸರ್ಕಾರಿ ಕಚೇರಿಗಳಿಗೆ ಅಂದರೆ ಮುಖ್ಯವಾಗಿ ತಹಶೀಲ್ದಾರ್ ಕಚೇರಿಗಳಿಗೆ ’ಬರುತ್ತಿದ್ದೇನೆ’ ಎಂದೇನೂ ತಿಳಿಸದೆ ಹೋಗುವುದು, ಅಲ್ಲಿನ ಅವ್ಯವಸ್ಥೆ, ನೌಕರರ ನಿರ್ಲಕ್ಷ್ಯ ಧೋರಣೆ, ಭ್ರಷ್ಟಾಚಾರದ ಬಗ್ಗೆಯೆಲ್ಲ ಮಾತನಾಡುವುದು, ಅದನ್ನು ಫೇಸ್‌ಬುಕ್ಕಿನಲ್ಲಿ ಲೈವ್ ಮಾಡಿಸಿಕೊಳ್ಳುವುದು... ಸಹಜವಾಗಿಯೇ ಜನರಿಗೆ ಒಬ್ಬ ಮಿನಿಸ್ಟರ್ ಹೀಗೆಲ್ಲ ಇರುತ್ತಾರಾ? ಎನ್ನುವ ಪಾಸಿಟಿವ್ ಅಭಿಪ್ರಾಯ ಮೂಡಿಸುತ್ತದೆ. ಇದು ಸಹಜವೇ. ಯಾಕೆಂದರೆ, ಒಬ್ಬ ಎಂಎಲ್‌ಎ, ಜಿ.ಪಂ ಮೆಂಬರ‍್ರೇ ಎಲ್ಲಿಗಾದರೂ ಹೋಗುವುದು, ಬರುವುದೆಂದರೆ ಮುಂದೊಂದು ಹಿಂದೊಂದು ಕಾರು, ಪರ್ಸನಲ್ ಸೆಕ್ಯೂರಿಟಿ, ಪೊಲೀಸು, ಹಿಂಬಾಲಕರ ದೊಡ್ಡದೊಂದು ಪಡೆಯನ್ನೇ ಕಟ್ಟಿಕೊಂಡು ಬರುತ್ತಾನೆ. ಅಂತಹದ್ದರಲ್ಲಿ ಮಿನಿಸ್ಟರ್ ಒಬ್ಬರು ಸಾಧಾರಣ ಉಡುಗೆಯೊಂದಿಗೆ, ಒಬ್ಬರೇ ಸರ್ಕಾರಿ ಕಚೇರಿಗಳಿಗೆ ಬರುವುದು, ಅಲ್ಲಿ ಸಿಕ್ಕುವ ಜನರನ್ನು ಯಾವ ಹಮ್ಮುಬಿಮ್ಮೂ ಇಲ್ಲದೇ ಮಾತನಾಡಿಸುವುದು ಎಂದರೆ ’ಸರಳತೆಯ ಸಾಹುಕಾರ’ ಎನ್ನುವ ಫೀಲ್ ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಆದ್ದರಿಂದಲೇ ನಿಮ್ಮಂತಹ ಮಿನಿಸ್ಟರ‍್ರನ್ನು ನಾವು ನೋಡೇ ಇಲ್ಲ, ನೀವು ಮಾದರಿಯಾಗಬೇಕು, ನಿಮ್ಮಂತಹವರು ಮುಖ್ಯಮಂತ್ರಿಯಾಗಬೇಕು ಎಂದೆಲ್ಲ ಜನರು ನಿಜ ಮನಸ್ಸಿನಿಂದ ಕಮೆಂಟ್ ಮಾಡುವುದು, ಕೃಷ್ಣ ಬೈರೇಗೌಡರನ್ನು ಸಿಎಂ ಕುರ್ಚಿಯಲ್ಲಿ ನೋಡಲು ಆಶಿಸುವುದು...
ಕೊನೆಗೆ ಇಷ್ಟೇ ಉಪಯೋಗ ಆಗಿದ್ದು; ಅದೂ ಕೃಷ್ಣ ಬೈರೇಗೌಡರಿಗೆ ಮಾತ್ರ. ಜನರ ಕೈಯಲ್ಲಿ ಕೇವಲ ಇಂತಹ ಅದೇ ಗಿಮಿಕ್ಕುಗಳಿಂದ ಹುಟ್ಟಿಕೊಂಡ ಪಳಪಳ ಹೊಳೆಯುವ ಚೊಂಬು!
CLICK ಮಾಡಿ. ಆಗಾಗ... 'ಗುರು’ ಸಾವಿನ ನಂತರ ಇಷ್ಟೆಲ್ಲ ವಿಷ ಕಾರಿಕೊಳ್ಳಬೇಕಿತ್ತಾ ಈ ನಟ?!
ಅಂದಹಾಗೇ, ಹೀಗೆ ಸಚಿವ ಕೃಷ್ಣ ಬೈರೇಗೌಡರು ಸರ್ಕಾರಿ ಕಚೇರಿಗೆ ದಿಢೀರ್ ಭೇಟಿ ನೀಡುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಅವರು ಉತ್ತರ ಕರ್ನಾಟಕ ಭಾಗದ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದ್ದರು. ಈಗ ದೊಡ್ಡಬಳ್ಳಾಪುರ, ನಂತರ ಕೆ.ಆರ್. ಪುರಂನ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದ್ದಾರೆ. ಅಂದರೆ ಕೃಷ್ಣ ಬೈರೇಗೌಡರು ಬೇರೆ ಸಚಿವರ ಹಾಗಲ್ಲ, ಹೇಳದೇ ಕೇಳದೇ ಬರುತ್ತಾರೆ ಎನ್ನುವ ಸೂಕ್ಷ್ಮ ಕಂದಾಯ ಇಲಾಖೆಯ ಬಹುತೇಕ ನೌಕರರಿಗೆ ಇರುತ್ತದೆ. ಹೀಗಿದ್ದೂ ದೊಡ್ಡಬಳ್ಳಾಪುರದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಸೇರಿದಂತೆ ಬಹುತೇಕ ನೌಕರರು ಯಾಕೆ ಸರಿಯಾದ ಸಮಯಕ್ಕೆ ಕಚೇರಿಗೆ ಬಂದಿರಲಿಲ್ಲ? ಯಾಕೆಂದರೆ, ಈ ಹಿಂದೆಯೂ ಸಚಿವರು ಭೇಟಿ ನೀಡಿದ ಕಚೇರಿಗಳ ನೌಕರರ ವಿರುದ್ಧ ಅಂತಹ ಕ್ರಮವೇನೂ ಆಗಿಲ್ಲ. ಈಗ ನೋಡಿದರೆ ದೊಡ್ಡಬಳ್ಳಾಪುರ ತಹಶೀಲ್ದಾರ್ ಕಚೇರಿಯಲ್ಲಿ ಸಚಿವರ ಭೇಟಿಯ ನಂತರ ಅಂತಹ ಬದಲಾವಣೆಯೇನೂ ಆಗಿಲ್ಲ ಎನ್ನುವ ಸುದ್ದಿಯೂ ಬರುತ್ತಿದೆ. ಕೊನೇಪಕ್ಷ ಜಿಲ್ಲಾಧಿಕಾರಿಯಾದರೂ ಸಚಿವರ ಈ ಭೇಟಿಯಿಂದ ಎಚ್ಚೆತ್ತು ತನ್ನ ವ್ಯಾಪ್ತಿಯ ನೌಕರರಲ್ಲಿ ಕೆಲಸದೆಡೆಗೆ ಗಮನ ಕೊಡುವಂತೆ ಹೇಳಬಹುದಲ್ಲವಾ? ಉಹ್ಞೂಂ, ಅಂತಹ ಕೆಲಸವೂ ಆದ ಹಾಗೆ ಕಾಣುತ್ತಿಲ್ಲ. ಮೊದಲೇ ಹೇಳಿದ ಹಾಗೆ ಇಂತಹ ಭೇಟಿಯಿಂದ ಕೃಷ್ಣ ಬೈರೇಗೌಡರಿಗೆ ಉಪಯೋಗವಾಗುತ್ತಿದೆ ಬಿಟ್ಟರೆ, ಈ ಕಚೇರಿಗಳಿಗೆ ಬಂದು ಹೋಗುವ ಸಾಮಾನ್ಯ ಜನರಿಗೆ ನಯಾಪೈಸೆ ಉಪಯೋಗವಾಗಿಲ್ಲ.
ಈ ದಿಢೀರ್ ಭೇಟಿಗಳ ಕಥೆ ಬಿಟ್ಟುಬಿಡಿ. ಕೃಷ್ಣ ಬೈರೇಗೌಡರಿಗೆ ಸಚಿವರಾಗಿ ಮಾಡುವುದಕ್ಕೆ ಬೇಕಾದಷ್ಟು ಕೆಲಸಗಳಿವೆ. ಈಗ ಕಾವೇರಿ 2.0 ತಂತ್ರಾಂಶ ದೊಡ್ಡ ಫ್ಲಾಪ್ ಶೋ ಆಗಿದೆ. ಈ ತಂತ್ರಾಂಶದ ಮೂಲಕ ವಿವಾಹ ನೋಂದಣಿಯನ್ನು ಆನ್ಲೈನ್ ಮೂಲಕ ಮಾಡಿಕೊಳ್ಳಬಹುದು, ಜನರು ಇದಕ್ಕಾಗಿ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ ಎಂದು ಇದೇ ಸಚಿವರು ದೊಡ್ಡ ಮಟ್ಟದಲ್ಲಿ ಜಾಹೀರಾತು ಮಾಡಿಸಿ, ಮೈಲೇಜ್ ಗಿಟ್ಟಿಸಿಕೊಂಡು ಹತ್ತತ್ತಿರ ಒಂದು ವರ್ಷವಾಗುತ್ತಾ ಬಂತು. ಆದರೆ ಈ ತಂತ್ರಾಂಶದ ಮೂಲಕ ವಿವಾಹ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ ಒಂದು ಜೋಡಿ ಸಿಕ್ಕುವುದು ಕಷ್ಟವಿದೆ. ಈ ತಂತ್ರಾಂಶದಲ್ಲಿ ವಿವಾಹ ನೋಂದಣಿಗೆ ಪ್ರಯತ್ನಿಸಿದರೆ ಕೆವೈಸಿ ವೆರಿಫಿಕೇಶನ್ ಹಂತದಲ್ಲೇ ಚಕ್ರ ಗಿರಗಿರ ತಿರುತ್ತದೆ ಬಿಟ್ಟರೆ ವೆರಿಫಿಕೇಶನ್ ಕಂಪ್ಲೀಟ್ ಆಗುವುದಿಲ್ಲ. ನಾನೇ ಖುದ್ದು ಬೆಂಗಳೂರು ವೈಯಾಲಿಕಾವಲ್‌ನಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಗೆ ಹೋಗಿ ಈ ಬಗ್ಗೆ ವಿಚಾರಿಸಿದರೆ ಹಾಗಾಗಲು ಸಾಧ್ಯವಿಲ್ಲ ಎಂದು ಉತ್ತರಿಸುವ ಸಿಬ್ಬಂದಿ, ಕೊನೆಗೆ ’ಆಫ್‌ಲೈನ್’ನಲ್ಲೇ ಮಾಡಿಕೊಳ್ಳಿ ಎಂದು ಸಲಹೆ ಕೊಡುತ್ತಾರೆ ಎನ್ನುವಲ್ಲಿಗೆ ಕಾವೇರಿ 2.0 ತಂತ್ರಾಂಶದ ಸಕ್ಸಸ್ ಓಟ ಬಂದು ನಿಂತಿದೆ! ಈಗ ನೋಡಿದರೆ ಈ ತಂತ್ರಾಂಶವೇ ಹ್ಯಾಕ್ ಆಗಿದೆ ಎನ್ನುವ ಸುದ್ದಿ ಬೇರೆ ಬಂದಿದೆ. ಆಸ್ತಿ ನೋಂದಣಿಯಂತಹ ಪ್ರಮುಖ ಕೆಲಸ ನಡೆಯುತ್ತಿದ್ದ ಸರ್ಕಾರದ ವೆಬ್‌ಸೈಟೊಂದನ್ನು ಹ್ಯಾಕ್ ಮಾಡಲಾಗುತ್ತದೆ, ಇದರಲ್ಲಿರುವ ಮಾಹಿತಿಗಳೆಲ್ಲ ಕಳ್ಳರ ಕೈ ಸೇರುತ್ತದೆ ಎಂದರೆ ಸಚಿವರಾಗಿ ಕೃಷ್ಣ ಬೈರೇಗೌಡರ ಕೆಲಸ ಹೇಗೆ ನಡೆಯುತ್ತಿದೆ ಮತ್ತು ಸಚಿವರು ತಮ್ಮ ಇಲಾಖೆಯ ಅಧಿಕಾರಿಗಳ ಮೇಲೆ ಎಂತಹ ಹಿಡಿತ ಹೊಂದಿದ್ದಾರೆ, ನಡೆಯುತ್ತಿರುವ ಕೆಲಸಗಳ ಬಗ್ಗೆ ಅವರಿಗೆಷ್ಟು ಮಾಹಿತಿ ಸಿಗುತ್ತಿದೆ ಎನ್ನುವುದನ್ನು ಸುಲಭವಾಗಿ ಅಂದಾಜಿಸಬಹುದು.
ಅಲ್ಲಿಗೆ ಆ ಕಡೆಯೂ ಕೆಲಸವಾಗುತ್ತಿಲ್ಲ, ಈ ಕಡೆಯೂ ಕೆಲಸ ಸಾಗುತ್ತಿಲ್ಲ ಎನ್ನುವುದೇ ಆದರೆ ಕೃಷ್ಣ ಬೈರೇಗೌಡರು ಸಚಿವರಾಗಿ ಮಾಡಿದ್ದೇನು? ಇದಕ್ಕೆ ಸಚಿವರೇ ಉತ್ತರ ಕೊಡಬೇಕು. ಇಂತಹ ತೂತುಗಳನ್ನು ಮುಚ್ಚಿಕೊಳ್ಳಬೇಕೆಂದೇ ಇವರು ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಸುದ್ದಿಯಾಗುತ್ತಿದ್ದಾರಾ? ಹೌದು ಅಂತಲೇ ಅನ್ನಿಸುತ್ತದೆ. ಯಾಕೆಂದರೆ, ಇದೇ ಸಚಿವರ ವ್ಯಾಪ್ತಿಯಲ್ಲಿರುವ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲೂ ಭ್ರಷ್ಟ ನೌಕರರದ್ದೇ ಕಾರುಬಾರು. ಬೇರೆ ತಾಲ್ಲೂಕುಗಳ ಕಥೆ ಗೊತ್ತಿಲ್ಲ. ಹೊಸನಗರ ತಹಶೀಲ್ದಾರ್ ಕಚೇರಿಯಲ್ಲಂತೂ ಲಂಚವೆನ್ನುವುದು ಅಟ್ಟಾಡುತ್ತಿದೆ. ಫೈಲುಗಳ ನಡುವೆ ದುಡ್ಡು ಇಟ್ಟುಕೊಡುವ ವ್ಯವಸ್ಥೆ ಹೊಸನಗರ ತಾಲ್ಲೂಕು ಕಚೇರಿಯಲ್ಲಿದೆ. ಮರಳು ದಂಧೆ ಎಗ್ಗುಸಿಗ್ಗಿಲ್ಲದೆ ನಡೆಯುತ್ತಿದೆ. ದಾಖಲೆ ಸಹಿತ ದೂರು ಕೊಟ್ಟರೂ ತಹಶೀಲ್ದಾರ್ ಅಲ್ಲಾಡುವುದಿಲ್ಲ, ಇನ್ನು ಜಿಲ್ಲಾಧಿಕಾರಿಗಳಂತೂ ಯಾವ ಪ್ರತಿಕ್ರಿಯೆಯನ್ನೂ ಕೊಡುವುದಿಲ್ಲ. ಇದೆಲ್ಲ ಕೃಷ್ಣ ಬೈರೇಗೌಡರ ಗಮನದಲ್ಲಿಲ್ಲವಾ? ಸಚಿವರು ಪ್ರಾಮಾಣಿಕರು, ಜನರಿಗಾಗಿ ಕೆಲಸ ಮಾಡುತ್ತಾರೆ ಮತ್ತು ತಮ್ಮ ಇಲಾಖೆಯ ಅಧಿಕಾರಿಗಳ ಮೇಲೆ ಅಂದರೆ ಕೆಳಹಂತದ ಅಧಿಕಾರಿಗಳು ಅಂತಲ್ಲ, ಕೊನೇಪಕ್ಷ ಜಿಲ್ಲಾಧಿಕಾರಿಗಳ ಮಟ್ಟದಲ್ಲಿಯೂ ಹಿಡಿತವನ್ನಿಟ್ಟುಕೊಂಡಿಲ್ಲ ಎನ್ನುವುದಾದರೆ ಇನ್ನು ಇವರು ಜನರಿಗಾಗಿ ಏನು ಕೆಲಸ ಮಾಡಿಕೊಡುತ್ತಾರೆ? ಅದ್ಯಾವ ರೀತಿ ಸಹಾಯ ಮಾಡುತ್ತಾರೆ?!
ಈ ಪ್ರಶ್ನೆಗೆ ನೀವು ಸರಿಯಾದ ಉತ್ತರ ಕಂಡುಕೊಂಡಿದ್ದೇ ಹೌದಾದರೆ ನಿಮಗೆ ಈ ಸಚಿವರ ಸರ್ಕಾರಿ ಕಚೇರಿಗಳ ದಿಢೀರ್ ಭೇಟಿ ಮತ್ತು ಅದರ ಫೇಸ್‌ಬುಕ್ ಲೈವ್, ಆನಂತರದ ಸುದ್ದಿಯ ಅಬ್ಬರಗಳೆಲ್ಲವೂ ಪಬ್ಲಿಸಿಟಿ ಸ್ಟಂಟ್ ಅಂತಲೇ ಅನ್ನಿಸುತ್ತದೆ. ಮತ್ತು ಇದರಿಂದ ಜನರಿಗೇನೂ ಉಪಯೋಗವಿಲ್ಲ ಎನ್ನುವ ವಾಸ್ತವವನ್ನು ನಾವು ಅರ್ಥ ಮಾಡಿಕೊಳ್ಳದೇ ಹೋದರೆ ಜಾಹೀರಾತೊಂದಕ್ಕೆ ಮರುಳಾಗಿ ಖರೀದಿಗಿಳಿದು ಮಂಗಗಳಾಗುತ್ತೇವಲ್ಲ, ಅದೇ ಸ್ಥಿತಿ ಕೃಷ್ಣ ಬೈರೇಗೌಡರ ವಿಷಯದಲ್ಲಿಯೂ ನಮ್ಮದಾಗುತ್ತದೆ ಅಷ್ಟೇ.
-ಗಣೇಶ ಕೆ., ಸಂಪಾದಕರು, ನ್ಯೂಸ್ ಪೋಸ್ಟ್‌ಮಾರ್ಟಮ್
ಕಾಮೆಂಟ್‌ಗಳಿಲ್ಲ