'ಗುರು' ಸಾವಿನ ನಂತರ ಇಷ್ಟೆಲ್ಲ ವಿಷ ಕಾರಿಕೊಳ್ಳಬೇಕಿತ್ತಾ ಈ ನಟ?!
ಇವತ್ತು ಏನೇ ಆಗಿರಬಹುದು, ಆದರೆ ’ಮಠ’ದಂತಹ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟ ನಿರ್ದೇಶಕ ಗುರುಪ್ರಸಾದ್ ಕನ್ನಡದ ಮಟ್ಟಿಗೆ ಪ್ರತಿಭಾವಂತ ನಿರ್ದೇಶಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಕಾಲದಲ್ಲಿ ಮೆರವಣಿಗೆ ಮಾಡಿಸಿಕೊಂಡು ಮೆರೆದವರು ಕೆಲವೇ ಕೆಲವು ತಿಂಗಳುಗಳಲ್ಲಿ ಮಾತನಾಡಿಸಲಿಕ್ಕೂ ಒಬ್ಬರಿಲ್ಲ ಎನ್ನುವಂತಹ ಸ್ಥಿತಿಗಿಳಿದ ವ್ಯಕ್ತಿತ್ವಗಳು ಕನ್ನಡ ಚಿತ್ರರಂಗಕ್ಕೂ ಹೊಸದೇನೂ ಅಲ್ಲ. ನಮ್ಮ ಬದುಕಿನ ಓಟದಲ್ಲೂ ನಾವು ಇಂತಹ ಹಲವರನ್ನು ನೋಡಿರುತ್ತೇವೆ, ಕೇಳಿರುತ್ತೇವೆ ಅಥವಾ ಓದಿರುತ್ತೇವೆ. ನಿರ್ದೇಶಕ ಗುರುಪ್ರಸಾದ್ ಕೂಡಾ ಇಂತಹವರಲ್ಲಿ ಒಬ್ಬರು ಅಂತಲೇ ಅಂದುಕೊಳ್ಳೋಣ.
ಹಾಗೆಂದು, ಅವರ ದುರಂತ ಸಾವಿನ ಸಂದರ್ಭದಲ್ಲಿ ಅವರ ವ್ಯಕ್ತಿತ್ವದ ಬಗ್ಗೆ ಹಗುರವಾಗಿ ಮಾತನಾಡಿ, ಹಳೇ ಸಿಟ್ಟು-ದ್ವೇಷವನ್ನೆಲ್ಲ ತೀರಿಸಿಕೊಳ್ಳುವ ನೀಚತನಕ್ಕಿಳಿಯುವ ವ್ಯಕ್ತಿತ್ವಗಳ ಬಗ್ಗೆ ಏನು ಹೇಳುವುದು?!
ಗುರುಪ್ರಸಾದ್ ಏನೇ ಇರಲಿ, ಆತ ಆ ನಟನ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟ ನಿರ್ದೇಶಕ. ಚೀಪ್ ಕಾಮಿಡಿ ಮಾಡಿಕೊಂಡಿದ್ದ ಆ ನಟ ಕನ್ನಡ ಚಿತ್ರರಂಗಕ್ಕೆ ಆಸ್ತಿಯಾಗುವಂತಹದ್ದೇನನ್ನೂ ಮಾಡಿದ್ದ ನಟನಲ್ಲ. ಅಸಲಿಗೆ ಆಗ ಆತನ ಬಗ್ಗೆ ಚಿತ್ರರಂಗ ಯಾವ ರೀತಿಯಲ್ಲೂ ಸೀರಿಯಸ್ಸಾಗಿರಲಿಲ್ಲ. ಆತನಲ್ಲೊಂದು ಪ್ರತಿಭೆ ಇದೆ, ಅದಕ್ಕೆ ಸರಿಯಾದ ಅವಕಾಶ ಸಿಗುತ್ತಿಲ್ಲವೇನೋ ಎಂದು ಕೆಲವರು ಅಂದುಕೊಳ್ಳುತ್ತಿರುವಾಗ, ಆ ನಟನನ್ನು ಆವರೆಗೆ ಕನ್ನಡ ಚಿತ್ರರಂಗ ನೋಡದ ವಿಭಿನ್ನ ಪಾತ್ರವೊಂದರ ಮೂಲಕ ಹೀರೋ ಆಗಿಸಿ, ಆತನ ವೃತ್ತಿ ಬದುಕಿಗೆ ಭಯಂಕರ ತಿರುವು ನೀಡಿದ್ದು ನಿರ್ದೇಶಕ ಗುರುಪ್ರಸಾದ್. ನಿಜ ಹೇಳಬೇಕೆಂದರೆ ಆ ಚಿತ್ರದ ಗೆಲುವಿನ ನಂತರವೇ ಆ ನಟನ ಲಕ್ ಕುದುರಿದ್ದು ಮತ್ತು ಕನ್ನಡ ಚಿತ್ರರಂಗದಲ್ಲಿಯೂ ಆತನಿಗೆ ಸ್ಥಾನಮಾನ ಅಂತೆಲ್ಲ ಸಿಕ್ಕಿದ್ದು... ಈ ಚಿತ್ರದ ನಂತರ ಎರಡನೇ ಚಿತ್ರದಲ್ಲಿಯೂ ಗುರುಪ್ರಸಾದ್ ಆತನಿಗೆ ಸಕ್ಸಸ್ ಕೊಟ್ಟರು. ಆನಂತರ? ಏನಾಯಿತು ಎನ್ನುವುದು ಕನ್ನಡಿಗರೆಲ್ಲರಿಗೂ ಗೊತ್ತಿರುವ ಸಂಗತಿ.
ಗುರುಪ್ರಸಾದ್ ಸಿಕ್ಕ ಗೆಲುವನ್ನು ತಣ್ಣಗಿನ ಮನಸ್ಸಿನಿಂದ ಸ್ವೀಕರಿಸಿ ಮುನ್ನಡೆದಿದ್ದರೆ ಬಹುಶಃ ಇವತ್ತು ಇಂತಹ ದುರಂತ ಸಾವು ಕಾಣುತ್ತಿರಲಿಲ್ಲವೇನೋ. ಅದನ್ನು ಬಿಟ್ಟುಬಿಡಿ. ಯಾಕೆಂದರೆ ಬದುಕಿನಲ್ಲಿ ಗೆಲುವು ಎನ್ನುವುದು ಎಲ್ಲರಿಗೂ ಸಿಕ್ಕುವುದಿಲ್ಲ. ಗೆಲುವು ಸಿಕ್ಕ ಎಲ್ಲರೂ ಗೆಲುವಿನೊಂದಿಗೆ ಕೊನೇತನಕ ಒಳ್ಳೆಯ ನಂಟೊಂದನ್ನು ಉಳಿಸಿಕೊಳ್ಳುವುದಿಲ್ಲ. ಗುರುಪ್ರಸಾದ್ ಕೂಡಾ ಅಪಾರ ಪ್ರತಿಭೆ ಇದ್ದರೂ ಗೆಲುವಿನೊಂದಿಗೆ ಅದ್ಯಾಕೋ ನಂಟು ಬೆಸೆದುಕೊಳ್ಳಲಿಲ್ಲ. ಅದರಿಂದಲೇ ಅವರಿಗೆ ಎರಡು ಸಿನಿಮಾಗಳ ನಂತರ ಇನ್ನೊಂದು ಗೆಲುವಿನ ಸಿನಿಮಾ ಕೊಡಲಿಕ್ಕಾಗಲಿಲ್ಲ. ಆಯಿತು, ಅಲ್ಲಿಗೆ ಮುಗಿಯಿತು ಅಷ್ಟೇ. ಎಲ್ಲರ ಬದುಕೂ ಒಂದು ದಿನ ಮುಗಿದು ಹೋಗಬೇಕು; ಗುರುಪ್ರಸಾದ್ ಜೀವನವೂ ಕೂಡಾ ಇವತ್ತು ಹಾಗೇ ಮುಗಿದು ಹೋಗಿದೆ.
ಸಾವಿನ ಈ ಸಂದರ್ಭದಲ್ಲಿ ಮನುಷ್ಯರಾಗಿ ನಾವೊಂದು ಸೌಜನ್ಯ ತೋರಿಸಬೇಕು. ಸತ್ತವನು ನಿಮಗೆ ಆಗುವುದೇ ಇಲ್ಲ, ಅವನು ಬದುಕಿದ್ದಾಗ ನಿಮ್ಮ ಜೀವನವನ್ನು ನರಕ ಮಾಡಿದ್ದಾನೆ ಎಂದಾಗಲೂ ನಿಮ್ಮೆದುರು ಎರಡು ಆಯ್ಕೆಗಳಿರುತ್ತವೆ. ಮೊದಲನೇಯದು, ಅವನ ಬಗ್ಗೆ ಕೆಟ್ಟದ್ದೋ, ಒಳ್ಳೆಯದ್ದೋ ಏನನ್ನೂ ಮಾತನಾಡದೆ ಮೌನವಾಗಿದ್ದುಬಿಡುವುದು. ಇದು ಬದುಕಿರುವ ನಿಮ್ಮನ್ನು ’ಇಂತಹ ಸಂದರ್ಭದಲ್ಲಿ ನಿಮ್ಮ ಪ್ರತಿಕ್ರಿಯೆ ಹೇಗಿದ್ದಿರಬಹುದು?’ ಎಂದು ಏನೆಲ್ಲ ಊಹಿಸಿಕೊಂಡವರ ಕಣ್ಣಿನಲ್ಲಿ ’ದೊಡ್ಡವರು’ ಎಂದು ಗುರುತಿಸಿಕೊಳ್ಳಲು ಕಾರಣವಾಗುತ್ತದೆ. ಎರಡನೇಯದು, ಸತ್ತವನು ಬದುಕಿದ್ದಾಗ ಮಾಡಿರಬಹುದಾದ ಸಣ್ಣದೊಂದು ಒಳ್ಳೆಯ ಕೆಲಸದ ಬಗ್ಗೆ ಅಪ್ಪಿತಪ್ಪಿಯೂ ಮಾತನಾಡದೆ, ಅವನ ಕೆಟ್ಟತನದ ಬಗ್ಗೆಯೇ ಸಿಕ್ಕಸಿಕ್ಕಲ್ಲೆಲ್ಲ ಗಂಟೆಗಟ್ಟಲೆ ಮಾತನಾಡಿಕೊಂಡು ಹೋಗುವುದು, ಮಾಧ್ಯಮದವರ‍್ಯಾರಾದರೂ ಮೈಕ್ ಹಿಡಿದರೆ ಅಲ್ಲಿಯೂ ಅದೇ ವಾಂತಿ ಮಾಡಿಕೊಳ್ಳುವುದು... ಸತ್ತಾಗಲೂ ಸಿಟ್ಟು ತೀರಿಸಿಕೊಂಡ ನೀವು ಸಮಾಧಾನವಾಯಿತು ಎಂದುಕೊಳ್ಳಬಹುದು. ಆದರೆ ನಿಮ್ಮಿಂದ ಇಂತಹದ್ದೊಂದು ಪ್ರತಿಕ್ರಿಯೆ ನಿರೀಕ್ಷಿಸದೇ ಇರುವವರು ಇರುತ್ತಾರಲ್ಲ, ಅವರ ಕಣ್ಣಿನಲ್ಲಿ ಅವನೇನೋ ಸತ್ತನಂತರ ಸತ್ತು ಹೋದವನಾಗಿ ಕಾಣಿಸಿದರೆ, ನೀವು ಬದುಕಿದ್ದಾಗಲೇ ಸತ್ತವರಂತೆ ಕಾಣುತ್ತೀರಿ! ಯಾಕೆಂದರೆ, ಸಾವಿನ ಸಂದರ್ಭದಲ್ಲೂ ಸೌಜನ್ಯವಿಲ್ಲದ ನಿಮ್ಮೊಳಗೆ ಇದ್ದಿರಬಹುದಾದ ಇಷ್ಟೇ ಇಷ್ಟು ಸಣ್ಣ ಮಾನವೀಯ ಗುಣವೂ ಈ ಮೂಲಕ ಸತ್ತು ಹೋಗಿರುತ್ತದೆ.
ಹೌದು, ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡು ಸತ್ತರಂತೆ ಎನ್ನುವ ಸುದ್ದಿ ಮೀಡಿಯಾಗಳಲ್ಲಿ ’ಬ್ರೇಕಿಂಗ್ ನ್ಯೂಸ್’ ಆಗುತ್ತಿದ್ದಂತೆ ಗುರುಪ್ರಸಾದ್‌ರಿಂದಲೇ ಗೆಲುವು ಪಡೆದ, ಆನಂತರ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಲೇ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ಆ ನಟನ ಪ್ರತಿಕ್ರಿಯೆ ಏನಿರುತ್ತದೆ ಎನ್ನುವ ಕುತೂಹಲ ಸಹಜವಾಗಿಯೇ ಎಲ್ಲರದ್ದೂ ಆಗಿತ್ತು; ಮೀಡಿಯಾಗಳದ್ದು ಕೂಡಾ. ಬಹುಶಃ ಆತ ಕೂಡಾ ಇಂತಹ ಸಂದರ್ಭದಲ್ಲಿ ತನ್ನೊಳಗಿರುವುದನ್ನು ಕಾರಿಕೊಳ್ಳಲು ಮೀಡಿಯಾಗಳ ಮೈಕ್‌ಗೆ ಕಾಯುತ್ತಿದ್ದನೇನೋ. ಮೈಕು ಮತ್ತು ಕ್ಯಾಮರಾ ಕಾಣಿಸಿಕೊಳ್ಳುತ್ತಿದ್ದಂತೆ ಆತ ಗುರುಪ್ರಸಾದ್ ಬಗ್ಗೆ ಅದೆಷ್ಟು ಕೆಟ್ಟದಾಗಿ ಮಾತನಾಡಲಾರಂಭಿಸಿದ ಅಂದರೆ... ಅವನ ನಿಜವಾದ ವ್ಯಕ್ತಿತ್ವ ಏನೆನ್ನುವುದು ಇವತ್ತು ಅವನಿಂದಲೇ ಬೆತ್ತಲಾಯಿತು!
ಆತ ವಯಸ್ಸಿನ ಲೆಕ್ಕದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ, ಸಂಸದ, ಮಾಜಿ ಶಾಸಕ, ಇವೆಲ್ಲದರೊಂದಿಗೆ ಆತನೇ ಹೇಳಿಕೊಂಡಂತೆ, ಪೋಸ್ ಕೊಟ್ಟಂತೆ ರಾಘವೇಂದ್ರ ಸ್ವಾಮಿಗಳ ಪರಮಭಕ್ತ. ಇವೆಲ್ಲವನ್ನೂ ಬದಿಗಿಟ್ಟು ಬಿಡಿ, ಮೊಮ್ಮಗುವನ್ನು ಕಂಡಿರುವ ಆತ ಈಗ ’ಅಜ್ಜ’. ಅಂದರೆ ಆತನ ಜೀವನಾನುಭವದ ತೂಕದಲ್ಲಿ ನೋಡಿದರೆ ತನಗೆ ಎರಡು ಸಕ್ಸಸ್‌ಫುಲ್ ಚಿತ್ರ ಕೊಟ್ಟ ಆ ನಿರ್ದೇಶಕನ ಸಾವಿನ ಸಂದರ್ಭದಲ್ಲಿ ಆಯ್ಕೆ ಮಾಡಿಕೊಳ್ಳಲು ಆತನೆದುರು ಸಾವಿರ ದಾರಿಗಳಿದ್ದವು. ಮೊದಲೇ ಹೇಳಿದ ಹಾಗೆ ಯಾವ ಮೀಡಿಯಾದವರಿಗೂ ಸಿಕ್ಕದೇ ’ಬ್ಯುಸಿ’ ಎಂದು ನಟಿಸಿ ಒಂದೂ ಮಾತನಾಡದೆ ಸುಮ್ಮನುಳಿದು ಬಿಡಬಹುದಿತ್ತು. ಉಹ್ಞೂಂ, ಆತ ಈ ಕೆಲಸ ಮಾಡಲಿಲ್ಲ. ಬದಲಿಗೆ ಕೇಳದೇ ಇದ್ದರೂ ತಾನಾಗಿಯೇ ಗುರುಪ್ರಸಾದ್ ಎನ್ನುವ ವ್ಯಕ್ತಿತ್ವವೇ ಸರಿಯಿಲ್ಲದ್ದು ಎನ್ನುವ ಧಾಟಿಯಲ್ಲೇ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿಬಿಟ್ಟ! ಸಾವಿನ ಸಂದರ್ಭದಲ್ಲಿ ಇಂತಹ ಮಾತುಗಳ ಅವಶ್ಯಕತೆ, ಅದೂ ಕನ್ನಡದ ಹಿರಿಯ ನಟನೊಬ್ಬನ ಬಾಯಿಯಿಂದ ಬರಬೇಕಿತ್ತಾ?
ಖಂಡಿತ ಅದರ ಅಗತ್ಯವಿರಲಿಲ್ಲ. ಭೂಗತ ಲೋಕದ ಲೆಕ್ಕವನ್ನೇ ತೆಗೆದುಕೊಳ್ಳಿ. ತನ್ನ ವಿರೋಧಿ ಗ್ಯಾಂಗಿನ ಒಬ್ಬನನ್ನು ಇನ್ನ್ಯಾರೋ ತೆಗೆದರು ಎಂದರೆ ಅವನ ಸಾವನ್ನೇ ಕಾಯುತ್ತಿದ್ದ ಇವನು ಸಾರ್ವಜನಿಕವಾಗಿ ಸಂಭ್ರಮಿಸುವುದಿಲ್ಲ. ಮೀಡಿಯಾಗಳಿಗೂ ನನ್ನ ವಿರೋಧಿಯನ್ನು ಇನ್ನ್ಯಾರೋ ಕೊಂದಿದ್ದು ನನಗೆ ತುಂಬಾ ಖುಷಿ ತಂದಿದೆ, ಅವನಿಗೆ ಅಂತಹದ್ದೇ ಸಾವು ಬರಬೇಕಿತ್ತು, ಬಂದಿದೆ ಎಂದು ಸ್ಟೇಟ್ಮೆಂಟ್ ಕೊಡುವುದಿಲ್ಲ. ಹಾಗಿದ್ದರೆ ಅವನಿಗೆ ವಿರೋಧಿಯ ಸಾವು ಖುಷಿ ತಂದಿರುವುದಿಲ್ಲವಾ? ತಂದಿರುತ್ತದೆ. ಆದರೆ ಅದನ್ನೂ ಆತ ತನ್ನ ಗ್ಯಾಂಗಿನವರ ಎದುರು ಮಾತ್ರ ತೋರಿಸಿಕೊಳ್ಳುತ್ತಾನೆ ಬಿಟ್ಟರೆ, ಸಾರ್ವಜನಿಕವಾಗಿ ಅದನ್ನು ಸಂಭ್ರಮಿಸಿದ್ದನ್ನು ನಾನು ಕೇಳಿಲ್ಲ, ಓದಿಲ್ಲ. ಭೂಗತಲೋಕದಲ್ಲೇ ಇಂತಹ ಲೆಕ್ಕಾಚಾರಗಳು ಇರುವಾಗ, ತಾನು ಕೆಲಸ ಮಾಡಿದ ನಿರ್ದೇಶಕನ ಬಗ್ಗೆ ಅವನ ಸಾವಿನ ನಂತರ ಇಷ್ಟು ಚೀಪಾಗಿ ಮಾತನಾಡುತ್ತಾನೆ ಎಂದರೆ ಇವನ್ಯಾವ ಸೀಮೆ ನಟ?!
ಇದೇ ನನಗೆ ಅರ್ಥವಾಗದೇ ಇದ್ದಿದ್ದು. ಮೀಡಿಯಾಗಳ ಮುಂದೆ, ಗುರುಪ್ರಸಾದ್ ನಿರ್ದೇಶನದ ಇತ್ತೀಚಿನ ಫ್ಲಾಪ್ ಚಿತ್ರದ ಕುರಿತು ಮಾತನಾಡುತ್ತಾ, ’ಡಬಲ್ ಮೀನಿಂಗ್ ಡೈಲಾಗ್ ಹೇಳಲೇಬೇಕು ಅಂತ ಒತ್ತಾಯಿಸುತ್ತಿದ್ದರು. ನಾನು ಹೇಳೋದಿಲ್ಲ ಅಂದ್ರೆ ಶೂಟಿಂಗ್ ಕ್ಯಾನ್ಸಲ್ ಮಾಡೋರು...’ ಎಂದೆಲ್ಲ ಈ ನಟ ಪುಂಗುವುದನ್ನು ಕೇಳಿದರೆ, ಯಬಾ... ಸುಳ್ಳು ಹೇಳಬೇಕು, ಆದ್ರೆಈ ಮಟ್ಟಕ್ಕೆ ಹೇಳಬಾರದು ಅನ್ನಿಸಿದ್ದು ನನಗೊಬ್ಬನಿಗೇ ಅಲ್ಲ; ಈತನ ಅಸಲಿ ಮುಖ ಬಲ್ಲ ಎಲ್ಲರಿಗೂ! ಇವನೇನು ಈಗ ತಾನೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟನಾ? ಅಲ್ಲ. ಗುರುಪ್ರಸಾದ್ ಈತನೊಂದಿಗೆ ಮೂರನೇ ಸಿನಿಮಾ ಮಾಡುವಾಗ ಈತ ರಾಜಕೀಯವಾಗಿಯೂ ಸಾಕಷ್ಟು ಚಿಗಿತುಕೊಂಡಿದ್ದ. ಇನ್ನು ಚಿತ್ರರಂಗದಲ್ಲಿಯೂ ಒಂದು ಸ್ಥಾನ ಗಿಟ್ಟಿಸಿಕೊಂಡಿದ್ದ. ಹೀಗಿರುವಾಗ ಗುರುಪ್ರಸಾದ್ ಇವನ ಕೈಯಲ್ಲಿ ಒತ್ತಾಯಿಸಿ ಡಬಲ್ ಮೀನಿಂಗ್ ಡೈಲಾಗ್ ಹೇಳಿಸುತ್ತಿದ್ದರು ಎನ್ನುತ್ತಾನಲ್ಲ, ಯಾವ ಕಡೆಯಿಂದ ನಗಬೇಕು ನೀವೇ ನಿರ್ಧರಿಸಿ.
ಬಿಡಿ, ಗುರುಪ್ರಸಾದ್ ಸಾವಿನ ನಂತರ ಈ ನಟ ಮೀಡಿಯಾ ಮುಂದೆ ಕಾರಿಕೊಂಡಿದ್ದರಲ್ಲಿ ಗುರುಪ್ರಸಾದ್ ಬಗ್ಗೆ ಒಂದೆರಡು ಸಾಲು ಬಿಟ್ಟರೆ ಇನ್ನೆಲ್ಲವೂ ಗುರುಪ್ರಸಾದ್ ಎಂದರೆ ಅಶಿಸ್ತಿನ, ಅಹಂಕಾರಿ, ಅವಿನಯ ವ್ಯಕ್ತಿತ್ವದ ನಿರ್ದೇಶಕ. ಗುರುಪ್ರಸಾದ್ ವಿಪರೀತ ಕುಡುಕ, ಸಾಲಗಾರ, ಬಾಯಿ ಬಿಟ್ಟರೆ ಹೊಲಸು ಮಾತು, ಕೊನೆಗೆ ತಾಯಿಯನ್ನು ಕೂಡಾ ಹೀನಾಮಾನ ಬೈಯುತ್ತಿದ್ದ... ಒಬ್ಬ ವ್ಯಕ್ತಿಯ ಸಾವಿನ ಸಂದರ್ಭದಲ್ಲಿ ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ ಇದನ್ನೆಲ್ಲ ಆಡುವುದು ಎಷ್ಟು ಸರಿ?! ನನ್ನೆದುರು ಇರುವುದು ಈ ಪ್ರಶ್ನೆ ಮಾತ್ರ. ಗುರುಪ್ರಸಾದ್ ಇವತ್ತು ಏನೇ ಆಗಿರಬಹುದು, ಹಾಗೆಂದು ಅವರ ಸಾವಿನ ನಂತರ ಅವರ ಬಗ್ಗೆ ಕೀಳಾಗಿ ಮಾತನಾಡುವುದು ಮನುಷ್ಯರಾದವರ ಸ್ವಭಾವವಲ್ಲ. ಅದೂ ರಾಘವೇಂದ್ರ ಸ್ವಾಮಿಯ ಪರಮಭಕ್ತ ಎನ್ನುವವನು ಹೀಗಾ ಮಾತನಾಡುವುದು?!
ದೈವಿಕತೆ, ದೈವ ಭಕ್ತಿ ಇವುಗಳ ಬಗ್ಗೆ ನನಗೆ ಅಷ್ಟಾಗಿ ತಿಳಿದಿಲ್ಲ. ಆದರೆ ಒಂದಂತೂ ನಿಜ, ಅದು ರಾಘವೇಂದ್ರ ಸ್ವಾಮಿಯೇ ಇರಲಿ, ಸತ್ಯನಾರಾಯಣನೇ ಇರಲಿ ಯಾವ ದೇವರು ಕೂಡಾ ತನ್ನ ಭಕ್ತನಿಗೆ ಬೇರೆಯವರ ಸಾವನ್ನು ಸಂಭ್ರಮಿಸು ಎಂದು ಹೇಳುವುದಿಲ್ಲ. ಜೊತೆಗೆ ಸಾವಿನ ಸಂಕಟದಲ್ಲಿ ನೀನು ಕುಹಕದ ಮಾತುಗಳನ್ನಾಡು, ಸತ್ತವನ ತೇಜೋವಧೆ ಮಾಡು ಎಂದಂತೂ ಹೇಳುವುದಿಲ್ಲ ಎನ್ನುವ ಗ್ಯಾರಂಟಿ ನನಗಿದೆ. ಅಂದಮೇಲೆ ರಾಘವೇಂದ್ರ ಸ್ವಾಮಿಯ ಪರಮ ಭಕ್ತ ಎಂದು ಪೋಸ್ ಕೊಡುವ ಈತ ರಾಘವೇಂದ್ರ ಸ್ವಾಮಿಗಳ ಚರಿತ್ರೆಯನ್ನು ಸರಿಯಾಗಿ ಓದಿದ್ದೇ ಹೌದಾಗಿದ್ದರೆ ’ಅವರವರು ಮಾಡಿದ್ದನ್ನು ಅವರವರು ಅನುಭವಿಸುತ್ತಾರೆ. ಇಂತಹ ಸಂದರ್ಭದಲ್ಲಿ ನಾನು ಏನು ಹೇಳುವುದು? ಮೃತರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಷ್ಟೇ ಹೇಳಿ ಮನೆ ಸೇರಿಕೊಳ್ಳಬಹುದಿತ್ತು. ಆತನೊಳಗಡೆ ಏನೇ ಸಿಟ್ಟು-ದ್ವೇಷ ಇದ್ದರೂ ಅದನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳದೆ ’ದೊಡ್ಡವನು’ ಅನ್ನಿಸಿಕೊಳ್ಳಬಹುದಿತ್ತು.
ಆದರೆ ಆತನೇ ಮೀಡಿಯಾಗಳ ಮುಂದೆ ಹೇಳಿಕೊಂಡಂತೆ ಗುರುಪ್ರಸಾದ್‌ಗೆ ಹೇಳಿದ ’ಮಾತೇ ಮುತ್ತು, ಮಾತೇ ಮೃತ್ಯು’ ಎನ್ನುವ ಮಾತೇ ಈಗ ಈತನಿಗೆ ತಿರುಗಿಕೊಂಡಿದೆ! ಅಂದಹಾಗೇ, ಈತ ಗುರುಪ್ರಸಾದ್ ನಿರ್ದೇಶನದಲ್ಲಿ ಇತ್ತೀಚೆಗೆ ಮಾಡಿದ ಅಟ್ಟರ್ ಫ್ಲಾಪ್ ಚಿತ್ರದ ಬಗ್ಗೆ ಮಾತನಾಡುವಾಗ ಎಲ್ಲವನ್ನೂ ಗುರುಪ್ರಸಾದ್ ಮೇಲೇ ಆರೋಪಿಸಿದ. ರಾತ್ರಿ ತಾನು ಮಲಗಿದ ನಂತರ ಬಂದು ಎಬ್ಬಿಸಿ ಅಡ್ವಾನ್ಸ್ ಕೊಟ್ಟು ಹೋದ... ಹಾಗೇ ಹೀಗೇ ಎಂದು ಏನೇನೋ ಪುಂಗಿದ. ಇರಬಹುದು. ಗುರುಪ್ರಸಾದ್‌ಗೂ ತನ್ನ ಹಾಗೂ ಈತನ ಕಾಂಬಿನೇಶನ್ ವರ್ಕ್ ಆಗಬಹುದು, ತನಗೂ ಗೆಲುವು ಸಿಕ್ಕಬಹುದು ಎಂದು ಎಷ್ಟು ಅನ್ನಿಸಿತ್ತೋ, ಈತನಿಗೂ ಕೂಡಾ ಅಷ್ಟೇ ಅನ್ನಿಸಿತ್ತು. ಗುರುಪ್ರಸಾದ್ ನಿರ್ದೇಶನದ ಅನಿವಾರ್ಯತೆ, ಅಗತ್ಯತೆ ಈತನಿಗೂ ಇತ್ತು. ಯಾಕೆಂದರೆ, ಗುರುಪ್ರಸಾದ್ ಎರಡು ಹಿಟ್ ಸಿನಿಮಾಗಳನ್ನು ಈತನಿಗೆ ನೀಡಿದ ನಂತರ ಈತ ನಟಿಸಿದ ಯಾವ ಸಿನಿಮಾವೂ ಕೂಡಾ ಸಕ್ಸಸ್ ಆಗಿಲ್ಲ. ಹೊಂಬಾಳೆಯಂತಹ ಬ್ಯಾನರ‍್ರಿನಲ್ಲಿ ನಟಿಸಿದರೂ ಆ ಸಿನಿಮಾವೂ ಈತನ ಕೈ ಹಿಡಿಯಲಿಲ್ಲ. ಆದ್ದರಿಂದಲೇ ಈತನಿಗೆ ಗುರುಪ್ರಸಾದ್ ತನಗೆ ಇನ್ನೊಂದು ಬ್ರೇಕ್ ಕೊಡಬಹುದು ಎನ್ನುವ ನಿರೀಕ್ಷೆ ಇತ್ತು. ಈ ಕಾರಣದಿಂದಲೇ ಈತ ಗುರುಪ್ರಸಾದ್ ಜೊತೆಗಿನ ಜಗಳವನ್ನೆಲ್ಲ ’ತನ್ನ ಲಾಭಕ್ಕಾಗಿ ಮರೆತು’ ಸಿನಿಮಾ ಒಪ್ಪಿಕೊಂಡಿದ್ದ. ಆದರೆ ಈಗ ಗುರುಪ್ರಸಾದ್ ಸಾವಿನ ನಂತರ ಆತನೇ ಬಂದು ನನಗೆ ಆಫರ್ ಕೊಟ್ಟ... ಎಂದೆಲ್ಲ ಪುಂಗಿದ್ದೇ ಪುಂಗಿದ್ದು. ಯಾಕೆಂದರೆ, ಈಗ ಹೇಗೂ ಅದನ್ನು ಪ್ರಶ್ನಿಸಲು, ಈತ ಹೇಳುತ್ತಿರುವುದೆಲ್ಲ ಬರೀ ಸುಳ್ಳು ಎಂದು ಟಾಂಗ್ ಕೊಡಲು ಗುರುಪ್ರಸಾದ್ ಬದುಕಿಲ್ಲವಲ್ಲ...
ಇನ್ನು ಗುರುಪ್ರಸಾದ್‌ಗೆ ಚರ್ಮ ಸಂಬಂಧಿ ಕಾಯಿಲೆ ಇರುವ ಬಗ್ಗೆಯೂ ಈ ನಟ ಇವತ್ತು ಮಾತನಾಡಿದ. ’ಆತನ ಚರ್ಮ ಸಂಬಂಧಿ ಕಾಯಿಲೆ ವಿಪರೀತವಾಗಿ ಕೆರೆದು ಕೀವೆಲ್ಲ ಆಗಿತ್ತು. ಇಂತಹವನು ಶೂಟಿಂಗ್ ಸಮಯದಲ್ಲಿ ನನ್ನ ಊಟದ ತಟ್ಟೆಗೇ ಕೈ ಹಾಕಿಬಿಡುತ್ತಿದ್ದ. ನನಗೆ ಬೇಡ ಅನ್ನಲಿಕ್ಕೆ ಆಗುತ್ತಿರಲಿಲ್ಲ. ಅದಕ್ಕೇ ಆಮೇಲಾಮೇಲೆ ಅವನೆಲ್ಲಿ ನನ್ನ ತಟ್ಟೆಗೆ ಕೈ ಹಾಕಿಬಿಡುತ್ತಾನೋ ಎನ್ನುವ ಭಯದಲ್ಲಿ ಅವನ ಕಣ್ಣು ತಪ್ಪಿಸಿ ದೂರ ಹೋಗಿ ಊಟ ಮಾಡುತ್ತಿದ್ದೆ’ ಎನ್ನುವುದನ್ನೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಲೇ ತನ್ನ ಮನಸ್ಥಿತಿಯ ನಿಜ ಬಣ್ಣವೇನು ಎನ್ನುವುದನ್ನೂ ಈ ನಟ ಬಯಲು ಮಾಡಿಕೊಂಡ! ಯಾವ ಕಾಯಿಲೆಯೂ ಯಾರಿಗೂ ಹೇಳಿ ಬರುವುದಿಲ್ಲ. ಕಾಯಿಲೆ ಬಂದವರಿಗೆ ಆ ಕಾಯಿಲೆ ಕೊಡುವ ನೋವು, ಸಂಕಟ, ಖಿನ್ನತೆ, ಭಯ ಎಂತಹದ್ದು ಎನ್ನುವುದು ಗೊತ್ತಿರುತ್ತದೆ. ಹೀಗಿರುವಾಗ ಅವರ ಕಾಯಿಲೆ ಬಗ್ಗೆ ಆಡಿಕೊಂಡು ನಗಾಡುವುದು, ಸಾರ್ವಜನಿಕವಾಗಿ ಆ ಬಗ್ಗೆ ನಾವು ಕೀಳಾಗಿ ಮಾತನಾಡುವುದು ದೊಡ್ಡ ಸಂಗತಿ ಎಂದು ರಾಘವೇಂದ್ರ ಸ್ವಾಮಿಗಳು ಅದ್ಯಾವಾಗ ತಮ್ಮ ಈ ಭಕ್ತನಿಗೆ ಬೋಧಿಸಿದರೋ?! ಇನ್ನೊಂದೆಡೆ ಈತನೊಬ್ಬ ಸಂಸದ. ತನ್ನ ಬಳಿ ಸಮಸ್ಯೆ ಹೇಳಿಕೊಂಡು ಬರುವ ಜನರಿಗೆ ಗುರುಪ್ರಸಾದ್‌ಗಿದ್ದಂತಹ ಕಾಯಿಲೆಗಳೇ ಇದ್ದಾಗ ಈತ ಅವರೊಂದಿಗೆ ಹೇಗೆ ನಡೆದುಕೊಳ್ಳಬಹುದು ಎನ್ನುವ ಸತ್ಯವನ್ನೂ ಈತನ ಮಾತೇ ಬಯಲು ಮಾಡುತ್ತಿತ್ತು.
ಸಾಲಗಳು, ಸಮಸ್ಯೆಗಳು, ಸಣ್ಣತನಗಳು... ಇವು ಗೆದ್ದವರಿಗೂ ಇರುತ್ತವೆ, ಸೋತು ಪ್ರಪಾತಕ್ಕೆ ಬಿದ್ದು ಕೊನೇಕ್ಷಣಗಳನ್ನು ನೋಡುತ್ತಿರುವವರಿಗೂ ಇರುತ್ತವೆ. ನಮಗೂ ಇರುತ್ತದೆ, ನಮ್ಮ ಶತ್ರುಗಳೆಂದುಕೊಂಡವರಿಗೂ ಇರುತ್ತದೆ. ಆದರೆ ಅದೆಲ್ಲವೂ ಸಾವಿನೊಂದಿಗೆ ಕೊನೆಯಾಗುತ್ತದೆ. ಆದ್ದರಿಂದಲೇ ಸಾವಿನ ನಂತರ ಮನುಷ್ಯ ’ದೇವರಾಗುತ್ತಾನೆ’ ಎನ್ನುವುದು. ಅಂದರೆ ಆತ ಬದುಕಿದ್ದಾಗ ಅದೇನೇ ಕೆಟ್ಟ ಕೆಲಸ ಮಾಡಿದ್ದರೂ ಸಾವಿನ ನಂತರ ಅದೆಲ್ಲದಕ್ಕೂ ಕ್ಷಮೆ ಸಿಗುತ್ತದೆ. ಆದ್ದರಿಂದಲೇ ಸತ್ತವನ ಬಗ್ಗೆ ಕೆಟ್ಟ ಮಾತುಗಳನ್ನಾಡುವುದು ನಮ್ಮ ನಡುವೆ ಅಪರೂಪದಲ್ಲಿ ಅಪರೂಪ. ಅಂತಹದ್ದರಲ್ಲಿ ತನಗೆ ಎರಡೆರಡು ಬ್ರೇಕ್ ಕೊಟ್ಟ ಮತ್ತು ತನ್ನ ಚಿತ್ರಜೀವನಕ್ಕೇ ಹೊಸ ಮೆರುಗು ತುಂಬಿದ್ದ ನಿರ್ದೇಶಕನ ದುರಂತ ಸಾವಿನ ಸಂದರ್ಭದಲ್ಲಿ ಸಾಧ್ಯವಾದರೆ ಚೆನ್ನಾಗಿದ್ದಾಗ ಅವರೊಂದಿಗಿನ ಒಡನಾಟದ ಕುರಿತು ಒಂದೆರಡು ಒಳ್ಳೆಯ ಮಾತುಗಳನ್ನಾಡಬಹುದಿತ್ತು. ಅದೂ ಸಾಧ್ಯವಾಗದೇ ಹೋದರೆ ಸುಮ್ಮನಿರಬಹುದಿತ್ತು. ಅದನ್ನು ಬಿಟ್ಟು ತನಗಾಗಿರುವ ವಯಸ್ಸಿಗೂ ಮರ್ಯಾದೆ ಕೊಟ್ಟುಕೊಳ್ಳದೆ ಬಡಬಡಿಸಿದ ರೀತಿ ಇದೆಯಲ್ಲ... ಉಹ್ಞೂಂ, ಸಣ್ಣದೊಂದು ಮಾನವೀಯತೆ ನಮ್ಮಲ್ಲಿ ಜೀವಂತವಾಗಿದ್ದರೂ ಅದು ಸಾಧ್ಯವಾಗುವುದಿಲ್ಲ. ಅಂತಹ ಮಾನವೀಯತೆಯನ್ನೇ ಕೊಂದುಕೊಂಡ ಈತ ಗುರುಪ್ರಸಾದ್ ಮಗಳಿಗೆ ಅದೇನೋ ನೆರವಿನ ’ಸಂಕಲ್ಪ’ ಬೇರೆ ಮಾಡಿದ್ದಾನಂತೆ... ಅಯ್ಯೋ ರಾಘವೇಂದ್ರ...
-ಗಣೇಶ ಕೆ, ಸಂಪಾದಕರು, ನ್ಯೂಸ್ ಪೋಸ್ಟ್‌ಮಾರ್ಟಮ್
ಕಾಮೆಂಟ್‌ಗಳಿಲ್ಲ