Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ರಿಪ್ಪನ್‌ಪೇಟೆ ಬಾಳೂರಿನ 3ನೇ ತರಗತಿ ವಿದ್ಯಾರ್ಥಿ ಮಣಿಕಂಠನಿಗೆ ರಾಜ್ಯ ಸರ್ಕಾರದ ಮಕ್ಕಳ ಹೊಯ್ಸಳ ಶೌರ್ಯ ಪ್ರಶಸ್ತಿ

ರಿಪ್ಪನ್‌ಪೇಟೆ: ರಾಜ್ಯ ಸರ್ಕಾರ ಕೊಡುವ 2024-25ನೇ ಸಾಲಿನ ಮಕ್ಕಳ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಇಲ್ಲಿಗೆ ಸಮೀಪದ ಬಾಳೂರು ಸರಕಾರಿ ಶಾಲೆಯ 3 ನೇ ತರಗತಿ ವಿದ್ಯಾರ್ಥಿ ಆನೆಕೆರೆ ನಿವಾಸಿ ರವಿ ಮತ್ತು ಲಕ್ಷ್ಮೀ ದಂಪತಿಗಳ ಪುತ್ರ ಮಣಿಕಂಠ ಆಯ್ಕೆಯಾಗಿದ್ದಾನೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ಉದ್ಯಾನವನದ ಜವಾಹರ್‌ ಬಾಲ ಭವನದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇತ್ತೀಚೆಗೆ ಪ್ರಶಸ್ತಿ ಪುರಸ್ಕೃತ ಪುಟಾಣಿ ಮಣಿಕಂಠನಿಗೆ ಹೊಯ್ಸಳ ಶೌರ್ಯ ಪ್ರಶಸ್ತಿ  ಪ್ರಧಾನ ಮಾಡಿದರು.

CLICK ಮಾಡಿ - ವ್ಯಾಸ ಮಹರ್ಷಿ ಗುರುಕುಲದ ವಿದ್ಯಾರ್ಥಿನಿ ಚುಕ್ಕಿ ಎಂ. ಬ್ಯಾಣದಗೆ ಬಾಲ ಭವನದ ರಾಜ್ಯ ಕಲಾ ಶ್ರೀ ಪ್ರಶಸ್ತಿ

ಮಣಿಕಂಠನ ಶೌರ್ಯದ ಕಥೆಯೇನು ಗೊತ್ತಾ? : 2023ರ ಸೆಪ್ಟೆಂಬರ್‌ 1 ನೇ ತಾರೀಖಿನಂದು ಎಂದಿನಂತೆ ತಾನು ಓದುತ್ತಿದ್ದ ಬಾಳೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ಮಣಿಕಂಠ ಬಂದಿದ್ದ. ನಲಿ-ಕಲಿ ತರಗತಿ ಶಿಕ್ಷಕರು ಪಾಠ ಓದಲು ಸೂಚಿಸಿದಾಗ ಮಣಿಕಂಠನ ಸಹಪಾಠಿ 2ನೇ ತರಗತಿ ವಿದ್ಯಾರ್ಥಿ ಭುವನ ಪುಸ್ತಕ ತೆಗೆಯಲು ಶಾಲಾ ಬ್ಯಾಗ್‌ ತೆರೆದಿದ್ದಾನೆ. ಬ್ಯಾಗಿನೊಳಗೆ ಹಾವು ಕಂಡಿದ್ದಾನೆ! ತಕ್ಷಣವೇ ಅವನು ತನ್ನ ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ ಮಣಿಕಂಠನಿಗೆ ಬ್ಯಾಗಿನೊಳಗೆ ಹಾವಿರುವುದನ್ನು ತೋರಿಸಿದ್ದಾನೆ. ಮಣಿಕಂಠ ಮತ್ತೇನೂ ಯೋಚಿಸದೆ ತಕ್ಷಣವೇ ಧೈರ್ಯದಿಂದ ಹಾವು ಹೊರ ಬಾರದಂತೆ ಬ್ಯಾಗಿನ ಜಿಪ್ ಹಾಕಿಬಿಟ್ಟಿದ್ದ. ಆನಂತರ ಬ್ಯಾಗ್ ಸಹಿತ ಶಿಕ್ಷಕರ ಬಳಿ ತೆರಳಿ ಬ್ಯಾಗಿನೊಳಗೆ ಹಾವಿರುವುದನ್ನು ತಿಳಿಸಿದ್ದಾನೆ. ಶಿಕ್ಷಕರು ಕೂಡಲೇ ಶಾಲೆಗೆ ಹತ್ತಿರವಿರುವ ಭುವನನ ಪೋಷಕರನ್ನು ಕರೆಯಿಸಿ ತರಗತಿಯ ಕೊಠಡಿಯೊಳಗೆ ನಡೆದ ಘಟನೆಯ ವಿವರ ನೀಡಿದ್ದಾರೆ. ಹಾಗೂ ಮಣಿಕಂಠನ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಶ್ಲಾಘಿಸಿ, ನಂತರ ಹಾವನ್ನು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿತ್ತು. ಕೇವಲ 3 ನೇ ತರಗತಿ ಓದುತ್ತಿದ್ದ ಮಣಿಕಂಠ ಹಾವನ್ನು ನೋಡಿ ಗಾಬರಿಗೊಳ್ಳದೆ ಬ್ಯಾಗಿನ ಜಿಪ್ ಹಾಕುವ ಮೂಲಕ ಸಹಪಾಠಿಯ ಜೀವವನ್ನು ರಕ್ಷಿಸಿದ್ದಲ್ಲದೇ ಶಾಲೆಯಲ್ಲಿ ಸಂಭವಿಸಬಹುದಾಗಿದ್ದ ಇನ್ನೂ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದು ಎಲ್ಲೆಡೆ ಸುದ್ದಿಯಾಗಿ ಮೆಚ್ಚುಗೆ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಶೌರ್ಯವಂತ ಮಣಿಕಂಠನಿಗೆ ರಾಜ್ಯ ಸರ್ಕಾರದ ಮಕ್ಕಳ ಹೊಯ್ಸಳ ಪ್ರಶಸ್ತಿಯ ಗೌರವ ಅರಸಿಕೊಂಡು ಬಂದಿದೆ. 

ಕಾಮೆಂಟ್‌ಗಳಿಲ್ಲ