ವ್ಯಾಸ ಮಹರ್ಷಿ ಗುರುಕುಲದ ವಿದ್ಯಾರ್ಥಿನಿ ಚುಕ್ಕಿ ಎಂ. ಬ್ಯಾಣದಗೆ ಬಾಲ ಭವನದ ರಾಜ್ಯ ಕಲಾ ಶ್ರೀ ಪ್ರಶಸ್ತಿ
ಹೊಸನಗರ : ತಾಲ್ಲೂಕಿನ ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲದ ವಿದ್ಯಾರ್ಥಿನಿ ಚುಕ್ಕಿ ಎಂ. ಬ್ಯಾಣದ 2024ನೇ ಸಾಲಿನ ರಾಜ್ಯ ಬಾಲ ಭವನದ ಕಲಾ ಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಾಳೆ.
ರಾಜ್ಯ ಜವಾಹರ ಬಾಲ ಭವನ ಸೊಸೈಟಿ, ಬೆಂಗಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ಶುಕ್ರವಾರ ಬೆಂಗಳೂರಿನ ಬಾಲ ಭವನ ಆವರಣದಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ, ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲದ ವಿದ್ಯಾರ್ಥಿನಿ ಚುಕ್ಕಿ ಎಂ. ಬ್ಯಾಣದ ಸೃಜನಾತ್ಮಕ ಕಲಾ ಪ್ರದರ್ಶನ ವಿಭಾಗದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಪ್ರಥಮ ಸ್ಥಾನದೊಂದಿಗೆ ಕಲಾ ಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ.
ನವೆಂಬರ್ 27 ರಿಂದ 29ರವರೆಗೆ ಬೆಂಗಳೂರು ಕಬ್ಬನ್ ಪಾರ್ಕ್ ಆವರಣದಲ್ಲಿ ಇರುವ ರಾಜ್ಯ ಬಾಲ ಭವನ ಸೊಸೈಟಿ ಸಭಾ ಭವನದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಕಲಾ ಶ್ರೀ ಶಿಬಿರದಲ್ಲಿ ಚುಕ್ಕಿ ಎಂ.ಬ್ಯಾಣದ ಸೇರಿದಂತೆ ಜಿಲ್ಲೆಯಿಂದ ಆರು ವಿದ್ಯಾರ್ಥಿಗಳು ಆಯ್ಕೆಯಾಗಿ ಭಾಗವಹಿಸಿದ್ದರು. ಚುಕ್ಕಿ ಎಂ. ಬ್ಯಾಣದ ಸೃಜನಾತ್ಮಕ ಕಲೆ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದರೆ, ತೀರ್ಥಹಳ್ಳಿಯ ನಹುಷ ಡಿ. ವಿಜ್ಞಾನದ ಆವಿಷ್ಕಾರ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡು, ಕಲಾ ಶ್ರೀ ಪ್ರಶಸ್ತಿಗೆ ಭಾಜನನಾಗಿದ್ದಾನೆ.
ಶುಕ್ರವಾರ ಬಾಲ ಭವನ ರಂಗ ಮಂದಿರದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚುಕ್ಕಿ ಎಂ. ಬ್ಯಾಣದಗೆ ಪ್ರಶಸ್ತಿ ವಿತರಿಸಿದರು.
ಶಾಸಕರಾದ ರಿಜ್ವನ್ ಅರ್ಷಾದ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಶಾಸಕರಾದ ಕೋನ ರೆಡ್ಡಿ, ಮಂಜುಳಾ ಅರವಿಂದ್ ಲಿಂಬಾವಳಿ, ಕೋಲಾರ ಶಾಸಕ ಮಂಜುನಾಥ್, ಬಾಲ ಭವನ ಅಧ್ಯಕ್ಷರಾದ ನಾಯ್ಡು ಸೇರಿದಂತೆ ವಿವಿಧ ನಿಗಮಗಳ ಅಧ್ಯಕ್ಷರು, ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಶಸ್ತಿ ವಿಜೇತ ಮಕ್ಕಳನ್ನು ಶ್ರೀ ವ್ಯಾಸ ಮಹರ್ಷಿ ಗುರುಕುಲ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವರ್ಗ, ಹಾಗೂ ಪೋಷಕರು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳಿಲ್ಲ