Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದಲ್ಲಿ ಲೋಕಾಯುಕ್ತ ದಾಳಿ - ಲಂಚ ಪಡೆಯುತ್ತಿದ್ದ ಹೊಸನಗರ ಕೋರ್ಟಿನ ಸಹಾಯಕ ಸರ್ಕಾರಿ ಅಭಿಯೋಜಕ ಕೆ. ರವಿ ನ್ಯಾಯಾಂಗ ಬಂಧನ

ಹೊಸನಗರ : ಕ್ರಿಮಿನಲ್ ಪ್ರಕರಣವೊಂದನ್ನು ಫಿರ್ಯಾದಿ ಹಾಗೂ ಆರೋಪಿ ನಡುವೆ ರಾಜಿ ಪಂಚಾಯಿತಿ ಮೂಲಕ ಇತ್ಯರ್ಥ ಪಡಿಸುವುದಾಗಿ ಹೇಳಿ, ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವಾಗ ಲೋಕಾಯುಕ್ತ ಪೋಲಿಸರ ಬಲೆಗೆ ಎಪಿಪಿ ಸಿಕ್ಕಿ ಬಿದ್ದ ಘಟನೆ ಇಂದು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.

ದೂರುದಾರ ರಿಪ್ಪನ್‌‌ಪೇಟೆ ಕೆರೆಹಳ್ಳಿ ವಾಸಿ ಅಂಜನ್ ಕುಮಾರ್ ಬಿನ್ ರಮೇಶ್ ವೇಲು ನಾಯರ್ (28) ನೀಡಿದ ದೂರಿನ ಮೇರೆಗೆ ಈ ದಾಳಿ ನಡೆದಿದೆ.

ಮೈಸೂರು ಮೂಲದ ಕೆ.ರವಿ ಬಿನ್ ಕ್ಯಾತಯ್ಯ (36) ಇತ್ತೀಚೆಗಷ್ಟೆ ಪಟ್ಟಣದ ನ್ಯಾಯಾಲಯಕ್ಕೆ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ನಿಯುಕ್ತಿಗೊಂಡಿದ್ದರು.‌ ಇದು ಅವರ ಮೊದಲ ಸರ್ಕಾರಿ‌ ಸೇವಾಸ್ಥಳವಾಗಿದೆ.

ಅಕ್ಟೋಬರ್‌ 28ರಂದು ಅಂಜನ್ ಕುಮಾರ್ ಸ್ನೇಹಿತನೊಂದಿಗೆ ಹೊಸನಗರ ನ್ಯಾಯಾಲಯಕ್ಕೆ ಹೋಗಿ, ಎಪಿಪಿ ರವಿ ಅವರನ್ನು ಭೇಟಿ ಮಾಡಿದಾಗ, ಕೇಸ್ ರಾಜಿ ಮಾಡಿಕೊಳ್ಳುವಂತೆ ತಿಳಿಸಿದ್ದು, ಪ್ರಕರಣ ಮುಂದುವರಿದರೆ ಕನಿಷ್ಠ 5 ವರ್ಷ ಆಗುತ್ತದೆ. ಇದು ಇನ್ನೂ ಹೆಚ್ಚಿನ ಖರ್ಚಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ತಾನು ಪ್ರಕರಣವನ್ನು ರಾಜಿ ಮೂಲಕ ಮುಗಿಸಿಕೊಡುತ್ತೇನೆ. ಹಾಗೆ ಮಾಡಬೇಕೆಂದರೆ  5 ಸಾವಿರ ರೂಪಾಯಿ ತನಗೆ ಕೊಡಬೇಕಾಗುತ್ತದೆ ಎಂದು ಹೇಳಿ ಮುಂಗಡವಾಗಿ 1 ಸಾವಿರ ರೂಪಾಯಿ ಹಣವನ್ನು ತೆಗೆದುಕೊಂಡಿದ್ದರು. 

CLICK ಮಾಡಿ - ಭವಿಷ್ಯದಲ್ಲಿ ಅನ್ನದ ಕೊರತೆಗೆ ಕಾರಣವಾಗಲಿದೆ ಕಡಿಮೆಯಾಗುತ್ತಿರುವ ಭತ್ತ ನಾಟಿ ಪ್ರದೇಶ - ಬಟ್ಟೆಮಲ್ಲಪ್ಪದಲ್ಲಿ ಕೃಷಿ ಕೀಟತಜ್ಞ ಡಾ. ಗಿರೀಶ್

ಇಂದು ಪ್ರಕರಣದ ವಿಚಾರಣೆ ಇದ್ದಿದ್ದರಿಂದ ಬೆಳಿಗ್ಗೆ ಸುಮಾರು 10.30 ಗಂಟೆಗೆ ಹೊಸನಗರ ಕೋರ್ಟ್ ಆವರಣದಲ್ಲಿಯೇ ಇದ್ದ ಎಪಿಪಿ ರವಿರವರ ಕಚೇರಿಗೆ ಹೋದ ಅಂಜನ್ ಕುಮಾರ್‌‌ಗೆ ಪುನಃ 3 ಸಾವಿರ ರೂಪಾಯಿ ಕೊಡು ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಈ ಸಂಭಾಷಣೆಯನ್ನು ಅಂಜನ್ ಕುಮಾರ್ ತನ್ನ ಮೊಬೈಲಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಹಣ ಕೊಡಲು ಮನಸ್ಸಿಲ್ಲದ ಅಂಜನ್ ಕುಮಾರ್ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಲಂಚ ಪಡೆಯುತ್ತಿದ್ದ ರವಿಯನ್ನು ಬಂಧಿಸಿದ್ದಾರೆ.

ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಚೌಧರಿ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್‌‌ಪೆಕ್ಟರ್ ಪ್ರಕಾಶ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದು, ಆರೋಪಿ ಕೆ. ರವಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಕೈಗೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ