Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಬಿಇಓ ಬರುವವರೆಗೂ ಶಾಲೆ ಗೇಟ್‌ ಬಂದ್‌ ಎಂದ ಹಿಲ್ಕುಂಜಿ ಬೇಳೂರು ಸರ್ಕಾರಿ ಶಾಲಾ ಮಕ್ಕಳ ಪೋಷಕರು-ಗ್ರಾಮಸ್ಥರು | ಹಳ್ಳಿ ಶಾಲೆಗಳಿಗೆ ಬಿಇಓ ಕೃಷ್ಣಮೂರ್ತಿ ಬರುವುದೇ ಇಲ್ಲ ಎಂದು ದೂರಿದ ಜನರು!

ಹೊಸನಗರ : ಖುದ್ದು ಬಿಇಓ ಬರಲಿ ಮತ್ತು ಶಾಲೆಗೆ ಸೂಕ್ತ ಶಿಕ್ಷಕರನ್ನು ನೇಮಕ ಮಾಡಲಿ, ಅಲ್ಲಿಯವರೆಗೂ ಅಧಿಕಾರಿಗಳು ಸೇರಿದಂತೆ ನಾವೆಲ್ಲರೂ ಒಟ್ಟಿಗೇ ಶಾಲೆಯೊಳಗೇ ಇರೋಣ ಎಂದು ಶಾಲೆಯ ಗೇಟ್ ಬಂದ್ ಮಾಡಿ, ತಮ್ಮೂರ ಶಾಲೆಯನ್ನು ಉಳಿಸಿಕೊಳ್ಳಲು ಶಾಲಾ ಮಕ್ಕಳ ಪೋಷಕರು ಹಾಗೂ ಗ್ರಾಮಸ್ಥರು ಬಿಗಿಯಾಗಿ ಪ್ರತಿಭಟಿಸಿದ ಘಟನೆ ತಾಲ್ಲೂಕಿನ ಹಿಲ್ಕುಂಜಿ ಬೇಳೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದು ನಡೆಯಿತು. ಜೊತೆಗೆ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ ಕೇವಲ ನಗರ ಪ್ರದೇಶದ ಶಾಲೆಗಳಿಗೆ ಮಾತ್ರವೇ ಭೇಟಿ ಕೊಡುತ್ತಾರೇ ಹೊರತು ಕುಗ್ರಾಮಗಳ ಶಾಲೆಗಳ ಪರಿಸ್ಥಿತಿಯನ್ನು ಖುದ್ದು ಅವಲೋಕಿಸುವುದಿಲ್ಲ ಎನ್ನುವ ಸತ್ಯವನ್ನೂ ಈ ಪ್ರತಿಭಟನೆ ಅನಾವರಣಗೊಳಿಸಿತು.

ಆಗಿದ್ದು ಇಷ್ಟು.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

ನಾಲ್ಕು ಖಾಯಂ ಶಿಕ್ಷಕರನ್ನು ಹೊಂದಿರುವ ಶಾಲೆ ಹಿಲ್ಕುಂಜಿ ಬೇಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಆದರೆ ಈಗ ಒಬ್ಬರೂ ಶಿಕ್ಷಕರಿಲ್ಲ. ಈ ಕುರಿತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ನೆಪಕ್ಕೊಬ್ಬರು ಇರಲಿ ಎಂದು ಅನಾರೋಗ್ಯದಲ್ಲಿರುವ ಶಿಕ್ಷಕರನ್ನು ನೇಮಕ ಮಾಡಲು ಬಿಇಓ ಮುಂದಾಗಿದ್ದಾರೆ ಎಂದು ಶಾಲಾ ಆವರಣದಲ್ಲಿ ಗ್ರಾಮಸ್ಥರು ಕಿಡಿಕಾರಿದರು. ಈ ಸರ್ಕಾರಿ ಶಾಲೆ ಹಿಲ್ಕುಂಜಿ ಮುಖ್ಯರಸ್ತೆಯಿಂದ 6 ಕಿ.ಮೀ. ದೂರವಿದೆ. ಹಿಲ್ಕುಂಜಿಯಿಂದ ಇಲ್ಲಿಗೆ ಬಸ್ಸಿನ ಸಂಪರ್ಕವಿಲ್ಲ. ಆರೋಗ್ಯ ಸರಿಯಿಲ್ಲದ ಶಿಕ್ಷಕರು ಇಷ್ಟು ದೂರ ಇರುವ ಶಾಲೆಗೆ ಬರಲು ಹೇಗೆ ಸಾಧ್ಯ? ಬಂದರೂ ಅವರ ಆರೋಗ್ಯ ಸಮಸ್ಯೆಯಿಂದ ನಿತ್ಯ ಬರಲಾಗದೇ ಇದ್ದರೆ ಮಕ್ಕಳ ಶಿಕ್ಷಣದ ಕಥೆಯೇನು? ಎನ್ನುವ ಪ್ರಶ್ನೆಯನ್ನಿಡುವ ಗ್ರಾಮಸ್ಥರು, ನಮ್ಮ ಶಾಲೆಗೆ ಈ ಹಿಂದೆ ಇದ್ದ ಶಿಕ್ಷಕರನ್ನೇ ಮುಂದುವರೆಸಿ, ಇಲ್ಲವೇ ಕ್ರಿಯಾಶೀಲವಾಗಿರುವ ಶಿಕ್ಷಕರನ್ನು ಈ ಕೂಡಲೇ ನೇಮಿಸಿ ಎಂದು ಆಗ್ರಹಿಸಿದರು.

ಈ ಹಿನ್ನೆಲೆಯಲ್ಲಿ ಇಂದು ಶಾಲಾ ಆವರಣದಲ್ಲಿ ಸೇರಿದ ಮಕ್ಕಳ ಪೋಷಕರು ಮತ್ತು ಗ್ರಾಮಸ್ಥರು, ಇದು ಸರ್ಕಾರಿ ಶಾಲೆಯೊಂದನ್ನು ಮುಚ್ಚುವ ವ್ಯವಸ್ಥಿತ ಹುನ್ನಾರ. ಇದರಲ್ಲಿ ಬಿಇಓ ಪಾತ್ರವೇನು ಎನ್ನುವುದು ಇಂದೇ ಸ್ಪಷ್ಟವಾಗಬೇಕು ಎಂದು ಜನರು ಆಗ್ರಹಿಸಿದರು. 

CLICK ಮಾಡಿ - ಹೊಸನಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘಕ್ಕೆ ರೂ. 6,81,726 ನಿವ್ವಳ ಲಾಭ

ಸಮರ್ಪಕ ಶಿಕ್ಷಕರಿಲ್ಲದೆ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದಂತೆ ಶಿಕ್ಷಣ ಸಂಯೋಜಕ‌ ಪರಮೇಶ್ವರ್, ಸಿಆರ್‌‌ಪಿ ನಾಗರಾಜ ಶಾಲೆಗೆ ಭೇಟಿ ನೀಡಿ ಪೋಷಕರನ್ನು ಸಮಾಧಾನಿಸುವ ಪ್ರಯತ್ನ ಮಾಡಿದರು. ಸಾಧ್ಯವೇ ಇಲ್ಲ, ಖುದ್ದು ಬಿಇಓ ಕೃಷ್ಣಮೂರ್ತಿಯವರೇ ಬರಬೇಕು. ಅಲ್ಲಿಯವರೆಗೆ ನಾವು ನೀವೂ ಒಟ್ಟಿಗೇ ಒಳಗೆ ಇರೋಣ ಎಂದು ಗೇಟ್ ಬಂದ್ ಮಾಡಿದ ಪೋಷಕರು ಇಷ್ಟು ದಿನ ತಡೆ ಹಿಡಿದಿದ್ದ ಆಕ್ರೋಶವನ್ನು ಹೊರಹಾಕಿದರು. ಯಾವುದೇ ಕಾರಣಕ್ಕೂ ಗೇಟ್ ತೆರೆಯುವುದಿಲ್ಲ. ಕೇವಲ ನಗರ ಪ್ರದೇಶದ ಶಾಲೆಗಳಿಗೆ ಮಾತ್ರ ಬಿಇಓ ಬಂದು ಹೋಗುವುದಲ್ಲ. ನಮ್ಮ ಹಳ್ಳಿ ಶಾಲೆಗೂ ಬರಲಿ. ಇಲ್ಲಿಯ ಮಕ್ಕಳ ಸಂಕಷ್ಟ ಅರಿಯಲಿ. ಒಂದು ವೇಳೆ ಬಿಇಓ ಬಾರದೇ ನಿರ್ಲಕ್ಷ್ಯ ತೋರಿದರೆ, ಶಾಲಾ ಮಕ್ಕಳು, ಪೋಷಕರಾದಿಯಾಗಿ ಗ್ರಾಮಸ್ಥರು ತಾಲ್ಲೂಕು ಕೇಂದ್ರಕ್ಕೆ ಬಂದು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಶಿಕ್ಷಣಾಧಿಕಾರಿ ಕಚೇರಿಗೆ ನಾಳೆಯೇ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ವಿವೇಕಾನಂದ ಎಂ.ಜಿ, ಉಪಾಧ್ಯಕ್ಷೆ ವೀಣಾ, ಕವಿತಾ ಪರಮೇಶ್ವರ, ನಂದಿನಿ ರಾಘವೇಂದ್ರ, ಶಿವಕುಮಾರ್, ಪಲ್ಲವಿ ರಮೇಶ್, ಭಾಸ್ಕರ್, ಜಗದೀಶ್, ಗಗನ್, ಹರೀಶ್, ಹೃತಿಕ್ ಗೌಡ, ಪ್ರಮುಖರಾದ ಉಳ್ಳಾಗದ್ದೆ ದೇವೇಂದ್ರಗೌಡ, ಕುಮಾರ ಹಿಲ್ಕುಂಜಿ ಇತರರು ಭಾಗವಹಿಸಿದ್ದರು.


ಕಾಮೆಂಟ್‌ಗಳಿಲ್ಲ