ಹೊಸನಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘಕ್ಕೆ ರೂ. 6,81,726 ನಿವ್ವಳ ಲಾಭ
ಹೊಸನಗರ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಪತ್ತಿನ ಸಹಕಾರ ಸಂಘವು ದೇಹದ ಎರಡು ಕಣ್ಣುಗಳಿದ್ದಂತೆ. ಶಿಕ್ಷಕ ವರ್ಗದ ಬಂಡವಾಳ ಹೂಡಿಕೆ ಮೇಲೆ ಸಂಘದ ಆಡಳಿತ ನಿಂತಿದೆ. ಶಿಕ್ಷಕರಿಗೆ ಅಗತ್ಯ ಸಾಲ ಸೌಲಭ್ಯವನ್ನು ಸಕಾಲದಲ್ಲಿ ನೀಡುವುದು ಸಂಘದ ಆದ್ಯ ಕರ್ತವ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಈಡಿಗ ಸಮುದಾಯ ಭವನದಲ್ಲಿ ನಡೆದ 2023-24ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ನಿಯಮಿತ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಸಕ್ತ ಸಾಲಿನಲ್ಲಿ ಸಂಘವು ಒಟ್ಟಾರೆ 440 ಷೇರುದಾರರನ್ನು ಹೊಂದಿದ್ದು, ವಾರ್ಷಿಕ ರೂ. 77,23,263 ವಹಿವಾಟು ನಡೆಸಿದೆ. ರೂ. 6,81,725 ನಿವ್ವಳ ಲಾಭ ಗಳಿಸಿ, ರೂ. ಶೇ. 15 ಲಾಭಾಂಶ ನೀಡಿದೆ. ಅಲ್ಲದೆ, ದೀರ್ಘಾವಧಿ ಸಾಲವನ್ನು ರೂ. 2 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ ಮಾಡಿದ್ದು, ಸಾಲದ ಮೇಲಿನ ಬಡ್ಡಿದರವನ್ನು ಶೇ. 12 ರಿಂದ 11ಕ್ಕೆ ಕಡಿತಗೊಳಿಸುವುದಾಗಿ ಸಭೆಯ ಗಮನಕ್ಕೆ ತಂದರು.
ಷೇರುದಾರ ಹಾಗೂ ಆಡಳಿತ ಮಂಡಳಿ ನಡುವಿನ ಸಾಮರಸ್ಯವೇ ಕಳೆದ ನಾಲ್ಕು ದಶಕಗಳಿಂದ ಸಂಘ ನಿರಂತರವಾಗಿ ಲಾಭದತ್ತ ಮುಖ ಮಾಡಲು ಕಾರಣವಾಗಿದೆ ಎಂದರು.
ಷೇರುದಾರ ಕತ್ರಿಕೊಪ್ಪ ಪುಟ್ಟಸ್ವಾಮಿ ಸಭೆ ಉದ್ದೇಶಿಸಿ ಮಾತನಾಡಿ, ಸಂಘದ ದೀರ್ಘಾವಧಿ ಸಾಲದ ಮೇಲಿನ ಬಡ್ಡಿಯು ಸಾಲಗಾರರಿಗೆ ಹೊರೆಯಾಗಿದ್ದು, ಬಡ್ಡಿದರ ಕಡಿತಗೊಳಿಸುವಂತೆ ಮನವಿ ಮಾಡಿದ ಬೆನ್ನಲ್ಲೇ ಬಡ್ಡಿದರವನ್ನು ಕಡಿತಗೊಳಿಸಲಾಯಿತು.
ಸಂಘದ ಕಾರ್ಯದರ್ಶಿ ಧರ್ಮಪ್ಪ ಮಾತನಾಡಿ, ಠೇವಣಿ, ಬಂಡವಾಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಘದ ಲೆಕ್ಕಪತ್ರ ನಿರ್ವಹಣೆಗಾಗಿ ಲ್ಯಾಪ್‌ಟಾಪ್ ಖರೀದಿಸಿದ್ದು, ಷೇರುದಾರರು ಎಲ್ಲಾ ವಹಿವಾಟಿನ ಅಗತ್ಯ ದಾಖಲೆ ಸಂಗ್ರಹಿಸಿಡಲು ಉಪಯುಕ್ತವಾಗಿದೆ ಎಂದರು.
1980ರಲ್ಲಿ ಆರಂಭಗೊಂಡ ಸಂಸ್ಥೆ, ನಿರಂತರ ಲಾಭದಾಯಕ ಹಾದಿಯಲ್ಲಿ ಸಾಗಲು ಆಡಳಿತ ಮಂಡಳಿ ಪದಾಧಿಕಾರಿಗಳ ಸಹಕಾರ ಕಾರಣ. ಶಿಕ್ಷಕ ವರ್ಗ ಸೂಕ್ತ ಠೇವಣಿ ತೊಡಗಿಸುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕೆಂದರು.
ಇದೇ ಸಂದರ್ಭದಲ್ಲಿ ಹೆಚ್ಚು ಠೇವಣಿ ನೀಡಿ ಸಹಕರಿಸಿದ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ ಅವರ ಮಕ್ಕಳಿಗೆ ಸಂಘ ಸನ್ಮಾನಿಸಿತು.
ವೇದಿಕೆಯಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಂ. ಬಸವಣ್ಯಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಹೆಚ್.ಆರ್. ಸುರೇಶ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ. ಬಾಲಚಂದ್ರ ರಾವ್, ಶಿಕ್ಷಕರ ಪತ್ತಿನ ಸಂಘದ ಉಪಾಧ್ಯಕ್ಷ ಅಕ್ಬರ್ ಭಾಷಾ, ನಿರ್ದೇಶಕರಾದ ಚಂದ್ರಪ್ಪ, ಬಿ.ಎಸ್. ರಾಜು, ಎಂ. ದೇವೇಂದ್ರಪ್ಪ, ಆರ್. ಸುಧಾಕರ, ಟಿ.ಎಲ್. ಮಹಂತೇಶ್, ಎಸ್. ಸುಜಾತ, ಸಿ.ಎನ್. ಸುರೇಶ್, ಜಗದೀಶ ಕಾಗಿನೆಲ್ಲಿ, ಫಕೀರಪ್ಪ, ಮಾಲತೇಶ್, ಮೇಘರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು
ತೀರ್ಥಕುಮಾರ್ ಪ್ರಾರ್ಥಿಸಿ, ಫರೀದ ಕಾರ್ಯಕ್ರಮ ನಿರೂಪಿಸಿದರು. ಅಕ್ಬರ್ ಭಾಷಾ ಸ್ವಾಗತಿಸಿ, ಸುರೇಶ್ ವಂದಿಸಿದರು.
ಕಾಮೆಂಟ್‌ಗಳಿಲ್ಲ