ಹೊಸನಗರದಲ್ಲಿ ಬಿಂದಾಸ್ಸಾಗಿ ಶರಾವತಿ ನದಿ ಒಡಲು ಬಗೆಯುತ್ತಿರುವ ಅಕ್ರಮ ಮರಳು ಸಂಗ್ರಹಕಾರರು - ಟಾಸ್ಕ್ ಫೋರ್ಸ್ ನಿರ್ಲಕ್ಷ್ಯಕ್ಕೆ ಮದ್ದು ಅರೆಯುವವರು ಯಾರು?!
ಹೊಸನಗರ : ಮಳೆಗಾಲ ಅಂತ್ಯಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ತಾಲ್ಲೂಕಿನ ಶರಾವತಿ ನದಿಯ ಹಿನ್ನೀರಿನಲ್ಲಿ ಅಕ್ರಮ ಮರಳು ದಂಧೆಕೋರರ ಆಟಾಟೋಪ ಮತ್ತೆ ಚಿಗುರೊಡೆದಂತೆ ಅಲ್ಲಲ್ಲಿ ಕಂಡು ಬರುತ್ತಿದೆ.
ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಗೋಡು, ವಾರಂಬಳ್ಳಿ, ಬಿಳ್ಳೋಡಿ ಗ್ರಾಮಗಳ ಶರಾವತಿ ನದಿ ಪಾತ್ರದ ಅನೇಕ ಹಳ್ಳ ಕೊಳ್ಳಗಳಲ್ಲಿ ಉತ್ತರ ಭಾರತೀಯ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಅಕ್ರಮವಾಗಿ ಮರಳು ಎತ್ತುವುದು, ನೂರಾರು ಲೋಡು ಮರಳು ಸಂಗ್ರಹಿಸುವುದು ಹಾಗೂ ರಾತ್ರಿ ವೇಳೆಯಲ್ಲಿ ಶಿವಮೊಗ್ಗ, ಸಾಗರ, ಶಿಕಾರಿಪುರ ಸೇರಿದಂತೆ ವಿವಿಧ ಪಟ್ಟಣಗಳಿಗೆ ಪರವಾನಗಿ ರಹಿತ ಸಾಗಾಣಿಕೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಅಹೋರಾತ್ರಿ ನಡೆಯುವ ಅಕ್ರಮ ಮರಳು ಸಾಗಾಣಿಕೆಯಿಂದ ಗ್ರಾಮೀಣ ಭಾಗದ ಹಲವು ರಸ್ತೆಗಳಿಗೆ ವ್ಯಾಪಕ ಹಾನಿ ಉಂಟಾಗಿದ್ದು, ಗುಂಡಿ ಬಿದ್ದ ರಸ್ತೆಯಲ್ಲೇ ಸಂಚಾರ ಮಾಡುವ ದುಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತ ದಿನದೂಡುವಂತಾಗಿದೆ ಎನ್ನುವುದು ಇಲ್ಲಿನ ಗ್ರಾಮಸ್ಥರ ಅಳಲಾಗಿದೆ.
ಕೆಲವೇ ಪ್ರಭಾವಿಗಳು, ಆರ್ಥಿಕ ಬಲಾಢ್ಯರು ತಮ್ಮ ಪ್ರಭಾವ ಬಳಸಿ, ರಾತ್ರಿ ವೇಳೆಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಮುಂದಾಗಿದ್ದಾರೆ ಎಂಬ ದೂರು ಕೇಳಿ ಬರುತ್ತಿದ್ದು, ಈ ಕುರಿತು ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರಿಗೆ ಸ್ಪಷ್ಟ ಮಾಹಿತಿ ಇದ್ದರೂ ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ನಡೆ ಸಾರ್ವಜನಿಕರು, ನಿಷ್ಠಾವಂತ ಅಧಿಕಾರಿಗಳನ್ನು ಅನುಮಾನದಿಂದ ನೋಡುವಂತೆ ಮಾಡಿದೆ.
ಈ ನಡುವೆ ಕೆಲ ಅಧಿಕಾರಿ ವರ್ಗವು ರಾತ್ರಿ ವೇಳೆ ಮರಳು ಸಾಗಾಟ ದಂಧೆ ಮೇಲೆ ದಾಳಿ ಮಾಡಿ ವಸೂಲಿ ಬಾಜಿಗೆ ಮುಂದಾಗಿರುವ ಸುದ್ದಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಜಿಲ್ಲಾಡಳಿತ ಈ ಕುರಿತು ಸೂಕ್ತ ವಹಿಸಿ ಅಕ್ರಮ ಮರಳು ಸಾಗಾಟಕ್ಕೆ ಬ್ರೇಕ್ ಹಾಕುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಆಗುವ ನಷ್ಟ ತಪ್ಪಿಸಬೇಕು ಎನ್ನುವುದು ಜನತೆಯ ಆಗ್ರಹವಾಗಿದೆ.
ಕಾಮೆಂಟ್‌ಗಳಿಲ್ಲ