ಹೊಸನಗರ ತಾಲ್ಲೂಕು ನಿವೃತ್ತ ನೌಕರರ ಸಂಘದಿಂದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ
ಹೊಸನಗರ : ವಯಸ್ಸು 60 ದಾಟಿದ ಪ್ರತಿಯೊಬ್ಬರನ್ನು ಸರ್ಕಾರ ಹಿರಿಯ ನಾಗರೀಕರು ಎಂದು ಪರಿಗಣಿಸಿದ್ದು, ಭವಿಷ್ಯದಲ್ಲಿಯೂ ಅವರು ಘನತೆವೆತ್ತ ಬದುಕು ಸಾಗಿಸಲು ಎಲ್ಲಾ ರೀತಿಯ ಸಹಕಾರ ಕಲ್ಪಿಸುವ ಗುರುತರ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದು ಪಟ್ಟಣದ ಕೊಡಚಾದ್ರಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕಿ ವಸುಧ ಚೈತನ್ಯ ಅಭಿಪ್ರಾಯಪಟ್ಟರು.
ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಇಲ್ಲಿನ ತಾಲ್ಲೂಕು ನಿವೃತ್ತ ನೌಕರರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು, ಪ್ರಸ್ತುತ ಸಮಾಜದಲ್ಲಿ ಹಿರಿಯ ನಾಗರೀಕರ ಧಾವಂತಗಳು ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು.
ಹಿರಿಯ ನಾಗರೀಕರು ಮನೆಯ ಹಾಗೂ ಸಮಾಜದ ಆಧಾರಸ್ತಂಭವಿದ್ದಂತೆ. ಅವರನ್ನು ಎಂದೂ ಕಡೆಗಣಿಸಬಾರದು. ಅವರ ಆರೈಕೆ, ಕಲ್ಯಾಣ ಹಾಗು ಬದ್ಧತೆ ಕುರಿತಂತೆ ಪ್ರತಿಯೊಬ್ಬರೂ ಗಮನ ಹರಿಸಬೇಕು. ಅವರ ಅನುಭವ, ಬುದ್ಧಿವಂತಿಕೆ ಹಾಗೂ ಉಪಯುಕ್ತ ಸಲಹೆಗಳು ಕಿರಿಯರ ಬಾಳಿನ ದಾರಿದೀಪ ಆಗಬೇಕು. ಮೊಬೈಲ್‌ನಂತಹ ಆಧುನಿಕ ತಂತ್ರಜ್ಞಾನದ ಉಪಕರಣ ಕುರಿತಾದ ಗೀಳನ್ನು ಹಿರಿಯ ನಾಗರೀಕರು ತಮ್ಮ ಹತೋಟಿಯಲ್ಲಿಟ್ಟು, ನಿಗದಿತ ಆಹಾರ ಸೇವನೆ, ನಿತ್ಯ ವ್ಯಾಯಾಮ, ಯೋಗ, ಪ್ರಾಣಾಯಾಮದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಉತ್ತಮ ಆರೋಗ್ಯಕರ ಜೀವನ ಸಾಗಿಸುವಂತೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲೆ ಕಳಸ ನಳಿನಿಕೃಷ್ಣ ಅವರ ’ಅರವತ್ತರ ಅರಳು’ ಕವನ ಸಂಕಲನ ಬಿಡುಗಡೆ ಮಾಡಲಾಯಿತು.
ಕೊರೋನಾದಂತಹ ಮಾರಣಾಂತಿಕ ಸಾಂಕ್ರಾಮಿಕ ವ್ಯಾಧಿಯ ಸಮಯ ಸೇರಿದಂತೆ ಇಂದಿಗೂ ಸಮಾಜದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಾಧಿಕಾರಿ ಎಂ.ಬಿ. ಶೈಲಜ, ಪಟ್ಟಣ ಪಂಚಾಯತಿ ನಿವೃತ್ತ ನೌಕರ ಬಾಬು, ವಿಕಲಚೇತನ ಸಿಬ್ಬಂದಿ ಬಾಬಣ್ಣ ಅವರ ಸೇವೆಯನ್ನು ಪರಿಗಣಿಸಿ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ ಕಾರ್ಯಕ್ರಮ ಉದ್ಘಾಟಿಸಿ, ಹಿರಿಯ ನಾಗರೀಕರ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಾಗ ಮಾತ್ರವೇ ಈ ಆಚರಣೆಗೆ ಹೆಚ್ಚಿನ ಮೌಲ್ಯ ಸಿಕ್ಕಂತೆ ಎಂದು ಶುಭ ಕೋರಿದರು.
ಸಂಘದ ಅಧ್ಯಕ್ಷ ಬಿ.ಎನ್. ದಿನಮಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ನಿವೃತ್ತ ಹೊಂದಿದ ಎಲ್ಲಾ ಸರಕಾರಿ ನೌಕಕರು ಸಂಘದ ಸದಸ್ಯತ್ವ ಪಡೆದು ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು. ನಿವೃತ್ತ ನೌಕರರು ಎದುರಿಸುತ್ತಿರುವ ಹಲವು ಜ್ವಲಂತ ಸಮಸ್ಯೆಗಳ ಕುರಿತಂತೆ ಸರ್ಕಾರದ ಗಮನ ಸೆಳೆಯಲು ಇದು ಸಹಕಾರಿಯಾಗಲಿದೆ ಎಂದರು.
ವೇದಿಕೆಯಲ್ಲಿ ಕಾರ್ಯದರ್ಶಿ ಅನಂತ ಬಾಯಾರಿ, ನಿರ್ದೇಶಕರಾದ ಮಂಡಾನಿ ಲೋಕೇಶ್, ಹೆಚ್. ಮಹಾಬಲ, ಶಾರದ ಗೋಖಲೆ, ಎನ್. ರಂಗನಾಥ್, ಸದಸ್ಯರಾದ ಅರಸಾಳು ನಿಂಗಾಜೋಯ್ಸ್, ನಿವೃತ್ತ ಶಿಕ್ಷಕ ಉಮೇಶ್, ಮಂಡಾನಿ ಕುಮಾರ್, ತಿಮ್ಮಪ್ಪ, ನಾಗೇಶ್, ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ