ಹೊಸನಗರ ತಾಲ್ಲೂಕಿನ ಹಲವು ಬೇಡಿಕೆ ಈಡೇರಿಕೆಗಾಗಿ ಡಿಎಸ್‌ಎಸ್ ಮನವಿ
ಹೊಸನಗರ : ಪಟ್ಟಣಕ್ಕೆ ಶರಾವತಿ ಹಿನ್ನೀರು ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಿ ಕುಡಿಯುವ ನೀರು ಒದಗಿಸಬೇಕು. ಬಸವ, ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ನೀಡುವ ಮನೆಗಳ ಫಲಾನುಭವಿಯ ಜಾತಿ ಪ್ರಮಾಣ ಪತ್ರಕ್ಕೆ ಆರ್.ಡಿ. ನಂಬರ್ ನೀಡಬೇಕು. ನರೇಗಾ ಯೋಜನೆ ಅಡಿಯಲ್ಲಿ 60 ವರ್ಷ ಮೇಲ್ಪಟ್ಟ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಬಳಸದಂತೆ ನಿರ್ಬಂಧ ವಿಧಿಸಬೇಕು. ಪಶು ಇಲಾಖೆಯಲ್ಲಿ ವೈದ್ಯರು, ಪರಿವೀಕ್ಷಕರು ಹಾಗೂ ಸಿಬ್ಬಂದಿಗಳ ಕೊರತೆ ನೀಗಿಸಬೇಕು. ಜೆಜೆಎಂ ಯೋಜನೆ ಅಡಿಯಲ್ಲಿ ನಿರ್ಮಾಣ ಆಗಿರುವ ಕುಡಿಯುವ ನೀರಿನ ಘಟಕಗಳಿಗೆ ಫಿಲ್ಟರ್ ಅಳವಡಿಸದೇ ನೀರನ್ನು ನೇರವಾಗಿ ಫಲಾನುಭವಿಗಳ ಮನಗೆ ಸರಬರಾಜು ಮಾಡುತ್ತಿದ್ದು, ಕೂಡಲೇ ಫಿಲ್ಟರ್ ಅಳವಡಿಕೆಗೆ ಮುಂದಾಗಬೇಕು. ನಿಯಮ ಗಾಳಿಗೆ ತೂರಿ ಬಿಲ್ ಪಾವತಿಸಿರುವ ಇಂಜಿನಿಯರ್ ಹಾಗೂ ಕಳಪೆ ಕಾಮಗಾರಿ ಕೈಗೊಂಡಿರುವ ತಾಲೂಕಿನ ಜೆಎಂಎಂ ಕುಡಿಯುವ ನೀರು ಕಾಮಗಾರಿಗಳ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಕೌಶಲ್ಯ ಅಭಿವೃದ್ದಿ ಉದ್ಯಮ ಶೀಲತೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿ ಎಂ.ಡಿ.ಕೆಗಳಿಗೆ ತಾಲ್ಲೂಕಿನಾದ್ಯಂತ ಹಣ ನೀಡುವಂತೆ ಕಿರುಕುಳ ನೀಡುತ್ತಿರುವ ದೂರುಗಳು ಬರುತ್ತಿದ್ದು, ಕೂಡಲೇ ಈ ಕುರಿತು ಸೂಕ್ತ ಕ್ರಮಕ್ಕೆ ಇಲಾಖೆ ಮುಂದಾಗಬೇಕು. ಎನ್‌ಆರ್‌ಎಲ್‌ಎಂ ಯೋಜನೆ ಅಡಿಯಲ್ಲಿ ತಾಲ್ಲೂಕು ಪಂಚಾಯತಿ ಇಓ ಹಸ್ತಕ್ಷೇಪಕ್ಕೆ ಮುಂದಾಗಿದ್ದು, ಸಂಜೀವಿನಿ ಸ್ವಸಹಾಯ ಸಂಘಗಳಿಂದ ಮಾಮೂಲು ನೀಡುವಂತೆ ಒತ್ತಾಯಿಸುತ್ತಿರುವ ದೂರುಗಳು ಬಂದಿವೆ. ಅಲ್ಲದೆ, ಇಲ್ಲಿನ ಸಿಬ್ಬಂದಿಗಳಾದ ಸಂದೀಪ್, ಸಿ.ಎಸ್. ಮನೋಹರ್ ಸಂಘಗಳಿಗೆ ಎಂಐಎಸ್ ಕೋಡ್ ನೀಡದೆ ಸಹಾಯಧನ ದೊರೆಯುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಹೊಸನಗರ ತಾಲ್ಲೂಕಿನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಲಕ್ಷ್ಮೀನಾರಾಯಣ ನಾಗವಾರ ಘಟಕವು ತಾಲ್ಲೂಕು ಆಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಇಂದು ಮನವಿ ಪತ್ರ ಸಲ್ಲಿಸಿತು.
ಈ ವೇಳೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ವಿ.ನಾಗರಾಜ್ ಅರಳಸುರಳಿ, ತಾಲ್ಲೂಕು ಸಂಚಾಲಕ ಬಿ.ಎಂ.ಪ್ರಕಾಶ್, ತಾಲ್ಲೂಕು ಸಂಘಟಾ ಸಂಚಾಲಕ ಜಿ. ಗುರುಪ್ರಸಾದ್, ಪ್ರಮುಖರಾದ ಹರೀಶ್ ಗಂಗನಕೊಪ್ಪ, ಅಣ್ಣಪ್ಪ ಗೇರುಪುರ ಇದ್ದರು.
ಕಾಮೆಂಟ್‌ಗಳಿಲ್ಲ