ಪುರಪ್ಪೆಮನೆಯಲ್ಲಿ ಗ್ರಾಮಠಾಣಾ ವ್ಯಾಪ್ತಿಯ ಅಕ್ರಮ ಭೂ ಒತ್ತುವರಿ ತೆರವಿಗೆ ಗ್ರಾಮಸ್ಥರ ಒತ್ತಾಯ
ಹೊಸನಗರ : ವ್ಯಕ್ತಿಯೋರ್ವ ಮೀಸಲಿಟ್ಟ ಗ್ರಾಮಠಾಣಾ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿ, ಕೃಷಿ ಚಟುವಟಿಕೆಯಲ್ಲಿ ನಿರತನಾಗಿದ್ದಾನೆ ಎಂದು ಆರೋಪಿಸಿ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಕೆಲಕಾಲ ಪ್ರತಿಭಟನೆ ನಡೆಸಿದ, ಕೂಡಲೇ ಒತ್ತುವರಿ ತೆರವಿಗೆ ತಾಲ್ಲೂಕು ಆಡಳಿತ ಮುಂದಾಗುವಂತೆ ಆಗ್ರಹಿಸಿ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರಿಗೆ ಇಂದು ಮನವಿ ಪತ್ರ ಸಲ್ಲಿಸಿದರು.
ತಾಲ್ಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸಾಲೆ ಮಳವಳ್ಳಿ ಗ್ರಾಮದ ಸ.ನಂ. 85ರ ಪಕ್ಕದ ಸುಮಾರು 12 ಎಕರೆ ಗ್ರಾಮ ಠಾಣಾ ಭೂಪ್ರದೇಶವು ಉಚಿತ ನಿವೇಶನ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಜಾಗವಾಗಿದ್ದು, ಇದೇ ಗ್ರಾಮದ ಕೆ.ಯು. ದಿನೇಶ್ ಬಿನ್ ಉಮಾಪತಿಗೌಡ ಎಂಬಾತ ಅಕ್ರಮವಾಗಿ ಒತ್ತುವರಿ ಮಾಡಿ, ಇದೇ ಜಾಗದಲ್ಲಿ ಹುಲುಸಾಗಿ ಬೆಳೆದಿದ್ದ, ಅಪಾರ ಪ್ರಮಾಣದ ವಿವಿಧ ಕಾಡುಜಾತಿಯ ಬೆಲೆಬಾಳುವ ಮರಗಳನ್ನು ಕಡಿದು, ಅಡಿಕೆ ಸಸಿಗಳನ್ನು ನೆಟ್ಟು, ಜಮೀನಿನ ಸುತ್ತ ತಂತಿ ಬೇಲಿ ನಿರ್ಮಿಸಿದ್ದಾನೆ. ಶರಾವತಿ ಹಿನ್ನೀರಿಗೆ ಪಂಪ್‌ಸೆಟ್ ಅಳವಡಿಸಿ ಅಕ್ರಮವಾಗಿ ವಿದ್ಯುತ್ ಪರಿವರ್ತಕ ಜೋಡಿಸಿ ಸುಮಾರು 2.5 ಕಿ.ಮೀ ದೂರಕ್ಕೆ ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ಬಳಸಿ ವಿದ್ಯುತ್ ಸಂಪರ್ಕ ಪಡೆದಿದ್ದಾನೆ. ಅಲ್ಲದೆ, ಅರಣ್ಯ ಇಲಾಖೆಗೆ ಸೇರಿದ ಭೂ ಭಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಆರೋಪಿಸಿದರು.
ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಕ್ರಮ ಒತ್ತುವರಿ ತೆರವುಗೊಳಿಸುವ ಮೂಲಕ ಆ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಡುವಂತೆ ಗ್ರಾಮಸ್ಥರು ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.
ಈ ವೇಳೆ ಗ್ರಾಮಸ್ಥರಾದ ಕೆ.ಸಿ. ಮೋಹನ್ ಕುಮಾರ್, ಹೆಚ್.ದೇವಿಕಾ, ಮಂಜು, ಹನುಮಂತಪ್ಪ, ಶ್ರೀಧರ್, ರಾಘವೇಂದ್ರ ಸೇರಿದಂತೆ ಹಲವರು ಹಾಜರಿದ್ದರು.
ಕಾಮೆಂಟ್‌ಗಳಿಲ್ಲ