ಹೊಂಬುಜದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ವಿಶೇಷ ದೀಪೋತ್ಸವ - ಶ್ರೀ ರಾಮ ನಾಮ ಸ್ಮರಣೆಯು ವಿಶ್ವ ಶಾಂತಿ ಪ್ರೇರಕ ಶಕ್ತಿ - ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ
ಹೊಸನಗರ : ಗುರುವಿಗೆ ಶಿಷ್ಯನಾಗಿ, ಪಿತೃವಾಕ್ಯ ಪರಿಪಾಲಕನಾಗಿ, ಸತಿಗೆ ತಕ್ಕ ಪತಿಯಾಗಿ ಅಯೋಧ್ಯೆಯ ಎಲ್ಲಾ ಜನರ ಪ್ರೀತಿ ಪಾತ್ರರಾಗಿ ಸಭ್ಯ ಸಮಾಜದ ಮರ್ಯಾದಾ ಪುರುಷೋತ್ತಮನಾಗಿ ಬಾಳಿದವ ಶ್ರೀರಾಮ. ಇಂದಿಗೂ ಎಂದೆಂದಿಗೂ ಶ್ರೀರಾಮ ಆದರ್ಶ ಪುರುಷ. ಜೀವನದ ಸಂಘರ್ಷದ ಏಳು-ಬೀಳುಗಳಲ್ಲಿ ಸ್ವಭಾವದಲ್ಲಿ ಕಿಂಚಿತ್ತು ಎದೆಗುಂದದೆ ಎಲ್ಲವನ್ನು ಗೆದ್ದಂತ ಮಹಾವೀರ ಎಂದು ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.
ಸೋಮವಾರದಂದು ಅಯೋಧ್ಯೆಯ ನೂತನ ಭವ್ಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠೆ ಮಾಡಿದ ನಿಮಿತ್ತ ಹೊಂಬುಜ ಜೈನ ಮಠದಲ್ಲಿ ಸಂಜೆ ದೀಪೋತ್ಸವ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ರಾಮಾಯಣದ ರಘುರಾಮ ಕ್ಷೇಮಂ ಸರ್ವ ಪ್ರಜಾನಾಂ ಪರಿಪಾಲಕನು, ಜೈನ ಪುರಾಣದ ಪದ್ಮನೇ ಬಲಭದ್ರನಾಗಿ ಕೇವಲಿ (ಅರಿಹಂತ) ಯಾಗಿ ಮಾಂಗಿ-ತುಂಗಿ (ಮಹಾರಾಷ್ಟ) ದಲ್ಲಿ ಮುಕ್ತಿ ಹೊಂದಿದ ಸಿದ್ಧಪುರುಷನೇ ಶ್ರೀರಾಮ ಎಂದ ಅವರು, ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮ ಸ್ಥಾನದಲ್ಲಿ ಸುಂದರವಾದ ಮಂದಿರವನ್ನು ನಿರ್ಮಿಸಿ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಈ ಭೂಮಿ ಎಂದೆಂದಿಗೂ ಪುಣ್ಯಭೂಮಿ. ಶಾಶ್ವತ ದೇವ ಭೂಮಿ. ಜನ-ಮಾನಸದಲ್ಲಿ ಶ್ರೀರಾಮನ ನಾಮ ಮತ್ತೊಮ್ಮೆ ರಾರಾಜಿಸಿದೆ ಎಂದರು.
ಹೊಂಬುಜದ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಪ್ರಾಚೀನ ಭಾರತೀಯ ಧರ್ಮ ಪರಂಪರೆಯನ್ನು ವಿಶ್ವದೆಲ್ಲೆಡೆ ಪ್ರಸರಿಸಿದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ, ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಸರ್ವ ಸದಸ್ಯರ ಕಾರ್ಯಕ್ಷಮತೆ ಅಭಿನಂದನೀಯ. ಶ್ರೀರಾಮ ಆದರ್ಶ ಮಾನ್ಯ ಆಗಿದೆ ಎಂದು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಕ ಶ್ರೀ ಅನಿಲ್ ಜೈನ್ ಅವರು ರಚಿಸಿದ ಶ್ರೀರಾಮನ ಕಲಾಕೃತಿಗೆ ದೀಪ ಹಚ್ಚಿ ಸಂಭ್ರಮಿಸಲಾಯಿತು.
ಕಾಮೆಂಟ್‌ಗಳಿಲ್ಲ