Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಅರಣ್ಯ ಇಲಾಖೆ ಸಿಬ್ಬಂದಿಗಳ ಯಶಸ್ವಿ ಕಾರ್ಯಾಚರಣೆ - ಆರು ಮಂದಿ ಶ್ರೀಗಂಧ ಚೋರರ ಬಂಧನ 1.50 ಲಕ್ಷ ಮೌಲ್ಯದ ಶ್ರೀಗಂಧ ವಶಕ್ಕೆ

ಹೊಸನಗರ : ಶ್ರೀಗಂಧ ಮರಗಳ ಅಕ್ರಮ ಕಡಿತಲೆ, ಸಾಗಾಣಿಕೆ ಮತ್ತು ದಾಸ್ತಾನಿಗೆ ಸಂಬಂಧಿಸಿದಂತೆ ಇಂದು ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾಲು ಸಹಿತ ಕೃತ್ಯಕ್ಕೆ ಬಳಸಿದ್ದ ಮೂರು ಮೋಟಾರ್ ಬೈಕ್‌ಗಳನ್ನು ವಶಕ್ಕೆ ಪಡೆದು ಒಟ್ಟು ಆರು ಆರೋಪಿಗಳನ್ನು ಬಂಧಿಸುವಲ್ಲಿ ಹೊಸನಗರ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಗುರುವಾರ ತಾಲ್ಲೂಕಿನ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಅಂದಾಜು ರೂ 1.50 ಲಕ್ಷ ಮೌಲ್ಯದ ಒಟ್ಟು 39.240 ಕೆ.ಜಿ ಶ್ರೀಗಂಧದ ತುಂಡುಗಳ ಜೊತೆಯಲ್ಲಿ ಕೃತ್ಯಕ್ಕೆ ಬಳಸಿದ್ದ ಮೂರು ಬೈಕ್‌ಗಳನ್ನು ಜಪ್ತಿ ಮಾಡಿ, ಆರೋಪಿಗಳಾದ ಸುಳ್ಯದ ಅಬ್ದುಲ್ ಖಾದರ್, ಹುಂಚದ ಬಿಲ್ಲೇಶ್ವರ ವಿಜಯ್ ಶೆಟ್ಟಿ, ಯೋಗೇಂದ್ರ ಕಾರ್ಗಲ್, ಮಂಜುನಾಥ ಕಾರ್ಗಲ್ ಹಾಗೂ ಪ್ರಭಾಕರ್, ಹನೀಫ್ ವಿರುದ್ಧ ಅರಣ್ಯ ಇಲಾಖೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಕಳೆದ ಕೆಲವು ದಿನಗಳ ಹಿಂದಷ್ಟೇ ನಗರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಶ್ರೀಗಂಧ ಸಹಿತ ಆರೋಪಿಗಳನ್ನು ಬಂಧಿಸಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕೃತ್ಯದಿಂದಾಗಿ ತಾಲ್ಲೂಕಿನಲ್ಲಿ ಶ್ರೀಗಂಧ ಚೋರರ ಬಹುದೊಡ್ಡ ಜಾಲವೇ ಸಕ್ರಿಯವಾಗಿದೆ ಎಂಬ ಶಂಕೆ ಅರಣ್ಯ ಇಲಾಖೆ ಸಿಬ್ಬಂದಿಗಳ ನಿದ್ದೆ ಕೆಡಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ತಾಲ್ಲೂಕಿನ ಇತರೆ ಶ್ರೀಗಂಧ ಕಳ್ಳರು, ಸಾಗಾಣಿಕೆದಾರರು ಕುರಿತಂತೆ ಸೂಕ್ತ ಮಾಹಿತಿ ಕಲೆ ಹಾಕುತ್ತಿದ್ದು, ಶೀಘ್ರದಲ್ಲೇ ಇತರೆ ಆರೋಪಿಗಳನ್ನು ಬಂಧಿಸಲು ಕ್ರಮಕ್ಕೆ ಮುಂದಾಗಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಕೆಂಚಪ್ಪನವರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆ ನೇತೃತ್ವವನ್ನು ಹೊಸನಗರ ವಲಯ ಅರಣ್ಯಾಧಿಕಾರಿ ಎಂ.ರಾಘವೇಂದ್ರ ಹಾಗೂ ನಗರ ವಲಯ ಅರಣ್ಯಾಧಿಕಾರಿ ಬಿ.ಎಸ್. ಸಂಜಯ್ ವಹಿಸಿದ್ದು, ಉಪ ವಲಯ ಅರಣ್ಯಾಧಿಕಾರಿಗಳಾದ ಷಣ್ಮುಖ ಪಟೇಲ್, ಹಾಲೇಶ್ ಕುಮಾರ್, ದೊಡ್ಮನಿ, ಯುವರಾಜ್, ಅನಿಲ್, ಮಂಜುನಾಥ್, ಅಕ್ಷಯ್, ನರೇಂದ್ರ, ಸತೀಶ್ ನಿಟ್ಟೂರು, ಮನೋಜ್ ಮೌನೇಶ್, ಇರ್ಷಾದ್, ಸಿಬ್ಬಂದಿಗಳಾದ ಪುಟ್ಟಸ್ವಾಮಿ, ರಾಜು, ಶಶಿಕುಮಾರ್, ಜಸ್ಸಿ ಲಾಯ್ಡ್, ರಮೇಶ್, ದಿವಾಕರ್, ಸುರೇಶ್, ಕೃಷ್ಣಮೂರ್ತಿ, ವಾಹನ ಚಾಲಕರಾದ ಜಗದೀಶ್, ಪ್ರಮೋದ್, ರಾಮು ಗಾಣಿಗ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


ಕಾಮೆಂಟ್‌ಗಳಿಲ್ಲ