Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಂಬುಜ ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರ - ನವೋದಯ ಶಾಲೆಗೆ ಮೂವರು ವಿದ್ಯಾರ್ಥಿಗಳು ಆಯ್ಕೆ

ಹೊಸನಗರ : ಇಲ್ಲಿನ ಹೊಂಬುಜದಲ್ಲಿ ಪ್ರತೀವರ್ಷದಂತೆ ಈ ವರ್ಷವೂ ನವೋದಯ ವಿದ್ಯಾರ್ಥಿಗಳ ಮಿಲನ ಅಸೋಸಿಯೇಷನ್ ಮತ್ತು ಹುಂಚ ಯುವ ಬಳಗ ಸಂಸ್ಥೆಯಿಂದ ನಡೆದ ನವೋದಯ ಮತ್ತು ಮೊರಾರ್ಜಿ ಶಾಲಾ ಪ್ರವೇಶ ಪರೀಕ್ಷಾ ಉಚಿತ ತರಬೇತಿ ಶಿಬಿರದಿಂದ ತಾಲ್ಲೂಕಿನ ಮೂವರು ಮಕ್ಕಳು ಗಾಜನೂರಿನ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ಹೊಂಬುಜದಲ್ಲಿ ನಡೆದ ಶಿಬಿರದಲ್ಲಿ ತರಬೇತಿ ಪಡೆದಿದ್ದ ಸುಧನ್ವ ಎಸ್, ಆರಾಧ್ಯ ಕೆ ಪಿ, ಹಾಗೂ ಮೈತ್ರಿ ಎಸ್. ಎನ್ 6ನೇ ತರಗತಿಯ ಪ್ರವೇಶಕ್ಕೆ ನವೋದಯ ಪರೀಕ್ಷೆಯನ್ನು ಬರೆದಿದ್ದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 

ಉಚಿತ ಶಿಬಿರದ ಪ್ರಯೋಜನ ಪಡೆದುಕೊಂಡು ನವೋದಯ ಶಾಲೆಗೆ ಪ್ರವೇಶ ಪಡೆದಿರುವ ಮಕ್ಕಳನ್ನು ಅಭಿನಂದಿಸಿ ಮಾತನಾಡಿದ ಈ ಶಿಬಿರದ ಸಂಸ್ಥಾಪಕರಾದ, ಹಳೆ ನವೋದಯ ವಿದ್ಯಾರ್ಥಿಯಾದ ಪ್ರಕಾಶ್ ಜೋಯ್ಸ್ ಅವರು, ಈ ಶಿಬಿರ, ಕರ್ನಾಟಕ ರಾಜ್ಯದಲ್ಲಿ ಮೊದಲ ನೂತನ ಪ್ರಯೋಗವಾಗಿದ್ದು, ಉತ್ತಮ ಶಿಕ್ಷಣ ಬಯಸುವ ಗ್ರಾಮೀಣ ಮಕ್ಕಳಿಗೆ ಉಚಿತವಾಗಿ ಸಿಗುವ ಸೌಲಭ್ಯ ಕಲ್ಪಿಸುವ ಒಂದು ವೇದಿಕೆಯಾಗಿದೆ. ಈ ಯಶಸ್ಸಿಗೆ ಕಾರಣೀಕರ್ತರಾದ ಶಿಬಿರದ ಶಿಕ್ಷಕ ವೃಂದಕ್ಕೆ, ಸಂಚಾಲಕರಿಗೆ, ಪೋಷಕರಿಗೆ ಮತ್ತು ಮಕ್ಕಳಿಗೆ ಶುಭಾಶಯ ತಿಳಿಸುವುದಾಗಿ ಹೇಳಿದರು. ಜೊತೆಗೆ ಈ ಮಕ್ಕಳ ಯಶಸ್ಸು, ಸಾಧನೆಯನ್ನು, ಶಿಬಿರದ ಪ್ರತಿ ಕಾರ್ಯದ ಜೊತೆಗೆ ನಿಂತು, ಎಲ್ಲರನ್ನು ಪ್ರೇರೇಪಿಸಿ, ಆಶೀರ್ವದಿಸಿದ ಹುಂಚ ಕ್ಷೇತ್ರದ ಪರಮ ಪೂಜ್ಯ ಗುರುಗಳಾದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಚರಣಕ್ಕೆ ಸಮರ್ಪಿಸುವುದಾಗಿ ತಿಳಿಸಿದರು.

VIDEO - ಹೊಂಬುಜದಲ್ಲಿ 3ನೇ ವರ್ಷದ ನವೋದಯ, ಮೊರಾರ್ಜಿ ಶಾಲೆ ಪ್ರವೇಶ ಪರೀಕ್ಷೆಯ ಉಚಿತ ತರಬೇತಿ ಶಿಬಿರದ ಉದ್ಘಾಟನೆ

ಶಿಬಿರದ ಮುಖ್ಯ ಸಂಚಾಲಕರಾದ ಅಭಿಷೇಕ್  ಕೆ. ಮಾತನಾಡಿ, ಉಚಿತ ನವೋದಯ ತರಬೇತಿ ಶಿಬಿರದ ಕಲ್ಪನೆ ಗ್ರಾಮೀಣ ಭಾಗದ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎನ್ನುವುದಾಗಿದೆ. ಅದಕ್ಕಾಗಿ ಹಳೆಯ ನವೋದಯ ವಿದ್ಯಾರ್ಥಿಗಳು, ಶಿಕ್ಷಕ ವರ್ಗ, ಪೋಷಕರು, ಇತರ ಸಂಚಾಲಕರು ಮತ್ತು ಹುಂಚ ಭಾಗದ ಗ್ರಾಮಸ್ಥರು ಬಹಳಷ್ಟು ಶ್ರಮಿಸಿದ್ದಾರೆ ಎಂದು ತಿಳಿಸಿದರು.


ಪ್ರಸಕ್ತ ವರ್ಷದಲ್ಲಿ ಈ ಸಂಸ್ಥೆ ಹುಂಚ, ಕೋಣಂದೂರು, ತ್ಯಾಗರ್ತಿ ಮತ್ತು ಶಿಕಾರಿಪುರದ ನೆಲವಾಗಿಲು ಗ್ರಾಮಗಳಲ್ಲೂ ಕಾರ್ಯ ನಡೆಸುತ್ತಿದೆ. ಈ ವರ್ಷದ ಶಿಬಿರದಲ್ಲಿ ಒಟ್ಟು 200ಕ್ಕೂ ಹೆಚ್ಚು ಮಕ್ಕಳು, ನಾಲ್ಕು ತಾಲ್ಲೂಕಿನಿಂದ ಭಾಗವಹಿಸಿದ್ದು, ಹೊಸನಗರ ತಾಲ್ಲೂಕಿನಿಂದ 3 ಮಕ್ಕಳು ನವೋದಯಕ್ಕೆ ಮೊದಲ ಪಟ್ಟಿಯಲ್ಲಿ ತೇರ್ಗಡೆ ಆಗಿದ್ದಾರೆ. ಹಾಗೇ ಕೋಣಂದೂರು ಶಿಬಿರದಿಂದ ಅನ್ವಿ ಜೆ. ತೇರ್ಗಡೆ ಆಗಿದ್ದಾರೆ. ಈ ಸಂಸ್ಥೆಯಿಂದ ಕಳೆದ ನಾಲ್ಕು ವರ್ಷಗಳಿಂದ 375 ಮಕ್ಕಳು ಉಚಿತ ತರಬೇತಿ ಪಡೆದು, ಒಟ್ಟು 12 ಮಕ್ಕಳು ನವೋದಯ ಶಾಲೆಗೆ, 2 ಮಕ್ಕಳು ಏಕಲವ್ಯ ಶಾಲೆಗೆ ಮತ್ತು 78 ಮಕ್ಕಳು ಮೊರಾರ್ಜಿ ವಸತಿ ಶಾಲೆಗಳಿಗೆ ತೇರ್ಗಡೆ ಆಗಿರುತ್ತಾರೆ. ಖುಷಿಯಾದ ವಿಚಾರ ಏನಂದರೆ, ಈ ಸಂಸ್ಥೆಯಿಂದ ಗ್ರಾಮೀಣ ಭಾಗದ ಮಕ್ಕಳು 2.98 ಕೋಟಿ ರೂಪಾಯಿ ಮೌಲ್ಯದ, ಶೈಕ್ಷಣಿಕ ಉಪಯೋಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪಡೆದುಕೊಂಡಿದ್ದಾರೆ. ಈ ತಂಡ ನವೋದಯ ವಿಷನ್ 2125 ಎಂಬ ಗುರಿಯನ್ನು ಎದುರಿಟ್ಟುಕೊಂಡು, ದಕ್ಷಿಣ ಭಾರತದ (ಹೈದ್ರಾಬಾದ್ ಪ್ರಾಂತ್ಯ) 77 ನವೋದಯಗಳಲ್ಲಿ, ತಮ್ಮ ವಿಚಾರಧಾರೆ ಹಂಚಿಕೊಂಡು, ಇತರ ನವೋದಯಗಳಿಗೆ ಪ್ರೇರೇಪಿಸುವ ಕಾರ್ಯ ಮಾಡುತ್ತಿದ್ದಾರೆ.


ನವೋದಯ ಮತ್ತು ಮೊರಾರ್ಜಿ ಶಾಲೆಯ ಪರೀಕ್ಷೆಯ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿ : ಪ್ರಕಾಶ್ ಜೋಯ್ಸ್ - ಸಂಸ್ಥಾಪಕರು - ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರ, ನವೋದಯ ರತ್ನ ಮತ್ತು ನವೋದಯ ಭೂಷಣ ಪ್ರಶಸ್ತಿ ವಿಜೇತರು. ಮೊಬೈಲ್ : 9980463013

ಕಾಮೆಂಟ್‌ಗಳಿಲ್ಲ