Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹುಲಿಕಲ್ ಘಾಟಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಬೆಂಕಿ - ಚಾಲಕ ಮತ್ತು ನಿರ್ವಾಹಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ


ಹೊಸನಗರ :
ತಾಲ್ಲೂಕಿನ ಹುಲಿಕಲ್ ಘಾಟಿಯಲ್ಲಿ ಇಂದು ಬೆಳಿಗ್ಗೆ ಹನ್ನೊಂದು ಇಪ್ಪತ್ತರ ಸುಮಾರಿಗೆ ದುರ್ಗಾಂಬಾ ಕಂಪೆನಿಗೆ ಸೇರಿದ್ದ ಬಸ್ಸಿನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಹೊತ್ತಿಕೊಂಡ ಬೆಂಕಿಯಿಂದ ಇಡೀ ಬಸ್ಸು ಬೆಂಕಿಗಾಹುತಿಯಾಗಿದೆ. ಚಾಲಕ ಮತ್ತು ನಿರ್ವಾಹಕರ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದ್ದು, ಬಸ್ಸಿನಲ್ಲಿದ್ದ ಹದಿನೇಳು ಪ್ರಯಾಣಿಕರು ಸುರಕ್ಷಿತವಾಗಿ ಬಸ್ಸಿನಿಂದ ಹೊರಬಂದಿದ್ದಾರೆ. 

ಪ್ರಯಾಣಿಕರು ಇಳಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ತೀವ್ರಗೊಂಡು ಇಡೀ ಬಸ್‌ಗೆ ಆವರಿಸಿದ್ದು, ನೋಡನೋಡುತ್ತಿದ್ದಂತೆ ಬಸ್ಸು ಸಂಪೂರ್ಣ ಹೊತ್ತಿ ಉರಿದಿದೆ. ಹುಲಿಕಲ್‌ ಕಡೆಯಿಂದ ಅಂದರೆ ಸಾಗರದಿಂದ ಉಡುಪಿಗೆ ತೆರಳುತ್ತಿದ್ದ ಶ್ರೀ ದುರ್ಗಾಂಬಾ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್‌ನಲ್ಲಿ ಈ ಅನಾಹುತ ಸಂಭವಿಸಿದ್ದು, ಹುಲಿಕಲ್ ಘಾಟ್ ರಸ್ತೆ ಕುಸಿತದ ಹಿನ್ನೆಲೆ ಈ ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕನೆಕ್ಟಿಂಗ್ ಬಸ್ಸಾಗಿ ಇದು ಕಾರ್ಯ ನಿರ್ವಹಿಸುತ್ತಿತ್ತು. ಪ್ರಯಾಣಿಕರನ್ನು ಕೂರಿಸಿಕೊಂಡು ಹುಲಿಕಲ್‌ನಿಂದ ಹೊರಟ ಸ್ವಲ್ಪ ಸಮಯಕ್ಕೇ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. 

ಘಟನೆಯಿಂದಾಗಿ ಹುಲಿಕಲ್ ಘಾಟ್ ರಸ್ತೆಯಲ್ಲಿ ಕೆಲಸಮಯ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕಾಮೆಂಟ್‌ಗಳಿಲ್ಲ