ವನ್ಯಜೀವಿಗಳ ಬಗೆಗಿನ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಡಾ. ಸಮೀಕ್ಷಾ ಜೀವಕ್ಕೆ ಮುಳುವಾಯ್ತಾ?!
ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿಯವರ ಸಾವು, ಇಡೀ ವ್ಯವಸ್ಥೆ, ಇಲಾಖೆಯಲ್ಲಿ ಹೋಗಲಿ, ಕೊನೆಗೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ವ್ಯವಸ್ಥೆಯಲ್ಲೇ ಯಾವ ಬದಲಾವಣೆ, ಸುಧಾರಣೆಯನ್ನೂ ತರುವುದಿಲ್ಲ. ಅಷ್ಟರಮಟ್ಟಿಗೆ ವ್ಯವಸ್ಥೆ ಜಡ್ಡುಗಟ್ಟಿ ಹೋಗಿದೆ. ಮತ್ತು ಪ್ರಾಣಿಗಳ ಬಗ್ಗೆ ಅತೀವ ಪ್ರೀತಿ, ಕಾಳಜಿಯನ್ನು ಹೊಂದಿದ್ದ ಡಾ.ಸಮೀಕ್ಷಾ ಅವರ ಸಾವೂ ಹತ್ತರಲ್ಲಿ ಹನ್ನೊಂದಾಗಿ ಇನ್ನೆರಡು ದಿನಗಳಲ್ಲಿ ಮರೆತೂ ಹೋಗುತ್ತದೆ.
ಸಮೀಕ್ಷಾ ಅವರ ಸಾವಿನ ಕುರಿತು ಸಚಿವರ ಆದೇಶದಂತೆ ತನಿಖೆಯಾಗುತ್ತದೆ, ವರದಿಯೂ ಬರುತ್ತದೆ. ಆದರೆ ತ್ಯಾವರೆಕೊಪ್ಪದ ಹುಲಿ ಸಿಂಹಧಾಮದಲ್ಲಿ ಏನಾದರೂ ಸುಧಾರಣೆಯಾಗುತ್ತದಾ? ಈ ಮೂಲಕ ಸಮೀಕ್ಷಾ ಅವರ ಸಾವಿಗೆ ನ್ಯಾಯ ಸಲ್ಲಿಸುವ ಪ್ರಯತ್ನವೇನಾದರೂ ನಡೆಯುತ್ತದಾ? ಅದೂ ಅನುಮಾನವೇ. ಯಾಕೆಂದರೆ, ಸಧ್ಯ ಒಂದು ಹಂತದಲ್ಲಿ ಸಮೀಕ್ಷಾ ಅವರಿಗೆ ಅಧಿಕೃತವಾಗಿ ಸೂಚಿಸದ ಕೆಲಸವನ್ನು ಅವರು ಮಾಡಲು ಹೋಗಿ ಅನಾಹುತ ಸಂಭವಿಸಿದೆ ಎನ್ನುವಂತೆ ಬಿಂಬಿಸುವ ಪ್ರಯತ್ನಗಳೂ ನಡೆಯುತ್ತಿವೆ. ಹಾಗಿದ್ದರೆ ತಮಗೆ ಹಿರಿಯ ಅಧಿಕಾರಿಗಳು ಒಪ್ಪಿಸದೇ ಇರುವ ಕೆಲಸವನ್ನು ಸಮೀಕ್ಷಾ ಅವರು ಮಾಡಲು ಹೋಗಿ ಅಪಾಯವನ್ನೇಕೆ ಮೈಮೇಲೆ ಎಳೆದುಕೊಂಡರು? ಈ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟರೆ ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ ಪ್ರಾಣಿಗಳ ಸ್ಥಿತಿ ಏನಾಗಿದೆ ಎನ್ನುವುದು ತಿಳಿಯುತ್ತದೆ.
ಈಗಾಗಲೇ ವರದಿಯಾಗಿರುವಂತೆ, ಡಾ. ಸಮೀಕ್ಷಾ ಅವರು ಮಾರ್ಚ್ 19ನೇ ತಾರೀಖು ರಾತ್ರಿ ಹಕ್ಕಿಯೊಂದಕ್ಕೆ ಚಿಕಿತ್ಸೆ ನೀಡಲು ತೆರಳಿದ್ದರು. ಇದು ಅವರಿಗೆ ಅಧಿಕೃತವಾಗಿ ಸೂಚಿಸಿದ್ದ ಕೆಲಸವಾಗಿತ್ತು. ಆನಂತರ ಅವರು ಎರಡು ಮೂರು ದಿನಗಳಿಂದ ನೀರಿನಲ್ಲಿ ಕದಲದೆ ನಿಂತಿದ್ದ ಗರ್ಭಿಣಿ ನೀರಾನೆಯ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಥರ್ಮಲ್ ಕ್ಯಾಮರಾ ಹಿಡಿದುಕೊಂಡು ಅದರ ಆವರಣದೊಳಗೆ ಹೋದಾಗ ನೀರಾನೆ ದಾಳಿ ನಡೆಸಿದೆ. ಅಂದರೆ ಮೇಲಾಧಿಕಾರಿಗಳು ಅಥವಾ ಹಿರಿಯ ವೈದ್ಯರು ಸಮೀಕ್ಷಾ ಅವರಿಗೆ ನೀರಾನೆಯ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಹೇಳದೇ ಇದ್ದರೂ, ಅವರೇ ವೈಯಕ್ತಿಕ ಆಸಕ್ತಿಯಿಂದ ಈ ಕೆಲಸ ಮಾಡಲು ಹೋಗಿದ್ದರು ಎನ್ನುವಂತೆ ಸಂಬಂಧಪಟ್ಟವರು ಮಾತಾಡುತ್ತಿದ್ದಾರೆ. ಹಾಗಿದ್ದರೆ ತನಗೆ ಒಪ್ಪಿಸದೇ ಇರುವ ಕೆಲಸವನ್ನು ಮಾಡಲು ಹೋಗಿ ಸಂಭವಿಸಿರುವ ಈ ದುರಂತಕ್ಕೆ ಯಾರು ಹೊಣೆ? ಸಹಜವಾಗಿಯೇ ಸಮೀಕ್ಷಾ ಅವರೇ ಎಂದು ಷರಾ ಬರೆಯುವ ಪ್ರಯತ್ನಗಳು ನಿಧಾನವಾಗಿ ನಡೆಯುತ್ತಿರುವಂತೆ ಕಾಣುತ್ತಿದೆ.
CLICK ಮಾಡಿ : ನಿವೃತ್ತ ಯೋಧ ಗಿರೀಶ ಗೋರಗದ್ದೆ ಅವರಿಗೆ ಹೊಸನಗರದಲ್ಲಿ ಅದ್ಧೂರಿ ಸ್ವಾಗತ
ಆದರೆ ಇದನ್ನು ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ಅವ್ಯವಸ್ಥೆ, ಇಲ್ಲಿರುವ ಪ್ರಾಣಿಗಳ ಬಗ್ಗೆ ಇಲಾಖೆಗೆ ಇರುವ ನಿರ್ಲಕ್ಷ್ಯ ದ ಹಿನ್ನೆಲೆಯಲ್ಲಿ ನೋಡಿದಾಗ, ಸಮೀಕ್ಷಾ ಅವರು ಹಿರಿಯ ವೈದ್ಯರು ತಮಗೊಪ್ಪಿಸದೇ ಇರುವ ಕೆಲಸವನ್ನು ಯಾಕೆ ಮಾಡುವ ಆಸಕ್ತಿ ತೋರಿಸಿದರು ಎನ್ನುವುದು ತಿಳಿಯುತ್ತದೆ. ಈಗ ಸಮೀಕ್ಷಾ ಅವರ ಮೇಲೆ ದಾಳಿ ಮಾಡಿರುವ ನೀರಾನೆ ಈ ಹಿಂದೆಯೂ ತನ್ನ ಮರಿಗಳನ್ನು ಕಳೆದುಕೊಂಡಿತ್ತು ಎನ್ನಲಾಗಿದೆ. ಈಗ ಮತ್ತೆ ಗರ್ಭಿಣಿಯಾಗಿತ್ತು. ಗರ್ಭಿಣಿಯಾಗಿರುವ ನೀರಾನೆ ಸರಿಯಾಗಿ ಆಹಾರವನ್ನೂ ಸೇವಿಸದೆ ನೀರಿನಲ್ಲಿ ಒಂದೆಡೆ ನಿಂತುಕೊಂಡೇ ಇತ್ತು. ಅಂದಮೇಲೆ ಸಿಂಹಧಾಮದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕೂಡಲೇ ಹೆಚ್ಚಿನ ಗಮನ ಕೊಡಬೇಕಿತ್ತಲ್ಲವಾ? ಖಂಡಿತ ಕೊಡಬೇಕಿತ್ತು. ಸಿಂಹಧಾಮದಲ್ಲಿ ಹಿರಿಯ ವೈದ್ಯರು ಇಲ್ಲ, ಅವರು ಕಳೆದ ನವೆಂಬರ್ರಿನಲ್ಲೇ ರಾಜೀನಾಮೆ ನೀಡಿದ್ದಾರಂತೆ. ಅವರ ಅನುಪಸ್ಥಿತಿಯಲ್ಲಿ ಸಿಂಹಧಾಮದ ಅಧಿಕಾರಿಗಳು ನೀರಾನೆಯ ಚಿಕಿತ್ಸೆಗಾಗಿ ಹೊರಗಡೆಯಿಂದಲಾದರೂ ನುರಿತ ಪಶುವೈದ್ಯರನ್ನು ಕರೆಸಬಹುದಿತ್ತು. ಆದರೆ ಆ ಕೆಲಸವನ್ನೂ ಮಾಡಿಲ್ಲ. ಈ ಬಾರಿಯಾದರೂ ನೀರಾನೆಯ ಮರಿಯನ್ನು ಕಾಪಾಡಿಕೊಳ್ಳುತ್ತೇವೆ ಎನ್ನುವ ಯಾವ ಕಾಳಜಿ, ಆಸಕ್ತಿಯನ್ನಾಗಲೀ ತೋರಿಸಿಲ್ಲ. 'ಹೋದರೆ ಹೋಗಲಿ ಬಿಡು, ನಮ್ಮದೇನು ಹೋಗುವುದಿದೆ' ಎಂದು ನೀರಾನೆಯ ಸ್ಥಿತಿಯನ್ನು ಕೆಟ್ಟದಾಗಿ ನಿರ್ಲಕ್ಷ್ಯ ಮಾಡಿದ್ದಾರೆ.
ಆದರೆ ಇಲ್ಲಿಗೆ ಇದೇ ಫೆಬ್ರವರಿ 1ನೇ ತಾರೀಖಿನಿಂದ ಟ್ರೈನಿ ಪಶುವೈದ್ಯೆಯಾಗಿ ಸೇರಿಕೊಂಡಿದ್ದ ಸಮೀಕ್ಷಾ ಅವರಿಗೆ ಹೀಗೆ ನಿರ್ಲಕ್ಷ್ಯ ಮಾಡಲಾಗಿಲ್ಲ. ಯಾಕೆಂದರೆ, ಅವರು ಬಹುಶಃ ಇಲಾಖೆಗೆ ಸಂಬಳಕ್ಕೆಂದು ಸೇರಿದವರಲ್ಲ. ಪ್ರಾಣಿ ಪಕ್ಷಿಗಳ ಮೇಲಿನ ಪ್ರೀತಿಯಿಂದಲೇ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಆದ್ದರಿಂದಲೇ ತಾನಿನ್ನೂ ಟ್ರೈನಿಯಾಗಿದ್ದರೂ ಎರಡು ಮೂರು ದಿನದಿಂದ ನಿಂತಲ್ಲೇ ನಿಂತಿದ್ದ ಗರ್ಭಿಣಿ ನೀರಾನೆಯ ಸ್ಥಿತಿಯನ್ನು ಮತ್ತೆ ಮತ್ತೆ ನೋಡಿ ಅವರಿಗೆ ಆತಂಕವಾಗಿರಬೇಕು. ಈ ಬಾರಿಯೂ ಅದು ಮರಿಯನ್ನು ಕಳೆದುಕೊಂಡರೆ ಅದರ ಪರಿಸ್ಥಿತಿ ಹೇಗಿರಬಹುದು ಎಂದು ತಾಯಿಹೃದಯದಿಂದ ಚಿಂತಿಸಿರಬಹುದು. ತನ್ನ ಇಲಾಖೆ, ಮೇಲಾಧಿಕಾರಿಗಳು ಏನಾದರೂ ಹೇಳಲಿ ನಾನು ಈ ಬಾರಿ ನೀರಾನೆ ಯಾವ ತೊಂದರೆಯೂ ಇಲ್ಲದೆ ಮರಿಗೆ ಜನ್ಮ ನೀಡುವಂತೆ ನೋಡಿಕೊಳ್ಳಬೇಕು ಎನ್ನುವ ಪ್ರಾಣಿಗಳ ಮೇಲಿನ ನಿಜ ಪ್ರೀತಿ ಹಾಗೂ ಕಾಳಜಿಯಿಂದ ನೀರಾನೆಯ ಆವರಣದೊಳಗೆ ಹೋಗಿರಬಹುದು, ಅನಾಹುತ ಸಂಭವಿಸಿರಬಹುದು. ಒಂದೊಮ್ಮೆ ಇಲಾಖೆ ಈ ಮೊದಲೇ ಸೂಕ್ತ ಪಶುವೈದ್ಯರನ್ನು ನೇಮಿಸಿದ್ದರೆ, ಅವರು ನೀರಾನೆಯ ಬಗ್ಗೆ ಕಾಳಜಿ ವಹಿಸಿದ್ದರೆ ಬಹುಶಃ ಸಮೀಕ್ಷಾ ರೆಡ್ಡಿಯವರು ದುರಂತ ಅಂತ್ಯವನ್ನು ಕಾಣುತ್ತಿರಲಿಲ್ಲವೇನೋ!
ಮುಖ್ಯವಾಗಿ, ಸಮೀಕ್ಷಾ ರೆಡ್ಡಿಯವರ ಸಾವು ಖುದ್ದು ಅರಣ್ಯ ಇಲಾಖೆಗೇ ವನ್ಯಜೀವಿಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎನ್ನುವ ಸತ್ಯವನ್ನು ಬಹಿರಂಗಗೊಳಿಸಿದೆ. ತ್ಯಾವರೆಕೊಪ್ಪ ಸಿಂಹಧಾಮದ ಮೃಗಾಲಯದಲ್ಲಿ ಎರಡು ಬಾರಿ ಮರಿಯನ್ನು ಕಳೆದುಕೊಂಡು ಮೂರನೇ ಬಾರಿ ಗರ್ಭಿಣಿಯಾಗಿದ್ದ ನೀರಾನೆಯ ಆರೋಗ್ಯದ ಬಗ್ಗೆ ಅಲ್ಲಿರುವ ಯಾರಿಗೂ ಕಾಳಜಿ ಇರಲಿಲ್ಲ. ಹಿರಿಯ ವೈದ್ಯರು ಇಲ್ಲವೆಂದರೂ, ನೀರಾನೆ ಈ ಸ್ಥಿತಿಯಲ್ಲಿರುವಾಗ ಬೇರೆ ಹಿರಿಯ ವೈದ್ಯರನ್ನು ಕರೆಸುವ ಬಗ್ಗೆ ಇಲ್ಲಿನ ಕಾರ್ಯನಿರ್ವಾಹಕ ನಿರ್ದೇಶಕರು ಮುಂದಾಗಬೇಕಿತ್ತು. ಆದರೆ ಅವರು ಈ ನಿರ್ಧಾರಕ್ಕೆ ಮುಂದಾದಂತಿಲ್ಲ. ಅಂದರೆ ಇಲಾಖೆಗೂ, ಅಲ್ಲಿನ ಹಿರಿಯ ಅಧಿಕಾರಿಗಳಿಗೂ ಎರಡು ಬಾರಿ ಮರಿಯನ್ನು ಕಳೆದುಕೊಂಡ ಗರ್ಭಿಣಿ ನೀರಾನೆಯ ಬಗ್ಗೆ ಯಾವ ಕಾಳಜಿಯೂ ಇರಲಿಲ್ಲ. ನೀರಾನೆಯಂತಹ ಅಷ್ಟು ದೊಡ್ಡ ಪ್ರಾಣಿಯ ಆರೈಕೆಯಲ್ಲೇ ಈ ಪರಿ ನಿರ್ಲಕ್ಷ್ಯ ತೋರಿದ ಇಲ್ಲಿನ ಅಧಿಕಾರಿಗಳು ಸಿಂಹಧಾಮದ ಮೃಗಾಲಯದ ಇನ್ನಿತರ ಪ್ರಾಣಿ, ಪಕ್ಷಿಗಳನ್ನು ಎಷ್ಡು ಕಾಳಜಿ ಮಾಡುತ್ತಿರಬಹುದು ಯೋಚಿಸಿ.
ಇಂತಹ ಅಮಾನವೀಯ ವ್ಯವಸ್ಥೆಯಲ್ಲಿ ಪ್ರಾಣಿ ಪಕ್ಷಿಗಳ ಬಗ್ಗೆ ನಿಜ ಕಾಳಜಿ, ಪ್ರೀತಿ ಹೊಂದಿದ್ದ ಸಮೀಕ್ಷಾ ಅವರು ನೀರಾನೆಯ ಸ್ಥಿತಿಯನ್ನು ನೋಡಿ ಸುಮ್ಮನೆ ಕುಳಿತಿರಲು ಹೇಗೆ ಸಾಧ್ಯ? ಆದ್ದರಿಂದಲೇ ಅವರು ಮೇಲಾಧಿಕಾರಿಗಳು ಸೂಚಿಸದೇ ಹೋದರೂ ನೀರಾನೆಯ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಹೋಗಿದ್ದಾರೆ. ಒಂದೊಮ್ಮೆ ತ್ಯಾವರೆಕೊಪ್ಪ ಮೃಗಾಲಯದ ಹಿರಿಯ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟವರಿಗೆ ಸಮೀಕ್ಷಾ ಅವರಿಗಿದ್ದ ಪ್ರಾಣಿ ಪ್ರೀತಿಯ ಒಂದಂಶ ಕಾಳಜಿ, ಪ್ರೀತಿ ಇದ್ದಿದ್ದರೂ ಗರ್ಭಿಣಿ ನೀರಾನೆಯ ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತಿದ್ದರು; ಸಮೀಕ್ಷಾ ಅವರು ತಾವಾಗಿ ನೀರಾನೆ ಆವರಣದೊಳಗೆ ಹೋಗದೆ ತಮ್ಮ ಜೀವವನ್ನೂ ಉಳಿಸಿಕೊಳ್ಳುತ್ತಿದ್ದರು.
ಇನ್ನೊಂದೆಡೆ, ಮೃಗಾಲಯದಲ್ಲಿ ಕೂಡಿಟ್ಟ ಪ್ರಾಣಿ ಪಕ್ಷಿಗಳನ್ನು ಜನರಿಗೆ ತೋರಿಸಿ ದುಡ್ಡು ಮಾಡಿಕೊಳ್ಳುವ ಅರಣ್ಯ ಇಲಾಖೆ, ಪ್ರತಿಯಾಗಿ ಅವುಗಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತದೆ ಎನ್ನುವ ಪ್ರಶ್ನೆಗೂ ಸಮೀಕ್ಷಾ ಅವರ ಸಾವು ಉತ್ತರ ಹುಡುಕುವಂತೆ ಮಾಡಿದೆ. ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ ಹಿರಿಯ ಪಶುವೈದ್ಯರಿಲ್ಲದೆ ಕೆಲವು ಸಮಯವಾಗಿದೆಯಂತೆ. ಟ್ರೈನಿ ವೈದ್ಯರ ಮೂಲಕವೇ ಪ್ರಾಣಿ ಪಕ್ಷಿಗಳ ಆರೋಗ್ಯದ ಬಗ್ಗೆ ಕಾಳಜಿ ಮಾಡಲಾಗುತ್ತಿತ್ತು. ಒಂದು ಮೃಗಾಲಯ, ಸಫಾರಿಯಲ್ಲಿ ಮುಖ್ಯವಾಗಿ ದಿನದ 24 ಗಂಟೆಯೂ ಇರಬೇಕಾದ ಪಶುವೈದ್ಯರೇ ಇರಲಿಲ್ಲ ಎಂದಮೇಲೆ ಪ್ರಾಣಿಪಕ್ಷಿಗಳ ಆಹಾರ ಇತ್ಯಾದಿ ವಿಷಯಗಳಲ್ಲಿ ಅದೆಷ್ಟು ಕಾಳಜಿ ವಹಿಸುತ್ತಿರಬಹುದು ಯೋಚಿಸಿ. ಇಷ್ಟಕ್ಕೂ, ಕಾಡಿನಿಂದ ಹಿಡಿದು ತಂದು ಪಂಜರದಲ್ಲಿ ಕೂಡಿ ಹಾಕಿ ಅವುಗಳನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿಲ್ಲ ಎಂದಮೇಲೆ, ಈ ವ್ಯವಸ್ಥೆಯನ್ನೇಕೆ ಮಾಡಬೇಕು? ಇದು ವನ್ಯಜೀವಿಗಳನ್ನು ಕಾಪಾಡಬೇಕಾದ ಅರಣ್ಯ ಇಲಾಖೆಯೇ ಅವುಗಳ ಮೇಲೆ ಗದಾಪ್ರಹಾರ ಮಾಡಿದಂತಾಗಲಿಲ್ಲವಾ? ಹೀಗಿರುವಾಗ ಅರಣ್ಯ ಇಲಾಖೆ ಅದ್ಯಾವ ಮುಖ ಇಟ್ಟುಕೊಂಡು ಬೇರೆಯವರಿಗೆ ವನ್ಯಜೀವಿಗಳ ಜೀವಕ್ಕೆ ಸಂಚಕಾರ ತರಬೇಡಿ ಎಂದು ಹೇಳೀತು?
ಸಮೀಕ್ಷಾ ಅವರ ಸಾವಿನಲ್ಲಿ ಇಲಾಖೆಯ ಕೆಟ್ಟ ನಿರ್ಲಕ್ಷ್ಯವೇ ಕಾಣುತ್ತಿದೆಯೇ ಹೊರತು ಬೇರೇನೂ ಇಲ್ಲ. ಇಲಾಖೆ ವ್ಯವಸ್ಥಿತವಾಗಿದ್ದಿದ್ದರೆ ಖಂಡಿತ ನಾವು ಸಮೀಕ್ಷಾ ಅವರಂತಹ ನಿಜ ಪ್ರಾಣಿಪ್ರೀತಿ ಹೊಂದಿದ್ದ ಯುವವೈದ್ಯೆಯನ್ನು ಕಳೆದುಕೊಳ್ಳಬೇಕಿರಲಿಲ್ಲ. ಇದರೊಂದಿಗೆ ಪಶುವೈದ್ಯಕೀಯ ಕ್ಷೇತ್ರಕ್ಕೆ ಬರಲು ಯೋಚಿಸುತ್ತಿರುವ ಯುವ ವೈದ್ಯ ಸಮೂಹಕ್ಕೂ ಇವರ ಸಾವು ಹೆಜ್ಜೆಗಳನ್ನು ಇನ್ನಷ್ಟು ಹಿಂದಿಡಲಿಕ್ಕೆ ಕಾರಣವಾದರೂ ಆಶ್ಚರ್ಯ ಪಡಬೇಕಿಲ್ಲ.
ಯಾರ ತಪ್ಪೋ, ಅದನ್ನು ಹೊರತೆಗೆಯುವ ಯಾರ ತನಿಖೆಯೋ, ಇನ್ನ್ಯಾರ ಸುಳ್ಳು ಸಮರ್ಥನೆಗಳೋ... ಒಟ್ಟಿನಲ್ಲಿ ಡಾ. ಸಮೀಕ್ಷಾ ಅವರ ದುರಂತ ಅಂತ್ಯ ಮನುಷ್ಯರಾಗಿ ನಮಗೆ 'ಆಯುಷ್ಯವೇ ಅಷ್ಟಿರುವಾಗ ಏನು ಮಾಡಲಾದೀತು?' ಅನ್ನಿಸಬಹುದಾದರೂ, ಪ್ರಾಣಿ ಪಕ್ಷಿಗಳ ಲೋಕಕ್ಕೆ ಸಮೀಕ್ಷಾ ಅವರ ಅಗಲಿಕೆ ಅಷ್ಟು ಸುಲಭಕ್ಕೆ ತುಂಬಲಾರದ ಬಹುದೊಡ್ಡ ನಷ್ಟವೇ ಸರಿ.





ಕಾಮೆಂಟ್‌ಗಳಿಲ್ಲ