Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಂಬುಜ ಉಚಿತ ತರಬೇತಿ ಶಿಬಿರದಿಂದ ನವೋದಯ, ಏಕಲವ್ಯ ಮತ್ತು ಮೊರಾರ್ಜಿ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ಹೊಂಬುಜ ಶ್ರೀಗಳಿಂದ ಅಭಿನಂದನೆ

ಹೊಸನಗರ : ಹೊಂಬುಜದ ನವೋದಯ ಮತ್ತು ಮೊರಾರ್ಜಿ ಶಾಲೆ ಪ್ರವೇಶ ಪರೀಕ್ಷೆಗೆ ನೀಡುವ ಉಚಿತ ತರಬೇತಿ ಶಿಬಿರದಿಂದ ನವೋದಯ, ಏಕಲವ್ಯ ಮತ್ತು ಮೊರಾರ್ಜಿ ಶಾಲೆಗೆ ಪ್ರವೇಶ ಪಡೆದ ಮಕ್ಕಳಿಗೆ ಮತ್ತು ಶಿಬಿರದ ಯಶಸ್ಸಿಗೆ ಕಾರಣಕರ್ತರಾದ ಶಿಕ್ಷಕ ವೃಂದಕ್ಕೆ ಹೊಂಬುಜ ಕ್ಷೇತ್ರದ ಪರಮ ಪೂಜ್ಯ ಗುರುಗಳಾದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳ ನೇತೃತ್ವದಲ್ಲಿ ಇತ್ತೀಚೆಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಕ್ಕಳನ್ನು ಮತ್ತು ಶಿಕ್ಷಕರನ್ನು ಅಭಿನಂದಿಸಿ ಮಾತನಾಡಿದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳು, ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಕೊರತೆ ಇದ್ದೇ ಇದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದಂತಹ ವಾತಾವರಣ ಕಲ್ಪಿಸಿಕೊಡುವ ಶಾಲೆಗಳಲ್ಲಿ ನವೋದಯ, ಮೊರಾರ್ಜಿ ಶಾಲೆಗಳು ಮಾದರಿಯಾಗಿದೆ. ಈ ಶಾಲೆಗಳಲ್ಲಿ ಓದುವ ಆಸೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಇರುತ್ತದೆ. ಆದರೆ ಇಲ್ಲಿಗೆ ಪ್ರವೇಶ ಪಡೆಯಲು ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಆಗಲು ಮಕ್ಕಳಿಗೆ ಉತ್ತಮ ತರಬೇತಿ ಮತ್ತು ಪರಿಶ್ರಮ ಮುಖ್ಯ. ಈ ನಿಟ್ಟಿನಲ್ಲಿ ಸತತವಾಗಿ ಕಳೆದ ನಾಲ್ಕು ವರ್ಷಗಳಿಂದ ಹೊಂಬುಜ ಗ್ರಾಮ ವ್ಯಾಪ್ತಿಯ ಮಕ್ಕಳಿಗೆ ಉಚಿತವಾಗಿ ನವೋದಯ ಪರೀಕ್ಷೆಗೆ ಅಣಿಗೊಳಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಶಿಬಿರದ ಸಂಸ್ಥಾಪಕರೂ, ಹಳೆ ನವೋದಯ ವಿದ್ಯಾರ್ಥಿಯಾದ ಪ್ರಕಾಶ್ ಜೋಯ್ಸ್ ಮಾತನಾಡಿ, ನಾವು ನಡೆಸುತ್ತಿರುವ ಈ ಶಿಬಿರ ಕರ್ನಾಟಕ ರಾಜ್ಯದಲ್ಲಿ ಮೊದಲ ನೂತನ ಪ್ರಯೋಗವಾಗಿದ್ದು, ಇದು ಉತ್ತಮ ಶಿಕ್ಷಣ ಬಯಸುವ ಗ್ರಾಮೀಣ ಮಕ್ಕಳಿಗೆ ಉಚಿತವಾಗಿ ಸಿಗುವ ಸೌಲಭ್ಯ ಕಲ್ಪಿಸುವ ಒಂದು ವೇದಿಕೆಯಾಗಿದೆ. ಈ ಯಶಸ್ಸಿಗೆ ಕಾರಣಕರ್ತರಾದ ಶಿಬಿರದ ಶಿಕ್ಷಕ ವೃಂದಕ್ಕೆ, ಸಂಚಾಲಕರಿಗೆ ಮತ್ತು ಮಕ್ಕಳಿಗೆ ಶುಭಾಶಯಗಳನ್ನು ತಿಳಿಸಿದರು.

ಹಳೆ ನವೋದಯ ವಿದ್ಯಾರ್ಥಿಗಳ ಮಿಲನ ಅಸೋಸಿಯೇಶನ್ ಮತ್ತು ಹುಂಚ ಯುವ ಬಳಗದ ಸಂಸ್ಥೆ - ನವೋದಯ ಮತ್ತು ಮೊರಾರ್ಜಿ ಶಿಬಿರವು 2021ರಲ್ಲಿ ಪ್ರಾರಂಭಗೊಂಡು ಇದೀಗ ಉಜ್ವಲ ಯಶಸ್ಸಿನ ಹಾದಿಯಲ್ಲಿದೆ. ಪ್ರಸಕ್ತ ವರ್ಷದಲ್ಲಿ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳ 22ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ 70 ವಿದ್ಯಾರ್ಥಿಗಳು ಶಿಬಿರದಲ್ಲಿ ತರಬೇತಿ ಪಡೆದು ಅತ್ಯುತ್ತಮ ಪ್ರಗತಿ ಸಾಧಿಸಿದ್ದಾರೆ. ಈ ಶಿಬಿರದಲ್ಲಿ ಪ್ರತಿ ವರ್ಷ 4-5 ತಿಂಗಳು ಪರೀಕ್ಷೆಗೆ ದಾಖಲಿಸಿದ ವಿದ್ಯಾರ್ಥಿಗಳಿಗೆ ನವೋದಯ ಮತ್ತು ಮೊರಾರ್ಜಿ ಶಾಲೆಯ ಪರಿಚಯ, ಆಯ್ಕೆ ಪ್ರಕ್ರಿಯೆ ಮಾಹಿತಿ, ಕೋಚಿಂಗ್, ಮಾದರಿ ಪರೀಕ್ಷೆ, ಕಲಿಕಾ ಸಾಮಾಗ್ರಿಗಳು, ಸಮಯ ನಿರ್ವಹಣೆ ಮತ್ತು ಇತರೆ ಉಪಯುಕ್ತ ಮಾಹಿತಿಗಳನ್ನು ಕೊಡಲಾಗುತ್ತಿದೆ.

ಪ್ರಸಕ್ತ ವರ್ಷದ ನವೋದಯ ಅರ್ಹತಾ ಪರೀಕ್ಷೆಯಲ್ಲಿ ಈ ಶಿಬಿರದಿಂದ 6ನೇ ತರಗತಿಗೆ 3 ಮಕ್ಕಳು, ಏಕಲವ್ಯ ಶಾಲೆಗೆ 2 ಮಕ್ಕಳು ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 9 ಮಕ್ಕಳು ಅರ್ಹತೆಯನ್ನು ಪಡೆದಿರುವುದು ವಿಶೇಷ ಸಾಧನೆಯಾಗಿದೆ.

ಸೆಪ್ಟೆಂಬರ್‌‌ನಿಂದ ಜನವರಿ ತನಕ ನಾಲ್ಕು ತಿಂಗಳ ಕಾಲ, ಪ್ರತಿ ಭಾನುವಾರ ತರಗತಿ ಜೊತೆಗೆ ಆನ್ಲೈನ್ ಪರೀಕ್ಷೆಗಳು, ಪ್ರೇರಣಾತ್ಮಕ ತರಗತಿಗಳು, ಕ್ವಿಜ್ ಸ್ಪರ್ಧೆಗಳು, ಹಾಗೂ ಪಿಎಂಶ್ರೀ- ಜವಾಹರ್ ನವೋದಯ ವಿದ್ಯಾಲಯ ಶಿವಮೊಗ್ಗ ಭೇಟಿ ಮಕ್ಕಳ ಈ ಸಾಧನೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ.

ಶಿಬಿರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಾದ ಶರಣ್, ಸಂಯಮ್, ಸನ್ನಿಧಿ ಎಸ್ ರಾವ್ ಶಿವಮೊಗ್ಗ ಜಿಲ್ಲೆಯ ಗಾಜನೂರಿನ ನವೋದಯ ಶಾಲೆಗೆ ಅಯ್ಕೆಯಾಗಿದ್ದಾರೆ. ಪ್ರಥಮ ಬಾರಿಗೆ ಚಿಕ್ಕಮಗಳೂರು ಏಕಲವ್ಯ ಶಾಲೆಗೆ (ಸಿಬಿಎಸ್ಇ) ಆರ್ಯ, ಶ್ರುತಿ ಎಸ್. ಆಯ್ಕೆ ಆಗಿದ್ದಾರೆ. ಹಾಗೇ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆರಾಧ್ಯ, ವಿನ್ಯಾಸ್, ಗಗನ್, ದಿಶಾಂತ್, ಕೃಪಾಶ್ರೀ, ಶ್ರೇಣಿಕ್, ಶ್ರುತಿ, ಸನ್ನಿಧಿ, ನಿಶಾಂತ್ ಮೊದಲ ಪಟ್ಟಿಯಲ್ಲಿ ತೇರ್ಗಡೆ ಆಗಿದ್ದಾರೆ. ಈ ಫಲಿತಾಂಶ ಮಲೆನಾಡಿನ ಭಾಗದ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸಿದೆ.

ಪ್ರಸಕ್ತ ವರ್ಷದಲ್ಲಿ ಈ ಸಂಸ್ಥೆ ಹುಂಚ, ಕೋಣಂದೂರು ಮತ್ತು ಶಿಕಾರಿಪುರದ ನೆಲವಾಗಿಲು ಗ್ರಾಮಗಳಲ್ಲೂ ಕಾರ್ಯ ನಡೆಸುತ್ತಿದೆ. ಈ ವರ್ಷದ ಶಿಬಿರದಲ್ಲಿ ಒಟ್ಟು 150ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಹುಂಚದಿಂದ 3 ಮಕ್ಕಳು ಮತ್ತು ನೆಲವಾಗಿಲು ಶಿಬಿರದಿಂದ 3 ಮಕ್ಕಳು ನವೋದಯಕ್ಕೆ ತೇರ್ಗಡೆ ಆಗಿದ್ದಾರೆ.

ಉಚಿತ ತರಬೇತಿ ನೀಡುವ ಈ ಸಂಸ್ಥೆಯಿಂದ ಕಳೆದ ನಾಲ್ಕು ವರ್ಷಗಳಿಂದ ಒಟ್ಟು 12 ಮಕ್ಕಳು ನವೋದಯ ಶಾಲೆಗೆ, 2 ಮಕ್ಕಳು ಏಕಲವ್ಯ ಶಾಲೆಗೆ ಮತ್ತು 69 ಮಕ್ಕಳು ಮೊರಾರ್ಜಿ ವಸತಿ ಶಾಲೆಗಳಿಗೆ ತೇರ್ಗಡೆ ಆಗಿರುತ್ತಾರೆ. ಸಂತಸದ ಸಂಗತಿ ಏನೆಂದರೆ, ಈ ಸಂಸ್ಥೆಯಿಂದ ಗ್ರಾಮೀಣ ಭಾಗದ ಮಕ್ಕಳು ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ 2.1 ಕೋಟಿ ರೂಪಾಯಿ ಮೌಲ್ಯದ ಶೈಕ್ಷಣಿಕ ಉಪಯೋಗ ಪಡೆದುಕೊಂಡಿದ್ದಾರೆ. ಇಲ್ಲಿಯವರೆಗೆ ಈ ಸಂಸ್ಥೆಯಿಂದ 359 ಮಕ್ಕಳು ಉಚಿತ ತರಬೇತಿ ತೆಗೆದುಕೊಂಡು ತಮ್ಮ ಜ್ಞಾನಾಭಿವೃದ್ಧಿ ಮಾಡಿಕೊಂಡಿದ್ದಾರೆ.

ನವೋದಯ ಮತ್ತು ಮೊರಾರ್ಜಿ ಶಾಲೆಯ ಪರೀಕ್ಷೆಯ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿ : ಪ್ರಕಾಶ್ ಜೋಯ್ಸ್, ಸಂಸ್ಥಾಪಕರು - ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರ, ನವೋದಯ ರತ್ನ ಪ್ರಶಸ್ತಿ ವಿಜೇತ, ಸೀನಿಯರ್ ಮ್ಯಾನೇಜರ್ - ಕಾಗ್ನಿಜಂಟ್ ಬೆಂಗಳೂರು - 9980463013

ಕಾಮೆಂಟ್‌ಗಳಿಲ್ಲ