ಸಂಸದ ಬಿವೈಆರ್ ವಿರುದ್ಧ ಶಾಸಕ ಬೇಳೂರು ಕಿಡಿ - ಬೇಳೂರು ಹೇಳಿಕೆಗೆ ತೀರ್ಥೇಶ್ ತೀವ್ರ ಖಂಡನೆ
ಹೊಸನಗರ : ಇತ್ತೀಚೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ವಿನಾಕಾರಣ ಕಿಡಿಕಾರುತ್ತಿರುವುದಕ್ಕೆ ರಾಜ್ಯ ಎಂಸಿಎ ಮಾಜಿ ನಿರ್ದೇಶಕ ಹೆಚ್.ಆರ್. ತೀರ್ಥೇಶ್ ತೀವ್ರ ಖಂಡನೆ ವ್ಯಕ್ತ ಪಡಿಸಿದ್ದಾರೆ.
ಅವರು ಇಂದು ಪತ್ರಿಕಾ ಹೇಳಿಕೆ ನೀಡಿ, ಅಭಿವೃದ್ದಿ ಕುರಿತಂತೆ ದೇಶದ ಎರಡನೇ ಹಾಗೂ ರಾಜ್ಯದ ಮೊದಲ ಸ್ಥಾನ ಸಂಸದ ಬಿವೈಆರ್ ಅವರಿಗೆ ಸಲ್ಲುತ್ತದೆ. ಜಿಲ್ಲೆಗೆ ಇವರ ಕೊಡುಗೆ ಅಪಾರವಾಗಿದ್ದು, ಶರಾವತಿ ಸಂತ್ರಸ್ತರ ವಿಷಯ ಕುರಿತು ಸಂಸತ್ ಸಭೆಯಲ್ಲಿ ಈಗಾಗಲೇ ಅನೇಕ ಬಾರಿ ವಿಷಯ ಪ್ರಸ್ತಾಪಿಸಿದ್ದು, ಸಂತ್ರಸ್ತರಿಗೆ ಸೂಕ್ತ ಹಾಗೂ ಶಾಶ್ವತ ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ. ಕೇಂದ್ರ ಅರಣ್ಯ, ಕಂದಾಯ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಈಗಾಗಲೇ ಈ ಕುರಿತು ಅಗತ್ಯ ಚರ್ಚೆ ನಡೆದಿದೆ. ಜಿಲ್ಲೆಯ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ವಿವಿಧ ಮಹತ್ವದ ಸಭೆಗಳು ಸಹ ನಡೆದಿವೆ. ಕೇಂದ್ರದ ಬಿಜೆಪಿ ಸರ್ಕಾರ ಶರಾವತಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲು ಇಚ್ಛಾಶಕ್ತಿ ತೋರಿದ ಬೆನ್ನಲ್ಲೆ ಕಾನೂನಾತ್ಮಕ ಹೋರಾಟಕ್ಕೆ ಮುಂದಾದ ಫಲವಾಗಿ ದೇಶದ ಸರ್ವೋಚ್ಚ ನ್ಯಾಯಾಲಯವೂ ರಾಜ್ಯ ಸರ್ಕಾರಕ್ಕೆ ಅರಣ್ಯ ಹಾಗೂ ಕಂದಾಯ ಇಲಾಖೆಗಳ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಆದೇಶಿಸಿದೆ. ಈ ಕಾರ್ಯ ಜಿಲ್ಲೆಯಲ್ಲಿ ಈಗಾಗಲೇ ಆರಂಭಗೊಂಡಿದ್ದು, ಸಮೀಕ್ಷೆಯಲ್ಲಿ ಕೆಲವು ಲೋಪದೋಷಗಳು ಕಂಡು ಬಂದಿದೆ ಎಂದು ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಕಾರಣಕ್ಕೆ ಸಮೀಕ್ಷೆಯ ಸಾಧಕ-ಬಾಧಕ ಕುರಿತು ಸುದೀರ್ಘ ಚರ್ಚೆ ನಡೆಸಿ ಅನ್ಯಾಯಕ್ಕೊಳಗಾದ ರೈತರಿಗೆ ಸೂಕ್ತ ನ್ಯಾಯ ಒದಗಿಸುವಂತೆ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸಂಸದ ಬಿವೈಆರ್ ಸ್ಪಷ್ಟ ಸೂಚನೆ ನೀಡಿದ್ದಾರೆ. ಆದರೂ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಶರಾವತಿ ಸಂತ್ರಸ್ತರ ಕುರಿತು ಇರುವ ಕಾಳಜಿಯನ್ನು ರಾಜಕೀಯವಾಗಿ ತಿರುಚಿ, ಸಂಸದ ಬಿವೈಆರ್ ಮೇಲೆ ವಿನಾಕಾರಣ ಇಲ್ಲಸಲ್ಲದ ಆರೋಪ ಮಾಡುತ್ತ, ಶರಾವತಿ ಸಂತ್ರಸ್ತರ ವಿಷಯಕ್ಕೆ ರಾಜಕೀಯ ಬಣ್ಣ ಬಳಿಯಲು ಯತ್ನಿಸುತ್ತಿರುವುದು ಹಾಗೂ ಸಂಪೂರ್ಣ ಕಾಂಗ್ರೆಸ್‌ಮಯ ಮಾಡುತ್ತಿರುವುದನ್ನು ತೀರ್ಥೇಶ್ ತೀವ್ರವಾಗಿ ಖಂಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಹಳ್ಳ ಹಿಡಿದಿದ್ದು, ಜಿಲ್ಲೆಯೂ ಸಹ ಇದರಿಂದ ಹೊರತಾಗಿಲ್ಲ. ಕೇಂದ್ರದ ಮೋದಿ ನೇತೃತ್ವದ ಸರ್ಕಾರ, ಈ ಹಿಂದಿನ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯದ ಬಿಜೆಪಿ ಸರ್ಕಾರವು ಜಾರಿಗೊಳಿಸಿದ ಹಲವು ಜನಪರ ಯೋಜನೆಗಳನ್ನು ಇಂದಿನ ಕಾಂಗ್ರೆಸ್ ನಾಯಕರುಗಳು ತಮ್ಮದೆಂದು ಗುದ್ದಲಿಪೂಜೆಗೆ ಮುಂದಾಗುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಸಂಸದ ಬಿವೈಆರ್ ವಿರುದ್ಧ ವಿರೋಧಿಗಳು ಅನಗತ್ಯ ಹೇಳಿಕೆ ನೀಡುವುದನ್ನು ಜಿಲ್ಲೆಯ ಜನತೆ ಎಂದಿಗೂ ಒಪ್ಪುವುದಿಲ್ಲ. ಈ ಹಿಂದೆ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಪ್ಪ-ಮಕ್ಕಳು ಟೊಂಕಕಟ್ಟಿ ಕಾರ್ಯನಿರ್ವಹಿಸಿದ ಪರಿಣಾಮ, ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಯೋಜನೆಗಳು, ವಿಮಾನ ನಿಲ್ದಾಣ, ಕಳಸವಳ್ಳಿ-ಸಿಗಂದೂರು ಸೇತುವೆ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಹಾಗೂ ಅನುದಾನ ಬಿಡುಗಡೆ ಆಗಿದೆ. ಇಡೀ ಜಿಲ್ಲೆಯನ್ನೇ ಒಂದು ಮಾದರಿ ಜಿಲ್ಲೆಯನ್ನಾಗಿಸುವ ಪ್ರಯತ್ನ ಸಂಸದ ರಾಘವೇಂದ್ರ ಅವರಿಂದ ನಡೆದಿದೆ. ಆದರೆ, ಜಿಲ್ಲೆಗೆ ಇಂದಿನ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಕೊಡುಗೆ ಏನು? ಎಂದು ಅವರು ಪ್ರಶ್ನಿಸಿದ್ದಾರೆ.
ಸಂಸದರಿಗೆ ಜಿಲ್ಲೆಯ ರೈತಾಪಿವರ್ಗ, ಕೂಲಿ ಕಾರ್ಮಿಕವರ್ಗ ಸೇರಿದಂತೆ ಹಲವಾರು ಬಡ ದೀನದಲಿತ ಕುಟುಂಬಗಳು ಒತ್ತಾಸೆಯಾಗಿ ನಿಂತಿವೆ. ಅಭಿವೃದ್ಧಿಯನ್ನೇ ತಮ್ಮ ಉಸಿರಾಗಿಕೊಂಡಿರುವ ಸಂಸದ ಬಿ.ವೈ.ರಾಘವೇಂದ್ರ ಅವರ ಕಾರ್ಯವೈಖರಿಗೆ ರಾಜಕೀಯ ಲೇಪನ ಮಾಡುವುದು ಅಷ್ಟು ಸರಿಯಲ್ಲ. ಕಾಂಗ್ರೆಸ್ ಮುಖಂಡರ ಇಂತಹ ಹೇಯ ಹೇಳಿಕೆಗಳನ್ನು ತಾವು ತೀವ್ರವಾಗಿ ಖಂಡಿಸುವುದಾಗಿ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ