ಹೊಸನಗರ ತಾಲ್ಲೂಕನ್ನು ಪ್ರವಾಸೋದ್ಯಮ ಹಬ್ ಮಾಡುವ ಚರ್ಚೆ ನಡೆದಿದೆ - ಸಂಸದ ಬಿ.ವೈ. ರಾಘವೇಂದ್ರ
ಹೊಸನಗರ : ಪಟ್ಟಣದ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿರುವ ಸುತ್ತಾ ನೂತನ ಬದಲಿ ಸೇತುವೆಯ ನಿರ್ಮಾಣ ಕಾಮಗಾರಿಯನ್ನು ಇಂದು ಪರಿಶೀಲಿಸಿದ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ, ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಆನಂತರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನೇ ಸಿಗಂದೂರು ಸೇತುವೆ ಉದ್ಘಾಟನೆಗೆ ಕರೆಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಬೈಂದೂರು- ರಾಣೆಬೆನ್ನೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಒಂದು ಸಾವಿರ ಕೋಟಿ ರೂಪಾಯಿ ಅನುದಾನದಲ್ಲಿ ಈ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಹೇಳಿದ ಅವರು, ಪಟ್ಟಣದ ಮಾವಿನಕೊಪ್ಪದಿಂದ ಆಡುಗೋಡಿವರೆಗಿನ ರಸ್ತೆಯ ಸುಮಾರು 122 ತಿರುವುಗಳನ್ನು ತೆಗೆದು ನೇರ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು. ಇದರಿಂದಾಗಿ ಈಗ ಇರುವ ಒಟ್ಟು ದೂರವಾದ 34 ಕಿಲೋ ಮೀಟರ್ ಬದಲು ಕೇವಲ 13 ಕಿಲೋ ಮೀಟರ್ ಆಗಲಿದ್ದು, ಬರೀ 15 ನಿಮಿಷದಲ್ಲಿ 13 ಕಿಲೋ ಮೀಟರ್ ಪ್ರಯಾಣಿಸಬಹುದು ಎಂದು ವಿವರಿಸಿದರು.
320 ಕೋಟಿ ರೂಪಾಯಿ ಅನುದಾನದಲ್ಲಿ ಸುತ್ತಾ ಗ್ರಾಮದ ಬಳಿ ಒಂದೂವರೆ ಕಿಲೋ ಮೀಟರ್ ಉದ್ದದ ನೂತನ ಬದಲಿ ಸೇತುವೆ ನಿರ್ಮಾಣವಾಗುತ್ತಿದ್ದರೆ, ಬೆಕ್ಕೋಡಿ ಬಳಿ ನೂತನ ಸೇತುವೆ ನಿರ್ಮಾಣಕ್ಕೆ 200 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಚಾಲ್ತಿಯಲ್ಲಿದೆ ಎಂದು ಹೇಳಿದರು. ಕೊಡಚಾದ್ರಿ- ಕೊಲ್ಲೂರು ನಡುವೆ ಕೇಬಲ್ ಕಾರ್ ಸಂಪರ್ಕಕ್ಕೆ ಚಿಂತನೆ ನಡೆದಿದೆ ಎಂದ ಅವರು, ತಾಲ್ಲೂಕಿನ ನಗರ ಕೋಟೆ, ದೇವಗಂಗೆ, ವಿವಿಧ ಜೈನ ಬಸದಿಗಳನ್ನು ಸೇರಿಸಿಕೊಂಡು ಪ್ರವಾಸೋದ್ಯಮ ಹಬ್ ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದರು. ಇದರಲ್ಲಿ ಇಕೋ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು ಎಂದು ಹೇಳಿದರು.
ಇದೇ ಮೇ 8ಕ್ಕೆ ಬೈಂದೂರಿಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ನೀಡುತ್ತಿದ್ದಾರೆ. ಅವರೊಂದಿಗೆ ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಾಗಿ ಚರ್ಚೆ ನಡೆಸಲಾಗುವುದು ಎಂದು ಕೂಡಾ ಸಂಸದರು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಸಂಸದರೊಂದಿಗೆ ಇದ್ದರು.
ಹೊಸನಗರದಲ್ಲಿ ಮನ್ ಕೀ ಬಾತ್ ವೀಕ್ಷಿಸಿದ ಬಿವೈಆರ್
ಇಲ್ಲಿನ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಇಂದು ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಿದರು. ಪ್ರಧಾನಿ ಮೋದಿ ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಸಿಕೊಡುವ ’ಮನ್ ಕೀ ಬಾತ್’ ಯಶಸ್ವಿ 121ನೇ ಕಂತಿನ ಕಾರ್ಯಕ್ರಮ ಇಂದು ಪ್ರಸಾರವಾಯಿತು.
ಕಾಮೆಂಟ್‌ಗಳಿಲ್ಲ