Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ತಾಲ್ಲೂಕು ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದರೇ ನಗರ ದುಬಾರತಟ್ಟಿಯ ಒಂದೂವರೆ ತಿಂಗಳ ಗರ್ಭಿಣಿ ಶಿಕ್ಷಕಿ?!

ಹೊಸನಗರ : ರಾಜ್ಯದೆಲ್ಲೆಡೆ ಬಾಣಂತಿಯರ ಸರಣಿ ಸಾವಿನ ಸುದ್ದಿ ಆತಂಕ ಸೃಷ್ಟಿಸಿರುವಾಗಲೇ, ಖಾಸಗಿ ಶಾಲೆಯೊಂದರ ಶಿಕ್ಷಕಿಯಾಗಿದ್ದ ಒಂದೂವರೆ ತಿಂಗಳ ಗರ್ಭಿಣಿ ನಗರದ ಅಶ್ವಿನಿ ಕೆ.ಆರ್ (29) ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ಮೃತಪಟ್ಟಿರುವುದು ಕಳವಳ ಹುಟ್ಟಿಸಿದೆ.

ತಾಲ್ಲೂಕಿನ ನಗರ ಹೋಬಳಿಯ ಮೂಡುಗೊಪ್ಪ ಗ್ರಾಮದ ದುಬಾರತಟ್ಟಿಯಲ್ಲಿ ವಾಸವಿದ್ದ ಅಶ್ವಿನಿ ಕೆ.ಆರ್ ಹೊಸನಗರದ ಅಮೃತಾನಂದ ಮಯಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಒಂದೂವರೆ ವರ್ಷದ ಹಿಂದೆ ಅರಳಿ ಪ್ರಕಾಶ್‌ ಅವರನ್ನು ಅಶ್ವಿನಿ ಮದುವೆಯಾಗಿದ್ದರು. ಅರಳಿ ಪ್ರಕಾಶ್ ಅವರು ಕೋಳಿ ಅಂಗಡಿ ಇಟ್ಟುಕೊಂಡಿದ್ದರು. ಇದೇ ಜನವರಿ 24 ರಂದು ಅಶ್ವಿನಿ ಅವರಿಗೆ ತಾವು ಗರ್ಭಿಣಿಯಾಗಿರುವ ವಿಷಯ ತಿಳಿದು, ಈ ಸಂತಸವನ್ನು ಅಂದೇ ತಮ್ಮ ತವರು ಮನೆಯವರೊಂದಿಗೆ ಹಂಚಿಕೊಂಡಿದ್ದರು. ಆದರೆ ಈ ಸಂತಸ ಹೆಚ್ಚು ಸಮಯ ಅಶ್ವಿನಿ ದಂಪತಿಗಳದ್ದಾಗಿ ಉಳಿಯಲಿಲ್ಲ. ಜನವರಿ 26 ರಂದು ರಕ್ತಸ್ರಾವವಾಗಿದ್ದರಿಂದ ಪತಿ ಪ್ರಕಾಶ್ ಮತ್ತು ಕುಟುಂಬದವರು ಕೂಡಲೇ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಮಾರನೇಯ ದಿನ ಬೆಳಿಗ್ಗೆ ಅಶ್ವಿನಿ ತವರು ಮನೆಯವರೊಂದಿಗೆ ಮಾತನಾಡಿದ್ದರು. ಆರೋಗ್ಯಗೊಂಡಂತಿದ್ದ ಅಶ್ವಿನಿ ಅವರಿಗೆ ಸಂಜೆ ರಕ್ತಸ್ರಾವ ಹೆಚ್ಚಾಗಿದ್ದರಿಂದ ಅವರನ್ನು ಸಾಗರದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಖಾಸಗಿ ಆಸ್ಪತ್ರೆಗೆ ಕರೆತರುವಾಗಲೇ ಅಶ್ವಿನಿ ಮೃತಪಟ್ಟಿದ್ದಾರೆ. ಮೃತಪಟ್ಟ ಅಶ್ವಿನಿ ಅವರ ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.

ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದೊರಕದ ಸೂಕ್ತ ಚಿಕಿತ್ಸೆ : ತಾಲ್ಲೂಕು ಆಸ್ಪತ್ರೆಯಲ್ಲಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕದೇ ಇರುವುದರಿಂದಲೇ ಅಶ್ವಿನಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು, ಗರ್ಭಿಣಿಯ ರಕ್ತಸ್ರಾವವನ್ನು ತಡೆಗಟ್ಟುವಂತಹ ಯಾವುದೇ ಚಿಕಿತ್ಸಾ ಸೌಲಭ್ಯ ಸಾಗರದ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಇರಲಿಲ್ಲ. ಅಶ್ವಿನಿಯ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ನಂತರವೇ ಶಿವಮೊಗ್ಗದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ ಎನ್ನುತ್ತಿದ್ದಾರೆ. ಗರ್ಭಿಣಿ ಮಹಿಳೆಯ ರಕ್ತಸ್ರಾವ ತಡೆಗಟ್ಟುವ ಸೌಲಭ್ಯ ಇಲ್ಲದೇ ಹೋಗಿದ್ದರೆ ಸಾಗರ ಸರ್ಕಾರಿ ಆಸ್ಪತ್ರೆಯ ವೈದ್ಯರು ಮೊದಲೇ ಇರುವ ಸಂಗತಿಯನ್ನು ತಿಳಿಸಿ, ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದರೆ ಅಶ್ವಿನಿ ಬದುಕುವ ಸಾಧ್ಯತೆಗಳಿದ್ದವಾ? ಖಂಡಿತ ಆ ಸಾಧ್ಯತೆಗಳಿದ್ದವು. ಆದರೆ ಸೌಲಭ್ಯವೂ ಇರಲಿಲ್ಲ, ವೈದ್ಯರೂ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೇ ಇರುವುದೇ ಅಶ್ವಿನಿಯ ಸಾವಿಗೆ ಕಾರಣವಾಗಿದೆ ಎನ್ನುವ ಸಂಗತಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಜೀವ ಉಳಿಸುವಂತಹ ಯಾವುದೇ ಸೌಲಭ್ಯ ಆ ಆಸ್ಪತ್ರೆಯಲ್ಲಿ ಇರಲಿಲ್ಲ. ಆದ್ದರಿಂದ ಶಿವಮೊಗ್ಗದ ಆಸ್ಪತ್ರೆಗೆ ಅಶ್ವಿನಿಯನ್ನು ಕರೆತರುವ ಮಾರ್ಗ ಮಧ್ಯೆಯೇ ಪ್ರಾಣ ಹೋಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

CLICK ಮಾಡಿ - ಆಕಾಶದಲ್ಲಿ ತೆರೆದುಕೊಳ್ಳದ ಪ್ಯಾರಾಚೂಟ್‌ - ಸಂಕೂರಿನ ಭಾರತೀಯ ವಾಯುಪಡೆ ಯೋಧ ಮಂಜುನಾಥ್‌ ವಿಧಿವಶ - ಶೋಕದಲ್ಲಿ ಸಂಕೂರು

ಹೊಸನಗರ ಸರ್ಕಾರಿ ಆಸ್ಪತ್ರೆಯ ಕಥೆ ಇದಕ್ಕಿಂತ ಬೇರೆಯೇನಲ್ಲ : ಅಶ್ವಿನಿ ಅವರ ಸಾವಿಗೆ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲದ ಸೌಲಭ್ಯ ಕಾರಣ ಎನ್ನುವುದು ನಿಜ. ಆದರೆ ಹೊಸನಗರ ತಾಲ್ಲೂಕು ವ್ಯಾಪ್ತಿಗೆ ಸೇರಿದ ನಗರ ಹೋಬಳಿ ದುಬಾರತಟ್ಟಿಯ ಅಶ್ವಿನಿ ಅವರನ್ನು ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರೆ ತಾರದೇ, ಸಾಗರ ಆಸ್ಪತ್ರೆಗೆ ಅವರ ಕುಟುಂಬದವರು ಕರೆದುಕೊಂಡು ಹೋಗಿರುವುದು ಹೊಸನಗರ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯ ಕಥೆಯೇನು ಎನ್ನುವುದನ್ನು ಹೇಳುತ್ತಿದೆ. ’ನ್ಯೂಸ್ ಪೋಸ್ಟ್‌ಮಾರ್ಟಮ್‌’ ಈ ಮೊದಲಿನಿಂದಲೂ ಹೇಳುತ್ತಾ ಬಂದಂತೆ, ಹೊಸನಗರದ ಸರ್ಕಾರಿ ಆಸ್ಪತ್ರೆ ಎನ್ನುವುದು ಅವ್ಯವಸ್ಥೆಯ ಆಗರವಾಗಿದೆ! ನಿಜ, ಹೊಸನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನುರಿತ ವೈದ್ಯರಿಲ್ಲ, ಸದಾ ಔಷದಿಗಳ ಕೊರತೆ, ಸೂಕ್ತ ಚಿಕಿತ್ಸೆ ನೀಡದ ವೈದ್ಯರು,  ಕುಡಿದು ಸ್ಟೇರಿಂಗ್ ಹಿಡಿಯುವ ಅಂಬುಲೆನ್ಸ್ ಚಾಲಕರು... ಹೀಗೆ ಹೊಸನಗರದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ನೋಡಿದರೆ, ಇಲ್ಲಿ ಕಾಯಿಲೆ ಎಂದು ಹೋದವರಿಗೆ ಸೂಕ್ತ ಚಿಕಿತ್ಸೆ ದೊರಕುವುದು ಸಾಧ್ಯವೇ ಇಲ್ಲ ಎನ್ನುವುದು ತಾಲ್ಲೂಕಿನ ಜನರಿಗೆ ಖಾತ್ರಿಯಾಗಿಬಿಟ್ಟಿದೆ. ಆದ್ದರಿಂದಲೇ ಅಶ್ವಿನಿ ಗಂಡ ಮತ್ತು ಕುಟುಂಬದವರು ಅವರನ್ನು ಸಾಗರದ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವಂತಿದೆ. ದುರಂತವೆಂದರೆ, ಸಾಗರದ ಸರ್ಕಾರಿ ಆಸ್ಪತ್ರೆಯ ಕಥೆಯೂ ಇದೇ. ಆದ್ದರಿಂದಲೇ ತನ್ನ ತಪ್ಪಿಲ್ಲದೇ ಇದ್ದರೂ ಸೌಲಭ್ಯವಿಲ್ಲದ ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯರಿಂದಾಗಿ ಅಶ್ವಿನಿ ಜೀವ ಕಳೆದುಕೊಳ್ಳುವಂತಾಗಿದೆ. ಇಂತಹ ದುರಂತವನ್ನು ನೋಡಿಯೇ ಶಿವಮೊಗ್ಗ ಜಿಲ್ಲಾ ಕೇಂದ್ರ ಹೊರತುಪಡಿಸಿ ಜಿಲ್ಲೆಯ ಯಾವುದೇ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ನಗರ ಹೋಬಳಿಯ ಜನರು ಬೇಸರ ವ್ಯಕ್ತಪಡಿಸುತ್ತಾರೆ.

ಒಂದಂತೂ ನಿಜ, ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆತಿದ್ದರೆ ಮತ್ತು ಅಲ್ಲಿನ ವೈದ್ಯರು ತಮ್ಮಲ್ಲಿ ಚಿಕಿತ್ಸೆಗೆ ಬರುವ ಜನರ ಜೀವದ ಬಗ್ಗೆ ಕಾಳಜಿ ವಹಿಸಿದ್ದರೆ ಖಂಡಿತ ಬದುಕಿನ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ ಅಶ್ವಿನಿಯ ಬದುಕು ಹೀಗೆ ಕೊನೆಯಾಗುತ್ತಿರಲಿಲ್ಲ. ಯಾಕೆಂದರೆ, ಸಾಗರದ ಸರ್ಕಾರಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ಅಶ್ವಿನಿ ಮಾರನೇಯ ದಿನ ಬೆಳಿಗ್ಗೆ ಆರಾಮಾಗಿಯೇ ಇದ್ದರು. ಆದರೆ ಸಂಜೆ ಮತ್ತೆ ರಕ್ತಸ್ರಾವ ಆರಂಭವಾಗಿದೆ, ಆಗಲೂ ತುರ್ತಾಗಿ ಸ್ಪಂದಿಸದ ವೈದ್ಯರು ಕೊನೇಕ್ಷಣದಲ್ಲಿ ಕೈ ಚೆಲ್ಲಿದ್ದಾರೆ. ಇದರಿಂದಲೇ ಅಶ್ವಿನಿ ಬದುಕು ಕೊನೆಯಾಗುವಂತಾಯಿತು ಎನ್ನುವುದೇ ಸಾಗರ ಮತ್ತು ಹೊಸನಗರ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಗೆ ಕನ್ನಡಿ ಹಿಡಿಯುತ್ತಿದೆ.

ಕಾಮೆಂಟ್‌ಗಳಿಲ್ಲ