ಆಕಾಶದಲ್ಲಿ ತೆರೆದುಕೊಳ್ಳದ ಪ್ಯಾರಾಚೂಟ್ - ಸಂಕೂರಿನ ಭಾರತೀಯ ವಾಯುಪಡೆ ಯೋಧ ಮಂಜುನಾಥ್ ವಿಧಿವಶ - ಶೋಕದಲ್ಲಿ ಸಂಕೂರು
ಹೊಸನಗರ : ತಾಲ್ಲೂಕಿನ ಜೇನಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ಸಂಕೂರು ಸಮೀಪದ ಗೋರನಗದ್ದೆಯ ಭಾರತೀಯ ವಾಯುಪಡೆಯ ಯೋಧ ಮಂಜುನಾಥ ಜಿ.ಎಸ್ (36) ಸ್ಕೈ ಡೈವಿಂಗ್ ವೇಳೆಯಲ್ಲಿ ಪ್ಯಾರಾಚೂಟ್ ನಿಷ್ಕ್ರಿಯವಾಗಿ ಸಾವನ್ನಪ್ಪಿರುವ ದುರಂತ ನಡೆದಿದೆ.
ಭಾರತೀಯ ವಾಯುಸೇನೆಯಲ್ಲಿ ಪ್ಯಾರಾ ಜಂಪ್ ಜ್ಯೂನಿಯರ್ ವಾರೆಂಟ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಉತ್ತರ ಪ್ರದೇಶ ಆಗ್ರಾದ ವಾಯುಸೇನೆಯ ಪಿಟಿಎಸ್ ತರಬೇತಿ ಕೇಂದ್ರದಲ್ಲಿ ನಿನ್ನೆ ತರಬೇತಿ ನೀಡುವಾಗ, ಅವರ ಪ್ಯಾರಾಚೂಟ್ ತೆರೆದುಕೊಳ್ಳದೆ ನಿಷ್ಕ್ರಿಯವಾಗಿ 13 ಸಾವಿರ ಅಡಿ ಮೇಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ನಿನ್ನೆ ಬೆಳಗಿನ ಜಾವ ಸರಿ ಸುಮಾರು 7 ರಿಂದ 8 ಗಂಟೆ ಸಮಯದಲ್ಲಿ ಮಂಜುನಾಥ್ ಅವರನ್ನು ಒಳಗೊಂಡಂತೆ ಸುಮಾರು 12 ಜನರ ತಂಡಕ್ಕೆ ಕಾರ್ಗೋ ಮಾದರಿ ವಿಮಾನದಿಂದ ಪ್ಯಾರಾ ಜಂಪ್ ತರಬೇತಿ ನೀಡುವ ಸಮಯದಲ್ಲಿ ಈ ಅವಘಡ ಸಂಭವಿಸಿದೆ. 18 ಸಾವಿರ ಅಡಿ ಎತ್ತರದಿಂದ ಎಲ್ಲಾ ಹನ್ನೊಂದು ಶಿಬಿರಾರ್ಥಿಗಳು ಸುರಕ್ಷಿತವಾಗಿ ಜಂಪ್ ಮಾಡಿದ್ದು, ಕೊನೆಯವರಾಗಿ ಮಂಜುನಾಥ್ ವಿಮಾನದಿಂದ ಜಿಗಿದಿದ್ದರು. ಆದರೆ ಸರಿಯಾದ ಸಮಯಕ್ಕೆ ಮಂಜುನಾಥ್ ಅವರ ಪ್ಯಾರಾಚೂಟ್ ತೆರೆದುಕೊಳ್ಳದ ಪರಿಣಾಮ ಮಂಜುನಾಥ್ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಮಧ್ಯಾಹ್ನ 2.30 ರ ಸುಮಾರಿಗೆ ಡ್ರಾಫಿಂಗ್ ಝೋನ್ ಮಲ್ಪುರ ಬಳಿ ಮಂಜುನಾಥ್ ಮೃತದೇಹ ಪತ್ತೆಯಾಗಿದೆ.
ಮೂಲತಃ ಸಂಕೂರಿನ ಕೃಷಿ ಕುಟುಂಬಕ್ಕೆ ಸೇರಿದ ಮಂಜುನಾಥ್ ಸಾಗರದಲ್ಲಿ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿ ಆನಂತರ ಭಾರತೀಯ ವಾಯುಸೇನೆಗೆ ಸೇರಿದ್ದರು. ತಂದೆ ಜಿ.ಎಂ. ಸುರೇಶ್ ಕೃಷಿಕರು. ತಾಯಿ ನಾಗರತ್ನ, ಇಬ್ಬರು ಸಹೋದರಿಯರು, ಒಬ್ಬ ಸಹೋದರನಿದ್ದು ಮಂಜುನಾಥ್ 2019 ರಲ್ಲಿ ಅಸ್ಸಾಂ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ವಾಯುಸೇನೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ್ ಜಮ್ಮು ಕಾಶ್ಮೀರ, ಅಸ್ಸಾಂ, ಗಾಜಿಯಾಬಾದ್ ಮತ್ತು ದೆಹಲಿಯಲ್ಲಿ ಸೇವೆ ಸಲ್ಲಿಸಿದ ಬಳಿಕ, ಕಳೆದ ಒಂದೂವರೆ ತಿಂಗಳಿನಿಂದ ಉತ್ತರ ಪ್ರದೇಶದ ಆಗ್ರಾದಲ್ಲಿ ಸೇವೆ ಆರಂಭಿಸಿದ್ದರು.
CLICK ಮಾಡಿ - ನಗರ ಅರಣ್ಯ ವಲಯದಲ್ಲಿ ಕಾಡುಕೋಣ ಅಕ್ರಮ ಬೇಟೆ - ಮೂವರು ಆರೋಪಿಗಳ ಬಂಧನ - ಇಬ್ಬರು ನಾಪತ್ತೆ
ಶೋಕ ಸಾಗರದಲ್ಲಿ ಸಂಕೂರು : ವಿಷಯ ತಿಳಿಯುತ್ತಿದ್ದಂತೆ ಮೃತ ಮಂಜುನಾಥ್ ಅವರ ಸಂಕೂರು ಗ್ರಾಮದಲ್ಲಿ ತೀವ್ರ ಶೋಕ ಮನೆ ಮಾಡಿದ್ದು, ಸಂಬಂಧಿಕರು, ಹಿತೈಷಿಗಳು ಮನೆ ಬಳಿ ನೆರೆದು ಕುಟುಂಬಸ್ಥರನ್ನು ಸಂತೈಸುತ್ತಿದ್ದಾರೆ.
ನಾಳೆ ಅಂದರೆ 9ನೇ ತಾರೀಖಿನ ಭಾನುವಾರ ಬೆಳಿಗ್ಗೆ ಯೋಧ ಮಂಜುನಾಥ್ ಅವರ ಮೃತದೇಹ ಪಟ್ಟಣ ತಲುಪುವ ನಿರೀಕ್ಷೆಯಿದ್ದು, ತಾಲ್ಲೂಕು ಆಡಳಿತ ಸಕಲ ಸರ್ಕಾರಿ ಗೌರವ ನೀಡಲು ಸಜ್ಜಾಗಿದೆ. ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಶಾಸಕ ಗೋಪಾಲಕೃಷ್ಣ ಸಮ್ಮುಖದಲ್ಲಿ ತಹಶೀಲ್ದಾರ್ ರಶ್ಮಿ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವ ನೀಡಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಮೆಂಟ್‌ಗಳಿಲ್ಲ