ಹೊಸನಗರ ಪಟ್ಟಣ ಪಂಚಾಯಿತಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಿವಿಧ ಪರಿಕರ ವಿತರಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು
ಹೊಸನಗರ : ಸರ್ಕಾರದ ಪೌರಾಡಳಿತ ಇಲಾಖೆಯ ಎಸ್‌ಎಫ್‌ಸಿ ಅನುದಾನದಡಿ ಅರ್ಹ ಫಲಾನುಭವಿಗಳಿಗೆ ಜೀವನೋಪಯುಕ್ತ ವಿವಿಧ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಲು ಸ್ಥಳೀಯ ಆಡಳಿತ ಸಹಕಾರ ನೀಡಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಪಟ್ಟಣ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದ ಅರ್ಹ ಫಲಾನುಭವಿಗಳಿಗೆ ಹೊಲಿಗೆಯಂತ್ರ, ಫೈಬರ್ ಸಿಂಟೆಕ್ಸ್ ವಾಟರ್ ಟ್ಯಾಂಕ್, ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಿ ಅವರು ಮಾತನಾಡುತ್ತಿದ್ದರು.
ಜನಸಾಮಾನ್ಯರು ಸಮಾಜಮುಖಿ ಬದುಕು ಕಟ್ಟಿಕೊಳ್ಳಲು ಜನಸ್ನೇಹಿ ನಿಲುವುಗಳ ಮೂಲಕ ವಿವಿಧ ಜನಪರ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ದೀನದಲಿತ, ಹಿಂದುಳಿದ ಕುಟುಂಬಗಳ ಆರ್ಥಿಕ ಸಬಲೀಕರಣ ಸರ್ಕಾರದ ಮುಖ್ಯ ಗುರಿಯಾಗಿದೆ. ಫಲಾನುಭವಿಗಳು ತಮಗೆ ವಿತರಿಸಿದ ಸಾಮಾಗ್ರಿಗಳ ಸದ್ಬಳಕೆಗೆ ಮುಂದಾಗಿ, ಸಮಾಜಮುಖಿ ಚಿಂತನೆಗಳ ಮೂಲಕ ಕುಟುಂಬದ ಆರ್ಥಿಕ ಸಬಲತೆಗೆ ಮಹತ್ವ ನೀಡಬೇಕೆಂದರು.
2025ರ ರಾಜ್ಯ ಬಜೆಟ್ ಅಭಿವೃದ್ದಿ ಪೂರಕ : ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಮತದಾರರಿಗೆ ನೀಡಿದ್ದ ಭರವಸೆಯಂತೆ ರೂ 54 ಸಾವಿರ ಕೋಟಿ ಅನುದಾನದಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಆದರೂ, ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ಕಂಡಿಲ್ಲ. ಇದರ ಜೊತೆಗೆ ಮುಂಬರುವ 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ರೂ 4 ಲಕ್ಷದ 20 ಸಾವಿರ ಕೋಟಿ ಅನುದಾನ ಮೀಸಲಿಡಲು ಸರ್ಕಾರ ತೀರ್ಮಾನಿಸಿದೆ. ಮುಂಬರುವ ರಾಜ್ಯ ಬಜೆಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಾಗಿದ್ದು, ರಾಜ್ಯದ ಅಭಿವೃದ್ಧಿಗಾಗಿಯೇ ಈ ಬಾರಿ ಒಂದು ಲಕ್ಷದ ಎಪ್ಪತ್ತು ಸಾವಿರ ಕೋಟಿ ಅನುದಾನ ಮೀಸಲಿಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮೀಣ ವಸತಿ ಹಂಚಿಕೆಗೆ ಬದ್ಧ : ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 60 ಆಶ್ರಯ ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಈ ಕುರಿತು ಈಗಾಗಲೇ ವಸತಿ ಸಚಿವ ಜಮೀರ್ ಅಹಮ್ಮದ್ ಕಾರ್ಯೋನ್ಮುಖರಾಗಿದ್ದಾರೆ. ಬಜೆಟ್ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಲೈಸನ್ಸ್ ಹೊಂದಿರುವ ತಾಲ್ಲೂಕಿನ ಮೀನುಗಾರರಿಗೆ ಉಕ್ಕಡ, ಬಲೆ, ಲೈಫ್ ಜಾಕೆಟ್ ವಿತರಿಸಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗಪ್ಪ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದ ಕಾರ್ಯಕ್ರಮದಲ್ಲಿ, ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ಗುರುರಾಜ್ ಬಜಾಜ್, ಅಶ್ವಿನಿಕುಮಾರ್, ಗುಲಾಬಿ, ಶಾಹಿನಾ, ಆಶ್ರಯ ಸಮಿತಿ ಸದಸ್ಯೆ ರಾಧಿಕ, ತಾಲ್ಲೂಕು ಪಂಚಾಯಿತಿ ಇಓ ನರೇಂದ್ರ ಕುಮಾರ್, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಕುಮಾರ್, ಸಾಗರದ ಸಹಾಯಕ ನಿರ್ದೇಶಕ ಪ್ರಶಾಂತ್ ವರ್ಣೇಕರ್, ಮೇಲ್ವಿಚಾರಕಿ ಬಸವ್ವ ಮುಲ್ಕಿಗೌಡರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹರೀಶ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ