Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ - ನೂತನ ಕಚೇರಿ ಕಟ್ಟಡವನ್ನು ಹಳೇ ಗೀತಾ ಟಾಕೀಸ್ ಸ್ಥಳದಲ್ಲೇ ನಿರ್ಮಿಸಿ : ಸದಸ್ಯ ಅಶ್ವಿನಿ ಕುಮಾರ್ ಆಗ್ರಹ

ಹೊಸನಗರ : ಸಭಾ ನಡಾವಳಿಗಳನ್ನು ಸಭೆ ಮುಗಿದ ಬಳಿಕ ಸ್ಥಳದಲ್ಲೇ ದಾಖಲು ಮಾಡಿ ಸದಸ್ಯರಿಂದ ಕಡತಕ್ಕೆ ಸಹಿ ಪಡೆಯಬೇಕು. ಇದರಿಂದ ಹೆಚ್ಚುವರಿ ನಡಾವಳಿಗಳ ಅಕ್ರಮ ದಾಖಲು ತಡೆಯಲು ಸಹಕಾರಿ ಆಗಲಿದೆ ಎಂದು ಸದಸ್ಯ ಕೆ.ಕೆ. ಅಶ್ವಿನಿಕುಮಾರ್ ಸಭೆಯ ಗಮನ ಸೆಳೆದರು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷ ನಾಗಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರದ ಯಾವುದೇ ಆದೇಶ, ಸುತ್ತೋಲೆಗಳನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತರಬೇಕು ಎಂದು ಎಚ್ಚರಿಸಿದ ಅವರು, ಸರ್ಕಾರಿ ಸುತ್ತೋಲೆಗಳನ್ನು ಚುನಾಯಿತಿ ಸದಸ್ಯರಿಂದ ಮರೆಮಾಚುವ ಸಿಬ್ಬಂದಿಗಳ ಆಟಾಟೋಪಕ್ಕೆ ಬ್ರೇಕ್ ಹಾಕುವಂತೆ ಸಭೆಯನ್ನು ಆಗ್ರಹಿಸಿದರು.

ಪಟ್ಟಣ ಪಂಚಾಯಿತಿ ನೂತನ ಕಚೇರಿ ಕಟ್ಟಡವನ್ನು ಹಳೇ ಗೀತಾ ಚಿತ್ರಮಂದಿರದ ಸ್ಥಳದಲ್ಲೇ ನಿರ್ಮಿಸಬೇಕು ಎಂದು ಪಟ್ಟು ಹಿಡಿದು, ಹಾಲಿ ಕಟ್ಟಡವನ್ನು ಪಾರಂಪರಿಕ ಕಟ್ಟಡದಂತೆ ಉಳಿಸಿಕೊಂಡು, ಬಸ್ ನಿಲ್ದಾಣಕ್ಕೆ ಹತ್ತಿರವಾದ ಹಿನ್ನಲೆಯಲ್ಲಿ ಅಗತ್ಯ ಬಿದ್ದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯ್ತಿಗೆ ಹೆಚ್ಚು ಆದಾಯ ತರುವ ಸುಂದರ ವಾಣಿಜ್ಯ ಕಟ್ಟಡ ನಿರ್ಮಿಸುವಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಸ್ ನಿಲ್ದಾಣದಲ್ಲಿರುವ ಹರಾಜು ಮಾಡಲಾದ 2, 11, 18 ಹಾಗು ಸಂಖ್ಯೆ 20ರ ಮಳಿಗೆಗಳನ್ನು ಟೆಂಡರ್‌ದಾರರು ಈವರೆಗೂ ಅಗ್ರಿಮೆಂಟ್‌ಗೆ ಮುಂದಾಗದ ಹಿನ್ನೆಲೆಯಲ್ಲಿ ಶೀಘ್ರವಾಗಿ ಮತ್ತೊಮ್ಮೆ ಆ ಮಳಿಗೆಗಳ ಮರು ಹರಾಜಿಗೆ ಸಭೆ ತೀರ್ಮಾನಿಸಿತು. ಈ ಕುರಿತು ಬಿಡ್‌ದಾರರಿಗೆ ಪಂಚಾಯಿತಿ ನೋಟಿಸ್ ನೀಡಿದ್ದು, ಸೂಕ್ತ ಉತ್ತರ ಬಾರದ ಹಿನ್ನೆಲೆಯಲ್ಲಿ ವಕೀಲರ ಮೂಲಕ ನೋಟಿಸ್ ನೀಡಲು ಹಾಗೂ ಮರು ಟೆಂಡರ್ ವೇಳೆ ಸರ್ಕಾರ ನಿಗದಿ ಪಡಿಸಿದ ಟೆಂಡರಿನ ಮೂರು ಪಟ್ಟು ಹೆಚ್ಚುವರಿ ಇಎಂಡಿ ಸಂಗ್ರಹಿಸುವಂತೆ ಹಾಗೂ ಪ್ರಸಕ್ತ ಇಎಂಡಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸಭೆ ನಿರ್ಣಯಿಸಿತು.

ವಿದ್ಯುತ್ ಕಣ್ಣುಮುಚ್ಚಾಲೆ ಕಾರಣ ಕುಡಿಯುವ ನೀರು ಸರಬರಾಜಿನಲ್ಲಿ ಭಾರೀ ವ್ಯತ್ಯಯ ಕಂಡುಬಂದಿದೆ. ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜನಪ್ರತಿನಿಧಿಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಈ ಕುರಿತು ಮೆಸ್ಕಾಂ ಸಿಬ್ಬಂದಿಗಳಿಂದ ಅಗತ್ಯ ಕ್ರಮಕ್ಕೆ ಮುಂದಾಗಬೇಕು. ಬೇಸಿಗೆ, ಮಾರಿಜಾತ್ರೆ ಸಮೀಪದಲ್ಲಿರುವ ಹಿನ್ನಲೆಯಲ್ಲಿ ಶೀಘ್ರ ಬದಲಿ ವ್ಯವಸ್ಥೆಗೆ ಮುಂದಾಗುವಂತೆ ಮೆಸ್ಕಾಂ ಇಲಾಖೆ ಗಮನ ಸೆಳೆಯುವಂತೆ ಸದಸ್ಯೆ ಕೃಷ್ಣವೇಣಿ ಸಭೆಯನ್ನು ಆಗ್ರಹಿಸಿದರು.

CLICK ಮಾಡಿ - ಹೊಸನಗರ ತಾಲ್ಲೂಕು ಕಸಾಪದಿಂದ ಶ್ರೀಮತಿ ದಾನಮ್ಮ ಶ್ರೀ ಬೊಮ್ಮನಾಯಕರು ಹಾಗೂ ಶ್ರೀಮತಿ ಸುಬ್ಬಲಕ್ಷ್ಮಮ್ಮ ಮತ್ತು ಶ್ರೀ ಸೀನಪ್ಪ ಶ್ರೇಷ್ಠಿ ದತ್ತಿ ನಿಧಿ ಕಾರ್ಯಕ್ರಮ

ಆರೋಗ್ಯ ನಿರೀಕ್ಷಕಿ ಶೃತಿ ಪಂಚಾಯಿತಿ ವ್ಯಾಪ್ತಿಯ ಕಳೆದ ನಾಲ್ಕು ತಿಂಗಳ ಜನನ/ಮರಣ ವರದಿ ದಾಖಲಿಸಿದರು. ಮಾವಿನಕೊಪ್ಪ ಸರ್ಕಾರಿ ಶಾಲೆಯ ಶಿಥಿಲಾವಸ್ಥೆಯ ಹಳೇ ಶೌಚಾಲಯ ಕಟ್ಟಡ ತೆರವಿಗೆ, ಮುಕ್ತಿ ವಾಹಿನಿ ವಾಹನ ದುರಸ್ತಿ, ಘನತ್ಯಾಜ್ಯ ಸರಬರಾಜು ವಾಹನಗಳ ರಿಪೇರಿ ಬಿಲ್ ಪಾವತಿಗೆ, ಪಂಚಾಯ್ತಿ ವ್ಯಾಪ್ತಿಯ ಕಾಮಗಾರಿಗಳ ಬಳಕೆಗೆ ಜೆಸಿಬಿ, ಹಿಟಾಜಿ ಯಂತ್ರಗಳ ಬಾಡಿಗೆ ನಿಗದಿ ಪಡಿಸಿ ಸಭೆ ಅನುಮೋದನೆ ನೀಡಿತು.

ಸಭೆಯಲ್ಲಿ ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ಸುರೇಂದ್ರ ಕೋಟ್ಯಾನ್, ಗುರುರಾಜ್ ಬಜಾಜ್, ಶಹಿನಾ, ಸಿಂಥಿಯಾ ಶೆರಾವೋ, ಗುಲಾಬಿ, ಗಾಯತ್ರಿ, ನಾಮ ನಿರ್ದೇಶನ ಸದಸ್ಯರಾದ ಹೆಚ್.ಎಂ. ನಿತ್ಯಾನಂದ, ನೇತ್ರಾವತಿ ಭಟ್, ಮುಖ್ಯಾಧಿಕಾರಿ ಎಂ.ಕೆ. ಸುರೇಶ್, ಸಿಬ್ಬಂದಿಗಳಾದ ಕಂದಾಯ ನಿರೀಕ್ಷಕ ಮಂಜುನಾಥ್, ಬಸವರಾಜ್, ಪರಶುರಾಮ್, ಆಸ್ಮಬಾನು, ಗಿರೀಶ್, ಉಮಾಶಂಕರ್, ನೇತ್ರಾವತಿ ರಾಜ್ ಮೊದಲಾದವರು ಇದ್ದರು.

ಕಾಮೆಂಟ್‌ಗಳಿಲ್ಲ