ಹೆದ್ದಾರಿಪುರದ ಸಿಂಧು ಕೆ.ಟಿ ಗೆ ಪತ್ರಿಕೋದ್ಯಮ ಎಂ.ಎಯಲ್ಲಿ ಮೂರು ಚಿನ್ನದ ಪದಕದೊಂದಿಗೆ ಪ್ರಥಮ ರ‍್ಯಾಂಕ್ - ಕುವೆಂಪು ವಿ.ವಿ ಘಟಿಕೋತ್ಸವದಲ್ಲಿ ಪದಕ ಪ್ರದಾನ ಮಾಡಿದ ರಾಜ್ಯಪಾಲರು
ಹೊಸನಗರ : ತಾಲ್ಲೂಕಿನ ಹೆದ್ದಾರಿಪುರದ ಸಿಂಧು ಕೆ.ಟಿ ಕುವೆಂಪು ವಿಶ್ವವಿದ್ಯಾನಿಲಯದ ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್‌ನೊಂದಿಗೆ ಮೂರು ಚಿನ್ನದ ಪದಕ ಪಡೆಯುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.
ಹೆದ್ದಾರಿಪುರ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ತಾಯಿ ದೇವಮ್ಮ ಮತ್ತು ತಿಮ್ಮಪ್ಪ ಗೌಡ ಅವರ ಪುತ್ರಿಯಾದ ಸಿಂಧು ಕೆ.ಟಿ ಅವರು, ಹೆದ್ದಾರಿಪುರದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದು, ಗರ್ತಿಕೆರೆ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪಡೆದರು. ಆನಂತರ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಪ್ರಸ್ತುತ ಕನ್ನಡದ ಪ್ರತಿಷ್ಠಿತ ದಿನಪತ್ರಿಕೆಯಾದ ’ಪ್ರಜಾವಾಣಿ’ಯಲ್ಲಿ ಪತ್ರಕರ್ತೆಯಾಗಿ ವೃತ್ತಿ ಜೀವನ ಆರಂಭಿಸಿದ್ದಾರೆ.
ಕುವೆಂಪು ವಿಶ್ವವಿದ್ಯಾನಿಲಯದ 34ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಇತ್ತೀಚೆಗೆ ಸಿಂಧು ಕೆ.ಟಿ ಅವರಿಗೆ ಅವರಿಗೆ ಬಂಗಾರದ ಪದಕದೊಂದಿಗೆ ಪ್ರಮಾಣ ಪತ್ರ ವಿತರಿಸಿದರು. ಸಿಂಧು ಅವರ ಈ ಸಾಧನೆಗೆ ಹೆದ್ದಾರಿಪುರ ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳಿಲ್ಲ