ಆಂಗ್ಲ ಭಾಷಾ ಎಂ.ಎಯಲ್ಲಿ ಯೋಷಿತಾ ಎಸ್. ಸೊನಲೆ ಪ್ರಥಮ ರ‍್ಯಾಂಕ್ - ಕುವೆಂಪು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಮೂರು ಚಿನ್ನದ ಪದಕ ಪ್ರದಾನ
ಹೊಸನಗರ : ತಾಲ್ಲೂಕಿನ ಸೊನಲೆಯ ಯೋಷಿತಾ ಎಸ್.ಸೊನಲೆ ಕುವೆಂಪು ವಿಶ್ವವಿದ್ಯಾನಿಲಯದ ಆಂಗ್ಲ ಭಾಷಾ ಎಂ.ಎ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದು, ಮೂರು ಚಿನ್ನದ ಪದಕ ಪಡೆಯುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದ 34ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಯೋಷಿತಾ ಅವರಿಗೆ ಬಂಗಾರದ ಪದಕ ಮತ್ತು ನಗದು ಬಹುಮಾನವನ್ನು ವಿತರಿಸಿದರು.
ಯೋಷಿತಾ. ಎಸ್. ಸೊನಲೆಯವರು ಹೊಸನಗರದ ಕುವೆಂಪು ವಿದ್ಯಾಸಂಸ್ಥೆಯ ಅಧ್ಯಕ್ಷರು, ನಗರಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರೂ ಆದ ಸೊನಲೆ ಶ್ರೀನಿವಾಸ್ ಮತ್ತು ವೇದಾ ಶ್ರೀನಿವಾಸ್‌ರವರ ಪ್ರಥಮ ಪುತ್ರಿ. ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹೊಸನಗರದ ಕುವೆಂಪು ವಿದ್ಯಾಸಂಸ್ಥೆಯಲ್ಲಿ, ಪದವಿ ಪೂರ್ವ ವಿದ್ಯಾಭ್ಯಾಸವನ್ನು ನಗರದ ನಗರ ಪದವಿಪೂರ್ವ ಕಾಲೇಜಿನಲ್ಲಿ ಹಾಗೂ ಪದವಿಯನ್ನು ಶಿವಮೊಗ್ಗದ ಕಮಲಾ ನೆಹರು ಕಾಲೇಜಿನಲ್ಲಿ ಪ್ರಥಮ ರ‍್ಯಾಂಕಿನೊಂದಿಗೆ ಪೂರ್ಣಗೊಳಿಸಿದ್ದು, ಪ್ರಸ್ತುತ ಶಿವಮೊಗ್ಗದ ಶ್ರೀ ಅಶೋಕ್ ಪೈ ಪದವಿ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಯೋಷಿತಾ ಅವರನ್ನು ಕುವೆಂಪು ವಿದ್ಯಾಶಾಲೆ, ನಗರ ಪದವಿಪೂರ್ವ ಕಾಲೇಜು, ಕಮಲಾ ನೆಹರು ಕಾಲೇಜು ಮತ್ತು ಅಶೋಕ್ ಪೈ ಕಾಲೇಜಿನ ಪ್ರಾಚಾರ್ಯರು, ಶಿಕ್ಷಕರು ಮತ್ತು ಹಿತೈಷಿಗಳು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳಿಲ್ಲ