ವರಕೋಡಿನಲ್ಲಿ ಮನೆ ಹಿಂಬಾಗಿಲು ಒಡೆದು ಕಳ್ಳತನ - ಮನೆ ಮಾಲೀಕ ಅಮ್ಮನಘಟ್ಟ ಜಾತ್ರೆಗೆ ತೆರಳಿದಾಗ ಕೈಚಳಕ ತೋರಿದ ಕಳ್ಳರು - ಕೋಡೂರಿನಲ್ಲಿಯೂ ನಡೆದಿತ್ತು ಇಂತಹದ್ದೇ ಕೃತ್ಯ!
ಹೊಸನಗರ: ಮನೆಯಲ್ಲಿ ಯಾರೂ ಇಲ್ಲ ಎನ್ನುವುದನ್ನು ಖಚಿತ ಪಡಿಸಿಕೊಂಡು ಸುಮಾರು 8 ಗ್ರಾಂ ತೂಕದ ಮೂರು ಚಿನ್ನದ ಉಂಗುರ ಸಹಿತ, ರೂ 20 ಸಾವಿರ ನಗದು ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ತಾಲ್ಲೂಕಿನ ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರಕೋಡು ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಮಂಗಳವಾರ ಮನೆಯ ಮಾಲೀಕ ಹನುಮಂತ ಕಾಮತ್ ವ್ಯಾಪಾರಕ್ಕೆಂದು ಕೋಡೂರು ಸಮೀಪದ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ಜಾತ್ರಾ ಮಹೋತ್ಸವಕ್ಕೆ ತೆರಳಿದ್ದರು. ಅವರ ಪತ್ನಿ ಬಿದನೂರಿಗೆ ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದರು. ಇದನ್ನು ಗಮನಿಸಿ ಹೊಂಚು ಹಾಕಿ ಕಾದಿದ್ದ ಕಳ್ಳರು ಮಧ್ಯಾಹ್ನ 2 ರಿಂದ 4 ಗಂಟೆಯೊಳಗೆ ಮನೆಯ ಹಿಂಬಾಗಿಲಿನ ಚಿಲಕ ಮುರಿದು ಒಳಗೆ ಪ್ರವೇಶಿಸಿ, ರೂಮಿನ ಕಬ್ಬಿಣದ ಬೀರುವಿನಲ್ಲಿದ್ದ ರೂ 56 ಸಾವಿರ ಮೌಲ್ಯದ ನಗನಾಣ್ಯ ಕದ್ದು ಪರಾರಿಯಾಗಿದ್ದಾರೆ.
ಸಂಜೆ ವೇಳೆಗೆ ಮನೆಗೆ ಮರಳಿದ ಕುಟುಂಬ ವರ್ಗವು ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಸ್ತುಗಳನ್ನು ಕಂಡು, ತಕ್ಷಣವೇ ಕಳ್ಳತನದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಮನೆ ಮಾಲೀಕ ಹನುಮಂತ ಕಾಮತ್ ನೀಡಿದ ದೂರಿನ ಮೇರೆಗೆ ಹೊಸನಗರ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡದೊಂದಿಗೆ ಆಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೊಸನಗರ ಪೊಲೀಸ್ ಠಾಣೆ ಪಿಎಸ್ಐ ಶಂಕರ ಗೌಡ ಪಾಟೀಲ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.
ಕೋಡೂರಿನಲ್ಲಿ ಈ ಹಿಂದೆ ಇಂತಹದ್ದೇ ಕಳ್ಳತನ ನಡೆದಿತ್ತು :
ಕೋಡೂರು ಗ್ರಾಮದ ಯಳಗಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಅಡಿಗೆಯವರಾಗಿ ಕಾರ್ಯ ನಿರ್ವಹಿಸುತ್ತಿದ್ದವರ ಮನೆಯಲ್ಲಿಯೂ ಮೂರ‍್ನಾಲ್ಕು ವರ್ಷದ ಹಿಂದೆ ಇದೇ ರೀತಿಯಲ್ಲಿ ಕಳ್ಳತನ ನಡೆದಿತ್ತು. ಮಧ್ಯಾಹ್ನ ಸಮಯದಲ್ಲಿ ಮನೆಯ ಹಿಂಬಾಗಿಲು ಒಡೆದು ಒಳ ಪ್ರವೇಶಿಸಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ ನಗದು ದೋಚಿ ಪರಾರಿಯಾಗಿದ್ದರು. ಮನೆಯವರೆಲ್ಲ ಕೆಲಸಕ್ಕೆ ತೆರಳಿದ್ದನ್ನು ಗಮನಿಸಿದ ಕಳ್ಳರು ಕೈ ಚಳಕ ತೋರಿದ್ದರು. ಮಗಳು ಕಾಲೇಜು ಮುಗಿಸಿ ಮನೆಗೆ ಬಂದು ಬಾಗಿಲು ತೆರೆದಾಗ ಕಳ್ಳತನವಾಗಿದ್ದು ಗಮನಕ್ಕೆ ಬಂದಿತ್ತು. ಆನಂತರ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಕಳ್ಳರು ಮಾತ್ರ ಈವರೆಗೂ ಪತ್ತೆಯಾಗಿಲ್ಲ. ಈಗ ಇದೇ ಮಾದರಿಯ ಕಳ್ಳತನ ವರಕೋಡಿನಲ್ಲಿಯೂ ನಡೆದಿರುವುದು ಗಮನಿಸಿದರೆ, ಕೋಡೂರಿನಲ್ಲಿ ಕಳ್ಳತನ ಮಾಡಿದ ಗ್ಯಾಂಗೇ ಈಗಲೂ ಸಕ್ರಿಯವಾಗಿದ್ದು ವರಕೋಡಿನಲ್ಲಿ ಕೃತ್ಯ ಎಸಗಿದಂತೆ ಕಾಣುತ್ತಿದೆ.
ಕಾಮೆಂಟ್‌ಗಳಿಲ್ಲ