ಘಟ್ಟದ ಮೇಲಿನ ಮೊಟ್ಟಮೊದಲ ಯಕ್ಷ ಮೇಳದಿಂದ ನಾಳೆ ಹೂವಿನಕೋಣೆಯಲ್ಲಿ ’ಲವ-ಕುಶ’ ಯಕ್ಷಗಾನ ಪ್ರದರ್ಶನ - ನಾಳೆಯಿಂದ 15 ದಿನಗಳ ಮಕ್ಕಳ ಯಕ್ಷ ಕುಟೀರ ಮೇಳದ ತಿರುಗಾಟ
ಹೊಸನಗರ : ಸದಾ ಒಂದಿಲ್ಲೊಂದು ಹೊಸತನ್ನು ಯೋಚಿಸುವ, ಮಕ್ಕಳನ್ನು ನಿರಂತರ ಕ್ರಿಯಾಶೀಲರನ್ನಾಗಿಸುವಲ್ಲಿ ಕೆಲಸ ಮಾಡುತ್ತಿರುವ ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್ ಬಟ್ಟೆಮಲ್ಲಪ್ಪ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀ ವ್ಯಾಸ ಮಹರ್ಷಿ ಗುರುಕುಲದ ಮಕ್ಕಳ ಯಕ್ಷ ಕುಟೀರ ನಾಳೆಯಿಂದ ತನ್ನ ಅಧಿಕೃತ ತಿರುಗಾಟ ಆರಂಭಿಸಲಿದ್ದು, ಮೊದಲ ದಿನದ ತಿರುಗಾಟದ ಯಕ್ಷ ಪ್ರದರ್ಶನ ಹೂವಿನಕೋಣೆ ರಾಜರಾಜೇಶ್ವರಿ ದೇವಾಲಯದ ನವರಾತ್ರಿ ಉತ್ಸವದಿಂದ ಆರಂಭವಾಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಈ ಸಂದರ್ಭದಲ್ಲಿ ಮಕ್ಕಳು ’ಲವ -ಕುಶ’ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ನಾಡಿದ್ದು ಅಂದರೆ ಅಕ್ಟೋಬರ್ 12ರಂದು ಮಾರುತೀಪುರ ಚೌಡೇಶ್ವರಿ ದೇವಿಯ ಸನ್ನಧಿಯಲ್ಲಿ ಮಕ್ಕಳ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ವಿಶೇಷವಾಗಿ ಹಿಮ್ಮೇಳ, ಮುಮ್ಮೇಳ ಹಾಗೂ ರಂಗಸ್ಥಳ ಮತ್ತು ಧ್ವನಿ, ಬೆಳಕು, ಚೌಕಿ ಸೇರಿದಂತೆ ಘಟ್ಟದ ಮೇಲಿನ ಮೊಟ್ಟ ಮೊದಲ ಮಕ್ಕಳ ಯಕ್ಷ ಮೇಳವಾಗಿ ಮಕ್ಕಳ ಯಕ್ಷ ಕುಟೀರ, ಬಟ್ಟೆಮಲ್ಲಪ್ಪ ಗುರುತಿಸಿಕೊಂಡಿದ್ದು, ನಾಳೆಯಿಂದ 15 ದಿನದ ತಿರುಗಾಟ ನಡೆಯಲಿದೆ.
ಗಂಡು ಕಲೆಯಾದ ಯಕ್ಷಗಾನವನ್ನು ಎಲ್ಲಾ ಹೆಣ್ಣು ಮಕ್ಕಳೇ ಅಭಿನಯಿಸುತ್ತಿರುವುದುಈ ಬಾರಿಯ ವಿಶೇಷವಾಗಿದೆ. ಬಾಲ ಚಂಡೆ ಕಲಾವಿದ ಶ್ರೀವತ್ಸ ಗುಡ್ಡೆದಿಂಬ, ಹಿಮ್ಮೇಳದ ಭಾಗವಾಗಿ ಎ.ಆರ್.ಗಣಪತಿ ಭಟ್, ಪುರಪ್ಪೇಮನೆ ಇವರ ನಿರ್ದೇಶನ ಹಾಗೂ ಪ್ರಶಾಂತ್ ಮಧ್ಯಸ್ಥ ಇವರ ಸಮರ್ಥ ಹಿಮ್ಮೇಳ ಸಾರಥ್ಯದೊಂದಿಗೆ ಯಕ್ಷ ತಿರುಗಾಟ ಆರಂಭಗೊಳ್ಳುತ್ತಿದೆ.
ಗುರುಕುಲದಲ್ಲಿ ಎ.ಆರ್.ಗಣಪತಿ, ಪುರಪ್ಪೆಮನೆ ಇವರ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಯಕ್ಷ ಕಲಿಕೆಗೆ ಇದೀಗ ಹತ್ತು ವರ್ಷ ತುಂಬುತ್ತಿದೆ. ಈ ದಶಮಾನೋತ್ಸವ ಸಂದರ್ಭದಲ್ಲಿ ತಿರುಗಾಟಕ್ಕೆ ಮೇಳ ಸಜ್ಜಾಗಿದ್ದು, ಆಸಕ್ತರು ಮಕ್ಕಳ ಯಕ್ಷ ಕುಟೀರಕ್ಕೆ ತಮ್ಮ ಊರಿನಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಬಹುದು, ಈ ಮೂಲಕ ಮಕ್ಕಳ ಯಕ್ಷ ಕಲೆಯನ್ನು ಪ್ರೋತ್ಸಾಹಿಸಬಹುದು ಎಂದು ವ್ಯವಸ್ಥಾಪಕರಾದ ಮಂಜುನಾಥ್ ಎಸ್. ಬ್ಯಾಣದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಮೊಬೈಲ್ ನಂಬರ್ 8152941498 / 9483439666ನ್ನು ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳಿಲ್ಲ