ಹೊಸನಗರ ತಾಲ್ಲೂಕಿನೆಲ್ಲೆಡೆ ಸಡಗರ ಸಂಭ್ರಮದ ಆಯುಧ ಪೂಜೆ - ಸರ್ಕಾರಿ ಕಚೇರಿಗಳಲ್ಲಿ ಇಂದು ಹಬ್ಬದ ಸಂಭ್ರಮ
ಹೊಸನಗರ : ತಾಲ್ಲೂಕಿನೆಲ್ಲೆಡೆ ಇಂದು ಆಯುಧ ಪೂಜೆ ಸಡಗರ ಸಂಭ್ರಮದಿಂದ ನೆರವೇರಿತು. ಹೊಸನಗರ ತಾಲ್ಲೂಕು ಕಚೇರಿ, ಪೊಲೀಸ್ ಠಾಣೆ, ಮೆಸ್ಕಾಂ, ಅರಣ್ಯ ಇಲಾಖೆ, ಅಗ್ನಿಶಾಮಕ ದಳದ ಕಚೇರಿ ಸೇರಿದಂತೆ ಹಲವೆಡೆ ಆಯುಧ ಪೂಜೆ ನಡೆಯಿತು. ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ಬೈಕ್, ಜೀಪ್, ಕಾರು ಹಾಗೂ ವಿವಿಧ ಶಸ್ತ್ರಾಸ್ತ್ರಗಳೊಂದಿಗೆ ಅಗತ್ಯ ದಾಖಲೆ ಪುಸ್ತಕಗಳಿಗೆ ವಿಶೇಷ ಪೂಜೆ ನೆರವೇರಿತು. ಅರ್ಚಕ ಕೃಷ್ಣಮೂರ್ತಿ ಅವರ ಪೌರೋಹಿತ್ಯ ಹಾಗೂ ಠಾಣಾ ಸಬ್ಇನ್ಸ್‌ಪೆಕ್ಟರ್ ಶಂಕರ್ ಗೌಡ ಪಾಟೀಲ್ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಸಿಬ್ಬಂದಿಗಳಾದ ಗಂಗಾಧರ್, ಸಂದೀಪ್, ಮಹೇಶ್, ವೆಂಕಟೇಶ್, ವೀರೇಶ್, ಮಾಯಪ್ಪ, ತೀರ್ಥೇಶ್, ಆಸ್ಮಾ ಸೇರಿದಂತೆ ಹಲವರು ಹಾಜರಿದ್ದು ಸಹಕಾರ ನೀಡಿದರು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಜನರು ತಮ್ಮ ತಮ್ಮ ಮನೆ ಹಾಗೂ ಅಂಗಡಿಗಳಲ್ಲಿ ವಿಶೇಷ ಪೂಜೆಯೊಂದಿಗೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಹಬ್ಬದ ಸಂಭ್ರಮದಲ್ಲಿ ಮುಳುಗೆದ್ದರು. ಆಯುಧ ಪೂಜೆ ಹಿನ್ನೆಲೆಯಲ್ಲಿ ಹೊಸನಗರ ಮಾರಿಕಾಂಬಾ ದೇವಸ್ಥಾನದಲ್ಲಿ ಚಂಡಿಯಾಗ ಹಾಗೂ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದ್ದು ನೂರಾರು ಭಕ್ತರು ಪಾಲ್ಗೊಂಡಿದ್ದರು.
ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಆಯುಧಪೂಜೆ
ತಾಲ್ಲೂಕಿನ ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎನ್. ಪ್ರವೀಣ್ ಅವರ ನೇತೃತ್ವದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ನವಮಿ ದಿನವಾದ ಇಂದು ಆಯುಧ ಪೂಜಾ ವಿಧಿವಿಧಾನಗಳು ನೆರವೇರಿದವು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಧಾ, ಸದಸ್ಯರಾದ ಓಂಕೇಶ್ ಗೌಡ, ಗುಳ್ಳೆಕೊಪ್ಪ ಶ್ರೀಧರ್, ದಿವ್ಯಾ ಪ್ರವೀಣ್, ಬಿಲ್ ಕಲೆಕ್ಟರ್ ಧರ್ಮಪ್ಪ, ವಾಟರ್ ಮ್ಯಾನ್ ಮೋಹನ್, ಜಗದೀಶ್, ಗ್ರಂಥಾಲಯ ಗ್ರಂಥಪಾಲಕಿ ಗೀತಾ, ಗ್ರಾಮಸ್ಥರಾದ ಶಿವಕುಮಾರ ಉಪಸ್ಥಿತರಿದ್ದರು.
ಜಾಕ್‌ವೆಲ್‌ನಲ್ಲಿ ಆಯುಧ ಪೂಜೆ
ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಪ್ರವಾಸಿ ಮಂದಿರ ಸಮೀಪದ ಬೋಳುಗುಡ್ಡೆಯಲ್ಲಿನ ಜಾಕ್‌ವೆಲ್‌ಗೆ ಪಟ್ಟಣ ಪಂಚಾಯತಿ ಸಿಬ್ಬಂದಿಗಳು, ವಾಟರ್ ಮ್ಯಾನ್ ಬಸವರಾಜ್ ಅವರ ನೇತೃತ್ವದಲ್ಲಿ ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಸಿಬ್ಬಂದಿಗಳಾದ ರಮೇಶ್, ಉದಯ, ನಾಗರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ