Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಬೆಂಗಳೂರಿನ ಲಾಡ್ಜಿನಲ್ಲಿ ಮೃತಪಟ್ಟ ತೀರ್ಥಹಳ್ಳಿ ತಹಶೀಲ್ದಾರ್ - ದಿಢೀರ್ ಸಾವಿಗೆ ಕಾರಣವೇನು?!

ಶಿವಮೊಗ್ಗ : ಕಚೇರಿ ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದ ತೀರ್ಥಹಳ್ಳಿ ತಹಶೀಲ್ದಾರ್‌ ಜಿ.ಬಿ.ಜಕ್ಕನಗೌಡರ್‌ (54) ಅವರ ಮೃತದೇಹ ಬೆಂಗಳೂರಿನ ಲಾಡ್ಜ್‌ವೊಂದರ ಕೊಠಡಿಯಲ್ಲಿ ಪತ್ತೆಯಾಗಿದ್ದು, ಹೃದಯಾಘಾತದಿಂದ ಅವರ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ವೈಭವ್ ಲಾಡ್ಜ್‌ನ ಕೊಠಡಿಯಲ್ಲಿ ತಹಶೀಲ್ದಾರ್ ಮೃತದೇಹ ಇಂದು ಪತ್ತೆಯಾಗಿದೆ. ನ್ಯಾಯಾಲಯದ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದ ಜಕ್ಕನಗೌಡರ್‌ ನಿನ್ನೆ ಸಂಜೆಯಿಂದ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಆನಂತರ ಅವರ ಮೊಬೈಲ್ ಲೊಕೇಶನ್‌ ಮೂಲಕ ಹುಡುಕಿದಾಗ ಮೊಬೈಲ್ ಮೆಜೆಸ್ಟಿಕ್ ಸಮೀಪ ಇರುವುದಾಗಿ ಪತ್ತೆಯಾಯಿತು. ಇದರ ಆಧಾರದಲ್ಲಿ ಸುತ್ತಮುತ್ತ ಪರಿಶೀಲನೆ ನಡೆಸಿದಾಗ ವೈಭವ್ ಲಾಡ್ಜ್‌ನಲ್ಲಿ ಮೃತದೇಹ ಪತ್ತೆಯಾಗಿದೆ. ಅವರು ಉಳಿದುಕೊಂಡಿದ್ದ ಕೊಠಡಿ ಬಾಗಿಲು ಹಾಕಿತ್ತು ಎನ್ನಲಾಗಿದ್ದು, ಪೊಲೀಸರು ಬಾಗಿಲು ತೆರೆದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಕ್ಕನಗೌಡರ್‌ ಮೂಲತಃ ಗದಗ ಜಿಲ್ಲೆಯವರಾಗಿದ್ದು, ಒಂದು ವರ್ಷದಿಂದ ತೀರ್ಥಹಳ್ಳಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಶವಪರೀಕ್ಷೆಯ ನಂತರ ಕುಟುಂಬದವರು ಪಾರ್ಥಿವ ಶರೀರವನ್ನು ಗದಗಿಗೆ ಕೊಂಡೊಯ್ಯಲಿದ್ದಾರೆ.

ಕಾಮೆಂಟ್‌ಗಳಿಲ್ಲ