ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಹೊಸನಗರ ಗ್ರಾಮಾಂತರ ಶಾಖೆಯಿಂದ ನೀರೇರಿ ಸರ್ಕಾರಿ ಶಾಲಾ ರಂಗಮಂದಿರ ಪುನರ್ ನಿರ್ಮಾಣ
ಹೊಸನಗರ : ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಎಲ್ಲಾ ರೀತಿಯ ಅನುಕೂಲವೂ ಸಿಗುವಂತಾಗಬೇಕು, ಇದಕ್ಕಾಗಿ ಶಾಲೆಗಳ ಕಟ್ಟಡಗಳೂ ಸುವ್ಯವಸ್ಥಿತವಾಗಿರಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ನೀರೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಂಗಮಂದಿರ ಮತ್ತು ಧ್ವಜಸ್ತಂಭದ ಕಟ್ಟೆಯನ್ನು ಪುನರ್ ನಿರ್ಮಾಣ ಮಾಡುವ ಕೆಲಸಕ್ಕೆ ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ, ಹೊಸನಗರ ಗ್ರಾಮಾಂತರ ಶಾಖೆ ಮುಂದಾಗಿದೆ.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಸಂಘದ ಸದಸ್ಯರಾದ ಪ್ರಭಾಕರ್ ಆಚಾರ್ ಅವರು ನೀರೇರಿ ಶಾಲೆಗೆ ರಂಗಮಂದಿರದ ಅವಶ್ಯಕತೆ ಇರುವ ಬಗ್ಗೆ ಸಂಘದ ಗಮನಕ್ಕೆ ತಂದಿದ್ದು, ಸಂಘದ ಸದಸ್ಯರು ಅಲ್ಲಿಗೆ ಹೋಗಿ ನೋಡಿ ರಂಗಮಂದಿರವನ್ನು ಪುನರ್ ನಿರ್ಮಿಸುವುದರ ಜೊತೆಗೆ ಧ್ವಜಸ್ತಂಭದ ಕಟ್ಟೆಯನ್ನೂ ಹೊಸದಾಗಿ ನಿರ್ಮಿಸಿಕೊಡುವ ನಿರ್ಧಾರಕ್ಕೆ ಬಂದೆವು. ಅದರಂತೆ ನಿನ್ನೆಯಿಂದ ನಮ್ಮ ತಂಡ ಶಾಲೆಯಲ್ಲಿ ಕೆಲಸ ಆರಂಭಿಸಿದೆ ಎಂದು ಒಕ್ಕೂಟದ ಹೊಸನಗರ ಗ್ರಾಮಾಂತರ ಶಾಖೆ ಅಧ್ಯಕ್ಷರಾದ ಮಹಮ್ಮದ್ ಹುಸೇನ್ ಹೇಳಿದರು.
ರಂಗಮಂದಿರ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದ ಅಗತ್ಯ ವಸ್ತುಗಳು, ಕೆಲಸ ಸೇರಿದಂತೆ ಸಂಪೂರ್ಣ ಖರ್ಚುವೆಚ್ಚವನ್ನು ಒಕ್ಕೂಟವೇ ಭರಿಸಲಿದ್ದು, ಇದಕ್ಕಾಗಿ ಕೆಲವು ದಾನಿಗಳು ಕೂಡಾ ಒಕ್ಕೂಟದ ಈ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ನಿನ್ನೆಯಿಂದ ಆರಂಭವಾದ ಕೆಲಸ, ಮೂರ‍್ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಹಮ್ಮದ್ ಹುಸೇನ್ ಹೇಳಿದರು.
ಜಿಲ್ಲಾ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಮಾರುತೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರೇರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಅನುಕೂಲಕ್ಕಾಗಿ ಈ ಕೆಲಸ ಮಾಡುತ್ತಿರುವುದು ಒಕ್ಕೂಟದ ಸದಸ್ಯರೆಲ್ಲರಿಗೂ ಖುಷಿ ತಂದಿದೆ. ಇದಕ್ಕೆ ಅಂದಾಜು ಎಂಭತ್ತು ಸಾವಿರ ರೂಪಾಯಿ ಖರ್ಚಾಗಲಿದ್ದು, ಕೆಲವು ದಾನಿಗಳು ನಮ್ಮ ಈ ಸದುದ್ದೇಶಕ್ಕೆ ಕೈ ಜೋಡಿಸಿದ್ದಾರೆ. ಸರ್ಕಾರಿ ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚಬಾರದು. ಶಾಲಾ ಕಟ್ಟಡ ಸುಸಜ್ಜಿತವಾಗಿದ್ದಾಗ ಮಕ್ಕಳನ್ನು ಶಾಲೆಗೆ ಸೇರಿಸುವುದಕ್ಕೂ ಪೋಷಕರು ಆಸಕ್ತರಾಗುತ್ತಾರೆ. ಈ ಕಾರಣದಿಂದಾಗಿ ನಮ್ಮ ಒಕ್ಕೂಟ ಈ ಕೆಲಸವನ್ನು ಆರಂಭಿಸಿದೆ ಎಂದು ಮಹಮ್ಮದ್ ಹುಸೇನ್ ಒಕ್ಕೂಟದ ಉದ್ದೇಶವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾದ ಕೆ. ಸುಂದರ ಬಾಬು, ಹೊಸನಗರ ತಾಲ್ಲೂಕಿನ ಗೌರವಾಧ್ಯಕ್ಷರಾದ ಪ್ರಭಾಕರ ಆಚಾರ್ಯ, ಅಧ್ಯಕ್ಷರಾದ ಮಹಮ್ಮದ್ ಹುಸೇನ್, ಉಪಾಧ್ಯಕ್ಷರಾದ ಶಂಕರ ಆಚಾರ್, ಕಾರ್ಯದರ್ಶಿ ರಾಘವೇಂದ್ರ ಬಿ.ಎನ್, ಸಂಘಟನಾ ಕಾರ್ಯದರ್ಶಿ ಶರೀಫ್ ಬಟ್ಟೆಮಲ್ಲಪ್ಪ, ಸದಸ್ಯರಾದ ಕೃಷ್ಣ ಮೇಸ್ತ್ರಿ ಕೆ. ಹುಣಸವಳ್ಳಿ, ನಂದಿಗ, ಶೇಖರ ಮೇಸ್ತ್ರಿ ಶುಂಠಿಕೊಪ್ಪ, ಕೃಷ್ಣ ದೊಂಬೆಕೊಪ್ಪ, ಶ್ರೀಮತಿ ನೀಲಾವತಿ ಬಟ್ಟೆಮಲ್ಲಪ್ಪ ಉಪಸ್ಥಿತಿ ಕಟ್ಟಡ ಕೆಲಸದಲ್ಲಿ ಭಾಗಿಯಾದರು. ಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು ಹಾಗೂ ಗ್ರಾಮಸ್ಥರು ಜೊತೆಗಿದ್ದು, ಒಕ್ಕೂಟದ ಕೆಲಸದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾಮೆಂಟ್‌ಗಳಿಲ್ಲ