ಹೊಸನಗರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯಲ್ಲಿ ಮಹಾತ್ಮ ಗಾಂಧಿ-ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅರ್ಥಪೂರ್ಣ ಆಚರಣೆ
ಹೊಸನಗರ : ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಗಾಂಧೀಜಿ ಭಾಗವಹಿಸಿದ್ದ 1924ರ ಬೆಳಗಾವಿ ಅಧಿವೇಶನದ ನಂತರ ನಡೆಯುತ್ತಿರುವ 100ನೇ ಗಾಂಧಿ ಜಯಂತಿ ಇದಾಗಿದ್ದು, 'ಸ್ವಚ್ಛತಾ ಹಿ ಸೇವಾ' ಧ್ಯೇಯದೊಂದಿಗೆ ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಶಾಲಾಭಿವೃದ್ದಿ ಸಮಿತಿ ಸದಸ್ಯರು, ಪೋಷಕ ವೃಂದದವರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಗ್ಗೂಡಿ ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿದರು. ಶಾಲೆಯ ಮುಂಭಾಗದಲ್ಲಿ ರಂಗೋಲಿ ಹಾಕುವ ಮೂಲಕ ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ 'ಸ್ವಚ್ಛತಾ ಹೀ ಸೇವಾ' ಜಾಥಾ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿ ಬಿಇಓ ಕೃಷ್ಣಮೂರ್ತಿ ಹೆಚ್.ಆರ್ ಮಾತನಾಡಿ, ಗಾಂಧೀಜಿ ಸರಳತೆ, ಶುಚಿತ್ವಕ್ಕೆ ನೀಡುತ್ತಿದ್ದ ಆದ್ಯತೆ, ದೇಶಪ್ರೇಮದ ಜೊತೆಗೆ ಇತರರ ಬಗ್ಗೆ ಗಾಂಧೀಜಿಗೆ ಇದ್ದಂತಹ ಕರುಣೆ ಕುರಿತು ತಿಳಿಸುತ್ತ, ಗಾಂಧಿ ಅವರ ಜೀವನದ ಕೆಲಘಟನೆಗಳನ್ನು ಮಕ್ಕಳಿಗೆ ವಿವರಿಸುವ ಮೂಲಕ ಪ್ರತಿಯೊಬ್ಬರು ಗಾಂಧಿಜೀಯಂತೆಯೇ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಶಿಕ್ಷಕಿ ಲತಾ ನಾಯ್ಕ್ ಗಾಂಧಿಜೀಯ ಅಚ್ಚುಮೆಚ್ಚಿನ ರಘುಪತಿ ರಾಘವ ರಾಜಾರಾಂ ಭಜನೆ ಹೇಳಿಕೊಟ್ಟರು. ಪ್ರಭಾರಿ ಮುಖ್ಯೋಪಾಧ್ಯಾಯ ಹರೀಶ್ ಎಂ. ಎನ್. ಮಹಾತ್ಮ ಗಾಂಧೀಜಿಯವರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು. ಮಕ್ಕಳ ಈ ಸಾಧನೆಗೆ ಕಾರಣರಾದ ತರಬೇತುದಾರ ದೈಹಿಕ ಶಿಕ್ಷಕ ರಾಜು ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ನೇರ್ಲೆ ಮಾತನಾಡಿ, ಮಹಾತ್ಮ ಗಾಂಧೀಜಿ ಅವರಂತೆಯೇ ನಾವೆಲ್ಲರೂ ಅಹಿಂಸೆ ಪ್ರತಿಪಾದಿಸೋಣ ಎಂದರು.
ಶಿಕ್ಷಣ ಸಂಯೋಜಕ ಕರಿಬಸಪ್ಪ, ಸಮೂಹ ಸಂಪನ್ಮೂಲ ವ್ಯಕ್ತಿ ಮಂಜಪ್ಪ. ಬಿ, ಎಸ್‌ಡಿಎಂಸಿ ಸದಸ್ಯರಾದ ಪವಿತ್ರ, ವಿಜಯಕುಮಾರ್, ಚಂದ್ರಶೇಖರ್ ಉಪಸ್ಥಿತರಿದ್ದರು. ಶಿಕ್ಷಕ ರಾಮ ನಾಯಕ್ ಸ್ವಾಗತಿಸಿ, ಕು. ಮಮತ ವಂದಿಸಿದರು. ಹೇಮಲತ ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ