Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಕನ್ನಡದಲ್ಲಿ ವೈದ್ಯರ ಔಷಧ ಚೀಟಿ ಎನ್ನುವ ಶುದ್ಧ ಗಿಮಿಕ್ಕು!!

ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಬರುತ್ತಿದ್ದಂತೆ ವಿದೇಶಕ್ಕೆ ಪರಾರಿಯಾಗಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಹಿಂದಿರುಗಿ ಬರುತ್ತಿದ್ದಂತೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿಯ ಮಹಿಳಾ ಅಧಿಕಾರಿಗಳ ತಂಡ ಬಂಧಿಸಿತ್ತು. ಇದನ್ನು ‘ಮಹಿಳಾ ಶಕ್ತಿ’ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ಜೊತೆಗೆ ‘ಮಹಿಳೆಯರಿಗೆ ಬಂಧಿಸುವ ಅಧಿಕಾರವೂ ಇದೆ’ ಎನ್ನುವ ಕಠಿಣ ಸಂದೇಶವನ್ನು ರವಾನಿಸುವ ಉದ್ದೇಶವೂ ಎಸ್‌ಐಟಿಯದ್ದಾಗಿತ್ತು ಎನ್ನಲಾಯಿತು... ಆಯಿತು, ಕೊನೆಗೆ ಇದರಿಂದ ಸಾಧಿಸಿದ್ದೇನು? ಸಂದೇಶ, ರವಾನೆ ಎಂದೆಲ್ಲ ದೊಡ್ಡ ದೊಡ್ಡ ಪದಗಳನ್ನು ಹೊತ್ತು ಹಾಕಲಾಗುತ್ತದೆಯಾದರೂ, ಕೊನೆಗಿದು ‘ಶುದ್ಧ ಗಿಮಿಕ್ಕು’ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ಈಗ ಇಂತಹದ್ದೇ ಒಂದು ಗಿಮಿಕ್ಕಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಕೂಡಾ ಕೈ ಇಟ್ಟಿದ್ದಾರೆ. ಹೌದು, ವೈದ್ಯರು ಔಷಧಿ ಚೀಟಿಯನ್ನು ಕನ್ನಡದಲ್ಲಿ ಬರೆಯಬೇಕಂತೆ, ಸರ್ಕಾರಿ ವೈದ್ಯರು ಕನ್ನಡದಲ್ಲೇ ಔಷಧಿ ಚೀಟಿ ಬರೆಯಲು ಆದೇಶಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ಗೆ ಪ್ರಾಧಿಕಾರ ಮನವಿ ಮಾಡಿದೆಯಂತೆ. ಭಾಷೆ ಆದೇಶಗಳಿಂದ ಬೆಳೆಯುವುದಿಲ್ಲ, ಬಳಕೆಯಿಂದ ಬೆಳೆಯುತ್ತದೆ ಎನ್ನುವುದು ನಿಜವೇ ಆದರೂ, ಸರ್ಕಾರಿ ಅಥವಾ ಖಾಸಗಿ ವೈದ್ಯರು ಕನ್ನಡದಲ್ಲಿ ಔಷಧಿ ಚೀಟಿ ಬರೆಯುವುದರಿಂದ ಏನೆಲ್ಲ ಅನಾಹುತವಾಗಬಹುದು, ಇಂತಹ ಅನಾಹುತಗಳಾದರೆ ಅದಕ್ಕೆ ಯಾರು ಹೊಣೆ ಎಂದು ಬಿಳಿಮಲೆಯವರು ಒಮ್ಮೆಯಾದರೂ ಯೋಚಿಸಿದ್ದಾರಾ?

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇರುವುದೇ ಕನ್ನಡದ ಅಭಿವೃದ್ಧಿಗೆ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಬಿಳಿಮಲೆ ಈ ಪ್ರಾಧಿಕಾರಕ್ಕೆ ಅಧ್ಯಕ್ಷರಾಗುವ ಮೊದಲು ಈ ಪ್ರಾಧಿಕಾರ ಕನ್ನಡದ ಕುರಿತು ಇಟ್ಟ ಹೆಜ್ಜೆಗಳೆಲ್ಲ ಬೇರೆ ಕಡೆ ಹೋಗಲಿ, ಕನ್ನಡದ ನೆಲದಲ್ಲಿಯೇ ಪರಿಣಾಮಕಾರಿಯಾಗಿ ಜಾರಿಗೆ ಬಂದಿದೆಯಾ? ಎಂದೊಮ್ಮೆ ನೋಡಿಕೊಂಡು ಬಿಳಿಮಲೆ ಹೊಸದೊಂದು ಹೆಜ್ಜೆ ಇಟ್ಟಿದ್ದರೆ ಅದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬಹುದಿತ್ತು. ಆದರೆ ಯಾಕೋ ಇವರು ಆ ಕೆಲಸ ಮಾಡಿದಂತಿಲ್ಲ. ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದಾದರೂ ಕಂಪ್ಲೇಂಟು ರೂಪದ ಪೋಸ್ಟುಗಳು ಸಿಕ್ಕುತ್ತವೆ. ಈ ಹಿಂದಿನ ಅಧ್ಯಕ್ಷರುಗಳೆಲ್ಲ ಈ ಬಗ್ಗೆ ಆಗಾಗ ಮಾತನಾಡುತ್ತಿದ್ದರು. ಇನ್ನೂ ದುರಂತವೆಂದರೆ, ಬ್ಯಾಂಕುಗಳ ಸಿಬ್ಬಂದಿ ಪ್ರಾದೇಶಿಕ ಭಾಷೆ ಕಲಿತು ಅದರಲ್ಲೇ ವ್ಯವಹರಿಸಬೇಕು ಎನ್ನುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕೇ ಈ ಹಿಂದೊಮ್ಮೆ ಆದೇಶ ಮಾಡಿದೆ. ಹೀಗಿದ್ದೂ ಬ್ಯಾಂಕುಗಳಲ್ಲಿ ಇವತ್ತಿಗೂ ಕನ್ನಡ ಮಾತನಾಡುವ ಸಿಬ್ಬಂದಿ ಸಿಕ್ಕುವುದೇ ಅಪರೂಪ ಎನ್ನುವಂತಾಗಿ, ಕನ್ನಡ ಬಿಟ್ಟು ಬೇರೆ ಭಾಷೆ ಬರೆದು, ಮಾತನಾಡಿ ಗೊತ್ತಿಲ್ಲದ ಕನ್ನಡಿಗ ಇವತ್ತಿನ ಈ ಕ್ಷಣದಲ್ಲಿಯೂ ಬ್ಯಾಂಕುಗಳಿಗೆ ಹೋಗುವುದೆಂದರೆ ಹಿಂಜರಿಯುತ್ತಿದ್ದಾನಲ್ಲ, ಅವನ ಬಗ್ಗೆ ಬಿಳಿಮಲೆಯವರೊಮ್ಮೆ ಗಂಭೀರವಾಗಿ ಯೋಚಿಸಬಹುದಿತ್ತಲ್ಲವಾ? ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಕನ್ನಡ ಬಳಕೆ ಬಗ್ಗೆ ತೆಗೆದುಕೊಂಡ ನಿರ್ಣಯ, ಹೊರಡಿಸಿದ ಆದೇಶಗಳು ಕೆಲಸ ಮಾಡುತ್ತಿವೆಯೇ ಎಂದೆಲ್ಲ ನೋಡಿಕೊಂಡು, ಅದಾಗದೇ ಇದ್ದರೆ ಆ ನಿಟ್ಟಿನಲ್ಲಿ ನನ್ನ ಅವಧಿಯಲ್ಲಾದರೂ ಅದರ ಪರಿಣಾಮಕಾರಿ ಅನುಷ್ಠಾನದ ಬಗ್ಗೆ, ಈ ಮೂಲಕ ಕನ್ನಡಿಗರಿಗೆ ಅನುಕೂಲವಾಗುವ ಕೆಲಸ ಮಾಡುತ್ತೇನೆ ಎಂದು ನಿರ್ಧರಿಸಬಹುದಿತ್ತು. ಬ್ಯಾಂಕುಗಳ ಕಥೆ ಹೋಗಲಿ, ಅಮೆಜಾನ್‌ನಂತಹ ಕಂಪೆನಿಯ ಗ್ರಾಹಕ ಸೇವಾ ಕೇಂದ್ರದ ಪ್ರಾಥಮಿಕ ಹಂತದಲ್ಲಿ ಕನ್ನಡ ಮಾತನಾಡುವವರು ಇದ್ದಾರೆಯೇ ಹೊರತು, ಅದರ ನಂತರದ ಹಂತದಲ್ಲಿ ಒಬ್ಬೇ ಒಬ್ಬ ಕನ್ನಡ ಮಾತನಾಡುವ ಹುಡುಗ ಹುಡುಗಿಯರಿರುವುದಿಲ್ಲ! ಬೇಕಿದ್ದರೆ ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಮಾತನಾಡಿ, ಇಲ್ಲದೇ ಹೋದರೆ ನಾವೇನೂ ಮಾಡಲಾಗುವುದಿಲ್ಲ ಎನ್ನುವ ಧಾಟಿಯಲ್ಲಿ ಅಮೆಜಾನ್ ಕನ್ನಡಿಗರೊಂದಿಗೆ ವ್ಯವಹರಿಸುತ್ತದೆ. ಮೊದಲು ಇಲ್ಲಿ ಕನ್ನಡವನ್ನು ತುಂಬಬೇಕಿದೆ. ಇಲ್ಲಿ ಮಾಡಬೇಕಾದ ಕೆಲಸ ಮಾಡಿ, ಇನ್ನೊಂದು ಹಂತಕ್ಕೆ ಹೋಗುವುದು ನಿಜವಾಗಿ ಕೆಲಸ ಮಾಡುವವರ ರೀತಿ. ಬುಡದಲ್ಲೇ ಸರಿ ಮಾಡದೆ ಏಕಾಏಕಿ ಏರಿ ತಲೆಯನ್ನು ಫಳಫಳ ಮಾಡುತ್ತೇನೆ ಎಂದು ಹೊರಟರೆ ಉಪಯೋಗವೇನಿದೆ?!

CLICK ಮಾಡಿ - ಹೊಸನಗರ ತಾಲ್ಲೂಕಿನಲ್ಲಿ ಬಂಟರು ಯಾನೆ ನಾಡವರು ಸಂಘಟಿತರಾಗಬೇಕಿದೆ - ತಾಲ್ಲೂಕು ಸಂಘದ ಪದಾಧಿಕಾರಿಗಳ ಕರೆ

ನನಗೆ ಕನ್ನಡದಲ್ಲಿ ವೈದ್ಯರು ಔಷಧಿ ಚೀಟಿ ಬರೆಯುವ ವಿಷಯವೂ ಕೂಡಾ ಹೀಗೇ ಕಾಣುತ್ತಿದೆ. ಇದು ಕನ್ನಡದ ಪರಿಣಾಮಕಾರಿ ಬಳಕೆಯ ಬಗ್ಗೆ ಖಂಡಿತ ಒಂದು ದೃಢವಾದ ಹೆಜ್ಜೆಯೇ. ಆದರೆ ಈ ಹೆಜ್ಜೆ ಈಗ ಬೇಕಿರಲಿಲ್ಲ. ಯಾಕೆಂದರೆ, ಕನ್ನಡದ ವೈದ್ಯನೊಬ್ಬ ಕನ್ನಡದಲ್ಲಿ ಔಷಧ ಚೀಟಿ ಬರೆದುಕೊಟ್ಟು, ಅದನ್ನು ಕನ್ನಡವೇ ಬಾರದ ಮೆಡಿಕಲ್ ಶಾಪಿನ ಮಾಲೀಕನೋ, ನೌಕರನೋ ಇನ್ನೇನೋ ಅರ್ಥ ಮಾಡಿಕೊಂಡು ಕೊಡಬಾರದ ಔಷಧಿ ಕೊಟ್ಟು ಸಾಗಹಾಕಿದರೆ ಏನು ಮಾಡುವುದು? ಮೆಡಿಕಲ್ಲಿನಲ್ಲಿ ಔಷಧ ತೆಗೆದುಕೊಂಡ ನಂತರ ಒಮ್ಮೆ ಡಾಕ್ಟರ‌್ರಿಗೆ ತೋರಿಸಿ, ಇದು ನೀವು ಬರೆದ ಔಷಧವೇ ಅಲ್ಲವಾ ಎಂದು ಖಚಿತ ಪಡಿಸಿಕೊಂಡು... ಇದು ಸರಿಯಾದ ಕ್ರಮ. ಆದರೆ ಎಷ್ಟು ವೈದ್ಯರು ಔಷಧ ತೆಗೆದುಕೊಂಡ ಮೇಲೆ ಒಮ್ಮೆ ನಮಗೆ ತಂದು ತೋರಿಸಿ ತೆಗೆದುಕೊಳ್ಳಿ ಎಂದು ಹೇಳುತ್ತಾರೆ? ವೈದ್ಯರು ಹೇಳಿದರೂ ಎಷ್ಟು ರೋಗಿಗಳು ಇದನ್ನು ಪಾಲಿಸುತ್ತಾರೆ? ಆಸ್ಪತ್ರೆ ಹತ್ತಿರದ ಮೆಡಿಕಲ್ಲಿನಲ್ಲಿ ತಗೊಂಡರೆ ಡಿಸ್ಕೌಂಟ್ ಸಿಕ್ಕುವುದಿಲ್ಲ, ಅದೇ ಮನೆ ಹತ್ತಿರವಾದರೆ ಒಂದಿಷ್ಟು ಹಣ ಉಳಿಯುತ್ತದೆ ಎಂದು ಔಷಧಿ ಖರೀದಿಸುವ ಅದೆಷ್ಟು ಜನರು ಮತ್ತೆ ಡಾಕ್ಟರ‌್ರಿಗೆ ಹೋಗಿ ಔಷಧಿ ತೋರಿಸುತ್ತಾರೆ? ಇಷ್ಟಕ್ಕೂ ರೋಗಿಗಳನ್ನು ನೋಡುವುದರಲ್ಲೇ ಬ್ಯುಸಿಯಾಗಿರುವ ಡಾಕ್ಟರ‌್ರಿಗೆ, ಮೆಡಿಕಲ್ಲಿನವನು ಎಲ್ಲಾ ಪೇಶೆಂಟುಗಳಿಗೆ ಸರಿಯಾದ ಔಷಧ ಕೊಟ್ಟಿದ್ದಾನಾ ಎಂದು ನೋಡುವ ತಾಳ್ಮೆ ಇರುತ್ತದಾ? ಅದರಲ್ಲೂ ರೋಗಿಗಳ ಬಗ್ಗೆ ಯಾವ ರೀತಿಯ ಕಾಳಜಿಯೂ ಇಲ್ಲದೇ ಬರೀ ಕಾಸು ಎಣಿಸುವುದೇ ನನ್ನ ಕೆಲಸ ಎನ್ನುವಂತಿರುವ ಎಷ್ಟು ವೈದ್ಯರು ಇಷ್ಟೆಲ್ಲ ತಾಳ್ಮೆಯಿಂದ ವರ್ತಿಸುತ್ತಾರೆ? ಆಯಿತು, ನೋಡಿದರು ಅಂತಲೇ ಇಟ್ಟುಕೊಳ್ಳಿ. ಇವರು ಬರೆದಿದ್ದು ಒಂದು, ಮೆಡಿಕಲ್ಲಿನವನು ಕೊಟ್ಟಿದ್ದು ಇನ್ನೊಂದಾದರೆ ಇನ್ನೊಮ್ಮೆ ಮೆಡಿಕಲ್ಲಿಗೆ ಹೋಗಿ ಔಷಧಿಯನ್ನು ಬದಲಾಯಿಸಿಕೊಂಡು ಬಂದು, ಮತ್ತೆ ಡಾಕ್ಟರ‌್ರಿಗೆ ತೋರಿಸಿ... ಎರಡು ಮೂರು ಬಾರಿ ಆ ಕಡೆ ಹೋಗಿ ಈ ಕಡೆ ಬಂದು ರೋಗಿಗೋ, ರೋಗಿ ಕಡೆಯವನಿಗೋ ಇನ್ನೊಂದು ಹೊಸ ಔಷಧಿ ಬರೆದುಕೊಡುವಂತಾಗಬಹುದು! ಅಂದಹಾಗೇ, ಕೆಲವು ಮೆಡಿಕಲ್ಲುಗಳು ‘ಒಮ್ಮೆ ಕೊಟ್ಟ ಔಷಧಿಯನ್ನು ನಾವು ಹಿಂಪಡೆಯುವುದಿಲ್ಲ, ಬದಲಾಯಿಸಿಕೊಡುವುದಿಲ್ಲ’ ಎಂದು ಬೋರ್ಡು ಹಾಕಿಕೊಂಡಿರುತ್ತವಲ್ಲ, ಆಗ ಏನು ಮಾಡುವುದು?! ಕೊನೆಗೆ ಡಾಕ್ಟರ‌್ರು, ಮೆಡಿಕಲ್ಲಿನವನಿಗೆ ಕಾಲ್ ಮಾಡಿ ಇದು ಇಂತಹ ಔಷಧಿ ಎಂದು ಹೇಳಿ, ಆತ ಸರಿಯಾದ ಔಷಧಿ ಕೊಡುವುದಾದರೆ, ಕನ್ನಡದಲ್ಲಿ ಔಷಧಿ ಚೀಟಿ ಬರೆದು ಏನು ಉಪಯೋಗವಾದಂತಾಯಿತು?!

ಇಂತಹ ಪ್ರಶ್ನೆಗಳನ್ನೆಲ್ಲ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರು ಕೇಳಿಕೊಂಡು, ಒಂದೆರಡು ಸುತ್ತಿನ ಸಭೆ ನಡೆಸಿ ಚರ್ಚಿಸಿ, ಆನಂತರ ಈ ಕುರಿತು ಒಂದಿಷ್ಟು ಸೋಶಿಯಲ್ ಎಕ್ಸ್‌ಪೆರಿಮೆಂಟಿನಂತಹದ್ದನ್ನೆಲ್ಲ ಮಾಡಿ ಆನಂತರ ಈ ಬಗ್ಗೆ ಒಂದು ನಿರ್ಧಾರಕ್ಕೆ ಬರಬಹುದಿತ್ತು. ವಾಸ್ತವ ಸಂಗತಿ ಏನೆಂದರೆ, ಕನ್ನಡಿಗರೇ ಆದರೂ ಇಂಗ್ಲೀಷ್ ಮೀಡಿಯಂನಲ್ಲೇ ಪಿಯುಸಿ, ಎಂಬಿಬಿಎಸ್ ಸೇರಿದಂತೆ ಯಾವುದೇ ವೈದ್ಯಕೀಯ ಕೋರ್ಸುಗಳನ್ನು ಓದಿದ ನೂರಕ್ಕೆ ತೊಂಭತ್ತು ಜನ ಕನ್ನಡ ಬರೆಯುವುದು, ಓದುವುದರಿಂದ ದೂರ ಸರಿದು ಅವರು ವೈದ್ಯ ವೃತ್ತಿ ಆರಂಭಿಸುವ ಹೊತ್ತಿಗೆ ಆರೇಳು ವರ್ಷವಾಗಿರುತ್ತದೆ. ಕನ್ನಡದ ಕ್ಲಾಸ್‌ಮೇಟುಗಳು, ಬೀದಿಯವರು ಸಿಕ್ಕರೆ ಕನ್ನಡ ಮಾತನಾಡುತ್ತಾರೆ ಬಿಟ್ಟರೆ ಇನ್ನೆಲ್ಲ ಕಡೆಯೂ ಇಂಗ್ಲೀಷು, ಬಿಟ್ಟರೆ ನೀಟ್‌ನಿಂದಾಗಿ ಬುರ‌್ರನೆ ತಮ್ಮ ಪಕ್ಕ ಬಂದು ಕುಳಿತ ಹಿಂದಿ ಸ್ನೇಹಿತರಿಗಾಗಿ ಹಿಂದಿಯನ್ನಷ್ಟೇ ಮಾತಾಗಿಸುತ್ತಿರುತ್ತಾರೆ. ಹೀಗಿರುವಾಗ ಇವರಿಂದ ನೀವು ಕನ್ನಡದಲ್ಲಿ ಅದು ಹೇಗೆ ಔಷಧ ಚೀಟಿ ಬರೆಸುತ್ತೀರಿ? ಅದೂ ಅಲೋಪತಿ ವೈದ್ಯ ಪದ್ಧತಿಯ ಔಷಧಿಗಳ ಹೆಸರೂ ಅಷ್ಟು ಸುಲಭವಾಗಿ ಕನ್ನಡದಲ್ಲಿ ಬರೆಯುವಂತಿರುವುದಿಲ್ಲ. ಕೆಲವು ರೋಗಗಳ ಹೆಸರನ್ನೇ ಕನ್ನಡದಲ್ಲಿ ನುರಿತವರೇ ಕನ್ನಡದಲ್ಲಿ ಬರೆಯಲು ಹತ್ತು ಬಾರಿ ಯೋಚಿಸುವಂತಾಗುತ್ತದೆ. ಇದೇ ರೀತಿ ಔಷಧಿಗಳ ಹೆಸರೂ ಇರುತ್ತವೆ. ಸರಿಯಾದ ಒತ್ತು, ಇಳಿ ಇಲ್ಲದೇ ಹೋದರೆ ಔಷಧದ ಹೆಸರೇ ಒಂದಾಗಿ, ಇವರು ಬರೆದಿದ್ದೇ ಇನ್ನೊಂದಾಗಿ, ಮೆಡಿಕಲ್ಲಿನವನು ಮತ್ತೊಂದು ರೀತಿ ಓದಿಕೊಂಡು... ನಿಮಗೆ ಇದನ್ನೆಲ್ಲ ಕನ್ನಡದಲ್ಲೇ ಮಾಡಬೇಕೆಂದಿದ್ದರೆ ವೈದ್ಯಕೀಯ ಶಿಕ್ಷಣ ಕೋರ್ಸ್‌ನ್ನೇ ಕನ್ನಡದಲ್ಲಿ ರೂಪಿಸಲು, ಕಲಿಸಲು ಸಾಧ್ಯವಾ ಎಂದೊಮ್ಮೆ ಯೋಚಿಸಿ. ಆನಂತರ ಇಂತಹ ಹೆಜ್ಜೆಗಳನ್ನೆಲ್ಲ ಇಡುವುದು ನಿಮಗೂ ಸುಲಭವಾಗಿ ಕಾಣಬಹುದು. ಮತ್ತು ನೀವು ಹೇಳಿದ್ದನ್ನು ಪಾಲಿಸಲು ಹೊರಟ ಕನ್ನಡದ ಯುವ ವೈದ್ಯರಿಗೂ ಆಪ್ತವಾಗಿ ಕಾಣಬಹುದು.

ನಿಜ, ಭಾಷೆ ಬಳಕೆಯಾದಷ್ಟು ಬೆಳೆಯುತ್ತದೆ. ಇದಕ್ಕೆ ನೀವು ಹಿಂದಿ, ತಮಿಳು ವೈದ್ಯರು ತಮ್ಮದೇ ಭಾಷೆಯಲ್ಲಿ ಔಷಧ ಚೀಟಿಯನ್ನು ಬರೆಯುತ್ತಿದ್ದಾರೆ ಎಂದು ಸಾಕ್ಷ್ಯ ಸಹಿತ ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿಕೊಳ್ಳಲು ಹೊರಟಿದ್ದನ್ನೂ ನೋಡಿದೆ. ನೀವು ಉದಾಹರಣೆಯಾಗಿ ಕೊಟ್ಟ ಎರಡೂ ಭಾಷೆಗಳು ಮತ್ತು ಅದನ್ನು ಮಾತನಾಡುವವರು ಅದೆಷ್ಟು ದಟ್ಟವಾಗಿ ತಮ್ಮ ತಮ್ಮ ಭಾಷೆಯನ್ನು ಈವರೆಗೂ ಬೆಳೆಸಿಕೊಂಡು ಬಂದಿದ್ದಾರೆ ಮತ್ತು ಇತರರ ಮೇಲೆ ಹೇಗೆ ತಮ್ಮ ಭಾಷೆಯನ್ನು ಹೇರಲು ಏನೆಲ್ಲ ಯೋಜನೆಗಳನ್ನು ಈ ಭಾಷೆ ಮಾತನಾಡುವ ಜನಸಾಮಾನ್ಯರಿಂದ ಹಿಡಿದು ದೊಡ್ಡ ಹುದ್ದೆಗಳಲ್ಲಿ ಕುಳಿತಿರುವವರೆಗೂ ಕ್ಷಣಕ್ಷಣಕ್ಕೂ ಪ್ರಯತ್ನ ಪಡುತ್ತಿದ್ದಾರೆ ಎನ್ನುವುದನ್ನು ನಿಮಗೆ ಹೊಸದಾಗಿ ಹೇಳಬೇಕಿಲ್ಲ. ಆದರೆ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮತ್ತು ಕನ್ನಡಿಗನ ಸ್ಥಿತಿ ಏನಾಗಿದೆ ಎನ್ನುವುದು ಬಿಳಿಮಲೆಯವರೇ ನಿಮಗೆ ತಿಳಿಯದ್ದೇನೂ ಅಲ್ಲ. ನೀವು ಉದಾಹರಣೆಯಾಗಿ ತಮಿಳು, ಹಿಂದಿಯನ್ನು ಕೊಡುವ ಬದಲು ಬೇರೆ ಭಾಷೆಯನ್ನು ಕೊಟ್ಟಿದ್ದರೆ ಒಂದಿಷ್ಟು ಒಪ್ಪಿಕೊಳ್ಳಬಹುದಿತ್ತು. ಭಾಷೆಯ ಬಗ್ಗೆ ಪ್ರೀತಿ, ಉಗ್ರ ಅಭಿಮಾನ ಹೊಂದುವ ವಿಷಯದಲ್ಲಿ ಹಿಂದಿ, ತಮಿಳಿನೆದುರು ಕನ್ನಡ ಎನ್ನುವುದು ಇನ್ನೂ ಅಂಗನವಾಡಿ ಹಂತದಲ್ಲಿಯೇ ಇದೆ. ಹೀಗಿರುವಾಗ ಭಾಷೆ ಬಳಕೆಯಾದಷ್ಟು ಬೆಳೆಯುತ್ತದೆ ಎಂದು ಹಿಂದಿ, ತಮಿಳನ್ನು ಉದಾಹರಣೆಯಾಗಿ ಕೊಟ್ಟಿದ್ದೇ ಯಾಕೋ ಸರಿ ಅನ್ನಿಸಲಿಲ್ಲ...

ನಿಮ್ಮ ಉದ್ದೇಶ ಖಂಡಿತ ತಪ್ಪಲ್ಲ. ಕನ್ನಡದಲ್ಲಿಯೇ ವೈದ್ಯರು ಔಷಧ ಚೀಟಿ ಬರೆಯುವುದರಿಂದ ಮೆಡಿಕಲ್ ಶಾಪಿನವರು ಕೆಲಸಕ್ಕೆ ಕನ್ನಡ ಬಲ್ಲವರನ್ನೇ ನೇಮಿಸಿಕೊಳ್ಳಬೇಕಾಗುತ್ತದೆ, ಪರಭಾಷಿಕರಿದ್ದರೆ ಅವರು ಅನಿವಾರ್ಯವಾಗಿ ಕನ್ನಡ ಕಲಿಯಬೇಕಾಗುತ್ತದೆ, ಇನ್ನು ಕನ್ನಡ ನಾಡಿನಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡ ತಿಳಿಯದ ವೈದ್ಯರು ಕನ್ನಡ ಕಲಿಯಲು ಪ್ರಯತ್ನಿಸುತ್ತಾರೆ, ಇಲ್ಲದೇ ಹೋದರೆ ಸಹಾಯಕ್ಕೆ ಕನ್ನಡ ಬಲ್ಲವರೊಬ್ಬರನ್ನು ಜೊತೆಗಿಟ್ಟುಕೊಳ್ಳುತ್ತಾರೆ... ಇಂತಹ ಎಲ್ಲಾ ಆಶಾದಾಯಕ ಸಂಗತಿಗಳು ಇದರಲ್ಲಿ ಇದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಕನ್ನಡದಲ್ಲಿ ಔಷಧ ಚೀಟಿ ಬರೆದು, ಮಾತ್ರೆ, ಔಷಧಿ ಪೊಟ್ಟಣಗಳ ಮೇಲೆ ಇಂಗ್ಲೀಷಿನಲ್ಲಿ ಅದರ ಹೆಸರು, ವಿವರಣೆ ಇತ್ಯಾದಿಗಳು ಇದ್ದಾಗ ಮೆಡಿಕಲ್ ಶಾಪಿನವನು ಅದನ್ನು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾನೆ? ಕನ್ನಡದಲ್ಲಿ ಬರೆದಿದ್ದು ಒಂದು ರೀತಿಯಾದರೆ, ಇಂಗ್ಲೀಷಿನಲ್ಲಿ ಕೆಲವು ಅಕ್ಷರಗಳು ಸೈಲೆಂಟಾಗುವುದರಿಂದ ಅದು ಇನ್ನೊಂದು ರೀತಿ ಓದುವಂತಾಗಿ... ಎಡವಟ್ಟಾಗುವ ಸಾಧ್ಯತೆಗಳೂ ಎದುರಾಗಬಹುದಲ್ಲವಾ? ನಿಮಗೆ ಈ ವಿಷಯದಲ್ಲಿ ಅಷ್ಟೊಂದು ಕಾಳಜಿ ಇದ್ದರೆ ಮೊದಲು ಕನ್ನಡದ ಯಾವುದೇ ಮೆಡಿಕಲ್ಲುಗಳಿಗೆ ಯಾವುದೇ ಔಷಧ ಸರಬರಾಜು ಮಾಡುವ ಔಷಧ ತಯಾರಕ ಕಂಪೆನಿಗಳೇ ಆಗಲಿ, ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿಯೂ ಮಾತ್ರೆ ಹೆಸರು, ವಿವರಣೆ ಇತ್ಯಾದಿಗಳನ್ನು ಮುದ್ರಿಸಬೇಕು ಮತ್ತು ಅದು ಸರಿಯಾದ ಕನ್ನಡದಲ್ಲಿಯೂ ಮುದ್ರಿತವಾಗಿರಬೇಕು ಎನ್ನುವ ನಿರ್ಣಯ ತೆಗೆದುಕೊಂಡು, ಅದನ್ನು ಸರ್ಕಾರಕ್ಕೆ ತಲುಪಿಸಿ ಆದೇಶವಾಗಿಸುವ ಕೆಲಸವನ್ನು ಮೊದಲು ಮಾಡಿ. ಇಷ್ಟಕ್ಕೂ ಮೆಡಿಕಲ್ ನಡೆಸಲು ಅಗತ್ಯವಾದ ಬಿ.ಫಾರ್ಮಾ ಕೋರ್ಸು ಕೂಡಾ ಇಂಗ್ಲೀಷಿನಲ್ಲೇ ಇರುವುದಲ್ಲವಾ ಎಂದು ಯಾರಾದರೂ ಕೇಳಿದರೆ ಇದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಿಮ್ಮ ಉತ್ತರ ಏನಿರಬಹುದು?!

ಮಾಡುವುದಕ್ಕೆ ಬೇಕಾದಷ್ಟು ಕನ್ನಡದ ಕೆಲಸಗಳಿವೆ. ನಿಮ್ಮಂತಹ ಪ್ರಾಜ್ಞರು, ಚಿಂತಕರು ಅಪರೂಪಕ್ಕೆ ಈ ಹುದ್ದೆ ಏರಿದಾಗ ಅವುಗಳತ್ತ ಗಮನ ಹರಿಸಬೇಕಿತ್ತು. ಮಾಧ್ಯಮಗಳು ಬೆಂಬಲ ಕೊಡುತ್ತಿವೆ, ಅದೇ ದೊಡ್ಡದು ಎನ್ನುವ ಭಾವನೆಯಲ್ಲಿ ನೀವು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ನೋಡಿದರೆ ಯಾಕೋ ನೀವು ಕೂಡಾ ‘ಸುದ್ದಿ-ಸದ್ದು’ ಮಾಡುವುದರತ್ತಲೇ ಹೆಚ್ಚು ಆಸಕ್ತಿ ತೋರಿಸುತ್ತಿರುವಂತೆ ಕಾಣುತ್ತಿದೆ. ಒಂದಂತೂ ನಿಜ, ಬಿಳಿಮಲೆಯವರೇ ನಿಮ್ಮ ಉದ್ದೇಶ ಒಳ್ಳೆಯದೇ. ಆದರೆ ಅದನ್ನು ಹೀಗೆ ಅವಸರವಸರದಲ್ಲಿ ಜಾರಿಗೆ ತರಲು ಮುಂದಾಗಿದ್ದು ಯಾಕೋ ಸರಿ ಕಾಣುತ್ತಿಲ್ಲ ಮತ್ತು ಇದರಿಂದಾಗಿಯೇ ಇದೊಂದು ಶುದ್ಧ ಗಿಮಿಕ್ಕಿನಂತೆ ಕಾಣುತ್ತಿದೆ. ಅಂದಹಾಗೇ, ನೀವು ಪ್ರಾಧಿಕಾರದ ಅಧ್ಯಕ್ಷರಾದ ನಂತರ ಮಸೀದಿ, ಮದರಸಗಳಲ್ಲಿ ಕನ್ನಡ ಕಲಿಸುತ್ತೇವೆ ಎಂದು ಹೇಳಿದ್ದಿರಂತೆ. ಆದರೆ ಆನಂತರ ನೀವು ಈ ಬಗ್ಗೆ ಯಾಕೋ ಗಾಢ ಮೌನಕ್ಕೆ ಜಾರಿದಿರಿ ಎನ್ನುವ ಮಾತುಗಳು ಈಗ ಕೇಳಿ ಬರುತ್ತಿವೆಯಲ್ಲ... ಇದ್ಯಾಕೆ ಎನ್ನುವುದು ಅರ್ಥವಾಗಲಿಲ್ಲ.

ಇರಲಿ, ಕೊನೆಯದಾಗಿ ಒಂದು ಮಾತು. ವೈದ್ಯರು ತಮ್ಮ ಬಳಿ ಬರುವ ರೋಗಿಯ ವಿವರ, ಅವರಿಗಿರುವ ಕಾಯಿಲೆ ಮತ್ತು ಅವರಿಗೆ ನೀಡಿದ ಔಷಧಿ ಇತ್ಯಾದಿಗಳ ವಿವರಗಳನ್ನು ಬಹಿರಂಗ ಪಡಿಸುವಂತಿಲ್ಲ ಎಂದು ಕಾನೂನೇ ಹೇಳುತ್ತದೆ. ಹೀಗಿರುವಾಗ ನಿಮ್ಮ ಈ ಗಿಮಿಕ್ಕಿಗೆ ಸಿಕ್ಕ ಕೆಲವು ವೈದ್ಯರು ರೋಗಿಯ ಹೆಸರು, ವಯಸ್ಸಿನ ವಿವರಗಳೊಂದಿಗೆ ಔಷಧಿ ಚೀಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಹಾಕುತ್ತಿರುವುದು, ಅದನ್ನು ನೀವು ಹಂಚುತ್ತಿರುವುದು ಎಲ್ಲಾ ತಿಳಿದ ನಿಮ್ಮಂತಹವರೇ ಈ ಮೂಲಕ ಕಾನೂನಿನ ಉಲ್ಲಂಘನೆ ಮಾಡಿದಂತಾಗಲಿಲ್ಲವಾ?! ಈ ಬಗ್ಗೆಯೂ ಒಂದಿಷ್ಟು ಯೋಚಿಸಿ. ಹಾಗೂ ಕಾನೂನು ಕಲಿಕೆ, ನ್ಯಾಯಾಲಯದ ಕಲಾಪಗಳನ್ನು ಸಂಪೂರ್ಣವಾಗಿ ಕನ್ನಡದಲ್ಲಿ ನಡೆಸುವ ಬಗ್ಗೆ ನೀವೊಂದಿಷ್ಟು ಗಂಭೀರ ಹೆಜ್ಜೆಗಳನ್ನಿಟ್ಟರೆ ಅದು ನಿಜಕ್ಕೂ ಕನ್ನಡದ ಸಾಮಾನ್ಯ ಜನರಿಗೆ ಉಪಯುಕ್ತವಾಗುತ್ತದೆ ಎನ್ನುವ ಕೋರಿಕೆಯೊಂದಿಗೆ...

-ಗಣೇಶ ಕೆ, ಸಂಪಾದಕರು, ನ್ಯೂಸ್ ಪೋಸ್ಟ್‌ಮಾರ್ಟಮ್‌


ಕಾಮೆಂಟ್‌ಗಳಿಲ್ಲ