ಪತ್ರಿಕೋದ್ಯಮ ಓದಿದ ವಿದ್ಯಾರ್ಥಿನಿಯರಿಗೆ ಸರ್ಕಾರದಿಂದ ಮಾಸಿಕ 20 ಸಾವಿರ ರೂಪಾಯಿ ಶಿಷ್ಯವೇತನದೊಂದಿಗೆ ಎರಡು ತಿಂಗಳ ತರಬೇತಿ
ಹೊಸನಗರ : ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪದವಿ ಪಡೆದಿರುವ ವಿದ್ಯಾರ್ಥಿನಿಯರಿಗೆ ಪತ್ರಿಕಾಲಯದಲ್ಲಿ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಿದ್ದು, ಪ್ರಸಕ್ತ ಸಾಲಿನಲ್ಲಿ 5 ಮಂದಿ ವಿದ್ಯಾರ್ಥಿನಿಯರಿಗೆ ಪ್ರಮುಖ ದಿನಪತ್ರಿಕೆಗಳ ಕಾರ್ಯಾಲಯಗಳಲ್ಲಿ 2 ತಿಂಗಳ ಕಾಲ ತರಬೇತಿ ಪಡೆಯುವ ಅವಕಾಶದೊಂದಿಗೆ, ಮಾಸಿಕ ತಲಾ 20,000 ರೂಪಾಯಿಗಳನ್ನು ಶಿಷ್ಯವೇತನವನ್ನಾಗಿ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ/ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿನಿಯರಿಗೆ ಆದ್ಯತೆ ನೀಡಲಾಗುತ್ತದೆ. ಆಸಕ್ತ ಅರ್ಹ ವಿದ್ಯಾರ್ಥಿನಿಯರು ಇದೇ ಆಗಸ್ಟ್ 26 ರೊಳಗೆ ತಮ್ಮ ಸ್ವವಿವರ, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ಆರ್ಥಿಕ ಸ್ಥಿತಿ, ಅಂಕಪಟ್ಟಿಗಳ ಫೋಟೋ ಪ್ರತಿಯನ್ನು ಸ್ಕ್ಯಾನ್ ಮಾಡಿ karnatakamediaacademy@gmail.com ಗೆ ಇಮೇಲ್ ಮೂಲಕ ಕಳುಹಿಸಬಹುದು.
28 ವರ್ಷದೊಳಗಿನ ವಿದ್ಯಾರ್ಥಿನಿಯರಿಗೆ ಮಾತ್ರವೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮಾಧ್ಯಮ ಅಕಾಡೆಮಿಯು ಅರ್ಹತಾ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆಯ ದಿನಾಂಕ, ಸ್ಥಳ ಮತ್ತು ಸಮಯವನ್ನು ಸಂದರ್ಶನದ ವೇಳೆ ತಿಳಿಸಲಾಗುತ್ತದೆ.
ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ/ಪದವಿ ಮುಗಿಸಿ ಹೊರಬರುವ ವಿದ್ಯಾರ್ಥಿಗಳಿಗೆ ಮಾಧ್ಯಮ ಕಚೇರಿಯ ಎಲ್ಲಾ ವಿಭಾಗಗಳಲ್ಲಿ ತರಬೇತಿಯನ್ನು ಕೊಡಿಸುವ ಮೂಲಕ, ತರಬೇತಿ ಹೊಂದಿದ ವಿದ್ಯಾರ್ಥಿಗಳು ಪತ್ರಕರ್ತರಾಗುವಂತೆ ಸಿದ್ಧಪಡಿಸುವುದು ಅಕಾಡೆಮಿಯ ಉದ್ದೇಶವಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಚೇರಿ ಪ್ರಕಟಣೆ ತಿಳಿಸಿದೆ.
ಕಾಮೆಂಟ್‌ಗಳಿಲ್ಲ