ಹೊರಬಿತ್ತು 'ಹೊಂದಾಣಿಕೆ ರಾಜಕಾರಣ'ದ ಹೊಲಸು - ಭಿಕ್ಷೆಯಲ್ಲ ಎನ್ನುವುದಾದರೆ ಸವಾಲು ಎದುರಿಸುತ್ತಾರಾ ಬಿಜೆಪಿ ರಾಜ್ಯಾಧ್ಯಕ್ಷ?!
ಇಷ್ಟು ದಿನ ’ಹಾಗಿರಬಹುದು, ಹಾಗಿಲ್ಲದೆಯೂ ಇರಬಹುದು’ ಎಂದುಕೊಳ್ಳುತ್ತಿದ್ದ ರಾಜ್ಯ ರಾಜಕಾರಣದ ಮಹತ್ವದ ಸಂಗತಿಯೊಂದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನದ ಸಾರ್ವಜನಿಕ ವೇದಿಕೆಯಲ್ಲಿ ನೀಡಿದ ಹೇಳಿಕೆಯೊಂದಿಗೆ ಅನುಮಾನವನ್ನು ದಾಟಿಕೊಂಡು ’ನಡೆದಿದ್ದೇನು’ ಎನ್ನುವ ಗುಟ್ಟನ್ನು ಬಿಚ್ಚಿಟ್ಟಿದೆ. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರ ವಿಧಾನಸಭಾ ಚುನಾವಣೆಯ ಗೆಲುವು ಕಾಂಗ್ರೆಸ್‌ನೀಡಿದ ಭಿಕ್ಷೆ ಎನ್ನುವುದೂ ಸಾಬೀತಾಗಿದೆ. ಇದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಮತದಾರನಿಗೆ ಕಾಣುವಂತೆ ಕಚ್ಚಾಡುವ ಕಾಂಗ್ರೆಸ್ ಮತ್ತು ಬಿಜೆಪಿ ಅದ್ಯಾವ ಪರಿ ’ಹೊಂದಾಣಿಕೆಯ ರಾಜಕಾರಣ’ ಮಾಡುತ್ತಿವೆ ಎನ್ನುವ ಸತ್ಯ ಬಯಲಾದರೆ, ಇನ್ನೊಂದೆಡೆ ಇವರಿವರು ಪರಸ್ಪರ ಲಾಭ ಮಾಡಿಕೊಳ್ಳಲು ರಾಷ್ಟ್ರೀಯ ಪಕ್ಷಗಳು ಇನ್ನೂ ಒಂದಿಷ್ಟು ಉಳಿಸಿಕೊಂಡಿರಬಹುದಾದ ತತ್ವ ಸಿದ್ಧಾಂತಗಳನ್ನೂ ಅದು ಹೇಗೆ ಹರಾಜಿಗಿಡುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದೆ!
ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನ ಪುತ್ರ ವಿಜಯೇಂದ್ರ, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಟಿಕೇಟ್ ಸಿಕ್ಕದೇ ಇದ್ದಿದ್ದಕ್ಕೆ ಪಕ್ಷೇತರವಾಗಿ ಸ್ಪರ್ಧಿಸಿದ್ದ ಎಸ್.ಪಿ. ನಾಗರಾಜ್‌ಗೌಡ ವಿರುದ್ಧ ಕೇವಲ 11,008 ಮತಗಳ ಅಂತರದಿಂದ ಗೆದ್ದಿದ್ದರು. ವಿಜಯೇಂದ್ರ 81,810 ಮತ ಗಳಿಸಿದ್ದರೆ ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ಬರೋಬ್ಬರಿ 70,802 ಮತ ಗಳಿಸಿದ್ದರು. ಮಾಜಿ ಮುಖ್ಯಮಂತ್ರಿಯ ಮಗ, ಶಿಕಾರಿಪುರ ವಿಧಾನಸಭಾ ಕ್ಷೇತ್ರವೇ ಯಡಿಯೂರಪ್ಪ ರಾಜಕೀಯದ ಮೂಲ ನೆಲೆಯಾಗಿದ್ದಾಗ್ಯೂ ವಿಜಯೇಂದ್ರ ಅವರ ಈ ಸಣ್ಣ ಅಂತರದ ಗೆಲುವು ಅವರಿಗೂ, ಅವರ ಹಿನ್ನೆಲೆಗೂ ತಕ್ಕ ಗೆಲುವೇನೂ ಆಗಿರಲಿಲ್ಲ. ಪಕ್ಷೇತರರಾಗಿ ಸ್ಪರ್ಧೆಗಿಳಿದ ನಾಗರಾಜ್ ಗೌಡ 70,802 ಮತ ಗಳಿಸಿದ್ದರು ಎಂದರೆ, ಒಂದೊಮ್ಮೆ ಕಾಂಗ್ರೆಸ್ ಇವರಿಗೆ ಟಿಕೇಟ್ ನೀಡಿ ಕಾಂಗ್ರೆಸ್ಸಿನಿಂದಲೇ ಚುನಾವಣೆಗೆ ಸ್ಪರ್ಧಿಸಿದ್ದರೆ ಅವರ ಸೋಲಿಗೆ ಈಗ ಕಾರಣವಾಗಿರುವ 11,008 ಮತಗಳು ಕಾಂಗ್ರೆಸ್ ಕಾರಣವಾಗಿ ಅವರಿಗೆ ಲಭಿಸಿದ್ದರೆ ವಿಜಯೇಂದ್ರ ಶಿಕಾರಿಪುರದಲ್ಲಿ ಸೋಲುವುದು ಖಚಿತವಾಗಿತ್ತು. ವಿಚಿತ್ರ ನೋಡಿ, ಕಾಂಗ್ರೆಸ್ ಟಿಕೇಟ್ ನೀಡಿ ಇಲ್ಲಿ ಕಣಕ್ಕಿಳಿದಿದ್ದ ಜಿ.ಬಿ. ಮಾಲತೇಶ್ ಗಳಿಸಿದ್ದು ಕೇವಲ 8,101 ಮತಗಳನ್ನಷ್ಟೇ. ಅಂದರೆ ಸುಲಭದಲ್ಲಿ ಗೆಲ್ಲಬಹುದಾಗಿದ್ದ ಶಿಕಾರಿಪುರ ಕ್ಷೇತ್ರವನ್ನು ’ಹೊಂದಾಣಿಕೆ ರಾಜಕಾರಣ’ವೇ ಕಾರಣವಾಗಿ ಕಾಂಗ್ರೆಸ್ ತನ್ನ ಪಕ್ಷದ ಒಬ್ಬ ಪ್ರಬಲ ಅಭ್ಯರ್ಥಿಗೆ ಮೋಸ ಮಾಡಿ, ಸೋಲುವುದು ಖಚಿತ ಎನ್ನುವ ಅಭ್ಯರ್ಥಿಗೆ ಟಿಕೇಟ್ ನೀಡಿತ್ತು; ನೆಪಕ್ಕೆ ಕಾಂಗ್ರೆಸ್ ಸ್ಪರ್ಧೆ ಮಾಡಿತ್ತು! ಈ ಮೂಲಕ ಶಿಕಾರಿಪುರದಲ್ಲಿ ವಿಜಯೇಂದ್ರ ಗೆಲ್ಲಬೇಕು, ಅದಕ್ಕೆ ಕಾಂಗ್ರೆಸ್ ಈ ಮೂಲಕ ಸಾಥ್ ನೀಡಬೇಕು ಎನ್ನುವುದು ಚುನಾವಣೆಗೆ ಮೊದಲೇ ನಿಶ್ಚಯವಾಗಿತ್ತು!? ಅಲ್ಲಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಎನ್ನುವುದು ಮತದಾರನ ಕಣ್ಣಿಗೆ ಮಾತ್ರ ಎರಡು ಪಕ್ಷಗಳೇ ಹೊರತು, ಕೊನೆಗೆ ಇಂತಹ ಸಂದರ್ಭ ಬಂದಾಗ ನನಗೆ ನೀನು, ನಿನಗೆ ನಾನು ಎನ್ನುವ ನೀತಿಯನ್ನೇ ಇವೆರಡೂ ರಾಷ್ಟ್ರೀಯ ಪಕ್ಷಗಳೂ ಪಾಲಿಸುತ್ತವೆ ಎನ್ನುವುದು ಸ್ಪಷ್ಟ.
ಒಂದೊಮ್ಮೆ ಮುಡಾ ಹಗರಣ ಬೆಳಕಿಗೆ ಬಾರದೇ ಹೋಗಿದ್ದರೆ, ಈ ಹಗರಣವನ್ನು ಖಂಡಿಸಿ ಬಿಜೆಪಿ - ಜೆಡಿಎಸ್ ಪಾದಯಾತ್ರೆಯ ಪ್ಲ್ಯಾನ್ ಮಾಡದೇ ಹೋಗಿದ್ದರೆ, ಈ ಪಾದಯಾತ್ರೆಯೇ ಕಾರಣವಾಗಿ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನಿಗೆ ಇಡೀ ಕಾಂಗ್ರೆಸ್ ಪಕ್ಷವೇ ಬೆನ್ನಿಗಿದೆ ಎನ್ನುವುದನ್ನು ತೋರಿಸಲು ’ಜನಾಂದೋಲನ’ದ ಮೂಲಕ ಶಕ್ತಿ ಪ್ರದರ್ಶನಕ್ಕಿಳಿಯದೇ ಹೋಗಿದ್ದರೆ, ಈ ಶಕ್ತಿ ಪ್ರದರ್ಶನದ ಸಾರ್ವಜನಿಕ ವೇದಿಕೆಯಲ್ಲಿ ಡಿ.ಕೆ. ಶಿವಕುಮಾರ್ ’ಏನೋ ಕಾಂಗ್ರೆಸ್ ಪಕ್ಷದ ಭಿಕ್ಷೆಯಿಂದ... ಕಾಂಗ್ರೆಸ್ ನಾಗರಾಜ್ ಗೌಡ ಅನ್ನೋನಿಗೆ ಟಿಕೇಟ್ ಕೊಟ್ಟಿದ್ದರೆ ವಿಜಯೇಂದ್ರ ನೀನು ಅಸೆಂಬ್ಲಿಗೇ ಬರ‍್ತಾ ಇರಲಿಲ್ಲ. ಇದನ್ನು ಗಮನದಲ್ಲಿಟ್ಕೋ...’ ಎಂದು ಹೇಳದೇ ಹೋಗಿದ್ದರೆ ಬಹುಶಃ ವಿಜಯೇಂದ್ರ ಗೆಲುವು ಹೊಂದಾಣಿಕೆ ರಾಜಕಾರಣದ ಕೂಸು ಮತ್ತು ಅದು ಕಾಂಗ್ರೆಸ್ ನೀಡಿದ ಭಿಕ್ಷೆ ಎನ್ನುವುದು ಇಷ್ಟು ತಕ್ಷಣ ತಿಳಿಯುತ್ತಿರಲಿಲ್ಲವೇನೋ!
ಹಾಗಿದ್ದರೆ ಡಿ.ಕೆ. ಶಿವಕುಮಾರ್ ಸಾರ್ವಜನಿಕ ವೇದಿಕೆಯಲ್ಲಿ ಹೇಳಿದ ಈ ಮಾತನ್ನೇ ಸತ್ಯವೆಂದುಕೊಂಡು ಬಿಡಬೇಕಾ? ಒಂದೊಮ್ಮೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಗೆಲುವಿನ ಅಂತರ ’ಬಿಗ್’ ಎನ್ನುವಂತಿದ್ದರೆ ಡಿ.ಕೆ.ಶಿ ಹೇಳಿದ ಮಾತನ್ನು ನಂಬದೇ ಇರಬಹುದಿತ್ತು. ಈಗ ತಮ್ಮ ಸಿಎಂ ತಪ್ಪನ್ನು ಮುಚ್ಚಿಟ್ಟುಕೊಳ್ಳಲು, ವಿಜಯೇಂದ್ರ ಮುಂದಾಳತ್ವದಲ್ಲಿ ಮುಡಾ ಹಗರಣದ ಬಗ್ಗೆ ನಡೆಯುತ್ತಿರುವ ಬಿಜೆಪಿ - ಜೆಡಿಎಸ್ ಹೋರಾಟವನ್ನು ಕುಗ್ಗಿಸಲು ಡಿ.ಕೆ.ಶಿ ಈ ಮಾತನ್ನು ಹೇಳಿದ್ದಾರೆ ಎಂದುಕೊಳ್ಳಬಹುದಿತ್ತು. ಆದರೆ ಶಿಕಾರಿಪುರದಲ್ಲಿ ಏನು ನಡೆದಿತ್ತು ಎನ್ನುವುದು ಬೇರೆ ಯಾರಿಗೆ ಗೊತ್ತಿಲ್ಲದೇ ಹೋದರೂ ಶಿಕಾರಿಪುರದ ಜನತೆಗೆ ಗೊತ್ತಿತ್ತು. ನಾಗರಾಜ್ ಗೌಡ ಕಾಂಗ್ರೆಸ್ಸಿನಿಂದ ಟಿಕೇಟ್ ನಿರೀಕ್ಷಿಸಿದ್ದರು ಮತ್ತು ಅವರ ನಿರೀಕ್ಷೆಗೆ ತಕ್ಕಂತೆ ಅವರು ಚುನಾವಣೆಯನ್ನು ಎದುರಿಸಲಿಕ್ಕೂ ಸಿದ್ಧವಾಗಿದ್ದರು. ತನಗೆ ಕಾಂಗ್ರೆಸ್ ಟಿಕೇಟ್ ನೀಡಿದರೆ ಶಿಕಾರಿಪುರದ ಮೇಲಿರುವ ಬಿಎಸ್‌ವೈ ಕುಟುಂಬದ ಹಿಡಿತವನ್ನು ತಪ್ಪಿಸುತ್ತೇನೆ ಎನ್ನುವ ಆತ್ಮವಿಶ್ವಾಸದಲ್ಲಿಯೂ ನಾಗರಾಜ್ ಇದ್ದರು. ಇದು ರಾಜ್ಯ ಕಾಂಗ್ರೆಸ್ಸಿಗಾಗಲೀ, ಹೈಕಮಾಂಡಿಗಾಗಲೀ ಗೊತ್ತಿಲ್ಲದ ಸಂಗತಿಯೇನೂ ಆಗಿರಲಿಲ್ಲ. ತಮ್ಮ ಪಕ್ಷವನ್ನು ಪ್ರಬಲಗೊಳಿಸಬೇಕು ಮತ್ತು ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಪ್ರಬಲ ನಾಯಕ ಯಡಿಯೂರಪ್ಪ ಕುಟುಂಬಕ್ಕೆ ಅವರ ಕ್ಷೇತ್ರದಲ್ಲೇ ಸೋಲುಣಿಸುವ ಮೂಲಕ ಕಾಂಗ್ರೆಸ್ಸು ಶಿಕಾರಿಪುರವನ್ನೂ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎನ್ನುವುದನ್ನು ತೋರಿಸುವ ಬಹುದೊಡ್ಡ ಅವಕಾಶ ಮತ್ತು ಪೊಲಿಟಿಕಲ್ ಮೈಲೇಜ್ ಇಲ್ಲಿ ಕಾಂಗ್ರೆಸ್ಸಿಗಿತ್ತು. ನಾಗರಾಜ್ ಗೌಡ ಇದಕ್ಕೆ ಬೇಕಾದ ಎಲ್ಲಾ ಪೂರ್ವ ತಯಾರಿಯನ್ನೂ ಮಾಡಿಕೊಂಡಿದ್ದರು. ಇಂತಹದ್ದೊಂದು ಅವಕಾಶ ಇದ್ದರೂ, ಕೊನೇಕ್ಷಣದ ತನಕ ಟಿಕೇಟ್‌ಗಾಗಿ ಪ್ರಯತ್ನಿಸಿದರೂ ನಾಗರಾಜ್ ಗೌಡರನ್ನು ಬದಿಗಿಡಲಾಯಿತು. ಸೋಲುವುದು ಖಚಿತ ಎಂದು ಗೊತ್ತಿದ್ದೂ ಮಾಲತೇಶ್‌ಗೆ ಟಿಕೇಟ್ ನೀಡಲಾಯಿತು. ತಮ್ಮ ಪಕ್ಷಕ್ಕೆ ಇಷ್ಟೆಲ್ಲ ಪಾಸಿಟಿವ್ ಆಗಬಹುದಾಗಿದ್ದ ಕ್ಷೇತ್ರದಲ್ಲಿ ಸೋಲುವ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೇಟ್ ನೀಡುತ್ತದೆ ಎಂದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ನಡೆದಿದೆ ಎಂದೇ ಅರ್ಥವಲ್ಲವಾ? ಖಂಡಿತ ಹೌದು. ತನ್ನ ಗೆಲುವಿನ ಬಗ್ಗೆ ಅಷ್ಟೊಂದು ನಂಬಿಕೆ, ಆತ್ಮವಿಶ್ವಾಸ ಇದ್ದಿದ್ದರಿಂದಲೇ ನಾಗರಾಜ್ ಗೌಡ ಕಾಂಗ್ರೆಸ್ ಚಿಹ್ನೆಯಿಲ್ಲದೇ ಪಕ್ಷೇತರರಾಗಿಯೇ ಸ್ಪರ್ಧಿಸಿದರು. ನಿಜ ಹೇಳಬೇಕೆಂದರೆ ಅವರು ಪಡೆದ ಮತಗಳನ್ನು, ಅದರಲ್ಲೂ ವಿಜಯೇಂದ್ರ ಅವರಂತಹ ಭವಿಷ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಆಗುವಂತಹ ಅಭ್ಯರ್ಥಿ ಎದುರು ಪಕ್ಷೇತರರಾಗಿ ಸ್ಪರ್ಧಿಸಿ ಗಳಿಸಿದ ಮತಗಳನ್ನು ನೋಡಿದರೆ ಇದು ನಾಗರಾಜ್ ಗೌಡರ ನಿಜವಾದ ಗೆಲುವು ಮತ್ತು ಇಷ್ಟು ಸಣ್ಣ ಅಂತರದ ಗೆಲುವು ಎಂದರೆ ಅದು ವಿಜಯೇಂದ್ರ ಪಾಲಿನ ನಿಜವಾದ ಸೋಲು!
ಈ ಕಾರಣದಿಂದಲೇ ಡಿ.ಕೆ.ಶಿ ಮೈಸೂರಿನಲ್ಲಿ ವಿಜಯೇಂದ್ರ ಗೆಲುವು ಕಾಂಗ್ರೆಸ್ ಭಿಕ್ಷೆ ಎಂದು ಹೇಳಿರುವುದರಲ್ಲಿ ನೂರಕ್ಕೆ ನೂರಲ್ಲದೇ ಹೋದರೂ ಶೇಕಡಾ ತೊಂಭತ್ತೊಂಭತ್ತರಷ್ಟು ಸತ್ಯ ಅಡಗಿದೆ ಅನ್ನಿಸುತ್ತಿರುವುದು.
ಇನ್ನೊಂದೆಡೆ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ನಾಯಕರುಗಳು ಕಾರ್ಯಕರ್ತರ ಹಾಗೂ ಎರಡನೇ ಮತ್ತು ಮೂರನೇ ಹಂತದ ನಾಯಕರಗಳನ್ನು ಯಾವ ಮುಲಾಜೂ ಇಲ್ಲದೇ ’ಬಲಿ ಹಾಕುತ್ತಾರೆ’ ಎನ್ನುವುದರೊಂದಿಗೆ, ಪಕ್ಷದ ತತ್ವ-ಸಿದ್ಧಾಂತ, ನೀತಿ-ನಿಯಮಗಳು ಬರೀ ’ಮಣ್ಣಾಂಗಟ್ಟಿ’ ಎನ್ನುವುದಕ್ಕೂ ಡಿ.ಕೆ.ಶಿ ಮಾತು ಕನ್ನಡಿ ಹಿಡಿದಿದೆ. ಶಿಕಾರಿಪುರದಲ್ಲಿ ನಾಗರಾಜ್ ಗೌಡ ಕಾಂಗ್ರೆಸ್ಸಿನ ಪ್ರಬಲ ನಾಯಕರಾಗಿ ರಾತ್ರಿ ಕಳೆದು ಬೆಳಗಾಗುವುದರೊಳಗೆ ಹುಟ್ಟಿಕೊಂಡಿರುವುದಿಲ್ಲ. ಅದಕ್ಕಾಗಿ ಅವರು ಎಷ್ಟು ವರ್ಷಗಳ ಕಾಲ ಮಣ್ಣು ಹೊತ್ತಿದ್ದರೋ? ಅದೇ ಹೊತ್ತಿಗೆ ಪಕ್ಷ ಟಿಕೇಟ್ ನೀಡುವ ಭರವಸೆ ನೀಡಿದ ನಂತರವೇ ಅವರು ತಾನು ಶಾಸಕನಾಗುವ ಕನಸಿನೊಂದಿಗೇ ಏನೇನು ಕೆಲಸಗಳನ್ನು ಮಾಡಿದ್ದರೋ? ಹಾಗಿಲ್ಲದೇ ಹೋಗಿದ್ದರೆ ವಿಜಯೇಂದ್ರನ ಎದುರು ಸ್ಪರ್ಧೆಗಿಳಿದ ಅವರಿಗೆ 70,802 ಮತಗಳು ಸಿಕ್ಕುವುದೂ ಸಾಧ್ಯವಿರಲಿಲ್ಲ. ಅಂದರೆ ಅಂದಾಜು ಐದೇ ವರ್ಷ ಅವರು ಕಾಂಗ್ರೆಸ್ಸನ್ನು ಮತ್ತು ಅದರ ನಾಯಕರನ್ನು ನಂಬಿಕೊಂಡು ಮಾಡಿದ ಕೆಲಸವ್ಯಾವುದನ್ನೂ ರಾಜ್ಯ ನಾಯಕರು ಮತ್ತು ಹೈಕಮಾಂಡ್ ಸ್ವಲ್ಪವೂ ಲೆಕ್ಕಕ್ಕಿಟ್ಟುಕೊಳ್ಳದೆ ವಿರೋಧಪಕ್ಷದವರಿಗೆ ಗೆಲುವು ತಂದುಕೊಡಲು ಬದಿಗೆಸೆದುಬಿಟ್ಟಿತು. ಅಂದರೆ ಜನರಿಗೆ ತೋರಿಸಲು ಬಿಜೆಪಿ - ಕಾಂಗ್ರೆಸ್ ಎದುರಿಗೆ ನೀನು ಹೊಡಿ, ನಾನು ಅಳುತ್ತೇನೆ, ನಾನು ಅಳುತ್ತೇನೆ, ನೀನು ತೊಟ್ಟಿಲು ತೂಗು ಎನ್ನುವ ನಾಟಕ ಕಟ್ಟುತ್ತವೆಯೇ ಹೊರತು, ಕೊನೆಗೆ ಇಂತಹ ಸಂದರ್ಭ ಬಂದಾಗ ಈ ಪಕ್ಷಗಳಿಗೆ ಕಾರ್ಯಕರ್ತರು, ತಳಹಂತದ ಅಥವಾ ಸ್ಥಳೀಯ ನಾಯಕರು ಯಾವ ರೀತಿಯಲ್ಲೂ ಲೆಕ್ಕಕ್ಕೇ ಇರುವುದಿಲ್ಲ ಎನ್ನುವುದನ್ನೂ ಡಿ.ಕೆ.ಶಿಯ ಮಾತುಗಳು ಸ್ಪಷ್ಟ ಪಡಿಸಿವೆ.
ಇದೊಂದು ರೀತಿಯಲ್ಲಿ ಡಿ.ಕೆ.ಶಿ ವಿಜಯೇಂದ್ರನನ್ನು ಅವಮಾನಿಸಲು, ಕುಗ್ಗಿಸಲು ಆಡಿದ ಮಾತಿನಂತೆ ಕಂಡರೂ, ಇನ್ನೊಂದೆಡೆ ಅವರು ಬಿಟ್ಟ ಬಾಣ ಅವರಿಗೇ ಮುಳುವಾಯಿತು ಎನ್ನುತ್ತಾರಲ್ಲ, ಹಾಗೇ ರಾಜ್ಯ ಕಾಂಗ್ರೆಸ್ಸಿನ ಒಳಗುಟ್ಟುಗಳೇನು ಎನ್ನುವುದನ್ನೂ ಬಯಲು ಮಾಡಿದೆ!
ಏನಾದರೂ ಆಗಲಿ, ವಿಜಯೇಂದ್ರ ಗೆಲುವು ಕಾಂಗ್ರೆಸ್ ಪರೋಕ್ಷವಾಗಿ ಕೊಟ್ಟಿರಬಹುದಾದ ಕಾಣಿಕೆ ಎನ್ನುವ ಬಗ್ಗೆ ಇದ್ದ ಸಣ್ಣದೊಂದು ಅನುಮಾನ ಈಗ ಬಗೆಹರಿದು, ಅದು ಕಾಂಗ್ರೆಸ್ ನೀಡಿದ ಭಿಕ್ಷೆ ಎನ್ನುವುದು ಒಂದು ಹಂತಕ್ಕಂತೂ ಸ್ಪಷ್ಟವಾಗಿದೆ. ಇದೇ ಹೊತ್ತಿಗೆ ಇನ್ನೊಂದೆಡೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಎಸ್. ಈಶ್ವರಪ್ಪ ಮತ್ತು ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಕಾಂಗ್ರೆಸ್ - ಬಿಜೆಪಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಕಿಡಿ ಕಾರುತ್ತಲೇ, ವಿಜಯೇಂದ್ರ ಗೆಲುವು ಕಾಂಗ್ರೆಸ್ ಭಿಕ್ಷೆಯಲ್ಲ ಎನ್ನುವುದನ್ನು ಸಾಬೀತು ಪಡಿಸಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮರು ಚುನಾವಣೆ ಎದುರಿಸಲಿ, ಈ ಮೂಲಕ ಬಿಜೆಪಿ ಶಕ್ತಿ ಏನೆನ್ನುವುದನ್ನೂ ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಹಾಗೆ ನೋಡಿದರೆ, ಇವರು ಹೇಳಿರುವುದರಲ್ಲೂ ಅರ್ಥವಿದೆ ಅನ್ನಿಸುತ್ತಿದೆ. ಪಕ್ಷೇತರ ಅಭ್ಯರ್ಥಿ ಎದುರು ಕಡಿಮೆ ಅಂತರದಲ್ಲಿ ಗೆದ್ದು, ಯಡಿಯೂರಪ್ಪ ಮಗ ಎನ್ನುವ ಕಾರಣಕ್ಕೇ ರಾಜ್ಯಾಧ್ಯಕ್ಷ ಹುದ್ದೆಯನ್ನೂ ಪಡೆದಿರುವ ವಿಜಯೇಂದ್ರಗೆ ರಾಜ್ಯ ಬಿಜೆಪಿ ಮೇಲೆ ಸಂಪೂರ್ಣ ಹಿಡಿತವಿನ್ನೂ ಸಿಕ್ಕಿಲ್ಲ ಎನ್ನುವುದು ಯತ್ನಾಳ್ ನಾಲಿಗೆಗೆ ಬೀಳದ ಬ್ರೇಕ್, ಬೆಳಗಾವಿಯಲ್ಲಿ ನಡೆದ ಬಿಜೆಪಿ ಸಮಾನ ಮನಸ್ಕರ ಸಭೆಗಳು, ಚನ್ನಪಟ್ಟಣ ಉಪಚುನಾವಣಾ ಟಿಕೇಟ್ ವಿಚಾರವಾಗಿ ಸಿ.ಪಿ. ಯೋಗೇಶ್ವರ ಹಿಡಿದ ಹಠ, ಮೈಸೂರು ಪಾದಯಾತ್ರೆಯಲ್ಲಿ ಎದ್ದ ಗೊಂದಲಗಳೇ ಹೇಳುತ್ತಿವೆ. ಹೀಗಿರುವಾಗ ವಿಜಯೇಂದ್ರ ರಾಜೀನಾಮೆ ನೀಡಿ ಇನ್ನೊಮ್ಮೆ ಚುನಾವಣೆ ಎದುರಿಸುವುದು, ಈ ಮೂಲಕ ನಾನು ಪಕ್ಷದ ಬೆಂಬಲದೊಂದಿಗೇ ನನ್ನ ಕ್ಷೇತ್ರದಲ್ಲಿ ಗೆದ್ದಿದ್ದೇನೆ ಹೊರತು, ಕಾಂಗ್ರೆಸ್ ನೀಡಿದ ಭಿಕ್ಷೆಯಿಂದಲ್ಲ ಎಂದು ಸಾಬೀತು ಪಡಿಸುವುದು ರಾಜ್ಯ ಬಿಜೆಪಿಗೆ ಇನ್ನಷ್ಟು ಶಕ್ತಿ ತುಂಬಬಲ್ಲದು. ಮತ್ತು ರಾಜ್ಯಾಧ್ಯಕ್ಷ ಹುದ್ದೆಯ ಮೇಲೂ ವಿಜಯೇಂದ್ರಗೆ ಗಟ್ಟಿ ಹಿಡಿತ ಸಾಧಿಸಲು ದಾರಿ ಮಾಡಿಕೊಡಬಹುದು.
-ಗಣೇಶ ಕೆ., ಸಂಪಾದಕರು, ನ್ಯೂಸ್ ಪೋಸ್ಟ್‌ಮಾರ್ಟಮ್
ಕಾಮೆಂಟ್‌ಗಳಿಲ್ಲ