NP EXCLUSIVE - ದುರಸ್ತಿಗಾಗಿ ಕಾಯುತ್ತಿದೆ ಹೊಸನಗರ ತಾಲ್ಲೂಕು ಆಹಾರ ಇಲಾಖೆ ಕಟ್ಟಡದ ಗೋಡೆ - ತಾಲ್ಲೂಕು ಕಚೇರಿ ಹಿಂಬಾಗಿಲು ಅವ್ಯವಹಾರಕ್ಕೆ ದಾರಿಯೇ!?
ಹೊಸನಗರ: ಶತಮಾನದ ಇತಿಹಾಸವುಳ್ಳ ಪಟ್ಟಣದ ತಾಲ್ಲೂಕು ಕಚೇರಿ ಪ್ರಾಂಗಣದಲ್ಲೇ ಇರುವ ಆಹಾರ ನಿರೀಕ್ಷಕರ ಕಚೇರಿ, ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಮಳೆಗಾಲದಲ್ಲಿ ಸೋರುತ್ತಿದೆ. ಮಳೆ ನೀರಿನಿಂದ ಕೊಠಡಿಯ ಗೋಡೆ ಸಂಪೂರ್ಣ ತೇವವಾಗಿದ್ದು, ಶೀಘ್ರದಲ್ಲೇ ಕಟ್ಟಡದ ಒಂದು ಪಾರ್ಶ್ವ ನೆಲ ಕಚ್ಚುವ ಸ್ಥಿತಿ ತಲುಪಿದೆ. ಇದರ ನಡುವೆಯೇ ಆಹಾರ ಇಲಾಖೆಯ ಸಿಬ್ಬಂದಿವರ್ಗ ಆತಂಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ.
![]() |
ಮಳೆ ನೀರು ಸೋರಿ ಒದ್ದೆಯಾದ ಆಹಾಯ ಇಲಾಖೆ ಕಚೇರಿಯ ಗೋಡೆ ಗೋಡೆಗೆ ಅಂಟಿಕೊಂಡಂತಿರುವ ದಾಖಲೆಗಳು |
ಇದೇ ಕೊಠಡಿಯ ಗೋಡೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಣೆ ಕೂಡಾ ತಾಕಿಕೊಂಡಂತಿದೆ. ಹೀಗೇ ಮಳೆ ಮುಂದುವರೆದಲ್ಲಿ ಭಾರೀ ಅವಘಡ ಸಂಭವಿಸುವ ಸಾಧ್ಯತೆಗಳಿವೆ. ಈ ಕೊಠಡಿಯ ವಿದ್ಯುತ್ ಸಂಪರ್ಕ ಸಹ ದುಃಸ್ಥಿತಿ ತಲುಪಿದ್ದು ತುರ್ತಾಗಿ ದುರಸ್ತಿ ಕಾರ್ಯ ಆಗಬೇಕಿದೆ.
![]() |
ಮಳೆ ನೀರು ಸೋರಿ ಈ ಗೋಡೆ ಹೇಗಾಗಿದೆ ನೋಡಿ |
ತಾಲ್ಲೂಕು ಕಚೇರಿಯ ಹಿಂಬಾಗಿಲಿನ ಸುತ್ತಮುತ್ತ ಏನೆಲ್ಲ ನಡೆಯುತ್ತಿದೆ?!
ಈ ನಡುವೆ ತಾಲ್ಲೂಕು ಕಚೇರಿ ಪ್ರವೇಶಕ್ಕೆ ಸದೃಢ ಮುಂಬಾಗಿಲು ಇದ್ದರೂ ಹಿಂಬದಿಯ ಹಳೇ ಬಾಗಿಲಿನ ಮೂಲಕ ಓಡಾಟಕ್ಕೆ ಸಾರ್ವಜನಿಕರ ಅಪಸ್ವರ ಕೇಳಿಬರುತ್ತಿದೆ. ಕಚೇರಿಯೊಳಗೆ ನಡೆಯುವ ಹಲವು ಅವ್ಯವಹಾರಕ್ಕೆ ಇದು ದಾರಿಯಾದಂತಾಗಿದೆ ಎನ್ನುವ ಮಾತುಗಳು ಜನರಿಂದ ಕೇಳಿ ಬರುತ್ತಲೇ ಇದೆ. ಹಿಂದೆ ಇಲ್ಲಿ ರಾತ್ರಿ ವೇಳೆ ಅನೈತಿಕ ಚಟುವಟಿಕೆಯ ತಾಣವಾಗಿದೆ ಎನ್ನುವ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಹಿಂಬಾಗಿಲನ್ನು ಖಾಯಮ್ಮಾಗಿ ಬಂದ್ ಮಾಡಲಾಗಿತ್ತು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ಮತ್ತೆ ಹಿಂಬಾಗಿಲ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಈ ಹಿಂಬಾಗಿಲ ಮೂಲಕ ತಾಲ್ಲೂಕು ಕಚೇರಿಗೆ ಪ್ರವೇಶಿಸಲು ಹೊರಟರೆ ನೂರಾರು ತಂಬಾಕು, ಗುಟ್ಕಾ ತಿಂದು ಎಸೆದ ಖಾಲಿ ಪ್ಯಾಕೇಟುಗಳು, ಖಾಲಿ ಮದ್ಯದ ಬಾಟಲಿಗಳು, ಪೌಚ್‌ಗಳು ಹಾಗೂ ವೀಳ್ಯದೆಲೆ ಅಡಿಕೆ ತಿಂದು ಉಗಿದಿರುವುದು, ಕಸದ ರಾಶಿ ತುಂಬಿರುವ 'ಉಚಿತ ಕಾನೂನು ಸಲಹಾ ಕೊಠಡಿ'ಯನ್ನು ಜನತೆ ಕಣ್ಣಾರೆ ಕಾಣಬಹುದು. ಹಿಂಬದಿ ಬಾಗಿಲಿನ ಹತ್ತಿರದಲ್ಲಿಯೇ ಜಗಿದು ಉಗಿದ ಗುಟ್ಕಾದಿಂದ ಕೆಂಪಾದ ಗೋಡೆ ಸಾರ್ವಜನಿಕರಿಗೆ ಹಿಂಬಾಗಿಲಿನಿಂದ ಆಹಾರ ಇಲಾಖೆ ಕಚೇರಿಗೆ ಅದ್ಧೂರಿ ಸ್ವಾಗತ ಕೋರುತ್ತದೆ.
![]() |
ಎರಡೂ ಕಡೆಯ ಗೋಡೆ ಮಳೆ ನೀರಿನಿಂದ ಒದ್ದೆಯಾಗಿರುವುದು |
ತಾಲ್ಲೂಕು ಕಚೇರಿಯ ಹಳೇ ಕಟ್ಟಡದಲ್ಲಿ ಕನಿಷ್ಠ ಸ್ವಚ್ಛತೆ ಮರೀಚಿಕೆಯಾಗಿ ಹಲವು ಸಮಯವೇ ಕಳೆದಿದೆ. ಪ್ರತೀರಾತ್ರಿ ಇಲ್ಲಿನ ಕಸಾಪ ಕಚೇರಿ ತೆರೆದಿರುವುದು ಇಲ್ಲಿನ ಜನರಲ್ಲಿ ಹತ್ತು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಇನ್ನು ತಾಲ್ಲೂಕು ಕಚೇರಿ ಹಿಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಇಂದಿರಾ ಕ್ಯಾಂಟೀನ್ ಕಟ್ಟಡದ ಕಾಮಗಾರಿ ಆರಂಭವಾಗಿ ಹಲವು ತಿಂಗಳಾದರೂ ಈವರೆಗೂ ಪೂರ್ಣಗೊಳ್ಳದೆ, ಕಟ್ಟಡ ಹಾಗೂ ಅದರ ಆಸುಪಾಸಿನಲ್ಲಿ ನೀರು ನಿಂತು ಡೆಂಗ್ಯೂ ಹರಡುವ ಸೊಳ್ಳೆ, ಲಾರ್ವಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದ್ದು, ಈ ಕ್ಯಾಂಟೀನ್ ನಿರ್ಮಾಣದ ಔಚಿತ್ಯವನ್ನೇ ಜನತೆ ಪ್ರಶ್ನಿಸುವಂತಾಗಿದೆ.
ಸಂಬಂಧಪಟ್ಟವರು ಈ ಕುರಿತು ತುರ್ತಾಗಿ ಗಮನ ಹರಿಸಿ ಇಲ್ಲಿನ ಸಮಸ್ಯೆಗಳಿಗೆ ದಾರಿ ತೋರಿಸುವ ಕೆಲಸವನ್ನು ಮಾಡಬೇಕಿದೆ, ಈ ಮೂಲಕ ತಾಲ್ಲೂಕು ಕಚೇರಿ ಹಾಗೂ ಆಹಾರ ಇಲಾಖೆ ಕಟ್ಟಡ ಮತ್ತು ಆಸುಪಾಸಿನ ಸ್ವಚ್ಛತೆಗೂ ಗಮನ ಹರಿಸಬೇಕಿದೆ ಎನ್ನುವುದು ದಿನನಿತ್ಯ ಇಲ್ಲಿಗೆ ಬಂದು ಹೋಗುವ ನಾಗರೀಕರ ಆಗ್ರಹವಾಗಿದೆ.
ಕಾಮೆಂಟ್‌ಗಳಿಲ್ಲ