ಚಕ್ರಾ ಸಾವೇಹಕ್ಲು ಜಲಾಶಯಕ್ಕೆ ಬಾಗಿನ ಅರ್ಪಿಸಿದ ಹೊಸನಗರ ತಹಶೀಲ್ದಾರ್ ರಶ್ಮಿ ಹೆಚ್.ಜೆ
ಹೊಸನಗರ : ಭರ್ತಿಯಾಗಿ ಓವರ್ ಫ್ಲೋ ಆಗುತ್ತಿರುವ ಚಕ್ರಾ ಸಾವೇಹಕ್ಲು ಅವಳಿ ಜಲಾಶಯಕ್ಕೆ ತಾಲ್ಲೂಕು ಆಡಳಿತ ಮತ್ತು ಕರಿಮನೆ ಗ್ರಾಮ ಪಂಚಾಯ್ತಿ ವತಿಯಿಂದ ತಹಶೀಲ್ದಾರ್ ರಶ್ಮಿ ಹೆಚ್.ಜೆ, ಶುಕ್ರವಾರ ಎರಡೂ ಜಲಾಶಯಗಳಿಗೆ ಗಂಗಾರತಿ ಬೆಳಗಿ ಬಾಗಿನ ಅರ್ಪಿಸಿದರು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ ಪಿಡಿಎಫ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಬಾಗಿನ ಅರ್ಪಿಸಿ ಮಾತನಾಡಿದ ತಹಶೀಲ್ದಾರ್, ನಾಡು ಬೆಳಗಲು ಸುದೀರ್ಘ ಸೇವೆಗೈದಿರುವ ಎರಡು ಜಲಾಶಯಗಳಿಗೆ ಬಾಗಿನ ಅರ್ಪಿಸುವ ಅವಕಾಶ ಸಿಕ್ಕಿರುವುದಕ್ಕೆ ನನ್ನಲ್ಲಿ ಧನ್ಯತೆ ಮೂಡಿದೆ. ಇದೊಂದು ಅಪೂರ್ವ ಕ್ಷಣವಾಗಿದ್ದು, ಮಹಿಳೆಯರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಬಾಗಿನ ಅರ್ಪಿಸುವ ಈ ಕ್ಷಣದ ಸಂಭ್ರಮವನ್ನು ಹೆಚ್ಚಿಸಿತು ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಅವಳಿ ಜಲಾಶಯ ವೀಕ್ಷಣೆಗೆ ಸ್ಥಳೀಯ ಮಟ್ಟದಲ್ಲೇ ಪಾಸ್ ನೀಡುವ ವ್ಯವಸ್ಥೆಯಾಗಬೇಕು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಮನವಿ ಮಾಡಿದರು. ಇದಕ್ಕೆ ಕೆಪಿಸಿ ಸಹಾಯಕ ಇಂಜಿನಿಯರ್ (ಗೇಟ್) ವಿನಯ ಕುಮಾರ ಕೆ, ಅವಳಿ ಡ್ಯಾಂ ವೀಕ್ಷಣೆಗೆ ಸಂಬಂಧಿಸಿ ಸ್ಥಳೀಯವಾಗಿ ಪಾಸ್ ನೀಡುವ ವಿಚಾರವನ್ನು ಶಾಸಕರು ಕೂಡಾ ಪ್ರಸ್ತಾಪಿಸಿದ್ದಾರೆ. ತಹಶೀಲ್ದಾರ್ ಕೂಡ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ವಿಶೇಷವಾಗಿ ದೇವಿಯ ಮೂರ್ತಿ ಇಟ್ಟು ಸಿಂಗರಿಸಿ ಬಾಗಿನವನ್ನು ನೀರಿನಲ್ಲಿ ತೇಲಿ ಬಿಡುತ್ತಿದ್ದಂತೆ ನೆರೆದವರಲ್ಲಿ ಸಂಭ್ರಮ ಮನೆ ಮಾಡಿತು. ಕರಿಮನೆ ಗ್ರಾಮದ ಮಹಿಳೆಯರು, ತಾಲ್ಲೂಕು ನೌಕರರು ಈ ಸಂದರ್ಭದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಕರಿಮನೆ ಗ್ರಾ.ಪಂ. ಅಧ್ಯಕ್ಷೆ ದೇವಮ್ಮ ಗೋಪಾಲ್, ಉಪಾಧ್ಯಕ್ಷ ರಮೇಶ ಹಲಸಿನಹಳ್ಳಿ, ಕೆಪಿಸಿ ಅಧಿಕಾರಿಗಳಾದ ಓಂಕಾರಪ್ಪ, ಹೊಂಬೇಗೌಡ್ರು, ಬಿಇಓ ಕೃಷ್ಣಮೂರ್ತಿ, ರತ್ನಾಕರಗೌಡ, ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ಸತೀಶ್ ಪಟೇಲ್, ಶಾಸಕ ಬೇಳೂರು ಆಪ್ತ ಸಹಾಯಕ ಸಣ್ಣಕ್ಕಿ ಮಂಜು, ದೇವೇಂದ್ರ ನಾಯ್ಕ, ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ವಿಶೇಷವಾಗಿ ಮಹಿಳಾ ಸಿಬ್ಬಂದಿಗಳು, ಗ್ರಾಪಂ ಸದಸ್ಯರು, ಇತರೆ ಸಿಬ್ಬಂದಿಗಳು ಭಾಗವಹಿಸಿದ್ದರು.
ಕಾಮೆಂಟ್‌ಗಳಿಲ್ಲ