ಹೊಸನಗರ ಈಡಿಗರ ಸಂಘದಲ್ಲಿ ಅವ್ಯವಹಾರ - ಸೂಕ್ತ ತನಿಖೆಗೆ ಆಗ್ರಹಿಸಿ ಮಾಜಿ ಶಾಸಕ ಸ್ವಾಮಿರಾವ್ ಆರಂಭಿಸಿದ್ದ ಉಪವಾಸ ಸತ್ಯಾಗ್ರಹ ಮಧ್ಯಸ್ಥಿಕೆಯೊಂದಿಗೆ ಅಂತ್ಯ
ಹೊಸನಗರ : ಇಲ್ಲಿನ ತಾಲ್ಲೂಕು ಆರ್ಯ ಈಡಿಗ ವಿದ್ಯಾವರ್ಧಕ ಸಂಘದಲ್ಲಿ ನಡೆದಿದೆ ಎನ್ನಲಾದ ಭಾರಿ ಅವ್ಯವಹಾರ ಮತ್ತು ನಿಯಮ ಬಾಹಿರ ಸಭೆಯನ್ನು ಖಂಡಿಸಿ ಹಾಗೂ ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರು ಸಂಘದ ಕಚೇರಿ ಎದುರು ನಿನ್ನೆಯಿಂದ ಆರಂಭಿಸಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ನಿಟ್ಟೂರು ಶ್ರೀ ನಾರಾಯಣ ಗುರು ಮಠದ ಪೀಠಾಧ್ಯಕ್ಷರಾದ ಶ್ರೀ ರೇಣುಕಾನಂದ ಸ್ವಾಮಿಗಳ ಮಧ್ಯಸ್ಥಿಕೆಯಲ್ಲಿ ಇಂದು ಅಂತ್ಯಗೊಳಿಸಿದರು.
95ರ ಇಳಿ ವಯಸ್ಸಿನ ಸ್ವಾಮಿರಾವ್ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿರುವ ಸಂಗತಿ ತಿಳಿದು ಹಲವು ಮುಖಂಡರು ಸ್ಥಳಕ್ಕೆ ಆಗಮಿಸಿದ್ದು, ಇಂದು ಆಗಮಿಸಿದ ಶ್ರೀ ರೇಣುಕಾನಂದ ಸ್ವಾಮಿಗಳು ಮಧ್ಯಸ್ಥಿಕೆ ವಹಿಸಿ, ಹಲವು ಷರತ್ತುಗಳಿಗೆ ಒಪ್ಪಿ ಎಳನೀರು ಸೇವಿಸುವುದರೊಂದಿಗೆ ಉಪವಾಸ ಅಂತ್ಯಗೊಳಿಸಿದರು.
ಸ್ವಾಮಿರಾವ್ ಅವರು ಶಾಸಕರಾಗಿದ್ದಾಗ ಆರ್ಯ ಈಡಿಗ ವಿದ್ಯಾವರ್ಧಕ ಸಂಘ ಇರುವ ಜಾಗವನ್ನು ತೆಗೆದುಕೊಂಡು ಅಲ್ಲಿ ಒಂದಷ್ಟು ವಾಣಿಜ್ಯ ಮಳಿಗೆಗಳನ್ನು ಕಟ್ಟಿಸಿ ಸಂಘಕ್ಕೆ ನಿರಂತರವಾಗಿ ಆದಾಯ ಬರುವಂತೆ ಮಾಡಿದ್ದರು. ಆದರೆ ಇವರ ಅಧಿಕಾರಾವಧಿ ಮುಗಿದ ನಂತರ ಅಧಿಕಾರ ಹಿಡಿದ ಈಡಿಗ ಮುಖಂಡರು ಕಳೆದ ಹದಿನೈದು ವರ್ಷಕ್ಕೂ ಹೆಚ್ಚು ಸಮಯದಿಂದ ಸಂಘದ ಪ್ರಗತಿ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಜೊತೆಗೆ ಸಂಘದ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನೂ ಕರೆಯದೆ ಸಂಘದಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಈ ಹಿಂದೆಯೇ ಒಮ್ಮೆ ಸ್ವಾಮಿರಾವ್ ಅವರು ದೂರಿದ್ದರು. ಮತ್ತು ಈ ಬಗ್ಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಆ ಸಂದರ್ಭದಲ್ಲಿ ಮುಖಂಡರು ಮಾತುಕತೆ ನಡೆಸಿ ಪ್ರತಿಭಟನೆ ಮುಂದಕ್ಕೆ ಹೋಗಿತ್ತು. ಈಗ ಅಂದರೆ ನಿನ್ನೆ ಯಾವುದೇ ಮುನ್ಸೂಚನೆ ಕೊಡದೆ ಸಂಘದ ಎದುರಿಗೆ ಸ್ವಾಮಿರಾವ್ ಅವರು ಪ್ರತಿಭಟನೆ ಆರಂಭಿಸಿದ್ದರು. ಮತ್ತು ಬೇಡಿಕೆಗಳು ಈಡೇರದಿದ್ದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಹೇಳಿದ್ದರು.
ಸ್ವಾಮಿರಾವ್ ಅವರು ಪ್ರತಿಭಟನೆ ನಡೆಸಲಾರಂಭಿಸಿದಂತೆ ಅನೇಕ ಮುಖಂಡರು ಅವರೊಂದಿಗೆ ಮಾತುಕತೆ ನಡೆಸಿದರಾದರೂ ಪಟ್ಟು ಬಿಡದ ಅವರು ಎರಡನೇ ದಿನಕ್ಕೂ ತಮ್ಮ ಸತ್ಯಾಗ್ರಹವನ್ನು ಮುಂದುವರಿಸಿದ್ದರು. ಕೊನೆಗೆ ಶ್ರೀ ರೇಣುಕಾನಂದ ಸ್ವಾಮಿಗಳ ಮಧ್ಯಸ್ಥಿಕೆಯೊಂದಿಗೆ ಸತ್ಯಾಗ್ರಹ ಅಂತ್ಯಗೊಂಡಂತಾಗಿದೆ.





ಕಾಮೆಂಟ್‌ಗಳಿಲ್ಲ