ಹೆಬ್ಬೈಲು ಮಿನಿ ಅಂಗನವಾಡಿಯಲ್ಲಿ ಹಾಡಹಗಲೇ ನಡೆಯಿತು ದರೋಡೆ - ಕರ್ತವ್ಯದಲ್ಲಿದ್ದ ಕಾರ್ಯಕರ್ತೆಯ ಮಾಂಗಲ್ಯ ಸರ ಕಿತ್ತೊಯ್ದ ಅಪರಿಚಿತ ಮುಸುಕುಧಾರಿ
ಹೊಸನಗರ : ತಾಲ್ಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬೈಲು ಗ್ರಾಮದ ಮಿನಿ ಅಂಗನವಾಡಿಯ ಕಾರ್ಯಕರ್ತೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಅಪರಿಚಿತ ಮುಸುಕುಧಾರಿಯೊಬ್ಬ ಕಿತ್ತೊಯ್ದ ಘಟನೆ ನಡೆದಿದೆ.
ಹೆಬ್ಬೈಲಿನ ಮಿನಿ ಅಂಗನವಾಡಿಯ ಕಾರ್ಯಕರ್ತೆ ತಾರಾಮತಿ ಎನ್ನುವವರು ಆಗಸ್ಟ್ 22ರಂದು ಕರ್ತವ್ಯದಲ್ಲಿದ್ದಾಗ 4 ಗಂಟೆ ಸುಮಾರಿಗೆ ನೀಲಿ ಬಣ್ಣದ ಜರ್ಕಿನ್ ಹಾಕಿಕೊಂಡು, ಮುಖಕ್ಕೆ ಬಟ್ಟೆ ಮುಚ್ಚಿಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಅಂಗನವಾಡಿಯೊಳಗೆ ನುಗ್ಗಿದ್ದಾನೆ. ಹೀಗೆ ಅಂಗನವಾಡಿಯೊಳಗೆ ನುಗ್ಗಿದ ಅಪರಿಚಿತ ವ್ಯಕ್ತಿ ಕಾರ್ಯಕರ್ತೆಯನ್ನು ಬೆದರಿಸಿ ಅವರ ಕೊರಳಲ್ಲಿದ್ದ 42 ಗ್ರಾಂ ತೂಕದ ಅಂದಾಜು 3 ಲಕ್ಷ 20 ಸಾವಿರ ರೂಪಾಯಿ ಬೆಲೆ ಬಾಳುವ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಈ ದರೋಡೆ ಪ್ರಕರಣದ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖಾ ಕ್ರಮ ಕೈಗೊಂಡಿದ್ದಾರೆ.
CLICK ಮಾಡಿ -5 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ - ಅರ್ಜಿ ಆಹ್ವಾನ
ತಾಲ್ಲೂಕಿನ ಹಲವೆಡೆ ಅಂಗನವಾಡಿ ಹಾಗೂ ಮಿನಿ ಅಂಗನವಾಡಿ ಕೇಂದ್ರಗಳು ಹೆಚ್ಚು ಜನ ಸಂಚಾರವಿಲ್ಲದ ಜಾಗದಲ್ಲಿ ನಡೆಯುತ್ತಿದ್ದು, ಮಕ್ಕಳೊಂದಿಗಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಯಾವುದೇ ರೀತಿಯ ಹೆಚ್ಚಿನ ರಕ್ಷಣೆ ಇರುವುದಿಲ್ಲ. ಈಗ ಹೆಬ್ಬೈಲಿನ ಮಿನಿ ಅಂಗನವಾಡಿಯಲ್ಲಿ ನಡೆದ ದರೋಡೆ ಪ್ರಕರಣದಿಂದಾಗಿ ಸಹಜವಾಗಿಯೇ ಆತಂಕಗೊಂಡಿರುವ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳಿಲ್ಲ