ಜೈಲುಗಳನ್ನು ಬೆತ್ತಲಾಗಿಸಿದ ದರ್ಶನ್‌ನ ಫೋಟೋ ಹೇಳಿದ ಹಸಿ ಸತ್ಯಗಳು...!!
ಜೈಲುಗಳಿರಬೇಕಾಗಿರುವುದೇ ಹೀಗೆ. ಯಾಕೆಂದರೆ ನಮ್ಮ ನೆಲದ ಕಾನೂನೇ ಜೈಲುಗಳನ್ನು ಸುಧಾರಣಾ ಕೇಂದ್ರಗಳಾಗಿ ನೋಡುತ್ತದೆ. ಜೈಲು ಸೇರಿದ ಕೈದಿಗಳು ಅಲ್ಲಿಂದ ಹೊರ ಬರುವಾಗ ಅವರ ಮನಃಪರಿವರ್ತನೆಯಾಗಿರಬೇಕು, ಸಮಾಜಕ್ಕೆ ಈ ಮೊದಲಿನ ವ್ಯಕ್ತಿಯಾಗಿಯೇ ಅವರು ಸೇರ್ಪಡೆಯಾಗಬೇಕು ಎನ್ನುವುದು ಇದರ ಹಿಂದಿರುವ ಉದ್ದೇಶ. ಆದ್ದರಿಂದಲೇ ಸನ್ನಡತೆ ತೋರಿದ ಕೈದಿಗಳನ್ನು ಅವಧಿಗೆ ಮೊದಲೇ ಬಿಡುಗಡೆ ಮಾಡುವ ವ್ಯವಸ್ಥೆಯನ್ನೂ ಕಾನೂನು ನೀಡಿದೆ.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಈ ಹಿನ್ನೆಲೆಯಲ್ಲಿ ಇವತ್ತು ಎಲ್ಲೆಡೆ ಸುದ್ದಿಯಾಗಿರುವ ಜೈಲೊಳಗಿರುವ ನಟ ದರ್ಶನ್‌ನ ಫೋಟೋವನ್ನು ನೋಡಿದರೆ ಇದರಲ್ಲಿ ತಪ್ಪೇನೂ ಕಾಣುವುದಿಲ್ಲ. ಅದೇ ನಟ ದರ್ಶನ್‌ಗೆ ಜೈಲಿನಲ್ಲಿ ಸಿಕ್ಕ ಈ ಸೌಲಭ್ಯಗಳೆಲ್ಲ ಇದೇ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಲ್ಲಾ ಕೈದಿಗಳಿಗೂ ಸಿಗುತ್ತಿದೆಯಾ? ಎನ್ನುವ ಪ್ರಶ್ನೆಯನ್ನು ಕೇಳಿಕೊಂಡರೆ ತಪ್ಪು ಅನ್ನಿಸುತ್ತದೆ. ಹೌದು, ನಟ ದರ್ಶನ್‌ನ ಈ ವೈರಲ್ ಫೋಟೋ ನಮ್ಮ ರಾಜ್ಯದ ಜೈಲುಗಳ ಅವಸ್ಥೆಯೇನು ಎನ್ನುವುದನ್ನು ಇನ್ನೊಮ್ಮೆ ತೆರೆದಿಟ್ಟಿದೆ. ಜೊತೆಗೆ ಜೈಲುಗಳು ಉಳ್ಳವರಿಗೆ ಸ್ವರ್ಗ, ಅದೇ ಬಡವರ ಪಾಲಿಗೆ ನರಕ ಎನ್ನುವುದನ್ನೂ ಸಾಬೀತು ಮಾಡಿದೆ.
ಮೊದಲನೇಯದಾಗಿ, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್‌ಗೆ ತನ್ನ ಮನೆಯ ಎದುರಿನ ಅಂಗಳವೇನೋ ಎನ್ನುವಂತೆ ಮನೆಗೆ ಬಂದವರ ಜೊತೆ ಆರಾಮಾಗಿ ಕಾಫಿ ಕುಡಿಯುತ್ತಾ, ಸಿಗರೇಟು ಸೇದುತ್ತಾ ಕುಳಿತುಕೊಂಡಿರಲು ಸಿಕ್ಕಂತಹ ಅವಕಾಶ ಜೈಲಿನ ಇತರೆಲ್ಲ ಕೈದಿಗಳಿಗೂ ಸಿಗುತ್ತಿದೆಯಾ? ಸಿಗುತ್ತಿಲ್ಲ ಎನ್ನುವುದನ್ನು ಯಾರೋ ಹೇಳಬೇಕಾಗಿಲ್ಲ. ಅದನ್ನು ವೈರಲ್ ಆಗಿರುವ ಈ ಫೋಟೋವೇ ಹೇಳುತ್ತಿದೆ. ಜೈಲಿನಲ್ಲಿ ಎಲ್ಲಾ ಕೈದಿಗಳಿಗೂ ದರ್ಶನ್‌ಗೆ ಸಿಕ್ಕಂತಹ ಸೌಲಭ್ಯ ಇತ್ಯಾದಿಗಳು ಸಿಕ್ಕಿದ್ದರೆ ಈ ಫೋಟೋವನ್ನು ಕ್ಲಿಕ್ಕಿಸಿ ಜೈಲಿನಾಚೆಗೆ ಕಳಿಸುವ ಜರೂರು ಯಾರಿಗಿರುತ್ತಿತ್ತು? ಅಂದರೆ ದರ್ಶನ್ ರೌಡಿ ಶೀಟರ್ ಸೇರಿದಂತೆ ಇನ್ನಿಬ್ಬರ ಜೊತೆ ಮನೆಯಲ್ಲಿ ಕುಳಿತಂತೆ ಆರಾಮಾಗಿ ಕುಳಿತು ನಗುತ್ತಿರುವ ಈ ಫೋಟೋವನ್ನು ಅವರಿಗೆ ಕಾಣಿಸದಂತೆ ಜೈಲಿನ ಯಾವುದೋ ಕಿಟಕಿಯಿಂದ ಕ್ಲಿಕ್ಕಿಸಿರುವ ವ್ಯಕ್ತಿ ಸೇರಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಹೆಚ್ಚಿನವರಿಗೆ ಈ ಸವಲತ್ತು ಸೌಲಭ್ಯಗಳು ಸಿಕ್ಕಿಲ್ಲ. ಅವರೆಲ್ಲರ ಅಸಮಾಧಾನದ ಪ್ರತಿನಿಧಿಯಂತೆ ಯಾರೋ ಒಬ್ಬರು ಈ ಫೋಟೋವನ್ನು ಕ್ಲಿಕ್ಕಿಸಿ ದರ್ಶನ್ ಜೈಲಿನಲ್ಲಿ ಹೇಗಿದ್ದಾನೆ ಎನ್ನುವುದನ್ನು ಹೊರ ಜಗತ್ತಿಗೆ ತೋರಿಸಿದ್ದಾರೆ! ಇಲ್ಲದೇ ಹೋದರೆ ಜೈಲಿನಲ್ಲಿರುವ ಭ್ರಷ್ಟ ಅಧಿಕಾರಿಗಳು ದರ್ಶನ್ ಎಸೆಯುತ್ತಿರುವ ಎಂಜಲು ಕಾಸಿಗೆ ನಾಲಿಗೆಯೊಡ್ಡಿ ಆತನಿಗೆ ನೀಡುತ್ತಿರುವ ಸೌಲಭ್ಯ - ಸೌಕರ್ಯಗಳನ್ನೆಲ್ಲ ನೋಡಿ ಹೇಸಿಗೆ ಹುಟ್ಟಿ, ಅದನ್ನು ಬೇರೆ ಯಾವ ರೀತಿಯಲ್ಲಿಯೂ ಪ್ರತಿಭಟಿಸಲಾಗದ ಜೈಲಿನ ಪ್ರಾಮಾಣಿಕ ಅಧಿಕಾರಿಗಳಲ್ಲೇ ಯಾರೋ ’ನಿಮಗೆ ತಕ್ಕ ಪಾಠ ಕಲಿಸುತ್ತೇನೆ’ ಎಂದು ಹೀಗೆ ಫೋಟೋ ಕ್ಲಿಕ್ಕಿಸಿ ಅದನ್ನು ಮಾಧ್ಯಮದವರೆಗೆ ತಲುಪಿಸಿರುವ ಸಾಧ್ಯತೆಗಳೂ ಇವೆ. ಹೇಗೆ ಈ ಫೋಟೋ ಹೊರ ಜಗತ್ತಿಗೆ ಬಂದಿದ್ದರೂ ಈ ಫೋಟೋ ಮೂಲಕ ರಾಜ್ಯದ ಜೈಲುಗಳಲ್ಲಿ ಉಳ್ಳವರಿಗೇ ಒಂದು ರೀತಿ, ಏನೂ ಇಲ್ಲದೇ ಇರುವವರಿಗೆ ಇನ್ನೊಂದು ರೀತಿ ನಡೆಯುತ್ತಿದೆ ಎನ್ನುವುದನ್ನು ಅಷ್ಟು ಸುಲಭಕ್ಕೆ ಅಳಿಸಲಾಗದ ಸಾಕ್ಷ್ಯದೊಂದಿಗೆ ತಿಳಿಸಿದೆ.
ಎರಡನೇಯದಾಗಿ, ಜೈಲಿನಲ್ಲಿ ಕೈದಿಗಳು ಮೊಬೈಲ್ ಇತ್ಯಾದಿಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ, ಬಳಸುವಂತಿಲ್ಲ ಎನ್ನುವ ನಿಯಮ ಇದ್ದರೂ ಆ ನಿಯಮಗಳು ಅಲ್ಲಿ ಪಾಲನೆಯಾಗುತ್ತಿಲ್ಲ, ದುಡ್ಡು - ಪ್ರಭಾವ ಇದ್ದವರ ಕೈಗೆ ಮೊಬೈಲ್ ಸೇರಿದಂತೆ ಏನು ಬೇಕಾದರೂ ಸಿಕ್ಕುತ್ತದೆ ಎನ್ನುವ ಸತ್ಯವನ್ನೂ ದರ್ಶನ್‌ನ ಈ ವೈರಲ್ ಫೋಟೋ ತೆರೆದಿಟ್ಟಿದೆ. ದರ್ಶನ್ ರೌಡಿ ಶೀಟರ್ ಜೊತೆಗೆ ಆರಾಮಾಗಿ ಕುಳಿತು ಕಾಫಿ ಕುಡಿಯುತ್ತಾ ಸಿಗರೇಟು ಸೇದುತ್ತಿರುವ ಈ ಫೋಟೋವನ್ನು ಸಾಕಷ್ಟು ಉತ್ತಮ ಗುಣಮಟ್ಟದ ಮೊಬೈಲಿನಲ್ಲೇ ಕ್ಲಿಕ್ಕಿಸಲಾಗಿದೆ. ಅಂದರೆ ಜೈಲಿನ ಅಧಿಕಾರಿಗಳ ಕಣ್ಣು ತಪ್ಪಿಸಿ ಅಥವಾ ಅವರಿಗೆ ಗೊತ್ತಿದ್ದೇ ಜೈಲಿನೊಳಗೆ ಮೊಬೈಲುಗಳು ರಿಂಗಣಿಸುತ್ತವೆ, ಫೋಟೋ ಕ್ಲಿಕ್ಕಿಸುತ್ತವೆ ಹಾಗೂ ಇಂಟರ್ನೆಟ್‌ನ್ನು ಅವರಿಗಿಷ್ಟವಾಗುವಂತೆ ಬಳಸಿಕೊಂಡು ಫೋಟೋ, ವಿಡಿಯೋ ಇತ್ಯಾದಿಗಳನ್ನೂ ಹೊರಜಗತ್ತಿಗೆ ಕಳಿಸಲ್ಪಡುತ್ತವೆ ಎನ್ನುವ ಇನ್ನೊಂದು ಸತ್ಯವನ್ನೂ ಈ ಫೋಟೋ ತೆರೆದಿಟ್ಟಿದೆ. ಮೊಬೈಲನ್ನು ಇಷ್ಟು ಆರಾಮಾಗಿ ಜೈಲಿನಲ್ಲಿದ್ದವರು ಬಳಸಬಹುದು ಎನ್ನುವುದಾದರೆ, ಜೈಲಿನೊಳಗೆ ಇನ್ನೇನೇನು ಸಿಗುತ್ತಿರಬಹುದು? ಅದನ್ನು ಅಲ್ಲಿರುವ ಕೈದಿಗಳು ಯಾವ ಕೆಲಸಕ್ಕೆಲ್ಲ ಬಳಸಿಕೊಳ್ಳುತ್ತಿರಬಹುದೆನ್ನುವ ಪ್ರಶ್ನೆಗೆ ಜೈಲು ಅಧಿಕಾರಿಗಳು ಹಾಗೂ ಈ ಖಾತೆ ಹೊತ್ತ ಸಚಿವರೇ ಉತ್ತರಿಸಬೇಕು.
ಮೂರನೇಯದಾಗಿ, ಅದ್ಯಾರು ಹೇಳುತ್ತಿದ್ದರೋ ಅಥವಾ ಇವರೇ ಕಲ್ಪಿಸಿಕೊಳ್ಳುತ್ತಿದ್ದರೋ ಒಟ್ಟಿನಲ್ಲಿ ಜೈಲು ಸೇರಿದ ದರ್ಶನ್ ಮನ ಪರಿವರ್ತನೆಯಾಗಿದೆ, ತನ್ನ ಕೃತ್ಯದ ಬಗ್ಗೆ ಆತನಿಗೆ ಪಶ್ಚಾತ್ತಾಪವಿದೆ ಎಂದು ಕನ್ನಡದ ನ್ಯೂಸ್ ಚಾನೆಲ್ಲುಗಳೆಲ್ಲ ದಿನದ ಇಪ್ಪತ್ತ್ನಾಲ್ಕು ಗಂಟೆಯೂ ಕೂಗಿದ್ದೇ ಕೂಗಿದ್ದು. ಆದರೆ ಈ ಫೋಟೋ ಅವೆಲ್ಲ ಕಟ್ಟುಕಥೆಗಳೇ ಹೊರತು, ದರ್ಶನ್ ತನ್ನ ಮೇಲೆ ಕೊಲೆ ಆರೋಪ ಬಂದ ನಂತರ ಸ್ವಲ್ಪವೂ ಬದಲಾಗಿಲ್ಲ ಎನ್ನುವುದನ್ನೂ ಈ ಫೋಟೋ ಮೌನವಾಗಿಯೇ ಹೇಳುತ್ತಿದೆ. ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರಬಂದು ನ್ಯೂಸ್ ಚಾನೆಲ್ ಕ್ಯಾಮರಾಗಳೆದುರು ಫುಲ್ ಬೂಸಿ ಬಿಟ್ಟ ಚಿತ್ರದುರ್ಗದ ಕಡೆಯವನೊಬ್ಬ ಹೇಳಿದ ಪ್ರಕಾರ ದರ್ಶನ್‌ಗೆ ಪ್ರತ್ಯೇಕ ಸೆಲ್ ನೀಡಲಾಗಿದೆ ಮತ್ತು ಅವನಿಷ್ಟ ಪಟ್ಟರೆ ಮಾತ್ರವೇ ಆತ ಜೈಲಿನಲ್ಲಿರುವ ಬೇರೆಯವರನ್ನು ಭೇಟಿಯಾಗುತ್ತಾನೆ, ಇಲ್ಲದೇ ಹೋದರೆ ಅವನು ತನ್ನ ಪಾಡಿಗೆ ತಾನು ಸೆಲ್‌ನಲ್ಲಿರುತ್ತಾನೆ! ಪ್ರತ್ಯೇಕವಾದ ಸೆಲ್‌ನಲ್ಲಿರುವ ಬಹುತೇಕ ಕೈದಿಗಳು ಹೀಗೇ ಇರುತ್ತಾರೆ. ಹಾಗಿದ್ದರೆ ಈ ಫೋಟೋದಲ್ಲಿ ದರ್ಶನ್ ಪಕ್ಕ ಕುಳಿತುಕೊಂಡಿರುವ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನನ್ನು ಪಶ್ಚಾತ್ತಾಪದ ಬೇಗುದಿಯಲ್ಲಿ ಬೆಂದು ಸಂತನಾಗಿ ಬದಲಾಗಲು ಇನ್ನೇನು ಕೊನೆಯ ಹೆಜ್ಜೆ ಇಟ್ಟೇಬಿಟ್ಟ ಎನ್ನುವ ದರ್ಶನ್ ಇಷ್ಟಪಟ್ಟೇ ಭೇಟಿಯಾಗಿದ್ದ?! ದರ್ಶನ್ ಇಷ್ಟು ಬಿಂದಾಸ್ಸಾಗಿ ಜೈಲಿನಲ್ಲಿದ್ದಾನೆ, ಅವನು ಕೇಳಿದಾಗಲೆಲ್ಲ ಸುಡಲು ಸಿಗರೇಟು, ಸವಿಯಲು ಕಾಫಿ ಸಿಗುತ್ತದೆ ಎಂದಾದರೆ ಯಾರೂ ಆತನನ್ನು ನೀನು ಈ ಕೆಲಸ ಮಾಡು, ನೀನು ಇವರನ್ನು ಭೇಟಿಯಾಗಲೇಬೇಕು ಎಂದೆಲ್ಲ ’ಫೋರ್ಸ್’ ಮಾಡುವುದಂತೂ ಸಾಧ್ಯವಿಲ್ಲ. ದರ್ಶನ್‌ಗೆ ಇಷ್ಟವಾದರೆ ಮಾತ್ರವೇ ಅವನು ಯಾರನ್ನಾದರೂ ಭೇಟಿಯಾಗಬಹುದು, ಇಲ್ಲದಿದ್ದರೆ ಇಲ್ಲ. ಅಂದಮೇಲೆ ರೌಡಿ ಶೀಟರ್ ಒಬ್ಬನ ಪಕ್ಕದಲ್ಲಿ ಕುಳಿತುಕೊಂಡು ದರ್ಶನ್ ಇಷ್ಟು ಆರಾಮಾಗಿ ಮಾತನಾಡುತ್ತಿದ್ದಾನೆ, ನಗುತ್ತಿದ್ದಾನೆ ಎಂದರೆ ಮನಃಪರಿವರ್ತನೆ, ಪಶ್ಚಾತ್ತಾಪಗಳೆಲ್ಲ ನ್ಯೂಸ್ ಚಾನೆಲ್ಲುಗಳ ಟಿಆರ್‌ಪಿ ತೆವಲಿಗೆ ಹುಟ್ಟಿಕೊಂಡ ಕಥೆಗಳೇ ಹೊರತು, ವಾಸ್ತವದಲ್ಲಿ ಅಂತಹದ್ದೇನೂ ಇಲ್ಲ ಎನ್ನುವ ಸತ್ಯವನ್ನೂ ಈ ಫೋಟೋ ಬಹಿರಂಗಗೊಳಿಸಿದೆ. ಜೊತೆಗೆ ಜೈಲು ಸೇರಿ ಆದಷ್ಟು ಬೇಗ ಹೊರಬರಲು ಪ್ರಯತ್ನಿಸಬೇಕಾದ ದರ್ಶನ್‌ಗೆ ಒಬ್ಬ ರೌಡಿ ಶೀಟರ್ ಜೊತೆ ಕುಳಿತುಕೊಂಡು ಮಾತನಾಡಬೇಕಾದ ಅಗತ್ಯವೇನು ಎನ್ನುವ ಪ್ರಶ್ನೆಯನ್ನೂ ಹುಟ್ಟು ಹಾಕುವುದರೊಂದಿಗೆ, ಇದು ಎರಡನೇ ಬಾರಿ ಜೈಲು ಕಂಡರೂ ಬದಲಾಗುವ ಜೀವವೂ ಅಲ್ಲ ಎನ್ನುವುದನ್ನೂ ಈ ಫೋಟೋ ನಮಗೆ ತಿಳಿಸುತ್ತಿದೆ.
ನಾಲ್ಕನೇಯದಾಗಿ, ದರ್ಶನ್ ಈ ಫೋಟೋ ವೈರಲ್ ಆದ ಬೆನ್ನಲ್ಲೇ ಆತ ಪೊಲೀಸಪ್ಪನೊಬ್ಬನ ಮೊಬೈಲಿನ ವಿಡಿಯೋ ಕಾಲ್‌ನಲ್ಲಿ ಯಾರೊಂದಿಗೂ ಮಾತನಾಡಿದ ವಿಡಿಯೋ ತುಣುಕು ಕೂಡಾ ವೈರಲ್ ಆಗಿದೆ. ಅಲ್ಲಿಗೆ ದರ್ಶನ್ ಬೇಕು ಬೇಕೆಂದಿದ್ದೆಲ್ಲ ಜೈಲಿನಲ್ಲಿ ಸುಲಭದಲ್ಲಿ ಸಿಗುತ್ತಿದೆ ಎನ್ನುವುದೂ ಇದರಿಂದ ಸ್ಪಷ್ಟವಾಗಿದೆ. ಹೌದು, ಸಾಮಾನ್ಯ ಕೈದಿಗಳಿಗೆ ಅವರ ಮನೆಯವರು ಎಲ್ಲಾ ಅಧಿಕೃತ ಅನುಮತಿಯೊಂದಿಗೆ ಕೊಟ್ಟ ಊಟ ಸೇರಿದಂತೆ ಅಗತ್ಯವಾಗಿರುವ ವಸ್ತುಗಳೇ ಜೈಲಿನ ಸಿಬ್ಬಂದಿಗಳನ್ನು ದಾಟಿ ಅವರ ಕೈ ಸೇರುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಅಂತಹದ್ದರಲ್ಲಿ ದರ್ಶನ್‌ಗೆ ಕೇವಲ ಸಿಗರೇಟು ಮಾತ್ರವಲ್ಲ, ವಿಡಿಯೋ ಕಾಲ್ ಅವಕಾಶವೂ ಸಿಗುತ್ತಿದೆ ಎಂದರೆ ’ದುಡ್ಡು’ ಕೊಟ್ಟರೆ ಜೈಲಿನಲ್ಲಿ ’ಏನು ಬೇಕಾದರೂ ಸಿಗುತ್ತದೆ’ ಎನ್ನುವುದು ಇನ್ನೊಮ್ಮೆ ಸಾಬೀತಾದಂತಾಗಿದೆ. ಹಾಗಿದ್ದರೆ ಈಗಾಗಲೇ ಇದೇ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರುವ ಇದೇ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮೂಲವಾದ ಎ1 ಆರೋಪಿ ಪವಿತ್ರ ಗೌಡ ಜೊತೆ ಭೇಟಿಗೂ ಜೈಲಾಧಿಕಾರಿಗಳು ದರ್ಶನ್‌ಗೆ ಅವಕಾಶ ಮಾಡಿ ಕೊಡುತ್ತಿದ್ದಾರಾ? ಈ ಪ್ರಶ್ನೆ ಸ್ವಲ್ಪ ಅತಿ ಅನ್ನಿಸಬಹುದಾದರೂ, ದರ್ಶನ್‌ಗೆ ಬೇರೆಲ್ಲ ಸೌಲಭ್ಯಗಳನ್ನು ಜೈಲಿನ ಅಧಿಕಾರಿಗಳು ಒದಗಿಸಿಕೊಡುತ್ತಿದ್ದಾರೆ ಎಂದಮೇಲೆ ಇಂತಹದ್ದೊಂದು ’ಅವಕಾಶ’ವನ್ನೇಕೆ ಕೊಡುವುದಿಲ್ಲ? ಹೀಗೆ ಎಲ್ಲವೂ ಜೈಲಿನೊಳಗೇ ಸಿಕ್ಕುತ್ತಿರುವುದರಿಂದಲೇ ದರ್ಶನ್ ಜೈಲಿನಲ್ಲಿ ಆರಾಮಾಗಿದ್ದಾನಾ? ಈ ಪ್ರಶ್ನೆಗೆ ಆತ ಜೈಲಿನಲ್ಲಿ ಆರಾಮಾಗಿ ಕುಳಿತುಕೊಂಡು ನಗುತ್ತಾ ಸಿಗರೇಟು ಸೇದುತ್ತಿರುವ ಇವತ್ತಿನ ವೈರಲ್ ಫೋಟೋವೇ ಉತ್ತರವಾಗಿದೆ.
ನಿಜ, ಜೈಲುಗಳು ಕಾನೂನಿನ ಪ್ರಕಾರ ಸುಧಾರಣಾ ಕೇಂದ್ರಗಳು. ಇಲ್ಲಿಗೆ ಬಂದ ಕೈದಿಗಳು ಹೊರಗಡೆ ಹೋಗುವಾಗ ಕೇವಲ ತಾನು ಮಾಡಿದ ಅಪರಾಧಕ್ಕೆ ಶಿಕ್ಷೆ ಅನುಭವಿಸುವುದು ಮಾತ್ರವಲ್ಲ, ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಇನ್ನೆಂದೂ ನಾನು ಇಂತಹ ತಪ್ಪು ಮಾಡುವುದಿಲ್ಲ, ಪುನಃ ಇಲ್ಲಿಗೆ ಮರಳುವುದಿಲ್ಲ ಎಂದು ನಿರ್ಧರಿಸಿ, ಸಮಾಜದ ಮುಖ್ಯ ವಾಹಿನಿಗೆ ಸೇರಬೇಕು, ಮೊದಲಿದ್ದಂತೆ ನಾನು ಎಲ್ಲರೊಳಗೊಂದಾಗಿ ಬದುಕಬೇಕು ಎನ್ನುವ ಮಟ್ಟಿಗೆ ಕೈದಿಯೊಬ್ಬನನ್ನು ನಿಜವಾದ ಅರ್ಥದಲ್ಲಿ ’ಮನುಷ್ಯ’ನನ್ನಾಗಿ ಬದಲಾಯಿಸುವುದು ಜೈಲುಗಳ ಮೂಲ ಉದ್ದೇಶ. ಇದರಂತೆ ದರ್ಶನ್ ಕೂಡಾ ಬದಲಾಗಲು ಜೈಲು ಅವಕಾಶ ಕೊಡಬೇಕಿತ್ತು. ಆದರೆ ಅದಾಗದೇ ಅಲ್ಲಿ ಬೇರೇನೋ ಆಗುತ್ತಿದೆ ಎನ್ನುವುದನ್ನು ಫೋಟೋದಲ್ಲಿರುವ ದರ್ಶನ್ ಹಿಡಿದಿರುವ ಸಿಗರೇಟು, ಪಕ್ಕದಲ್ಲಿ ಇರುವ ರೌಡಿ ಶೀಟರ್... ಇವೆಲ್ಲವೂ ಮುಖಕ್ಕೆ ಹೊಡೆದಂತೆ ಹೇಳುತ್ತಿವೆ.
ಒಟ್ಟಿನಲ್ಲಿ ಈ ನೆಲದ ಕಾನೂನಿನಲ್ಲಿ ಇರುವುದೆಲ್ಲ, ಹೇಳುವುದೆಲ್ಲ ಉಳ್ಳವರಿಗೇ ಹೊರತು, ಬಡವರಿಗಲ್ಲ ಎನ್ನುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಹೊತ್ತಿನಲ್ಲೇ, ಜೈಲು ಎನ್ನುವ ನಾಲ್ಕು ಗೋಡೆಯೊಳಗೆ ಸರ್ಕಾರದ ಕೃಪಾ ಪೋಷಣೆಯೊಂದಿಗೆ ಏನೆಲ್ಲ ನಡೆಯುತ್ತಿರಬಹುದು ಎನ್ನುವ ಪ್ರಶ್ನೆಯನ್ನೂ ನಾವೆಲ್ಲರೂ ಕೇಳಿಕೊಳ್ಳಬೇಕಾಗಿದೆ. ಜೈಲುಗಳ ಮೇಲೆ ಸಡನ್ ರೇಡು, ಮಾಧ್ಯಮಗಳೆದುರು ಪೋಸು ಕೊಡಲಿಕ್ಕಾಗಿಯೇ ಜೈಲುಗಳ ಬಗ್ಗೆ ನಾಲ್ಕೈದು ದಿನ ಹಾಗಿದೆ, ಹೀಗಿದೆ ಎಂದೆಲ್ಲ ಹೇಳಿ ಆ ಕ್ಷಣಕ್ಕೆ ಹೀರೋ - ಹೀರೋಯಿನ್ನುಗಳಾಗುವ ಅಧಿಕಾರಿಗಳು, ಅಯ್ಯೋ ಜೈಲಿನೊಳಗೆ ಹೀಗೆಲ್ಲ ಇರುತ್ತದಾ ಎಂದು ಒಂದು ಕ್ಷಣ ಆಶ್ಚರ್ಯ, ಆತಂಕದಿಂದ ಪ್ರಶ್ನಿಸಿಕೊಂಡು ಮತ್ತೆ ನಮ್ಮ ಬದುಕಿನ ಜಂಜಾಟದಲ್ಲಿ ಕಳೆದು ಹೋಗುವ ನಾವುಗಳು... ಕೊನೆಗೆ ದರ್ಶನ್‌ನ ವೈರಲ್ ಆದ ಈ ಫೋಟೋ ಹೇಳುವ ಹಸಿ ಸತ್ಯಗಳು! ಇದು ಕೂಡಾ ನಾಲ್ಕೈದು ದಿನದ ಸುದ್ದಿಯೇ ಹೊರತು, ಈ ಫೋಟೋವೇ ಕಾರಣವಾಗಿ ಜೈಲುಗಳೇನೂ ಸುಧಾರಣೆಯಾಗುವುದಿಲ್ಲ. ಜೈಲಿನಲ್ಲಿ ನರಕ ನೋಡುತ್ತಿರುವ ಬಡ ಕುಟುಂಬದ, ಯಾರೂ ದಿಕ್ಕಿಲ್ಲದ, ನಿಜವಾದ ರೀತಿಯಲ್ಲಿ ನಿರ್ಗತಿಕರಾದವರ ಕಷ್ಟಗಳೇನೂ ಕೊನೆಯಾಗುವುದಿಲ್ಲ. ಅಲ್ಲಿ ಅವರ ಮನ ಪರಿವರ್ತನೆಯಾಗುವುದೂ ಇಲ್ಲ. ಯಾಕೆಂದರೆ, ಅಲ್ಲಿನ ವ್ಯವಸ್ಥೆ ಅವರಲ್ಲೊಂದು ಮನಸ್ಸೆನ್ನುವ ಮನಸ್ಸನ್ನು ಉಳಿಯಲು ಬಿಟ್ಟಿರುವುದೂ ಇಲ್ಲ...
-ಗಣೇಶ ಕೆ., ಸಂಪಾದಕರು, ನ್ಯೂಸ್ ಪೋಸ್ಟ್‌ಮಾರ್ಟಮ್
ಕಾಮೆಂಟ್‌ಗಳಿಲ್ಲ