ನಗರ ಸಮೀಪ ಸಮಗೋಡಿನಲ್ಲಿ ಎದುರಿನಿಂದ ಬಂದ ವಾಹನಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್ಸು - ಅರವತ್ತಕ್ಕೂ ಹೆಚ್ಚು ಜನರ ಜೀವ ಉಳಿಸಿತು ಮಾವಿನ ಮರ!!
ಹೊಸನಗರ : ನಗರ ಸಮೀಪದ ಸಮಗೋಡಿನ ರಾಷ್ಟ್ರೀಯ ಹೆದ್ದಾರಿ 766 ಸಿ ತಿರುವಿನಲ್ಲಿ ಬೆಂಗಳೂರಿನಿಂದ ಭಟ್ಕಳಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು (ಕೆಎ -31 ಎಫ್ 1522) ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ನೀಡುವ ಭರದಲ್ಲಿ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಬಸ್ಸಿನಲ್ಲಿ ಅರವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಉರುಳಿ ಬಿದ್ದ ಬಸ್ಸು ಮಾವಿನಮರಕ್ಕೆ ಒರಗಿ ನಿಂತಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಜೋರು ಮಳೆ ಸುರಿಯುತ್ತಿದ್ದ ಸಮಯದಲ್ಲಿ ಭಟ್ಕಳಕ್ಕೆ ತೆರಳುತ್ತಿದ್ದ ಬಸ್ಸು ಸಮಗೋಡಿನ ತಿರುವಿನಲ್ಲಿ ಎದುರಿನಿಂದ ಬಂದ, ಬ್ಯಾಂಕ್‌ಗಳಿಗೆ ಹಣ ಸಾಗಣೆ ಮಾಡುವ ಶಿವಮೊಗ್ಗ ಮೂಲದ ಸಿಎಂಎಸ್ ಕಂಪೆನಿಗೆ ಸೇರಿದ ಟಾಟಾ ಯೋಧ ವಾಹನಕ್ಕೆ ಸೈಡ್ ನೀಡುವ ಭರದಲ್ಲಿ ಡಿಕ್ಕಿ ಹೊಡೆದು, ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಮಗುಚಿ ಬಿದ್ದಿದೆ. ತಲೆ ಕೆಳಗಾಗಿ ಬಿದ್ದ ಬಸ್ಸು ಹತ್ತಿರದಲ್ಲೇ ಇದ್ದ ಮಾವಿನಮರಕ್ಕೆ ಒರಗಿ ನಿಂತಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಮಾವಿನಮರ ಇಲ್ಲದೇ ಹೋಗಿದ್ದರೆ ಬಸ್ಸು ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ 80 ಅಡಿ ಆಳದಲ್ಲಿದ್ದ ಸಮಗೋಡು ಹಳ್ಳಕ್ಕೆ ಬಿದ್ದು ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತ ನಡೆಯುತ್ತಿದ್ದಂತೆ ಸ್ಥಳೀಯರು ಕೂಡಲೇ ಸ್ಥಳಕ್ಕೆ ಆಗಮಿಸಿ ಬಸ್ಸಿನ ಹಿಂದಿನ ಗಾಜನ್ನು ಒಡೆದು ಏಣಿಯನ್ನು ಇಟ್ಟು ಬಸ್ಸಿನೊಳಗಿದ್ದ ಪ್ರಯಾಣಿಕರನ್ನು ಹೊರಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ಸಿನಲ್ಲಿ ಸುಮಾರು 60 ಜನ ಪ್ರಯಾಣಿಸುತ್ತಿದ್ದು, ಹೆಚ್ಚಿನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಟಾಟಾ ವಾಹನದ ಚಾಲಕ ಮಂಜುನಾಥ್ ಎನ್ನುವವರ ಹಣೆಗೂ ಪೆಟ್ಟಾಗಿದ್ದು, ಇದರಲ್ಲಿದ್ದ ಉಳಿದವರು ಸುರಕ್ಷಿತವಾಗಿದ್ದಾರೆ.
ಟಾಟಾ ಯೋಧ ವಾಹನ ನಿಟ್ಟೂರಿನ ಕೆನರಾ ಬ್ಯಾಂಕ್ ಗೆ ಹಣ ಪೂರೈಕೆ ಮಾಡಿ ವಾಪಾಸ್ ಆಗುತ್ತಿತ್ತು ಎನ್ನಲಾಗಿದೆ. ಈ ಅಪಘಾತದಲ್ಲಿ ಗಾಯಗೊಂಡವರಿಗೆ ನಗರದ ಸಂಯುಕ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕಾಮೆಂಟ್‌ಗಳಿಲ್ಲ