ಹೊಸನಗರದ ಹಳೇ ಸಾಗರ ರಸ್ತೆಯಲ್ಲಿ ಅಕ್ರಮ ಮರಳು ಸಾಗಾಟದಿಂದ ಆಶ್ರಯ ಕಾಲೋನಿ ರಸ್ತೆಯೀಗ ಕೆಸರುಗದ್ದೆ - ಜನರ ದೂರಿಗೆ ಕಿವಿಗೊಡದ ಅಧಿಕಾರಿಗಳು!
ಹೊಸನಗರ : ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಳೇ ಸಾಗರ ರಸ್ತೆಯ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ರಹಿತರಿಗೆ ಮಂಜೂರಾಗಿರುವ ಆಶ್ರಯ ಕಾಲೋನಿ ರಸ್ತೆಗಳಲ್ಲಿ ವಾಹನಗಳು ಸಂಚರಿಸುವುದಿರಲಿ ನಾವು ನಡೆದುಕೊಂಡು ಹೋಗಲಿಕ್ಕೂ ಸಾಧ್ಯವಾಗದಂತಹ ಸ್ಥಿತಿಯಿದ್ದು, ಈ ಬಗ್ಗೆ ನಮ್ಮ ದೂರನ್ನು ಯಾರೂ ಪರಿಗಣಿಸುತ್ತಿಲ್ಲ ಎಂದು ನಾಗರೀಕರು ದೂರಿದ್ದಾರೆ.
ಈ ಭಾಗದ ಹಲವು ವಾಸದ ಮನೆಗಳಿಗೆ ಓಡಾಡಲು ಜನತೆ ಈ ರಸ್ತೆಯನ್ನೇ ನೆಚ್ಚಿಕೊಂಡಿದ್ದಾರೆ. ಹತ್ತಾರು ಕುಟುಂಬಗಳು ಮನೆ ಕಟ್ಟಿಕೊಂಡು ವಾಸವಿರುವ ಈ ಕಾಲೋನಿಯಲ್ಲಿ ಬೇಸಿಗೆಯಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿಟ್ಟ ನೂರಾರು ಲೋಡು ಮರಳನ್ನು ದಂಧೆಕೋರರು ಅಕ್ರಮವಾಗಿ ಈಗ ಮಳೆಗಾಲದಲ್ಲಿ ಅಹೋರಾತ್ರಿ ಸಾಗಾಟ ಮಾಡುತ್ತಿರುವ ಪರಿಣಾಮವಾಗಿಯೇ ರಸ್ತೆ ಇಷ್ಟು ಹದಗೆಟ್ಟಿದೆ. ದಿನಕ್ಕೆ ಹತ್ತಾರು ಮರಳು ತುಂಬಿದ ಟಿಪ್ಪರ‍್ರುಗಳು ಈ ರಸ್ತೆಯಲ್ಲಿ ಓಡಾಡುತ್ತಿವೆ ಎನ್ನುವುದು ಸಾರ್ವಜನಿಕರ ದೂರು. ಈ ಭಾರೀ ಗಾತ್ರದ ವಾಹನಗಳು ಓಡಾಡುತ್ತಿರುವುದರಿಂದ ರಸ್ತೆ ಸಂಪೂರ್ಣವಾಗಿ ಕೆಸರು ಗದ್ದೆಯಂತಾಗಿದೆ. ಶಾಲಾ ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು ಹಾಗೂ ವಯೋವೃದ್ಧರಿಗೆ ಸಂಚಾರಕ್ಕೆ ತುಂಬಾ ತೊಂದರೆ ಆಗಿದೆ. ವಿಷಯ ತಿಳಿದಿದ್ದರೂ ಯಾವೊಬ್ಬ ಜನಪ್ರತಿನಿಧಿ ಸೇರಿದಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸ್ ಇಲಾಖೆ ಈ ಅಕ್ರಮ ಮರಳು ಸಾಗಾಟವನ್ನು ಕೂಡಲೇ ತಡೆಯಲು ಮುಂದಾಗಬೇಕು. ತಾಲ್ಲೂಕು ಆಡಳಿತ ರಸ್ತೆ ದುರಸ್ತಿಗೆ ಕೂಡಲೇ ಕ್ರಮ ವಹಿಸಬೇಕೆಂದು ಜನತೆ ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳಿಲ್ಲ