Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಶಿಥಿಲಗೊಂಡಿವೆ ನಗರ ನೂಲಿಗ್ಗೇರಿ ಶಾಲಾ ಕಟ್ಟಡದ ಕೊಠಡಿಗಳು - ಶಿಕ್ಷಕರ ಕೊಠಡಿ ಮಧ್ಯೆಯೇ ನಡೆಯುತ್ತಿದೆ ಮಕ್ಕಳಿಗೆ ಪಾಠ

ಹೊಸನಗರ: ಮಳೆಯ ರಜೆ ಮುಗಿದು ಇವತ್ತಿನಿಂದ ತಾಲ್ಲೂಕಿನೆಲ್ಲೆಡೆ ಶಾಲೆಗಳು ಆರಂಭವಾಗಿವೆ. ಆದರೆ ಶಾಲೆಗೆ ಬಂದ ಮಕ್ಕಳು ಶಾಲಾ ಕಟ್ಟಡದೊಳಗೆ ಎಷ್ಟು ಸುರಕ್ಷಿತ? ಎನ್ನುವ ಪ್ರಶ್ನೆಗೆ ಉತ್ತರವಾಗಿ ತಾಲ್ಲೂಕಿನ ನಗರದ ನೂಲಿಗ್ಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಮ್ಮೆದುರು ನಿಲ್ಲುತ್ತದೆ. ಹೌದು, ಇಲ್ಲಿನ ಮೂರು ಕೊಠಡಿಗಳಿರುವ ಶಾಲೆಯ ಹಳೇ ಕಟ್ಟಡ ಬೀಳುವ ಸ್ಥಿತಿಯಲ್ಲಿರುವ ಕಾರಣ ಇವತ್ತು ಮಕ್ಕಳನ್ನು‌ ಶಿಕ್ಷಕರ ಕೊಠಡಿ‌ಯ ಮಧ್ಯದಲ್ಲಿರುವ ಸಣ್ಣ ಜಾಗದಲ್ಲಿ ಕೂರಿಸಿಕೊಂಡು ಪಾಠ ಮಾಡಲಾಗುತ್ತಿದೆ.

ಈ ಶಾಲೆಯಲ್ಲಿ 100 ರಷ್ಟು ವಿದ್ಯಾರ್ಥಿಗಳ ದಾಖಲಾತಿಯಿದ್ದು, 1 ರಿಂದ 7ರವರೆಗೆ ತರಗತಿಗಳು ಇಲ್ಲಿ ನಡೆಯುತ್ತವೆ. ಶಾಲೆಯಲ್ಲಿ ತರಗತಿಗಳು ಏಳಾದರೂ ಕೇವಲ 6 ಕೊಠಡಿಗಳಿದ್ದು ಅವುಗಳನ್ನು ಇಲ್ಲಿಯವರೆಗೆ ಪಾಠ ಪ್ರವಚನಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಆದರೆ ಇದರಲ್ಲಿ 3 ಕೊಠಡಿಗಳ ಕಟ್ಟಡ ಶಿಥಿಲಗೊಂಡಿದ್ದು ಗೋಡೆಗಳು ಬೀಳುವ ಸ್ಥಿತಿಯಲ್ಲಿದೆ. ಕೊಠಡಿಯೊಳಗೆ ನೀರು‌ ಬರುತ್ತಿದೆ, ಹೆಂಚಿನ ಮೇಲ್ಛಾವಣಿ ಕೂಡಾ ದುಃಸ್ಥಿತಿಯಲ್ಲಿದ್ದು ಮಳೆ ಬಂದರೆ ನೀರು ಸೋರುತ್ತದೆ. ಯಾವುದೇ ಕ್ಷಣ ಏನೂ ಆಗಬಹುದಾದಂತಹ ಸ್ಥಿತಿಯಲ್ಲಿರುವ ಶಿಥಿಲಗೊಂಡ ಈ ಕಟ್ಟಡವನ್ನು ಈವರೆಗೂ ದುರಸ್ತಿ ಮಾಡಲಿಕ್ಕೂ ಸಾಧ್ಯವಾಗಿಲ್ಲ.

ಈ ಕಾರಣದಿಂದ ಕೇವಲ ಮೂರು ಕೊಠಡಿಗಳು ಮಾತ್ರ ತರಗತಿ ನಡೆಸಲು ಲಭ್ಯವಿದ್ದು, 6 ಮತ್ತು 7ನೇ ತರಗತಿ ಮಕ್ಕಳಿಗೆ ಪಾಠವನ್ನು ಶಿಕ್ಷಕರ ಕೊಠಡಿಯಲ್ಲಿ ನಡೆಸುವಂತಹ ಸ್ಥಿತಿ ಬಂದಿದೆ. ಸುತ್ತಲೂ ಶಿಕ್ಷಕರು ಕುಳಿತುಕೊಳ್ಳುವ ಕುರ್ಚಿ, ಮೇಜುಗಳು ಸೇರಿದಂತೆ ಇತ್ಯಾದಿ ಸಾಮಾಗ್ರಿಗಳಿದ್ದು, ಮಧ್ಯದಲ್ಲಿ ಉಳಿಯುವ ಸಣ್ಣ ಜಾಗದಲ್ಲೇ ಮಕ್ಕಳು  ಚಾಪೆ ಮೇಲೆ ಕುಳಿತು ಪಾಠ ಕೇಳಬೇಕಾದಂತಹ ಸ್ಥಿತಿ ಸಧ್ಯ ಈ ಶಾಲೆಯದ್ದು.

ಆದ್ದರಿಂದ ಮಕ್ಕಳ ಸುರಕ್ಷತೆ ಮತ್ತು ಸುಗಮ ವ್ಯಾಸಂಗದ ಕಾರಣಕ್ಕಾಗಿ ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ಮಕ್ಕಳ ಪೋಷಕರು ಒತ್ತಾಯಿಸಿದ್ದಾರೆ.

ಕಾಮೆಂಟ್‌ಗಳಿಲ್ಲ