ಹೊಸನಗರ ಪಟ್ಟಣದಲ್ಲಿ ರಸ್ತೆ ಮೇಲೆ ಉರುಳಿದ ಬೃಹತ್ ದೂಪದ ಮರ - ಶಾಲೆಗಳಿಗೆ ರಜೆ ಘೋಷಿಸಿದ್ದರಿಂದ ತಪ್ಪಿದ ಭಾರೀ ಅನಾಹುತ!
ಹೊಸನಗರ : ಪಟ್ಟಣದಲ್ಲಿ ಮಳೆಯ ಅನಾಹುತಗಳು ಇವತ್ತೂ ಮುಂದುವರಿದಿವೆ. ಹೊಸನಗರದಿಂದ ನಗರಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿ 766 ಸಿಯ ಶ್ರೀ ವೀರಾಂಜನೇಯ ದೇವಸ್ಥಾನ ಹಾಗೂ ಹೋಲಿ ರೆಡಿಮರ್ ಪದವಿ ಪೂರ್ವ ಕಾಲೇಜಿನ ಮಧ್ಯದಲ್ಲಿರುವ ಸಾಲುಮರಗಳಲ್ಲಿ ಬೃಹತ್ ದೂಪದ ಮರವೊಂದು ಇಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನೆಲಕ್ಕುರುಳಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ.
VIDEO - ಹೊಸನಗರ ಭಾರೀ ಗಾಳಿ ಮಳೆಗೆ ರಸ್ತೆಗುರುಳಿದ ಬೃಹತ್ ದೂಪದ ಮರ - ಶಾಲಾ ಕಾಲೇಜು ರಜೆಯಿಂದ ತಪ್ಪಿದ ಅನಾಹುತ
ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಮರ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ದೊಡ್ಡ ವಾಹನಗಳು ನಿಂತಲ್ಲಿಯೇ ನಿಂತಿದ್ದು ಸಣ್ಣ ಮತ್ತು ಅಗತ್ಯ ವಾಹನಗಳ ಓಡಾಟಕ್ಕೆ ಯಾವುದೇ ತೊಂದರೆಯಾಗದಂತೆ ಅನುವು ಮಾಡಿಕೊಡಲಾಗಿದೆ.
ಬೃಹತ್ ದೂಪದ ಮರ ಧರೆಗುರುಳಿದ್ದರಿಂದ 4ಕ್ಕಿಂತ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮತ್ತು ಉರುಳಿದ ಮರದಲ್ಲಿ ಜೇನುಗೂಡುಗಳಿದ್ದ ಕಾರಣ ಕೆಲವು ಕಾಲ ಜೇನುಗಳಿಂದಾಗಿ ಸಂಚಾರ ಮಾಡಲು ಸಮಸ್ಯೆಯಾಗಿತ್ತು.
ಭಾರೀ ಗಾಳಿ ಮತ್ತು ಮಳೆ ಹಿನ್ನೆಲೆಯಲ್ಲಿ ಇಂದು ಶಾಲೆಗಳಿಗೆ ರಜಾ ಘೋಷಣೆ ಮಾಡಿದ್ದರಿಂದ, ಶಾಲಾ ಮಕ್ಕಳ ಓಡಾಟ ಇಲ್ಲದಿರುವ ಕಾರಣ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ರಜೆಯಿಂದಾಗಿ ತಪ್ಪಿದಂತಾಗಿದೆ.
ಹೊಸನಗರದಿಂದ ನಗರದೆಡೆಗೆ ಸಾಗುವ ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಬದಲಾಗಿರುವ ರಸ್ತೆಯಲ್ಲಿರುವ ದೂಪದ ಮರಗಳು ಸ್ವತಂತ್ರ ಪೂರ್ವದ್ದು ಎನ್ನಲಾಗುತ್ತಿದ್ದು, ಇದಕ್ಕೆ 100 ವರ್ಷಕ್ಕೂ ಹಿಂದಿನ ಇತಿಹಾಸವಿದೆ. ಆಗ ದಾರಿಹೋಕರಿಗೆ ನೆರಳಾಗಲಿ ಎಂದು ಅರಸರು ಅಥವಾ ಬ್ರಿಟಿಷ್ ಸರ್ಕಾರ ಈ ಮರಗಳನ್ನು ಬೆಳೆಸಿರಬಹುದೆಂದು ಇಲ್ಲಿನ ಕೆಲವು ಹಿರಿಯರು ಹೇಳುತ್ತಾರೆ. ಹಾಗೆ ನೋಡಿದರೆ ಈ ಮರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲೇ ಬಲಿಯಾಗಬೇಕಿತ್ತು. ಆಗ ಪಾರಾಗಿದ್ದ ಮರ ಬಹುಶಃ ಹೆದ್ದಾರಿ ಕಾಮಗಾರಿಯಿಂದ ಬೇರು ಸಡಿಲಾಗಿ ಈಗ ಗಾಳಿ ಮಳೆಗೆ ಧರೆಗುರುಳಿದೆ.
ಇಷ್ಟು ದೊಡ್ಡ ಮರವೊಂದು ಮುಖ್ಯ ರಸ್ತೆಯಲ್ಲೇ ನಡು ಮಧ್ಯಾಹ್ನ ಉರುಳಿ ಬಿದ್ದರೂ ಯಾರಿಗೂ ಯಾವುದೇ ರೀತಿಯ ಅಪಾಯವಾಗದೇ ಇರುವುದು ನಿಜಕ್ಕೂ ಅಚ್ಚರಿ ಹಾಗೂ ಅದೃಷ್ಟ ಎಂದು ಉರುಳಿದ ಮರ ನೋಡಲು ಬಂದ ಹೊಸನಗರಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ