ನಗರದ ಬೈಸೆಯಲ್ಲಿ ಸಂಕ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿ ಮಹಿಳೆ ಸಾವು
ಹೊಸನಗರ : ತಾಲ್ಲೂಕಿನೆಲ್ಲೆಡೆ ಕಳೆದ ಮೂರು ದಿನದಿಂದ ಭಾರೀ ಮಳೆಯಾಗುತ್ತಿದ್ದು, ಮಹಿಳೆಯೊಬ್ಬರು ಜಮೀನಿನ ಸಂಕ ದಾಟುವಾಗ ಆಯತಪ್ಪಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ನಗರದ ಬೈಸೆಯಲ್ಲಿ ಇಂದು ನಡೆದಿದೆ. ಬೈಸೆ ಗ್ರಾಮದ ಚೀಕಳಿ ನಿವಾಸಿ ಶಶಿಕಲಾ (43) ಮೃತ ಮಹಿಳೆಯಾಗಿದ್ದಾರೆ.
ಮೃತ ಮಹಿಳೆ ಶಶಿಕಲಾ ಬೆಳಿಗ್ಗೆ 9 ಗಂಟೆ ಸುಮಾರಿಗೆ ಗದ್ದೆಯ ಅಗೆ ಹಾಕುವುದಕ್ಕಾಗಿ ನೋಡಿಕೊಂಡು ಬರಲು ಜಮೀನಿಗೆ ಹೋಗಿದ್ದು ಎಷ್ಟು ಹೊತ್ತಾದರೂ ವಾಪಾಸ್ಸು ಬಂದಿರಲಿಲ್ಲ. ಅನುಮಾನಗೊಂಡ ಮಕ್ಕಳು ಊರಿನವರ ಗಮನಕ್ಕೆ ತಂದು ಹುಡುಕಲು ಹೋದ ಸಂದರ್ಭದಲ್ಲಿ ಜಮೀನಿನ ಹತ್ತಿರದ ಸಂಕದಿಂದ ಒಂದು ಕಿ.ಮೀ. ದೂರದ ದುಮುಕದ ಗದ್ದೆ ಕಾಲು ಸೇತುವೆ ಹತ್ತಿರದ ಹಳ್ಳದಲ್ಲಿ ಮೃತದೇಹವೊಂದು ಮರಕ್ಕೆ ಸಿಕ್ಕಿ ಹಾಕಿಕೊಂಡಂತಿರುವುದು ಕಾಣಿಸಿದೆ. ಹತ್ತಿರ ಹೋಗಿ ನೋಡಿದಾಗ ಶಶಿಕಲಾ ಅವರು ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಸಂಗತಿ ತಿಳಿದುಬಂದಿದೆ. ಕಳೆದ ಮೂರು ದಿನಗಳಿಂದ ತಾಲ್ಲೂಕಿನೆಲ್ಲೆಡೆ ವಿಪರೀತ ಮಳೆಯಾಗುತ್ತಿರುವುದರಿಂದ ಶಶಿಕಲಾ ಅವರು ದಾಟಲು ಪ್ರಯತ್ನಿಸಿದ ಸಂಕದ ಮೇಲೆ ನೀರು ಬಂದಿದ್ದು, ಅದರಿಂದ ಅವರು ಕೊಚ್ಚಿಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ. ಶಶಿಕಲಾ ಅವರು ಇಬ್ಬರು ಪುತ್ರರು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಜುಲೈ 1 ರಿಂದ ದೇಶದೆಲ್ಲೆಡೆ ಜಾರಿಗೆ ಬಂದಿರುವ ’ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ -2023’ರ ಕಲಂ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ